ಕಾವ್ಯಧಾರೆ

ಮೂವರ ಕವಿತೆಗಳು: ಮಂಜುನಾಥ್ ಪಿ., ವಿಶ್ವನಾಥ್ ಎಂ., ಅನುಪಮಾ ಎಸ್. ಗೌಡ.

 

 

 

 

 

ಹರಿಯುವ ನದಿ

ಅದೆಲ್ಲೋ ಉಗಮ

ಮೈದುಂಬಿಕೊಳ್ಳುತ್ತ 

ಕೈ-ಕಾಲು ಮೂಡಿಸಿಕೊಳ್ಳುತ್ತ 

ಸಾಗುವ ದಾರಿಯನ್ನು

ಮಾಡಿಕೊಳ್ಳುತ್ತ ಸುಗಮ 

ಹಠಕ್ಕೆ ಬಿದ್ದು ಅನುಸಂಧಾನವೊಂದನ್ನು

ಉಳಿಸಿಕೊಳ್ಳುವಂತೆ….

 

ಸವೆಸುವ ದಾರಿ ಶಿಶುವಿನ ಹಾಡೆ?

ಸಹಿಸಬೇಕು

ಮಧ್ಯೆ ಮತ್ತೆ

ಹಾಕಿದರೆ ಕಟ್ಟೆಯ ತಡೆಗೋಡೆ?

ಆದರೂ ಹರಿಯಬೇಕೆನ್ನುವ ಧಾವಂತ

ನಿರಂತರ ಒಳಗೊಳಗೆ

ಅದುವೆ ಆದ್ಯಂತ….

 

ಕಟ್ಟೆಯಲ್ಲಾದರೂ

ಎಷ್ಟೆಂದು ಇರಬಹುದು

ಒಂದಿಲ್ಲ ಒಂದು ದಿನ

ತುಂಬಿ ಧುಮ್ಮಿಕ್ಕಲೇಬೇಕು

ನಿಧಾನಕ್ಕಾದರೂ

ಗೋಡೆ ಒಡೆದಾದರೂ…

 

ಸತ್ಯ ಯಾವತ್ತೂ ಹೀಗೆಯಲ್ಲವೆ?! 

’ಸ್ಥಾವರ’ಕ್ಕೆ ಉಳಿವೆ..?

 

ಅದೆಲ್ಲೋ ಉಗಮ

ಮತ್ತೆಲ್ಲೋ ಸಂಗಮ

ಮಧ್ಯವೋ ಜಂಗಮ..!

-ಮಂಜುನಾಥ್ ಪಿ. ಬೆಳಗಾವಿ

                          

 
 
 
 
 
 
 
ನಿಮ್ಮ ನೆತ್ತರಿಗೆ ಇಲ್ಲಿ ಬೆಲೆಯಿಲ್ಲ…  
 
ತಮ್ಮ ಬದುಕು, ತಮ್ಮ ಭವಿಷ್ಯ,
ತಮ್ಮ ಮದುವೆ, ತಮ್ಮ ಮಕ್ಕಳು,
ತಮ್ಮದೇ ಲೋಕದಲ್ಲಿ ತಮ್ಮತನಕೆ 
ಸಾಯುತಿರುವ ಸ್ವಾರ್ಥಿಗಳು ನಿಮ್ಮವರು …. 
ನಿಮ್ಮ ನೆತ್ತರಿಗೆ ಇಲ್ಲಿ ಬೆಲೆಯಿಲ್ಲ…. 
 
ಪರರ ಗುಂಡಿಗೆ ನಿಮ್ಮ ನೆತ್ತರು ಚೆಲ್ಲಿದಾಗ,
ಪರರು ನಿಮ್ಮವರ  ರುಂಡ,ಮುಂಡಗಳನ್ನು ಚೆಂಡಾಡಿದಾಗ ,
ರಣಚೆಂಡಿಯಾಗುವ ನಿಮ್ಮನ್ನು ಷಂಢರನ್ನಾಗಿಸುವ 
ರಣಹೆಡಿಗಳು ನಿಮ್ಮ ನಾಡನ್ನಳುವವರು….. 
ನಿಮ್ಮ ನೆತ್ತರಿಗೆ ಇಲ್ಲಿ ಬೆಲೆಯಿಲ್ಲ …. 
 
ತಮ್ಮ ಮಾನವವೀಯತೆಯ ಮುಖವಾಡಕ್ಕೆ,
ತಮ್ಮ ಅಹಂಗೆ, ತಮ್ಮ ಶ್ರೇಷ್ಟತೆಯ ಪ್ರಚಾರಕ್ಕೆ,
ತಮ್ಮ ಬಿಡುವಿರದ ಐಶಾರಾಮಿ ಜೀವನದಲ್ಲಿ,
ನಿಮ್ಮ ಹರಿದ ನೆತ್ತರನು ಮರೆತವರು, ಇವರು
ನಿಮ್ಮ ನಾಡಿನ ಬುದ್ಧಿ ಜೀವಿಗಳು, ಮಾಧ್ಯಮದವರು
ನಿಮ್ಮ ನೆತ್ತರಿಗೆ ಇಲ್ಲಿ ಬೆಲೆಯಿಲ್ಲ….. 
 
