ಮೂವರ ಕವಿತೆಗಳು: ರಾಘವೇಂದ್ರ ಹೆಗಡೆಕರ್, ಸಂಗೀತ ರವಿರಾಜ್, ಷಡಕ್ಷರಿ ತರಬೇನಹಳ್ಳಿ

— ಗೋಡೆ —

ನನಗಾಗಿ   ಅಗೆದ
ಯಾರದೋ ಭೂಮಿಯಲ್ಲಿ
ಇನ್ನಾರೋ ಮಲಗಿದ್ದರಂತೆ
ಪಾಪ. 

ನೆಲದ ಮೇಲೆ
ಎಲ್ಲ ಹಂಚಿಕೊಂಡವರು ನಾವು- 
ಮಾಡಿ ಭಾಗ .
ಗೊತ್ತೇ  ಇರಲಿಲ್ಲ
ಇದ್ದರೂ ಇರಬಹುದು 
ಇಂಥದೊಂದು ಜಾಗ.

ಸಮಾಧಿ ಸ್ತಿತಿಯಲ್ಲಿ 
ಅವಿತು ಕುಳಿತವನ 
ಗಾಢ ಮೌನದ 
ಸದ್ದುಗಳು .

ಅರೆ  ಪಕ್ಕದಲ್ಲೇ 
ಚಿರ ನಿದ್ರೆಯಲ್ಲಿದ್ದಾಳೆ
ಚಿನ್ನದಂತ ಹುಡುಗಿ
ಇವಳೇ ಬೆಳಿಗ್ಗೆ
ಬೆರಳ ತೋರಿದವಳು 
ಸ್ನೇಹದ ಹಸ್ತ ಚಾಚಿ .

ಇಲ್ಲಿ
ಮಣ್ಣಿನ ಒಳಗೆ
ಗೋಡೆಗಳೇ ಇಲ್ಲ .

-ರಾಘವೇಂದ್ರ  ಹೆಗಡೆಕರ್

 

 

 

 

 

 

                     ನಾಳೆಗಳ ಹೊಸ್ತಿಲಲ್ಲಿ…………
              ಈ ಪರ್ವದ ನಾಳೆಗಳ ಉಸಿರು
              ಕಾಲದ ನೀರವತೆಗೆ ಮತ್ತೆ ಮಾತಿನ ತೇರು
              ಭವಿಷ್ಯದ ಹೆಜ್ಜೆಗಳು ಕಾಲಾತೀತ ನಮ್ಮೊಳಗೆ
              ಬೇರಿಲ್ಲದ ಗಿಡದ ಒಂಟಿ ಜೀವ ಮಾಯೆ!

              ಒಂದೊಂಮ್ಮೆ ಪಾದದಡಿ ಚಲಿತ ನೀರು
              ಮತ್ತೆ ಕಾಣದು
              ಕಾಲವೆ ನಿರ್ಣಯಿಸು ನನ್ನ ಹಕ್ಕು ನಿನ್ನದಾಗಲಿ
              ಹೊಸ ಚಿಗುರು ಧಾವಂತಕ್ಕೆ ಸಿಲುಕಿ 
              ನಲುಗುವ ಮೊದಲು
             
              ಋತು, ಪಕ್ಷ, ತಿಥಿಗಳ ಮತ್ತದೆ ಗಣನೆಗೆ
              ಕಾಡು ಮಲ್ಲಿಗೆಯ ಜಾಡು ಹಿಡಿದು ಹೊರಡು
              ನೆಲ ಮುಗಿಲ ಗಾದಿಯ ಹುಂಬತನ 
              ಇಲ್ಲ ಸಲ್ಲದ ಹಾದಿಯಲ್ಲಿ
              ಹೂವು ಮುಳ್ಳಿನ ರಹದಾರಿ

              ನಿನ್ನೆಗಳಿಲ್ಲದ ಹಬ್ಬ: ನಾದವಿಲ್ಲದ ಹಾಡು
              ಪಾಡಾಗುವ ಮುನ್ನ
             ವರ್ತಮನ ಮೀರಿ ನಿಲ್ಲು
              ಭವಿಷ್ಯ ಕುಂಚದಲ್ಲಿದ್ದ ತೆಗೆದ ಗರ್ಭ
              ಬಣ್ಣ ತುಂಬಿದೆ ಪ್ರಾಂಜಲ ಕನಸ ತೋರಣ

