ಕನ್ನಡಿ ಜಲ
ವಿಶಾಲವಾದ ತಿಳಿಗೊಳ
ಅದರೊಳಗೆ ಇಣುಕಿ ನೋಡಿದರೆ
ಕಾಣುವುದು ಮಿರಿಮಿರಿ ಮಿಂಚುವ ತಳ
ಪ್ರತಿಬಿಂಬ ಕಾಣಲು ಸಾಕು
ಈ ಕನ್ನಡಿ ಜಲ ..!
ಅಪಾಯವೇನೂ ಇಲ್ಲವಾದರೂ
ಇದರಲ್ಲಿ ಯಾರೂ
ಸ್ನಾನ ಮಾಡಬೇಡಿ ; ಈಸಬೇಡಿ….
ಅತ್ತಿತ್ತ ಚಲಿಸುತ್ತಾ
ಮನಕ್ಕೆ ಮುದ ನೀಡುವ
ಬಣ್ಣ ಬಣ್ಣದ ಮೀನುಗಳ
ಹಿಡಿದು ಕೊಲ್ಲಬೇಡಿ
ಕಸಕಡ್ಡಿ , ಕಲ್ಲೆಸೆಯಬೇಡಿ
ಕಾಲು , ಕೋಲು ಹಾಕಿ ಕಲಕಿ
ತಿಳಿ ನೀರ ಕೆಡಿಸುವುದು ತಪ್ಪು
ಕೊಳಕ ತೊಳೆಯಲು
ಇದು ಜಾಗವೇ ಅಲ್ಲ
ಶುದ್ದ ಜಲ…!
ಬಾಯಾರಿದ್ದರೆ ಕುಡಿದುಬಿಡಿ ಒಂದಿಷ್ಟು
ದಡದಲ್ಲಿ ಕುಳಿತು
ಸವಿದುಬಿಡಿ ಸೌಂದರ್ಯ
ಇದಕ್ಕಿಂತ ಸುಖ ಬೇರೇನಿದೆ..?
ಒಂದು ಕೊಳ ನಿರ್ಮಲವಾಗಿಡುವುದು
ಸುಲಭ ಎಂದುಕೊಂಡಿರಾ…?
ಕಣ್ಣಲ್ಲಿ ಕಣ್ಣಿಟ್ಟು
ಬಹಳ ಕಾಲದಿಂದ ಕಾಯುತ್ತಿದ್ದೇನೆ
ಧಾರಾಳ ಕಷ್ಟ-ನಷ್ಟ ಅನುಭವಿಸಿದ್ದೇನೆ
ಕೊನೇತನಕ ಹೀಗೇ ಇರಿಸಿಕೊಳ್ಳಬೇಕೆಂಬ
ಛಲ ನನಗೆ
ಅದಕ್ಕೇ ಹೇಳುತ್ತಿದ್ದೇನೆ
ಸಹಕರಿಸದೇ ಹೋದರೂ
ಕೊನೆಪಕ್ಷ ಕದಡುವ ಕೆಲಸಕ್ಕೆ ಮಾತ್ರ
ಕೈ ಹಾಕಬೇಡಿ…..
ಪ್ರಭಾಕರ ತಾಮ್ರಗೌರಿ
|
|
ಹೊಸ ಕವಿತೆ /ಹಸಿದವರ ಕನಸು ಕದ್ದವರು
ಗುಡಿಸಲುಕಾಣದಿರಲೆಂದು
ಗೋಡೆಗಳ ಕಟ್ಟಿದ್ದೇವೆ
ದೂರದೂರ ಸಾಗಿದ್ದೇವೆ
ಕಾಲೊನಿಗಳನ್ನು ಕಟ್ಟಿ ಮಹಲುಗಳನ್ನು
ರಂಗುಗೊಳಿಸಿದ್ದೇವೆಜೊತೆಗೆ
ಬೆಚ್ಚನೆಯ ಹಾಸಿಗೆ ಹೊಂದಿಸಿದ್ದೇವೆ
ನಿಟ್ಟುಸಿರು ಹೊರಗೆ ಕೇಳಿಸದಿರಲೆಂದು
ಹಸಿದವರ ಕನಸು ಕದ್ದಿದ್ದೇವೆ
ಕಾರಣ
ಹೊಸ ಕನಸು ಬೀಳುತ್ತಿಲ್ಲ
ಹಳೆ ಕಸನು ಸಕಾರಗೊಂಡಿಲ್ಲ
ಹಸಿದವರು ಕನ್ನ ಹಾಕದಿರಲೆಂದು
ಒಳಗಿನ ನಗ್ನಆಗ್ನಿಕಾಣದಿರಲೆಂದು
