ಜೋಗಿ ಜಂಗಮನ ಹಾದಿ
ಅಲ್ಲಿ ಕಂಡಾರೆಂದು
ಇಲ್ಲಿ ಕಂಡಾರೆಂದು
ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ
ಸುತ್ತೇ ಸುತ್ತತಾನ
ಮನುಷ್ಯರ ಹುಡುಕುವ ಮನುಷ್ಯ
ಸುಡು ಬಿಸಿಲು ಉರಿಪಾದ
ಕವ್ ನೆರಳು ಕರೆಬಳಗ
ಕರುಳ ಬಳ್ಳಿಯ ಕಥೆಗೆ
ನೂರು ನಂಟು
ಹೊಂಟನವ
ಕಂಬಳಿಯ ಕೊಡವಿ
ಹುಚ್ಚು ಹುಚ್ಚಿನ ಹಾಂಗ
ಗಿಡ ತೊಗಟಿ ಬಳ್ಳಿ
ಕಟ್ಟ್ಟಿ ಮನಸ
ಮುಂದಿನೂರಿನ ಹಾದಿ
ಊರು ಮುಟ್ಟುವ ದಾರಿ.
ಬಗಲ ಜೋಳಿಗೆ ಬಡಗಿ
ಅಂದದ್ದು ಎಲ್ಲ ಖರೆ,
ಕಟ್ಟಿ ಕೆಡಹುವ ಮನೆ
ಮನಸು ಕಟ್ಟಿರೊ ಮೊದಲು
ಮನಸು ಕಟ್ಟಿರೊ.
ರೊಟ್ಟಿ ಅಗಳಿನ ಮೇಲೆ
ಎಲ್ಲ ಮನುಷ್ಯರ ಹೆಸರು
ಅಂಬಲಿಯ ಗಡಗಿಯ ಮೇಲೆ
ಉಂಡವರ ದಾಖಲೆ ಇದೆ.
ನಿಂದೂ ತಾ, ನಂದೂ ತಾ
ಅಗೆದ ಗೋರಿಯ ಮೇಲೆ
ಬೆಳೆಯಲಾದ ಹೂವು
ಸುಡಗಾಡ ಮೇಲೆ ಕೌದಿ ನಿದ್ದೆಯ
ಸಾವು.
ಕೊರಳ ಕಾವಿಯ ಬಣ್ಣ
ಹಸಿರು ಪೇಟದ ಕಣ್ಣ
ನಮಾಜೊ ವಚನವೋ
ಲಿಂಗವೊ ಅಲ್ಲಮನೋ
ಮುಂದೆ ನಡೆಯಪಾ ತಂದೆ,
ಮನುಷ್ಯರಿದ್ದಾರೆ ಅಲ್ಲಿ
ಬಾಕಿ ಇದೆ ಭೂಮಿ !
ಅಲ್ಲಿ ಕಂಡಾರೆಂದು
ಇಲ್ಲಿ ಕಂಡಾರೆಂದು
ಸುತ್ತೇ ಸುತ್ತತಾನ ಇಂವ
ಸುತ್ತೇ ಸುತ್ತತಾನ
ಮನುಷ್ಯರ ಹುಡುಕುವ ಮನುಷ್ಯ.
-ಬಸವರಾಜ ಹೂಗಾರ್
ನನ್ನವಳ ನೆನಪಾಗಿ….
ನಾನು ನನ್ನವಳಿಗೆ
ನನ್ನವಳು ನನಗೆ
ಕೊಟ್ಟು ಕೊಂಡಿದ್ದೊಂದೇ ಪ್ರೀತಿ ಹಾಡು |
ಭಾವನೆಗಳೊಂದಾಗಿ
ಬದುಕೆಲ್ಲಾ ಚೆಂದಾಗಿ
ಹೆಣೆದು ಕಟ್ಟಿರುವುದೇ ಒಲುಮೆ ಗೂಡು ||
ಅವಳಿಟ್ಟ ಆ ಹೆಜ್ಜೆ
ಘಲ್ಲೆನುವ ಕಾಲ್ಗೆಜ್ಜೆ
ಹೃದಯ ಬಾಗಿಲ ಬಳಿಯೇ ಸದ್ದು ಮಾಡಿ |
ಅವಳ ಆ ಕಣ್ಣೋಟ
ಕನ್ಸನ್ನೆಯೇ ಪಾಠ
ಹೇಗೆ ತಿದ್ದಿದಳೆನ್ನ ಮುದ್ದು ಮಾಡಿ ||
ಅವಳ ಹಣೆ ಬಿಂದಿಯೋ
ಬಿಗಿದ ತೋಳ್ಬಂದಿಯೋ
ಎಲ್ಲಿ ತಾ ಮೈಮುರಿದು ಕೂತಿಹುದು ಅಂದ |
ಆ ಸೀರೆಯಾ ನೆರಿಗೆ
ಹಾಕುವಾಗಲೇ ಮರೆಗೆ
ಹೋಗುತಲಿ ತೋರುವಾ ಹುಸಿಮುನಿಸೇ ಚಂದ ||
ನನ್ನನ್ನೇ ನನ್ನಲ್ಲಿ
ಬಿಡಿ ಬಿಡಿಸಿ ತೋರಿಸುವ
ನನ್ನ ಮನಸು ಇಲ್ಲಿ ಬಿಂಬವಾಗಿಹುದು|
ಕೈಸೊಡರು ಅವಳಾಗಿ
ಬಂದ ದಿನ ನೆನಪಾಗಿ
ಮನದಿ ಮಾಸದ ನೆನಪು ಚಂದವಾಗಿಹುದು ||
– ರಾಘವ್ ಲಾಲಗುಳಿ
ನವೋಲ್ಲಾಸ
ಮೂರೂ ಕವಿತೆಗಳು ತುಂಬಾ ಚೆನ್ನಾಗಿವೆ!
Chennagive 🙂
mooru kavthegalu tumba sundaravaagive…