             ಗಡಿಯಾರದ ಮುಳ್ಳಿನ ತಿರುವು
             ನಾಳೆಗಳ ಹೊಸ್ತಿಲಲ್ಲಿ ಹೂಬಿಸಿಲು
             ಬಾಗಿದೆ ಕೊರಳೊಡ್ಡಿ ನಿದ್ದೆ ಬಾರದ ಸದ್ದಿಗೆ
             ಹೊಸ ಶಕೆ ಎನಿತು ದೂರ
             ಯುಗಯುಗದ ರಾಡಿ ತೊಳೆಯಲು

             ಸಮಯ ಮೀರಿದ ಬದುಕಿಗಂಜಿ
             ಮನುಕುಲದ ಮನ್ವಂತರ ಹುತ್ತದೊಳಗಡಗಿದೆ
             ಅನಿವಾರ್ಯದ ಆಲಾಪನೆ ಬಯಸಿ
             ಕಾಲದೊಂದಿಗೆ ನಾವು 
             ಮರುಹುಟ್ಟು ಪಡೆಯೋಣ….

       -ಸಂಗೀತ ರವಿರಾಜ್
                                    
 

ಅಪ್ಪ ಅಂದ್ರೆ……. ನರ್ವಸ್ 90 ಮತ್ತು ಸೆಂಚುರಿ ಆಯಸ್ಸಿನ ದಾರಿ.
 
ಅವ ಮಲಗಿದ್ದ ಮಂಚದ ಬಳಿಗೇ ಹೋಗಿ ಸೇರೋ,
ಬೆಳಗಿನ ಮೊದಲ ಬಿಸಿ ಬಿಸಿ ಬೆಡ್ ಕಾಫೀ,
 
ಅವ ಏಳುವುದಕೆ ಮುನ್ನವೇ ಕಾದು ಅವನ
ಸ್ನಾನಕ್ಕೆ ಸಿದ್ದವಾದ ಸುಡು ಸುಡೋ ಬಿಸಿನೀರು,
 
ಕಾಫೀ ಕುಡಿದು, ಶೂ ಮೆಟ್ಟಿ,ಮಸೆದ ಎರಡು ಮಚ್ಚಿಡಿದು
ಸುತ್ತಿಬರುವ ತೋಟದೊಳಗಿನ ಒಂದು ವಾಕು.
 
ಸುತ್ತಲಿನ ತೋಟಗಳಲ್ಲಿ ಕಳ್ಳಕಾಕರ ಕೇಕೆ, ಅಪ್ಪನ ಮಚ್ಚಿನ
ನೆತ್ತರಿಗೆದರಿ  ಮರದಲ್ಲೇ ಹಣ್ಣಾಗಿ ಉದುರೋ ಹಣ್ಣುಗಳು.
 
ಕನ್ನಡಿ ಹಿಡಿದು, ಗಡ್ಡ ಹೆರ್ಕೊಳ್ಳೋ ಮುನ್ನ ನೊರೆಯುಕ್ಕೋ,
ಶೇವಿಂಗ್ ಕ್ರೀಮಿನ ಘಮ ಘಮ ಘಮಲು.
 
ಸೋಮವಾರಕ್ಕೊಮ್ಮೆ ತಪ್ಪದೇ ಬಂದು ಬೆಳೆದ
ಕೂದಲು ತೆಗೆಯೋ ಶೇವಿಂಗ್ ಶಾಪ್ ಭೀಮಜ್ಜ.
 
ಹದಿನೈದು ದಿನಕೊಮ್ಮೆ ಬಂದು ಎಳ್ಳೆಣ್ಣೆ ಮೈಗಚ್ಚಿ
ಎಳೆ ಬಿಸಿಲಲ್ಲಿ ಮಸಾಜ್ ಮಾಡೋ ರಾಮಜ್ಜ,
 
ಹೊರಗೆ ಚೇರಲ್ಲಿ ಕುಳಿತರೆ, ಕೈಮುಗಿದು ಬಂದು
ಕೂತು, ಅವ್ವ ಕೊಟ್ಟ ಕಾಫೀ ಕುಡಿಯೋ ಊರಜನ.
 
ನಮ್ಮನೆಯೆಂದರೆ ಅಪ್ಪನ, ಅವನ ನೆಚ್ಚಿನ ಜನರ
ಗೌಜು ಗದ್ದಲದ ಪಾಳೇಗಾರಿಕೆ, ನಮ್ಮೆಲ್ಲರ ನಿಶಬ್ಧ.
 
