ಮಾತು-ಮೌನ
ಮೌನ ಬದುಕಿಗೆ ಅರ್ಥ
ಮೌನ ಮಾತಿಗೆ ವ್ಯರ್ಥ
ಭಾವ ಭಾವದ ತುಣುಕು
ಮೃದು ಮೌನದಲಿ ಹುಡುಕು ||
ಮೌನ ಸಾಗರವಹುದು
ಮಾತೊಂದು ಕೆರೆ ಹುಚ್ಛ
ಮೌನ ಸಂವೇದನೆಗೆ
ಮೌನದರ್ಥವೇ ಸ್ವಚ್ಛ ||
ಕಳೆದದ್ದು ಮಾತು
ಹುಡುಕಿದ್ದು ಮೌನ
ಮೌನ ಪ್ರಖರತೆ ಮುಂದೆ
ಮಾತೊಂದು ಗೌಣ ||
ಮಾತು ತಾರಿಕೆಯಾಯ್ತು
ಮೌನ ತಾ ಚಂದ್ರಮನು
ಮೌನ ಹಗಲೂ ಇರುಳು
ಮಾತು ಬೆಳಕಿಗೆ ಮರುಳು||
ಮಾತು ಮಾಣಿಕ ನಿಜ
ಮಾತೆಲ್ಲ ಮಾಣಿಕವಲ್ಲ
ಮೌನದಲಿ ವಿರಸಿಲ್ಲ
ಮಾತಿನಲಿ ಉಂಟಲ್ಲ ? ||
[ ಮಾತು ತಾರಿಕೆಯಾಯ್ತು, ಮೌನ ತಾ ಚಂದ್ರಮನು ಇಲ್ಲಿ ಮಾತನ್ನು ನಕ್ಷತ್ರಕ್ಕೂ ಮೌನವನ್ನು ಚಂದ್ರನಿಗೂ ಹೋಲಿಸಿ, ಮೌನ ಹಗಲೂ ಇರುಳು ಅಂದರೆ ರಾತ್ರಿ ಕಳೆದು ಬೆಳಕಾದ ಮೇಲೂ ಚಂದ್ರ ಬಾನಿನಲ್ಲಿ ಕಾಣಿತ್ತಾನೆ ಆದರೆ ನಕ್ಷತ್ರಗಳು ಹಾಗಲ್ಲ ॒ಬೆಳಕಾಗುತ್ತಿದ್ದ ಹಾಗೆ ಜಾರಿ ಮಾಯವಾಗಿ ಬಿಡುತ್ತವಲ್ಲಾ ॒ಹಾಗೇ ಮೌನ ಯಾವಾಗಲೂ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಿಡುತ್ತೆ ಅಂತ ಹೇಳೋ ಪ್ರಯತ್ನ ಅಷ್ಟೇ]
-ರಾಘವ ಭಟ್ ಲಾಲಗುಳಿ.
ವಾಸನೆ
ಸುಡುವ ಕಾಡಿನ
ಉರಿ ಚಿತೆಯ
ಕೆಟ್ಟನಾತ
ಆಳ ಉಸಿರಲಿ
ಕಣಕಣದಲೂ ಸಾವು
ಬೆರೆಸುವ ವಾತ.
ವ್ಯಕ್ತಿತ್ವ ಚಂದವಾಗಿಸಲು
ಪೂಸಿದ ದ್ರವ್ಯ ಕರಗುವಂತೆ
ನನ್ನದೇ ಬೆವರಿನ
ಗಂಧ ಅಮಲೇರಿಸದಂತೆ
ಕನ್ನಡಿಯ ಬಿಂಬಕೆ
ಮುತ್ತನಿಡದಂತೆ
ಉತ್ಸವ ಮೂರ್ತಿ
ಯಾಗುವ ಗೀಳು ಮುರುಟುವಂತೆ
ಜನ್ಮಾಂತರದ ವಾಸನೆ
ಎಲ್ಲ ಕರಗಿ
ಸೂತಕವಿನ್ನು
ನಾನು ಸತ್ತದ್ದಕ್ಕೆ!
