ಫ಼ೇಸ್ಬುಕ್
ಕತೆಗಳಾಗಬಹುದಾದ ಸಾಲುಗಳೂ
ಚುಟುಕಗಳಾಗಿ,
ಎರಡು ಕಮೆಂಟು ಮೂರು ಲೈಕಿಗೆ
ಕಾತರಿಸಿ,
ಒಳಗೊಳಗೇ ಒರತೆ
ಚಿಮ್ಮುವ ಮೊದಲೇ,
ಕಾರುವ ಆತುರ;
ಅಗೋ ಬಂತಲ್ಲ
ನಮ್ಮನ್ನೂ ಯಾರೋ
ನೋಡುವವರಿದ್ದಾರೆ,
ನಮ್ಮ ಕನ್ನಡಿಯಲ್ಲಿ
ಯಾರನ್ನೂ ಕಾಣದು;
ವಿವಿಧ ವೇಷಗಳು,
ಅವತಾರಗಳು,
ಪರದೂಷಣೆಗಳು,
ಬರಿದೇ ಒತ್ತುವ ಕುಟ್ಟುವ
ನಕಲಿ ಕಾಳಜಿಗಳು;
ಕೊನೆಗೆ ಉಳಿಯುವ ಖಾಲಿತನಕ್ಕೂ
ಪೊಳ್ಳು ಸಮಾಧಾನಗಳು;
ಆವಿಯಾಗಿ ಮೋಡವಾಗಿ
ಘನೀರ್ಭವಿಸಿ,
ಮಳೆಯಾಗಿ ಹೊಯ್ದರೇ
ಓಮ್ ಶಾಂತಿಃ ಶಾಂತಿಃ ಶಾಂತಿಃ
ಯಾಕೆ ಸುಮ್ಮನೇ
ಸ್ಖಲನದ ಆತುರ?
-ಪ್ರಶಾಂತ್ ಭಟ್
ಹೃದಯವಿಲ್ಲದ ಸರಕುಗಳು
ಹಸಿದ ಹೊಟ್ಟೆಗೆ ಅನ್ನ ಹುಡುಕಿ
ಭಿಕ್ಷಕ್ಕೆ ತೆರಳಿದರೆ
ಯಾರ ಮನೆಯಲ್ಲಿಯೂ
ಒಲೆ ಉರಿಯುತ್ತಿಲ್ಲ!!
ಫಿಜ್ಜಾ-ಬರ್ಗರ್ ಗೆ ಆರ್ಡರ್ ಕೊಟ್ಟು
ಬರುವಿಕೆಗಾಗಿ ಕಾಯುತ್ತಿದ್ದಾರೆ.!!
ಬಾಯಾರಿ ನೀರಿಗಾಗಿ
ಕೆರೆ-ಹಳ್ಳಗಳನ್ನು ಹುಡುಕಿಹೊರಟರೆ
ಅಲ್ಲೆಲ್ಲ ತಲೆ ಎತ್ತಿವೆ
ಭವ್ಯ ಮಹಲುಗಳು,ಅಪಾರ್ಟಮೆಂಟ್ ಗಳು!!
ಬಾಟಲಿಯಲ್ಲಿ ಅವಿತ ನೀರು
ಮಾರಾಟಕ್ಕಿದೆ.
ನಿದ್ರಿಸಲೆಂದು ಹಾಳು ದೇಗುಲ ಹುಡುಕಿಹೊರಟರೆ
ದೇಗುಲಗಳೆಲ್ಲ ನವೀಕರಣಗೊಂಡಿವೆ.
ಕಾವಲಿಗೆ ಸೆಕ್ಯೂಟರಿ ಗಾರ್ಡ ನಿಂತಿದ್ದಾರೆ!!
“ಅನುಮತಿ ಇದ್ದವರಿಗೆ ಮಾತ್ರ ಪ್ರವೇಶ”
ಎಂಬ ಬೋರ್ಡು ನೇತು ಬಿದ್ದಿದೆ.
ಆತ್ಮಸಂಗಾತಿಯನ್ನು ಅರಸಿ ಹೊರಟರೆ
ಹಸಿಮಾಂಸದ ದೇಹವನ್ನು
ಹರಿದು ಹಂಚಿ ತಿನ್ನಲು
ಸಂಚು ಹೂಡಿವೆ ಆತ್ಮವಿಲ್ಲದ
ವಿಕೃತ ಮನಸ್ಸುಗಳು.
ಯಾರಿದ್ದರೇನಂತೆ?ಏನಿದ್ದರೇನಂತೆ?
ಎಲ್ಲ ಹೃದಯವಿಲ್ಲದ ಸರಕುಗಳು!!?