ಹೊರಗೊರಟರೆ ಉಡುತಿದ್ದ, ಬೆಳ್ಳಂಬೆಳ್ಳಗಿನ ಬಣ್ಣದ
ಬಿಳೀ ಬನಿಯನ್ನು, ಮೇಲಂಗಿ, ಬಿಳೀ ಪಂಚೆ ಮತ್ತು ಕಪ್ಪು ಶೂ.
 
ಬೆಳಗೆಲ್ಲಾ ಯಾರ್ದೋಮನೆ ನ್ಯಾಯ,ಸರ್ಕಾರೀ ಕೆಲ್ಸಮುಗ್ಸಿ
ಕತ್ತಲಾಗೋ ಮುನ್ನ, ತಪ್ಪದೇ ಮನೆಸೇರೋ ಮುಸ್ಸಂಜೆ.
 
ಮನೆಗೆ ಪ್ರವೇಶಿಸಿದ ಸೂಚಕವಾಗಿ ಸಂಭ್ರಮಿಸಲು
ಸಾಕಿದ್ದ ಅಪ್ಪನ ನೆಚ್ಚಿನ ನಾಯಿಗಳ ಕೂಗಾಟ.
 
ರಾತ್ರೀ ಊಟದ ಮೊದಲ ಪ್ರತಿಯನ್ನೂ ಎಲ್ಲರಿಗೂ
ಮೊದಲೇ ಪರೀಕ್ಷಿಸುವ ಆಹಾರ ಪರೀಕ್ಷಕ.
 
ಐದು ಹೆಣ್ಣಾದರೂ, ವಂಶ ಬೆಳಗಲು ಮಗನೇ
ಬೇಕೆಂದು, ಹಠಹಿಡಿದು 6 ಹುಟ್ಟಿಸಿದ ಗಂಡಸು.
 
ನಾನು ದೊಡ್ಡವನಾದಂತೆ ನಮ್ಮೂರ ಸುತ್ತಮುತ್ತ
ನನಗೆದುರಾದ ನನ್ನದೇ ಪ್ರತಿಬಿಂಬಗಳ ಕನ್ನಡಿಗಳು.
 
ಮಕ್ಕಳು ಕಾಯಿಲೆ ಬಿದ್ದರೆ, ಕೆಲಸಕ್ಕೋದ ಹೆಂಡಿರ
ಬದಲಿಗೆ, ನಮ್ಮನ್ನು ಉ‍ಷಾರು ಮಾಡೋ ನರ್ಸಮ್ಮ
 
ಓದಲು ಬರೆಯಲು ಕುಳಿತರೆ, ಪಕ್ಕ ಕೂತು ಅಕ್ಷರ ತಿದ್ದಿ,
ನಮ್ಮನ್ನು ತೀಡಲು ಬಳಸೋ ರೂಲರ್ ದೊಣ್ಣೆ.
 
ನಾನು ಓದಿ ಬರೆದು, ಎಸ್ಸೆಸ್ಸೆಲ್ಸಿ ಫಸ್ಟ್ ಕ್ಲಾಸಲ್ಲಿ
ಪಾಸಾದರೆ, ಕೊಡುಸ್ತೀನಿ ಎಂದಿದ್ದ ಹರ್ಕುಲೆಸ್ ಸೈಕಲ್ಲು.
 
ಬೇರೆ ಮಕ್ಳು ಕನ್ನಡ ಶಾಲೆಗೆ ಸೇರಿದ್ರೆ ನನ್ಮಗ
ಫಾರಿನ್ನಿಗೋಗ್ಲೀಂತಾ ಕಳಿಸಿದ ತುಮಕೂರು ಸಿಟಿ.
 
ನಾನೊಬ್ಬನೇ ಮಗನಾಗಿ ಪ್ರೀತಿಯಿಂದಲೇ ಕೆಟ್ಟೆ, ನೀನ್ಮಾತ್ರಾ
ಕೆಡಬೇಡವೆಂದು ಪ್ರತಿದಿನ ಹೇಳಿದ್ದ ಬುದ್ಧಿವಾದ.
 
ನಾನು ಓದೋವಾಗ ತಿಂಗಳಿಗೊಮ್ಮೆ ಬಂದು
ಕೈ ಕರ್ಚಿಗೆ ಕೊಡುತ್ತಿದ್ದ ಪಾಕೇಟ್ ಮನಿ.
 