**************
ಹುಡುಕಾಟ
ಸಾವಿಲ್ಲದ ಮನೆಯ
ಸಾಸಿವೆಯನ್ನೇನೂ
ಬೇಡಿ ತರಲು
ಹೊರಟಿರಲಿಲ್ಲ .
ಗೊತ್ತು
ಸಿಗುವುದಿಲ್ಲ.
ಅಂತರಂಗ ದನಿಗಳಿಗೆ
ಕಿವಿ ನೀಡಿ
ಎದೆಯ ನೆಲದಲಿ
ಕೊಂಚ ಮಿಸುಕಾಡಿ
ಅರಿಯ ಬೇಕೆಲ್ಲ
ಹಿಡಿಯದೆ ನಾಡಿ .
ಹೊರಟದ್ದು
ಸಾಸಿವೆಯನ್ನಲ್ಲ
ಸಾಸಿವೆಯಷ್ಟು ಪ್ರೀತಿ
ಹುಡುಕಾಡಿ .
-ದಿಲೀಪ್ ರಾಥೋಡ್
ನಿ (ವೇದನೆ)
ಅದೇನು ಮಾಡಲೀ ಹಾಳು
ಬಿದ್ದಿರುವ ನನ್ನ ಮನಕೆ
ಬಿಡದೆ ಕೂತಿದೆ ಮನವು
ಅವನದೇ ನಾಮ ಜಪಕೆ
ಒಲವಿಲ್ಲ ನಿನ್ನಲ್ಲಿ ಎಂದು
ಧಿಕ್ಕರಿಸಿವ ಹೋದವ ಅವನು
ಬೇಸರ ತರುತಿದೆ ನಿನ್ನ
ಪ್ರತಿ ಮಾತು ಎಂದವನು
ಎಲ್ಲವೂ ಬಿಸುಡಿದ ನನಗೆ
ಜೀವನ ತಂದಿದೆ ಬೇಜಾರು
ಒಮ್ಮೆಯಾದರೂ ಬಳಿ ಬಂದು
ಸೇರುವನಾವನು ಮನದ ಸೂರು
ಕತ್ತಲೆ ಕವಿದೆನ್ನ ಮನಕೆ
ಸ್ನೇಹದ ದೀಪವಾಗಿ ಬಾರೆಯ
ನೀರುಣಿಸದ ಬಾಳ ಲತೆಗೆ
ಉಣಿಸು ಜೀವ ಜಲಧಾರೆಯ
ಕೇಳಿತೆಗೆ ಮುರಿದ ಮನ
ಸದ್ದಿಲ್ಲದೇ ದೂರ ಸರಿದರೆ
ಮನವ ಮುರಿಯಲು ಇಚ್ಛೆಯ
ಮನ ಬೆಸೆಯುವದ ಬಲ್ಲೆಯ
ಸಾಕೆನಿಸಿದೆ ಕೊರಗುವ ವೇದನೆ
ಇದೇ ಮನದ ನವ ನಿವೇದನೆ
ಬೇಡ ಕಹಿನೆನಪಿನ ನೋವು
ನಗುತ ಸಾಗೋಣ ಬಹುದೂರಕೆ ನಾವು
-ರುಕ್ಮಿಣಿ ಎನ್
ಚೆಂದದ ವೈವಿಧ್ಯಮಯ ಕವನಗಳು…ಕವಿ(ಯತ್ರಿ) ಮಿತ್ರರಿಗೆ ಅಭಿನಂಧನೆಗಳು !
addilri. chalo ide
ವಿಭಿನ್ನ ಕವಿತೆಗಳು…ವಿಭಿನ್ನ ಪ್ರಸ್ತುತಿ…ಚೆನ್ನಾಗಿವೆ ಕವಿತೆಗಳು..ಪಂಜುವಿಗೆ ಧನ್ಯವಾದಗಳು…
ರಾಘವ ಭಟ್ ಲಾಲಗುಳಿ.ಮಾತು-ಮೌನ ತುಂಬಾ ಇಷ್ವಾಯ್ತು
Mana muttuva salugalivu,,,,