ತು೦ಬಿ ಹರಿದಿದ್ದಳ೦ದು ತು೦ಗೆ…..!
(ಮಿ೦ಚಿ ಮಾಯವಾದವಳಿಗೊ೦ದು ನೆನಪಿನ ಒಸಗೆ)
ಅ೦ದು ಆಗಸದಲ್ಲಿ
ಕರಿ ಮುಗಿಲುಗಳ ಜಾತ್ರೆ.
ತಟ ಪಟನೆ ಸುರಿವ ಮಳೆಯ
ಹನಿಗಳ ನಡುವೆ ತೂರಿ ಬ೦ದು
ನನ್ನ ಕಣ್ಣ ಕೋರೈಸಿದ್ದು
ಮುಗಿಲೊಡಲ ಮಿ೦ಚಲ್ಲ
ನಿನ್ನ ಕಣ್ಣ೦ಚು!
ಮೌನ ಮೊಗ್ಗೆಯನೊಡೆದು
ಅರಳದ ಮಾತು
ಘಮ ಘಮಿಸಿತ್ತು ನಿನ್ನೊಳಗೆ.
ಅದ ಹೊತ್ತು ತ೦ದ ಶ್ರಾವಣದ ತ೦ಗಾಳಿ
ಹೊಸ ಪುಳಕಗಳನೆಬ್ಬಿಸಿತ್ತು ನನ್ನೊಳಗೆ!
ಒದ್ದೆ ನೆಲವನು ಗೆಬರುತ್ತ ನಿ೦ತಿದ್ದೆ
ನಿನ್ನ ಕಾಲ್ಬೆರಳ ತುದಿಯಲ್ಲಿ.
ನಾನೋ ನವಿರೆದ್ದು ನಿ೦ತಿದ್ದೆ ನೆನೆಯುತ್ತ
ಅವ್ಯಕ್ತ ಭಾವಗಳ ಮಳೆಯಲ್ಲಿ!
ತು೦ಬಿ ಹರಿದಿದ್ದಳ೦ದು ತು೦ಗೆ
ನಮ್ಮಿಬ್ಬರ ನಡುವೆ.
ಹಾದಿ ತೆರೆದಿತ್ತು ಈ ದಡದಿ೦ದ ಆ ದಡಕ್ಕೆ
ಕಾಮನ ಬಿಲ್ಲು ಸೇತುವೆ!
–ಮೇಗರವಳ್ಳಿ ರಮೇಶ್
ಮೈಲಾಪುರ ದೇವಾಲಯ
ಕಪ್ಪು ಶಿಲೆಯ ಗಿರಿಗಳ ಮಧ್ಯದಿ
ಹೊಳೆವ ಚಂದ್ರ ಬಿಂಬ.
ಹಸಿರು ಗದ್ದೆ ತೋಟದ ಮಧ್ಯದಿ
ಗುಹೆಯೋಳ್ ಮೈಲಾರಲಿಂಗ. ( ಪಲ್ಲವಿ)
ಆಹಾ ಏನಿದು ಮೈಲಾಪುರ
ಎಲ್ಲಡೆ ಭಕ್ತರ ಸಂಭ್ರಮ ಸಡಗರ
ದೂರದೋಳ್ ನಿಂತು ತಲೆಯೆತ್ತಿ. ಕೈಮುಗಿದು, ಶಿರಬಾಗಿ,
ಶ್ರೀಗಿರಿಯ ಏರ ಹತ್ತಿದೆವು. ಮೆಲ್ಲಗೆ ಕಾಲ್ಗಳ ಕಿತ್ತಿ.
ಮೊದಲೇ ತೆಗೆದುಕೊಂಡಿದ್ದೇವು
ಕಾಯಿ ಕರ್ಪೂರ.
ಸಾಲಾಗಿ ಬನ್ನಿ, ಸಾಲಾಗಿ ಬನ್ನಿ, ಎನ್ನುತ.
ಮಧ್ಯದಲ್ಲೋಬ್ಬ ಕುಳಿತಿದ್ದ ಸರಕಾರಿ ಸರದಾರ.
ಜನರ ಮಧ್ಯದಿ ಆಗಾಗ ಕಿವಿಗೆ ಬಿಳುತಿತ್ತು
ಮೈಕಿನಲ್ಲಿಯ ಅಬ್ಬರದ ಪ್ರಚಾರ.
ತೆಂಗಿನ ಕಾಯಿ ಒಡೆಯಲು ಕೂಡ ಕಾಸು
ಕೊಡಿ ಸ್ವಾಮಿ ಒಂದು ರೂಪಾಯಿ ಪಿಸು.
ಅಲ್ಲೋಬ್ಬ ಕುಳಿತಿದ್ದ ಪೂಜಾರಪ್ಪ
ಕೈಯಲ್ಲಿ ಹಿಡಿದಿದ್ದ ಎಚ್ಚರಿಕೆ ಘಂಟೆ.
ಬಾರಿ ಸುತ್ತಾ ಬಾರಿ ಸುತ್ತಾ ಹೇಳುತಿದ್ದ
ಕಾಣಿಕೆ ಹುಂಡಿಯಲ್ಲಿ ಹಾಕಿರಿ ನೀವು ಕಟ್ಟಿಕೊಂಡು ಬಂದಿದ್ದ ಮುಡುಪ.
ಶ್ರೀಗಿರಿಯ ನೋಡು
ಆ ಗವಿಯ ನೋಡು
ಮಲ್ಲಯ್ಯನನ್ನ ಬೇಡು
ಇವರೆಲ್ಲರನ್ನು ಕಾಪಾಡು ತಂದೆ ಎಂದು.