ನನ್ಮಗ ಇಂಥಾ ಯೂನಿವರ್ಸಿಟಿಯಲ್ಲೇ ಓದಲೆಂದ
ಅವನ ನೆನಪಾಗಿ ನಾನು ತುಳಿಯೋ ಯೂನಿವರ್ಸಿಟಿಯ ಮೆಟ್ಟಿಲುಗಳು.
 
ಅಪ್ಪ ಬರೀ ಲೋಯರ್ ಸೆಕೆಂಡರೀ, ನಾನು ಅವನಿಗಿತ್ತ
ವಚನವಾಗಿ ಜೋಡಿಸಿಟ್ಟ ಹಲವು ಡಿಗ್ರೀ ಸರ್ಟಿಫಿಕೇಟ್ಗಳು.
 
ನಿನಗಾಗಿ ಓದು, ಆಮೇಲೆ ನಿನ್ನ ಬದುಕ ನೀ ಬದುಕು,
ನಿನ್ನ ಬೆವರಿನ ನಯಾಪೈಸೆ ನನಗೆ ಬೇಡವೆಂದ ಆತ್ಮಾಭಿಮಾನ.
 
ಅವನ ಬದುಕಲ್ಲಿ ಕಂಡ ಏರು ಪೇರು ನನಗಾಗದಿರಲೀಂತ,
ನೂರಾರು ಕಡೆ ವಿಚಾರಿಸಿ, ಅವನೇ ಒಪ್ಪಿ ನನಗೆ ಕಟ್ಟಿದ ನನ್ನೆಂಡತಿ.
 
ಅವನ ವಂಶದ ಕಬ್ಬಿಗೆ ಒಂದೇ ಸೂಲಂಗಿ ಎಂಬ ನಂಬಿಕೆ ಮುರಿದು,
ನನಗುಟ್ಟಿದ ಇಬ್ಬರು ಗಂಡು ಮಕ್ಕಳ ಕಂಡು ಖುಷಿಪಟ್ಟ ಕಣ್ಣೀರು.
 
ನಾನು ಹಲವರ ನಂಬಿ ಕೆಟ್ಟೆ, ನಿನ್ನ ನೆಮ್ಮದಿಯ
ಬದುಕಿಗೆ ಬಾಳಿಗೆ, ಅವರಿವರ ಬಗ್ಗೆ, ಇರಲಿ ಎಂದ ಎಚ್ಚರ.
 
ಕಣ್ಮುಚ್ಚಿ ಮಲಗಿದ್ದ ಅಪ್ಪನ ಮುಗಿಬಿದ್ದು ಹಿಡಿದ, ಏಳೆಂಟು ಕಳ್ಳರ
ಕಣ್ಮುಚ್ಚಿದ್ದಂತೆಯೇ, ದಿಕ್ಕಾಪಾಲಾಗಿ ಎಸೆದು ನಮ್ಮನುಳಿಸಿದ ರಕ್ಕಸ.
 
ಜೀವನದಲ್ಲಿ ಒಮ್ಮೆಯೂ ಆಸ್ಪತ್ರೆಯ ಮುಖ ನೋಡದ,
ಮಾತ್ರೆ, ಸೂಜಿ ಚುಚ್ಚಿಸಿಕೊಳ್ಳದ ಕಲ್ಲಲ್ಲಿ ಕಡೆದ ಶಿಲ್ಪ. 
 
ನಾನು ವಿಮಾನವೇರುವ ಮುನ್ನವಾಡಿದ ಹೋಗಿಬರಲೇ?
ಮಾತಿಗೆ, “ಹೋಗಿ ಬಾ ಮಗನೇ ನೆಮ್ಮದಿಯಾಗಿ” ಎಂದ ಕೊನೇಮಾತು.
 
ಅಜ್ಜನ 102, ಅಜ್ಜಿಯ 113 ರ ಆಯಸ್ಸು ನೋಡಿ, ನೋಡ್ತಿರೂ ಮಗನೇ,
ನಾನೂ ಸೆಂಚುರಿ ಬಾರಿಸ್ತೀನಿ ಎಂದು, ಔಟಾದ  ನರ್ವಸ್ 90.
 
ಅಪ್ಪ ಸಿಗರೇಟು ಸೇದಿ ಕಳೆದುಕೊಂಡ, ಜೀವದ ಮಿತಿಯ ಮೀರಿ,
ನಾನು ಸಾಧಿಸ ಬೇಕಿರುವ ಸೆಂಚುರಿ ಆಯಸ್ಸಿನ ಸವೆಯದ ದಾರಿ. 
 
ಷಡಕ್ಷರಿ ತರಬೇನಹಳ್ಳಿ.

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x