ಮೂವರ ಕವಿತೆಗಳು: ಪ್ರೀತೀಶ, ದಿಲೀಪ್ ರಾಥೋಡ್, ಸ್ವರ್ಣ ಎನ್.ಪಿ.

 

ನೀ ಕೊಟ್ಟೆ ಪರೀಕ್ಷೆ

ಸೀತೆ, ನೂರು ದುಗುಡಗಳ ತುಂಬಿಕೊಂಡು

ಸುಮ್ಮನೆ ಕೂತುಬಿಟ್ಟೆಯಲ್ಲೇ ಶೋಕವನದೊಳಗೆ;

 

ಅಯ್ಯೋ ಪಾಪ ಸೀತೆ

ಅಷ್ಟೈಶ್ವರ್ಯ ಬಿಟ್ಟು ಕಾಡಿಗೆ ಹೋದಳು

ಎಂದು ನೊಂದ ಕವಿಯ ಕಂಡು ನೊಂದುಕೊಂಡೆವಲ್ಲೇ?

ಹೊಳೆಯಲೇ ಇಲ್ಲ ನಮಗೆ

ನಿನಗೆ, ನಿನ್ನ ಜೊತೆಗೆ ಕೈ ಹಿಡಿದು ನಡೆವ ಕಣ್ಣೀರು ತೊಡೆವ

ಮುತ್ತುಗಳ ಮತ್ತಿನಲ್ಲಿ ಮೈಮರೆಸುವ,

ಚಿಗುರುತ್ತಿಹ ಜವ್ವನದ ಸಂಭ್ರಮಗಳ ತಣಿಸುವ

ನಲ್ಲನಿದ್ದಾನೆಂದು! ಉರ್ಮಿಳೆಯಂತೆ

ಬರೀ ವೈಢೂರ್ಯಗಳು ಮಾತ್ರ ಇಲ್ಲವೆಂದು.

 

ಕೂತು ಬಿಟ್ಟೆ ನೆಪವಾಗಿ ಕೈಕಾಲು ಆಡಿಸದೆ

ರಾವಣ ಎತ್ತಿಕೊಂಡು ಒಯ್ದಾಗ

ಉರಿದೆದ್ದ ನಿನ್ನ ಗಂಡ ಉರಿಯಲಿ ನೀ ಹಾರೆಂದಾಗ

ನೀನೂ ಉರೀಲಿಲ್ಲ, ಉರಿಗೂ ಉರಿಗೊಡಲಿಲ್ಲ

ಪುರುಷರ ಕಾಮದಗ್ನಿಯಲಿ ನೀ ಕೊಟ್ಟೆ ಪರೀಕ್ಷೆ

ನಾವೆಲ್ಲ ಫೇಲಾದೆವು.

 

ನಿನ್ನ ಮೌನ, ಸಮ್ಮತಿಯಿಲ್ಲದ ಜೀವನ ಎಮಗಾದರ್ಶ ಎಂದರು

ನಮ್ಮ ಹೃದಯ ತಡಕಾಡುವಾಗಲೆಲ್ಲ ನಿನ್ನೆಡೆ ಬೆರಳ ತೋರಿದರು.

 

ದುಗುಡಗಳ ತುಂಬಿಕೊಂಡು ಯಾಕೆ ಕುಳಿತೆ ಸುಮ್ಮನೆ?

ಯಾಕೆ ಜಗಕೆಲ್ಲ ಧರ್ಮ ಕಲಿಸುವ ನಿನ್ನ

ಪತಿದೇವನಿಗೆ ಕಲಿಸಲಿಲ್ಲ ಪತಿಧರ್ಮ?

ಅದೆಂತ ಬಾಳು ನಿನ್ನದು?

ಆಗಸನಿಗೂ ಕೂಡ ಪ್ರಶ್ನಿಸುವ ಧೈರ್ಯ

ನಂಬಿಕೆಯಿರದಿರೆ ಮದುವೆ ಯಾಕಾದೆ ಎಂದಿದ್ದರೂ ಸಾಕಿತ್ತು

ಮತ್ತೆ ಕೋಟಿ ಕೋಟಿ ಸೀತೆಗಳು ಹುಟ್ಟುತ್ತಿರಲಿಲ್ಲ ಇಲ್ಲಿ.