ತಮ್ಮ ಜ್ಯಾತ್ಯತೀತಗೆ, ತಮ್ಮ ಅಧಿಕಾರಕ್ಕೆ,
ತಮ್ಮ ವೋಟಿಗೆ, ತಮ್ಮ ನೋಟಿಗೆ,
ಉಗ್ರರನ್ನು ಸಂಹರಿಸಿದ ನಿಮಗೆ,
ಕೋಮುವಾದದ ಪಟ್ಟ ಕಟ್ಟಿ,
ಚಟ್ಟ ಹತ್ತಿಸುವವರು ನಿಮ್ಮನ್ನಾಳುವವರು… 
ನಿಮ್ಮ ನೆತ್ತರಿಗೆ ಇಲ್ಲಿ ಬೆಲೆಯಿಲ್ಲ…. 
 
ನೀವು ನಿಮ್ಮ ನೆತ್ತರು ಹರಿಸಿ ನಾಡ ಕಾಯುವವರು,
ನೀವು ಹರಿಸಿದ ನೆತ್ತರಿನ ನೆನಪಿನ ಸ್ಮಾರಕವನ್ನು,
ಧ್ವಂಸಗೊಳಿಸುವ ಮುಗ್ಧರು ನಿಮ್ಮ ನಾಡ ಜನರು,
ನಿಮ್ಮ ನೆತ್ತರಿಗೆ ಇಲ್ಲಿ ಬೆಲೆಯಿಲ್ಲ…. 
ಬೆಲೆ ಕಟ್ಟುವ ಜನರಿಗೂ ಇಲ್ಲಿ ಕೊರತೆಯಿಲ್ಲ….!!!
 
 –ವಿಶ್ವನುಡಿ
 
 
 
 
 
 
 
 
 
ಹಳೆ-ಬೀಡು 

 
(ಒಂದಷ್ಟು ನೆನಪುಗಳ ಜಾಗ)
 
ಅದೆಷ್ಟು ಚಂದದ ಬದುಕು 
ಬಿಳಿ ಅಂಗಿಯಂತ, ತಿಳಿ ಮನಸು ಆಗ 
 
ತಾವರೆಯ ಕೊಳ, ಕೆರೆ ಏರಿ ಶಿವ 
ಹಗಲೆಲ್ಲಾ ಜಾತ್ರೆ , ಇರುಳಲ್ಲಿ ಯಾತ್ರೆ 
 
ಸುಣ್ಣದ ಗೋಡೆ, ಬಿಲದಲ್ಲಿದ್ದ 
ನಾಗರ ಹೆಡೆ, ಅಬ್ಬಾಬ !!
 
ಹಸ್ತ ಮಳೆ, ಮೂಡಿದ ನೀರಿನ ಬಳೆ 
ಚಪ್ಪರದ ಎಲೆ, ಗೊಂಬೆಗಿಟ್ಟ ಬೈತಲೆ 
 
ಹಳ್ಳದ ನೀರು, ಗದ್ದೆಯ ಏರು 
ನಾಟಿ ಪೈರು, ಹಬ್ಬದ ತೆರೆ ನೋಡಲೇಸ್ಟು ಚಂದ  !!
 
ಚಂದದ ಬದುಕು ಅದು 
ಹೃದಯ , ಗಾಯ,ನೆನಪು, 
ಕನಸುಗಳ ಅರಿವಿರದ ವಯಸ್ಸು 
 
ಅದೆಷ್ಟು ಚಂದ!!!!!!!!!!!!!! ಆ ಹಳೆ ಜಾಗ
 
ನಗೆ ಮಲ್ಲಿಗೆ 
(ಅನುಪಮ ಎಸ್ )

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಮೂವರ ಕವಿತೆಗಳು: ಮಂಜುನಾಥ್ ಪಿ., ವಿಶ್ವನಾಥ್ ಎಂ., ಅನುಪಮಾ ಎಸ್. ಗೌಡ.

  1. ಕವಿತೆಗಳು ಭಾವನಾತ್ಮಕವಾಗಿವೆ. ಅನುಪಮ ಅವರ ಕವಿತೆಯಲ್ಲಿ ನೆನಪೊಂದು ಒಡಮೂಡಿಬಂದಂತೆ ಭಾಸವಾಯಿತು.

  2. ಹಠಕ್ಕೆ ಬಿದ್ದು ಅನುಸಂಧಾನವೊಂದನ್ನು
    ಉಳಿಸಿಕೊಳ್ಳುವಂತೆ…………. ನೆತ್ತರಿಗೆ ಇಲ್ಲಿ ಬೆಲೆಯಿಲ್ಲ Very nice 

  3. ಹಳೆ-ಬೀಡು: ನನ್ನನ್ನು ನೆನೆಪಿನ ಆಳಕ್ಕೆ ಇಳಿಸಿಬಿಟ್ಟಿತು. ಸಿಹಿ ಆರೈಕೆಗಳು ಅನುಪಮಾ.

  4. ಮಂಜುನಾಥ್ ಪಿ ಬೆಳಗಾವಿ ಇವರ ಕವಿತೆ ಅದ್ಭುತವಾಗಿದೆ. ಸತ್ಯ ನದಿಯ ಮದ್ಯದ ಹೋಲಿಕೆ ಹೊಸತನದಿಂದ ಕೂಡಿದೆ .. ಕೊನೆಯ ಮೂರು ಸಾಲುಗಳು ಸೂಪರ್ 

Leave a Reply

Your email address will not be published. Required fields are marked *