ಕಾವ್ಯಧಾರೆ ಪಂಜು-ವಿಶೇಷ

ಮೂವರ ಕವಿತೆಗಳು: ರಘುನಂದನ ಹೆಗಡೆ, ಬಿ. ಸಿ. ಪ್ರಮೋದ, ಗಿರಿ

ನೀನಿಲ್ಲದ ಗೋಕುಲದ ಬೇಸರ

ನಿನ್ನ ತುಟಿಯಂಚಿನ ಕೊಳಲಾಗುವೆ
ಬಿಸಿಯುಸಿರ ಪುಳಕದಿ ರಾಗವಾಗುವೆ
ಅನುರಾಗದ ರವಳಿಯ
ತೇಲಿ ಬಿಡು ಶ್ಯಾಮ
ಯಮುನಾ ತೀರದಿ
ಹಾಡಾಗಿ ಹರಿಯಲಿ ಪ್ರೇಮ

ನನ್ನೆದೆಯ ರಾಗ ಕೇಳು
ಸಾಕು ಮಾಡೊ ವಿರಹಿ ಬಾಳು
ನಿಂತೆ ಇದೆ ಜೀವ ಗೋಕುಲದಲ್ಲಿ
ಜೀವಾಮೃತವಿದೆ ಎದೆಯಲ್ಲಿ
ದ್ವಾರಕೆ, ಮಧುರೆಗಳು ಸಾಕು
ಬಾ ನನ್ನೊಲವ ಬೃಂದಾವನಕೆ

ಗೋಧೂಳಿ ದೀಪ ಮನದಲ್ಲಿ
ಒಮ್ಮೆ ಹರಿವ ಯಮುನೆ ಕಣ್ಣಲ್ಲಿ
ಇನ್ನೊಮ್ಮೆ ಗಿರಿಯ ಭಾರ ಎದೆಯಲ್ಲಿ 
ಕಾಯುತ್ತ ನಿಂತೆ ಇದೆ ಜೋಕಾಲಿ
ಯಾರಿಗೆ ಹೇಳಲೋ ಗಿರಿಧರ
ನೀನಿಲ್ಲದ ಗೋಕುಲದ ಬೇಸರ

ಜೀವನವೇ ನದಿಯೋ
ನೀನಿರದೆ ಎಲ್ಲಿಯ ದಡವೋ
ನಾ ನಿನ್ನವನೆ
ನೀ ನನ್ನೊಳಗಾದವನೆ
ಶರಣಾರ್ಥಿಯು ನಾ ನಿನಗೆ
ಕರುಣಾಮೂರ್ತಿ ಜೊತೆಯಾಗೊ.

ರಘುನಂದನ ಕೆ ಹೆಗಡೆ

 

 

 

 

 

 

ಅವ್ವ
ಅವನಿಯ ಅಂಶವು ನೀ
ತಾಳ್ಮೆಯ ಆಗರ ನೀ
ಮಮತೆಯ ಸಾಗರ ನೀ

ಹೂಗಳಲ್ಲಿ ತಾವರೆ ನೀ
ಮರಗಳಲ್ಲಿ ಕಲ್ಪವ್ರಕ್ಷ ನೀ
ಜೀವನದ ಸಂಜೀವಿನೀ ನೀ

ಋತುಗಳಲ್ಲಿ ವಸಂತ ನೀ
ನಸುಕಿನ ಇಬ್ಬನಿ ನೀ
ಮುಂಗಾರಿನ ಮಳೆ ನೀ

ಕೋಗಿಲೆ ದನಿಯು ನೀ
ನವಿಲಿನ ನಾಟ್ಯ ನೀ
ಪ್ರಕೃತಿಯ ಸುಧೆಯು ನೀ

ಮನೆಯ ಜ್ಯೋತಿಯು ನೀ
ಕುಟುಂಬದ ಕೀರ್ತಿ ನೀ
ಅಪ್ಪನ ಮನದರಸಿ ನೀ

ಬಿ. ಸಿ. ಪ್ರಮೋದ

 

 

 

 

 

 

ತಾಜ್ ಮಹಲ್

ಬೇಕಿದ್ದರೆ ಕಿವಿಕೊಟ್ಟು ಕೇಳಿಸಿಕೊ ಅಣು ಕ್ಷಣವು
ನನ್ನ ಸಮಾದಿಯ ಒಳಗೆ ಪ್ರತಿದ್ವನಿಸುವ
ನಿನ್ನದೇ ಹೆಸರು

ಅಷ್ಟಕ್ಕೂ ಬರದಿದ್ದರೆ ನ೦ಬಿಕೆ ಅಗೆದು ನೋಡು
ನನ್ನ ನಿರ್ಜೀವ ದೇಹದಲಿ ಇನ್ನು ನವಿರಾಗಿರುವ
ನಿನ್ನ ನೆನಪು

ಈಗಲಾದರು ಹೇಳು ನಿನ್ನದು ಶಾಶ್ವತ ಪ್ರೀತಿಯ
ಇಲ್ಲ ಪ್ರೀತಿಯ ಅನುಕರಣೆಯ ಅನಾವರಣವ

ಇನ್ನೂ ಸಮಯವಿದೆ ಒಮ್ಮೆ ನಸುನಕ್ಕು ಆಹ್ವಾನಿಸು
ಸ್ವರ್ಗವನ್ನೂ ದಿಕ್ಕರಿಸಿ ನಿನ್ನಲ್ಲೆ ಪರವಶನಾಗುವೆ

ದಯವಿಟ್ಟು ನಿಲ್ಲಿಸು ಈ ನರಕ ಯಾತನೆ ನನ್ನಾತ್ಮ
ಸ್ವರ್ಗ ಸೆರುವ ಮೊದಲು ದೇಹ ಮಣ್ಣಾದರೇನ೦ತೆ

ಈಗಲು ಎಷ್ಟೊ ಜನ ಪ್ರೇಮಿಗಳು ಸತ್ತ ಮೇಲೆ ತಾನೆ
ನಮ್ಮ೦ತ ಪ್ರೇಮಿಗಳ ಹೃದಯಕ್ಕೆ ಹತ್ತಿರವಾದದ್ದು

-ಗಿರಿ

 

 

 

 

 

****

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಮೂವರ ಕವಿತೆಗಳು: ರಘುನಂದನ ಹೆಗಡೆ, ಬಿ. ಸಿ. ಪ್ರಮೋದ, ಗಿರಿ

Leave a Reply

Your email address will not be published. Required fields are marked *