-ಪ್ರೀತೀಶ

 

 

ರೂಪಾಂತರ

ಕಡ್ಡಿ ಹುಬ್ಬಿನ ನಡುವೆ
ಕಾಸಗಲದ ಬಿಂದಿ
ಲೋವೆಸ್ಟು ನಿರಿಗೆ
ಬ್ಯಾಕ್ಲೆಸ್ಸು ಹೈಹೀಲ್ಡ್
ಚಮಕು ಧಮಕಿನಲಿ
ಬೋಲ್ಡ್ ಎನ್ನುವ
ಅವಳ ಭಾವಗಳ
ಅನುವಾದಿಸೋದು ಹೇಗೆ?

ಬೊಂಬೆಯಾಟದಲಿ
ಮದುವೆಯಾಗಿ ಕಾಲು ಮಂಡಿ
ಎದೆ ಕಿಬ್ಬೊಟ್ಟೆ ಸವರಿ
ಬಾಲ್ಯದ ನೆಲದಲಿ
ಕರಿನೆರಳ ಸವಾರಿ
ಅವಳ ಬಿಕ್ಕುಗಳ
ಅನುವಾದಿಸೋದು ಹೇಗೆ?

ಅಡುಗೆ ಪಾತ್ರೆ
ಕಸ ಮುಸುರೆ
ನೀರು ಕೊಡು…
ಅನ್ನ ಹಾಕು… ಬೇಡಿಕೆ
ಉಸ್ಸೆಂದು ಕೂತರೆ.
ಲಂಗದಲಿ ಮೂಗು
ಒರೆಸಿ ಬಂದವಳ
ಅಸಹಾಯಕತೆಗಳ
ಅನುವಾದಿಸೋದು ಹೇಗೆ?

ಒಬ್ಬರೊಬ್ಬರ
ಭಾವತೊರೆಯಲೊಮ್ಮೆ
ಕೊಚ್ಚಿ ಕಟ್ಟೆಯೊಡೆದು
ಕೋಡಿಬಿದ್ದು
ಹಳ್ಳ-ದಿಣ್ಣೆಗಳಿಲ್ಲ
ದೆಡೆ ಎದ್ದು
ಅವಳು ನಾನಾಗಿ
ನಾ ಅವಳಾಗಿ
ರೂಪಾಂತರಿಸಬೇಕು…

-ದಿಲೀಪ್ ರಾಥೋಡ್.

ಕಾಡುವ ಕಣ್ಣುಗಳು

 

ದಶಕಗಳ ಹಿಂದೆ

ಮನೆಯ ಪಕ್ಕವಿದ್ದ ಕನ್ಸರ್ವೆನ್ಸಿ ರಸ್ತೆಯಲ್ಲಿ

ಇದ್ದಕ್ಕಿದ್ದಂತೆ ಒಂದು ಮುಂಜಾನೆ

ಕೋಣೆಯೊಂದ ಕಟ್ಟಲು ಗೋಡೆ ಏಳುತಿತ್ತು

ಇಟ್ಟಿಗೆ ಹೊರಲು ನನ್ನದೇ ವಯಸಿನ ಒಂದು ಹುಡುಗಿ

ಆ ಹುಡುಗಿಯನ್ನ ಕಂಡಾಗಲೆಲ್ಲ

ಕಾನ್ವೆಂಟಿಗೆ ಹೊರಟ

ನನ್ನಲೊಂದು ತಪ್ಪಿತಸ್ಥ ಭಾವ

ತನ್ನ ಕನಸುಗಳನೆಲ್ಲ ಬಸಿದಳೇ, ಇಟ್ಟಿಗೆಯ ಕೆಂಪಿಗೆ ?

ಕಸಿಯಿತೆ ನಮ್ಮ ಆಸೆಗಳು ಅವಳ ಕನಸುಗಳನ್ನು ?