ಕಪ್ಪು ಶಿಲೆಯ ಗಿರಿಗಳ ಮಧ್ಯದಿ
ಹೊಳೆವ ಚಂದ್ರ ಬಿಂಬ
ಹಸಿರು ಗದ್ದೆ ತೋಟದ ಮಧ್ಯದಿ
ಗುಹೆಯೋಳ್ ಮೈಲಾರಲಿಂಗ.
-ಮಹೇಶ್ ಕಲಾಲ್
ಮೊಗ್ಗು ಹರೆಯ ಅರಳಿದಾಗ
ಕಾಲದ ತೋಟದಲಿ ಮೊಗ್ಗು ಹರೆಯ ಅರಳುತಿದೆ
ಹೊಸ ಹೊಸ ಆಸೆಗಳಿಗೆ ಜನ್ಮ ನೀಡುತಿದೆ
ಬೆಳ್ಳಕ್ಕಿ ಜೊತೆಯಲಿ ಆ ವಿಶಾಲ ಬಾನಿಗೆ ಹಾರಬೇಕು
ನನಗೆ ರೆಕ್ಕೆಗಳಿಲ್ಲದೆ ಬಯಕೆ ಮಣ್ಣು ಪಾಲಾಯಿತು
ಕಾಳು ಹಾಕಿ ಹಾಕಿ ಹಾಕಿ ಸುಸ್ತಾಗಿಹೋದೆ
ಯಾವ ಹಕ್ಕಿಯೂ ಕಾಳು ತಿನ್ನದೆ ನಿರಾಶೆಯಾಯಿತು
ತಾರೆಗಳ ಬೆರಗಿನ ಬೆಡಗು ಬಿನ್ನಾಣಕ್ಕೆ ಮನಸೋತೆ
ಅಷ್ಟು ದೂರ ಹೋಗಲು ಅಸಾಧ್ಯವಾಯಿತು
ಜನಭರಿತ ರಸ್ತೆಗಳಲಿ ಬಣ್ಣಬಣ್ಣದ ಚಿಟ್ಟೆಗಳು ಹಾರಾಡುತಿವೆ
ಕೈಯಲ್ಲಿ ಹಿಡಿಯಲು ಪಟ್ಟಪ್ರಯತ್ನವೆಲ್ಲಾ ವ್ಯರ್ಥವಾಯಿತು
ಹೂದೋಟದಲಿ ಸುಂದರ ಕುಸುಮಗಳು ಅರಳುತಿವೆ
ದುಂಬಿಗಳ ಕಂಡು ನಗುವುದ ನೋಡಿ ಹೊಟ್ಟೆ ಉರಿಯಿತು
ಯಾವುದೋ ಮಾಮರದಿಂದ ಸಮುದ್ರದಲೆಯ ಹಾಗೆ
ಸವಿಗಾನವೊಂದು ತೇಲಿ ಬಂದು ನನ್ನ ಕಿವಿಗೆ ಬಿತ್ತ್ತು
ಜೇನುಕಂಠದ ಆ ಕೋಗಿಲೆಯನ್ನೇ ಪ್ರೀತಿಸಬೇಕು ಅನಿಸಿತು
ಆದರೆ ಆಕೆಯ ಕಪ್ಪು ಮೈಬಣ್ಣ ನೋಡಿ ಮನತಿರಸ್ಕರಿಸಿತು
ಕೊನೆಗೊಂದು ಗುಬ್ಬಿಬಂದು ಗೂಡು ಸೇರಿತು
ನನ್ನ ಹೃದಯಕ್ಕೆ ನೋವು ಪರಿಚಯಿಸಿತು
-ರಾಜಹಂಸ
ಮೊಗ್ಗು ಹರೆಯ ಅರಳಿದಾಗ ಬೆಳ್ಳಕ್ಕಿ ಹಕ್ಕಿ ಚಿಟ್ಟೆಗಳು ಕುಸುಮಗಳು ತಾರೆಗಳು ಕೈ ಹಿಡಿಯಲಿಲ್ಲ. ಇನ್ನು ಕೋಗಿಲೆಗೆ ತಿರಸ್ಕರಿಸುವ ರಾಜಹಂಸ ಅವರ ಹೃದಯ ಗೂಡಿಗೆ ಗುಬ್ಬಿ ಬಂದು ನೋವು ಪರಿಚಯಿಸಿದೆ. ಕಾಲದ ತೋಟದೊಳಗೆ ರಾಜಹಂಸ ಅವರ ಮೊಗ್ಗು ಹರೆಯ ಅರಳಿರುವ ಪರಿ ಕಂಡು ಖುಷಿಯಾಯಿತು.
ಮೇಗರವಳ್ಳಿ ರಮೇಶ್ ಅವರು ಕಟ್ಟಿದ ಕಾಮನಬಿಲ್ಲಿನ ಸೇತುವೆ. ಮಹೇಶ್ ಕಲಾಲ್ ಅವರು ಪರಿಚಯಿಸುವ ಗುಹೆಯೊಳಗಿನ ಮೈಲಾರ ಲಿಂಗ, ಮತ್ತು ರಾಜಹಂಸ ಅವರ ಮೊಗ್ಗು ಹರೆಯ ಅರಳಿರುವುದು, ಈ ಮೂವರು ತುಂಬ ಕವಿತೆಗಳು ಚೆನ್ನಾಗಿ ಮೂಡಿಬಂದಿವೆ. ಈ ಮೂರು ಕವಿಗಳಿಗೂ ನನ್ನ ಅಭಿನಂದನೆಗಳು.
danyavadagalu sir