-ಶ್ರೀಧರ ನಾಯಕ,ಬೇಲೇಕೇರಿ
ಬರ
ದಶಕದ ಹಿ೦ದೊ೦ದು ಮು೦ಜಾವು ದನ
ಅಟ್ಟಲು ಬೆಟ್ಟದ ತುದಿಯವರೆಗೂ ಹೋಗಿದ್ದೆ
ಕಣ್ಣಿಗೆ ಕಗ್ಗತ್ತಲು ಕವಿಯುವ ಕಾಡು
ಕಾಡೆ ಅದು ಗೊ೦ಡಾರಣ್ಯ ಪಿಸುಗುಟ್ಟಿದರು ಕೇಳುವ ನಿಶ್ಯಬ್ದ
ಕಣ್ಣಿಟ್ಟಲ್ಲೆಲ್ಲಾ ಹಸಿರು ಹಸಿರ ಹೊದ್ದು ಹಾರೈಸುವ ವೃಕ್ಷಗಳ ಉಸಿರು
ನೆಲ ಬಾಯಾರದೆ ಒರತೆಯಾಗಿ ಹರಿವ ನೀರ ಪಸೆ
ಹಸಿರೆಲಗಳ ತೂರಿ ಬರುವ ಬೆಳಕ ಚಿತ್ತಾರದ ಹಸೆ
ಹೂ ಬಿಟ್ಟು ತೊನೆಯುವ ಮರಗಳೆಲ್ಲಾ ದು೦ಬಿ ಝೆ೦ಕಾರದ ಜೇನುಗೂಡು
ಗೀಜಗ, ಮರಕುಟಿಕ ಹಲವು ಹಕ್ಕಿಗಳ ಮಾಡು
ಆದರೆ ಅವೆಲ್ಲಾ ಈಗೆಲ್ಲಿ ನರ ಮನುಷ್ಯನ ದುರಾಸೆಗೆ ಬಲಿಯಾದ ಆ ಕಾಡೆಲ್ಲಿ
ನೀರ ಪಸೆಯೆಲ್ಲಿ ಗೊ೦ಡಾರಣ್ಯದ ನಿಶ್ಯಬ್ದ ವೆಲ್ಲಿ ಕರಗಿಹುದೆ ಅವೆಲ್ಲಾ ವೃಕ್ಷರಾಜನ
ಒಣ ಬಡ್ಡೆಯ ಮೂಕ ಸ೦ವೇದನೆಯಲ್ಲಿ?ಬಿಸಿಲಿಗೆ ಬಸವಳಿದು ಬಳಲಿ ಬೆ೦ಡಾಗಿ
ಬಿರುಬಿಟ್ಟು ಕಾದ ಹ೦ಚಾದ ಎಟ್ಟೆನೆಲದಲ್ಲಿ ?
ಹಿ೦ದಿನಿ೦ದಲೂ ಅದೆಷ್ಟು ಹಿ೦ಡಿದರು ಕರಗದ ಆ ಮಲೆನಾಡ ವೃಕ್ಷರಾಶಿ
ಇ೦ದಿನ ನರವಾನರನ ಅತ್ಯಾಚಾರಕ್ಕೆ ನಲುಗಿ ಬ೦ದಿದೆ ಆಪತ್ತು
ಜನ -ದನ ಕುಡಿಯಲೂ ನೀರಿಲ್ಲದೆ ಪರಿತಪಿಸುವ ಹೊತ್ತು
-ಅನ೦ತ್ ಕಳಸಾಪುರ
ಹೃದಯವಿಲ್ಲದ ಸರಕುಗಳು…..ತುಂಬಾ ಕಾಡುವ ಕವಿತೆ.ನೆನಪಲ್ಲಿ ಉಳಿಯುವ ಕವಿತೆ ಇದು. ಬದುಕಿನ ಸೂಕ್ಷ್ಮಗ್ರಹಿಕೆ , ಮನಸ್ಸಿನ ತಲ್ಲಣ ಇಲ್ಲಿದೆ. ಶ್ರೀಧರ ಬರವಣಿಗೆ ಮುಂದುವರಿಸಿ.
ಹೃದಯವಿಲ್ಲದ ಸರಕುಗಳು.. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇಂದಿನ ಆಧುನಿಕತೆಯ ನಾಗಾಲೋಟಕ್ಕೆ ಹಿಡಿದ ಕನ್ನಡಿಯಂತಿದೆ.
ಚೆನ್ನಾಗಿದೆ ..
ಎಲ್ಲ ಹೃದಯವಿಲ್ಲದ ಸರಕುಗಳು!!? ಕಾಡುವ ಸಾಲು, ಶ್ರೀಧರ ಸರ್, ಚಲೋ ಕವನ ಬರಿತಾ ಇದ್ದಿರಿ ಕವನ ಸಂಕಲನ ಯಾವಾಗ ಮುಂದಿಡುತ್ತಿರಿ
Olleya kavithegalu.. Facebook Mattu hrudayavillada sarakugalu hecchu ishtavaayitu…
ಚೆನ್ನಾಗಿವೆ……ಕವಿತೆಗಳು…
kavitegalu chennagive