ಹುಡುಗಿಯ ಕಣ್ಣು ತಪ್ಪಿಸಿ ತಿರುಗುತ್ತಿದ್ದೆ

ಆದರೆ ಆ ಹುಡುಗಿಯ ಕಣ್ಣು ನನ್ನ ಬಿಡಲಿಲ್ಲ

ಅಪೂರ್ಣ ಕಟ್ಟಡದ ಕಾಲೇಜಿನಲ್ಲಿ

ಕ್ಲಾಸಿನ ಪಕ್ಕದಲ್ಲೇ ತಲೆ ಎತ್ತುತಿತ್ತು

ಎ.ಸಿ.ಇಂದ ತಣ್ಣಗಿರುವ

ನಮ್ಮ ಕಂಪ್ಯೂಟರ್ ಲ್ಯಾಬು

ಮತ್ತದೇ ಹುಡುಗಿ ಅದೇ ಕಂಗಳು

ಮತ್ತೆ ತಪ್ಪಿಸಿಕೊಂಡು ತಿರುಗಿದೆ ನಾ

ಎರಡು ಮೊಳ ಕಾಗದದ ಮೇಲಿನ ಪದವಿಯ

ದೆಸೆಯಿಂದ ಒಂದು ಉದ್ಯೋಗದ ಖಾತ್ರಿ

ಸರಣಿ ಸ್ಪೋಟದಂತೆ

ಕಾಗದದ ಮೇಲಿನ ಗೂಡಿಗಾಗಿ

ನಗರದ ಹೊರ ವರ್ತುಲಕ್ಕೆ ವಲಸೆ

ಆಗಸವ ಕಾಣಲು ಮಹಡಿಯಿಂದ ಇಣುಕಿದರೆ

ಮತ್ತೆ ಕಣ್ಣಿನ ಕಾಟ!

ಅಪಾರ್ಟ್ಮೆಂಟ್ ಪಕ್ಕದಲ್ಲಿ ಸಾಲು ಸಾಲು ಕಾಮಗಾರಿ

ಆ ಕಣ್ಣುಗಳಲ್ಲಿ ಕನಸುಗಳ ಶವಯಾತ್ರೆ ಹೊರಟಂತೆ

ಅಲ್ಲಿ ತಮಟೆಯೊಂದಿಗೆ ನಾ ಕುಣಿದಂತೆ

ಸದಾ ಅದೇ ಚಿತ್ರ, ಈ ಬಾರಿ ತಪ್ಪಿಸಿಕೊಳ್ಳಲು ಹೊಸ ಉಪಾಯ

ಈಗ ಮಹಡಿಯ ಬಾಲ್ಕಾನಿಯಿಂದ ನಾ ಕೆಳಗೆ ನೋಡುವುದಿಲ್ಲ

ಎತ್ತರದಲ್ಲಿರುವ ನನಗೆ ಆ ಕಣ್ಣುಗಳು ಕಾಣುವುದಿಲ್ಲ

ಆ ಕಣ್ಣುಗಳಲ್ಲಿ ಕನಸುಗಳ ಶವಯಾತ್ರೆ ಹೊರಟಂತೆ

ಅಲ್ಲಿ ತಮಟೆಯೊಂದಿಗೆ ನಾ ಕುಣಿದಂತೆ

ಸದಾ ಅದೇ ಚಿತ್ರ, ಈ ಬಾರಿ ತಪ್ಪಿಸಿಕೊಳ್ಳಲು ಹೊಸ ಉಪಾಯ

ಈಗ ಮಹಡಿಯ ಬಾಲ್ಕಾನಿಯಿಂದ ನಾ ಕೆಳಗೆ ನೋಡುವುದಿಲ್ಲ

ಎತ್ತರದಲ್ಲಿರುವ ನನಗೆ ಆ ಕಣ್ಣುಗಳು ಕಾಣುವುದಿಲ್ಲ

-ಸ್ವರ್ಣ ಎನ್ ಪಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

14 Comments
Oldest
Newest Most Voted
Inline Feedbacks
View all comments
sharada moleyar
sharada moleyar
12 years ago

ನೀ ಕೊಟ್ಟೆ ಪರೀಕ್ಷೆ   Illi  ನಂಬಿಕೆಯಿರದಿರೆ ಮದುವೆ ಯಾಕಾದೆ ಎಂದಿದ್ದರೂ ಸಾಕಿತ್ತು  amba salugalu manamuttithu……….preeteesha

Srikanth Manjunath
12 years ago

ಮೂವರ ಕವಿತೆಗಳು ಸುಂದರವಾಗಿವೆ. ಭಾವನೆಗಳು ಏಕೆ ಹುಟ್ಟುವುದು, ಯಾಕೆ ಹುಟ್ಟಬೇಕು ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರಸಿಕ್ಕುತ್ತದೆ

Ganesh Khare
12 years ago

ಚೆನ್ನಾಗಿವೆ.

