ಮತ್ತೆ ಕಟ್ಟಲಾದಿತೇ ರಾಮರಾಜ್ಯ!
ಹುಚ್ಚೆದ್ದು ಕುಣಿಯುತಿದೆ
ನಾಡಿನ ಜನತೆ.
ಮರೆಯಾಗಿ ಹೋಗುತಿದೆ
ಒಲವಿನ ಒರತೆ.
ಇತ್ತ ರೋಡಲಿ ಕಾರು
ಅತ್ತ ಬಾರಲಿ ಬೀರು
ಎಲ್ಲಿ ನೋಡಿದರಲ್ಲಿ
ಹಣದ ಕಾರುಬಾರು.
ಮಾನಕ್ಕೆ ಬೆಲೆಯಿಲ್ಲ
ಮಾನವಂತರು ಇಲ್ಲ.
ಆಗಿಹುದು ನಾಡು, ಸುಡುಗಾಡು
ಎರಡು ಮಾತಿಲ್ಲ.
ಹಣಕಾಗಿ ಜನ ಮರಳು
ಹಣಕಾಗಿ ಜಾತ್ರೆ ಮರಳು.
ಮರೆತು ಹೋಗಿದೆ ಇಂದು
ಮಾನವತೆಯ ತಿರುಳು.
ದ್ವೇಷದ ದಳ್ಳುರಿಯಲ್ಲಿ
ಪ್ರೀತಿ ಹೋಗಿದೆ ಸೋತು.
ಪ್ರೀತಿ-ಪ್ರೇಮ ಎನ್ನುವುದು
ಮರೀಚಿಕೆಯ ಮಾತು.
ಬೆಳೆದು ನಿಂತಿದೆ ಅಹಂ
ಇಂದು ಕಾಳ್ಗಿಚ್ಚಿನ ರೀತಿ
ಹುಡುಕಿದರು ಸಿಗಲಾರದು
ಇಲ್ಲಿ ನ್ಯಾಯ ನೀತಿ.
ಅಲ್ಲಿ ಕೊಲೆ ಅಂತೆ
ಇಲ್ಲಿ ಸುಲಿಗೆಯೂ ಅಂತೆ
ಆದರೆ ಸ್ವಿಸ್ ಬ್ಯಾಂಕಲ್ಲಿ
ನೋಟುಗಳ ಕಂತೆ.
ಅಣ್ಣ-ತಮ್ಮರ ನಡುವೆ
ಅಕ್ಕ-ತಂಗಿಯರ ನಡುವೆ
ಬೆಳೆದು ನಿಂತಿದೆ ವ್ಯಾಜ್ಯ
ಮತ್ತೊಮ್ಮೆ ಹುಟ್ಟಿ ಬಂದರು ರಾಮ
ಕಟ್ಟಲಾಗದು ಮತ್ತೆ ರಾಮರಾಜ್ಯ.
ಛಲದಲ್ಲಿ ದುರ್ಯೋಧನನಾಗು
ದಾನಕ್ಕೆ ನೀ ಕರ್ಣನಾಗು
ಗುರುಭಕ್ತಿಯಲಿ ನೀ
ಏಕವಲವ್ಯನು ಆಗು.
ಮುಳ್ಳಲ್ಲಿರುವ ಹೂವಾಗಿ
ಎಲ್ಲರಿಗೂ ಹಿತವಾಗಿ
ಬಾಳಿದರೆ ನೀ ಬದುಕುವೆ
ಎಂದೆಂದು ಸುಖವಾಗಿ!
–ಮಂಜು ಹಿಚ್ಕಡ್
ವಿವೇಕಾನಂದ
ಪ್ರತಿಯೊಬ್ಬ ಪುಟ್ಟ ನರೇಂದ್ರನೂ
ವಿವೇಕಾನಂದ ಆಗಲೇ ಬೇಕಿದೆ
ಇಂದಿನ ಭಾರತಕ್ಕೆ
ಇಲ್ಲದಿದ್ದರೆ
ವಸುಧೆಗೆ ಭಾರತ ಭಾರವಾಗಿ ಬಿಟ್ಟಾಳು !!!!!!!!!!
ಭಾತೃತ್ವದ ಪಾಠವ ಜಗಕ್ಕೆಲ್ಲ ಹೇಳಿ
ವಿವೇಕದ ಪಥವ ತೋರಿಸಿ
ವಿವೇಕಾನಂದ ಅನಿಸಿಕೊಂಡ …!!!!