Dileep Rathod
Dileep Rathod
12 years ago
Reply to  Ganesh Khare

thank u sir…

M.S.Krishna Murthy
M.S.Krishna Murthy
12 years ago

ಎಲ್ಲಾ ಕವಿತೆಗಳು ಚೆನ್ನಾಗಿದೆ…

Mayur Baragale
Mayur Baragale
12 years ago

ಮೂರು ಕವಿತೆಗಳು ಚನ್ನಾಗಿವೆ. ಮೂರು ಬೇರೆ ಬೇರೆ ಸಂದರ್ಭಗಳನ್ನು ಸುಚಿಸುವಥವು.

ಸಿ. ಎಸ್. ಮಠಪತಿ
ಸಿ. ಎಸ್. ಮಠಪತಿ
12 years ago

ಚೆಂದದ ಕವಿತೆಗಳು ಇಷ್ಟವಾದವು………….

Dileep Rathod
Dileep Rathod
12 years ago

ಕವಿತೆಗಳನ್ನು ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು…

mamatha keelar
mamatha keelar
12 years ago

ಎಲ್ಲ ಮೂರು ಕವಿತೆಗಳು ಚನ್ನಾಗಿವೆ..

ಸುನಾಥ
12 years ago

ಮಹಿಳಾದಿನದಂದು ಪ್ರಕಟವಾದ ಈ ಮೂರು ಕವನಗಳು ಮಹಿಳೆಯರ ಪಾಡನ್ನು ವಾಸ್ತವಿಕತೆಯ ಆಧಾರದ ಮೇಲೆ ಚಿತ್ರಿಸುತ್ತಿವೆ. ಹೆಣ್ಣಿನ ಅಳಲನ್ನು ಅರಿಯಲು ಹೆಣ್ಣಾಗಿಯೇ ರೂಪಾಂತರಗೊಳ್ಳಬೇಕು ಎನ್ನುವ ದಿಲೀಪ ರಾಠೋಡರ ಕವನವು ಅರ್ಥಪೂರ್ಣವಾಗಿದೆ. ದುಡಿಯುತ್ತಿರುವ ಹುಡುಗಿಯನ್ನು ಕಂಡಾಗ, ತಮ್ಮಲ್ಲಿ ಹುಟ್ಟುವ guilt feelingಅನ್ನು ಸ್ವರ್ಣಾ ಚೆನ್ನಾಗಿ ಚಿತ್ರಿಸಿದ್ದಾರೆ. ಮೂವರಿಗೂ ಅಭಿನಂದನೆಗಳು.

ಎಸ್.ಚೆನ್ನಬಸವರಾಜು
ಎಸ್.ಚೆನ್ನಬಸವರಾಜು
12 years ago

ಎಲ್ಲಾ ಕವಿತೆಗಳೂ ಅತ್ಯುತ್ತಮವಾಗಿವೆ.ಪ್ರಕಟಿಸಿದ ಹಾಗೂ ಕವಿಗಳಿಗೆ ಅಭಿನಂದನೆ.

Santhoshkumar LM
Santhoshkumar LM
12 years ago

Super!!

ಸುಮತಿ ದೀಪ ಹೆಗ್ಡೆ

ಚೆನ್ನಾಗಿದೆ…

Badarinath Palavalli
12 years ago

ಸ್ವರ್ಣಾ ಅವರ ಕವನದ ಭಾವ ಹೂರಣದಲ್ಲಿ ಕೆಲ ಕಾಲ ಕಳೆದುಹೋದೆ. ಕೆಲ ಕಣ್ಣುಗಳೇ ಹಾಗೆ ಅವು ಬಹು ಕಾಲ ಇನ್ನಿಲ್ಲದಂತೆ ಕಾಡಿಬಿಡುತ್ತವೆ. ಅವುಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲೂ ನಾವು ಅರೆ ಸೊರಗಿ ಹೋಗಿರುತ್ತೇವೆ. ಅಪೂರ್ವ ಕವನ ಮತ್ತು ಅದಕ್ಕೆ ಬಳಕೆಯಾದ ಶೈಲಿ.

14
0
Would love your thoughts, please comment.x
()
x