ನನ್ನೊಳಗೊಬ್ಬ ವಿವೇಕಾನಂದ ಇದ್ದಾನೆ ಗೆಳೆಯ
ಅವನಿಗೆ ನಿನ್ನಲಿರೋ ವಿವೇಕಾನಂದ ಕಾಣುತ್ತಾನೆ …
ನಿನ್ನಗೂ ನನ್ನಲ್ಲಿರೋ ವಿವೇಕನ ಕಾಣಬೇಕಿದ್ದರೆ
ಸ್ವಾತಂತ್ರ್ಯದ ಸ್ವಾಭಿಮಾನದ ಹಣತೆಯ ಮನದೊಳಗೆ ಹಚ್ಚು …
ಅದು ಪುಟ್ಟ ಕಿಡಿಯೇ ಆದರೂ ಬೆಳಗೀತು ಇಡೀ ಜಗವ ……….. !!
ನೀ ನಡೆದು ಬಂದ ಹಾದಿ
ನೀ ನಿಂತಿರುವ ಹಾದಿ
ನೀ ನಡೆಯ ಬೇಕಾದ ಹಾದಿ
ಎಲ್ಲವೂ
ನಿನ್ನ ಕಾಲಡಿಯಲ್ಲೇ ಇರುವಾಗ
ಹಾದಿ ಸಾಗಿಸಲಸಾಧ್ಯವೆಂದು ಕಣ್ಣೀರಿಡುವ ಭಾರತೀಯನೇ
ಏಳು! ಎದ್ದೇಳು !! ಗುರೀ ತಲುಪುವವರೆಗೂ ನಿಲ್ಲದಿರು !!!
-ಸುನೀತಾ ಮಂಜುನಾಥ್
ನೇಗಿಲ ಕುಳಕ್ಕೆ ಸಿಕ್ಕವರ ಕಥೆ…
ಚೆಂದಿತ್ತು…
ಆಕಾಶದಿಂದ ಉದುರಿದ್ದರೆ
ವನವಾಸ ಅಗ್ನಿಪ್ರವೇಶ
ಪರೀಕ್ಷೆ ಪಾಸುಮಾಡುವ
ಜರೂರತ್ತಿರಲಿಲ್ಲ.
ಬಿಡು ನೇಗಿಲ ಕುಳಕ್ಕೆ
ಸಿಕ್ಕವರ ಕಥೆಯೇ ಇಷ್ಟು.
ಗೂರುವುದು
ಇಪ್ಪತ್ತು ಕಣ್ಣಿನಲಿ
ಹತ್ತು ತಲೆಯ ಬದುಕು
ಹಸಿರು ಪೈರಿನ ಕಟಾವು
ಬಾಯ್ಬಿಟ್ಟ ನೆಲದ ನೋವು
ಅಶೋಕವನಲಿ
ಕಂಬನಿಯದೆ ಕೊಳ
ಹಸಿವಿನ ಕರ್ಮಕ್ಕೆ
ಹೂಡಲೇ ಬೇಕು
ನೇಗಿಲ ಕುಳ
ಬಿಡು ನೇಗಿಲ ಕುಳಕ್ಕೆ
ಸಿಕ್ಕವರ ಕಥೆಯೇ ಇಷ್ಟು
ಕತ್ತಲಿಗೆ ಹಗಲು ವೇಷ
ಪ್ರಭುವಾಳುವ ದೇಶ
ಅಗಸನ ಮಾತಿಗೆ ಖುರ್ಚಿ
ಅಲುಗಿದರೆ ಕಾಡುವಾಸ.
ಪ್ರವೇಶವಿಲ್ಲ
ನಿಲುಗಡೆಯಿಲ್ಲ
ಸುಂಕತೆತ್ತರೂ ಊಳಿಗ
ವಾಗದೆ ನಿರ್ವಾಹವಿಲ್ಲ.
ಬಿಡು ನೇಗಿಲ ಕುಳಕ್ಕೆ
ಸಿಕ್ಕವರ ಕಥೆಯೇ ಇಷ್ಟು
-ದಿಲೀಪ್ ರಾಥೋಡ್
*****
ಎಲ್ಲವೂ ಚೆನ್ನಾಗಿವೆ 🙂