ಎತ್ತರೆತ್ತರದಕಂಪೌಂಡು ಹಾಕಿದ್ದೇವೆ
ಹಸಿದ ಹೊಟ್ಟೆ ಹರಕು ಅಂಗಿ
ಕಾಣಬಾರದೆಂದು ಬಹುದೂರ
ಸ್ಲಮ್ಮು ನಿರ್ಮಿಸಿದ್ದೇವೆ
ಹಸಿದವರ ಆಕ್ರೋಶಕಟ್ಟೆಯೊಡೆಯ ಬಾರದೆಂದು
ದೇವರಗುಡಿಯಗಂಟೆ ಮೊಳಗಿಸಿದ್ದೇವೆ
ಮಸೀದಿ ಚರ್ಚಗಳಲ್ಲಿ ನಿತ್ಯ ಪ್ರಾರ್ಥಿಸುತ್ತಿದ್ದೇವೆ
ಹಸಿದವರಿಗೆ ಅನ್ನಕೊಡುಎಂದಲ್ಲ
ನಮ್ಮ ಸಂಪತ್ತುಇಮ್ಮಡಿಸಲೆಂದು
ಮನುಷ್ಯರನ್ನೇಕದ್ದಿದ್ದೇವೆ
ಮನುಷ್ಯತ್ವಕಾಣದಿರಲೆಂದು
ಜಾತಿ ವರ್ಗಗಳ ಬೇಲಿ ಹೆಣೆದಿದ್ದೇವೆ
ಜೊತೆಗೆ ಒಂದಿಷ್ಟು ಬೆಣ್ಣೆಯನ್ನು
ವಿಧಾನಸೌಧದತುದಿಗೆ ಸವರಿದ್ದೇವೆ
ಕಾರಣ
ಕೆಳಗಿರುವವರು ಬೆಣ್ಣೆಗಾಗಿ ತವಕಿಸುತ್ತಲಿರಲೆಂದು
ಮೇಲೇಳಲಾಗದವರು ಕುಳಿತುಕೊಳ್ಳಲೆಂದು
ಓಡಲಾಗದವರು ನಡೆದಾಡಲೆಂದು
* ನಾಗರಾಜ್ ಹರಪನಹಳ್ಳಿ . ಕಾರವಾರ
ತಲ್ಲೀನೆ
ನಾನು ತಲ್ಲೀನೆ
ಬದುಕ ಮಣಿಹಾರ ಪೋಣಿಸುವ ದಾರಿಯಲ್ಲಿ
ಅವರಿವರ ಭಾವಗಳ ಬಣ್ಣ ಬಣ್ಣದ ಮಣಿಗಳ ಜೋಡಿಸುವಲ್ಲಿ
ಸಾವುನೋವುಗಳ ಸಾಲು ಸಾಲೇ ಇಂಚಿಂಚು ಸರಿಸುವಲ್ಲಿ
ಅವಮಾನದೆದೆಗೆ ರತ್ನದ ದೊಡ್ಡ ಪದಕ ಅಂಟಿಸಿ ಮುಚ್ಚಿಸುವಲ್ಲಿ
ಪರಿಪೂರ್ಣ ಮಣಿಹಾರದ ಕನಸಲ್ಲಿ -ನಾನು ತಲ್ಲೀನೆ..!!
ನಾನು ತಲ್ಲೀನೆ
ಅಂಟಿಕೊಂಡ ಗಂಟುಗಳ ಕೊಡವಿಕೊಳ್ಳುವಲ್ಲಿ
ಕಳಚಿಬಿದ್ದ ವಿಶ್ವಾಸದುಡುಪ ತೊಟ್ಟುಕೊಳ್ಳುವಲ್ಲಿ
ಹಸಿದ ತೋಳದ ತೋಳಿಂದ ಬಿಡಿಸಿಕೊಳ್ಳುವಲ್ಲಿ
ಪಸೆ ಆರಿದ ಗಂಟಲಿಗೆ ಹನಿ ನೀರ ಹುಡುಕುವಲ್ಲಿ
ನಾನು ತಲ್ಲೀನೆ
ಬಾಲ್ಯದ ಮಣ್ಣಾಟದ ಕೊಳೆ ತಿಕ್ಕುವಲ್ಲಿ
ಇರುಳು ಸುರಿದ ಭಯಾನಕ ಕನಸುಗಳ ನೆನೆಕೆಯಲ್ಲಿ
ಬಿಡದಂತೆ ಕಾಡುವ ಬದುಕ ಕಾನನದ ಘೋರತೆಯಲ್ಲಿ
ಒಡೆದ ಮಡಕೆಯಲ್ಲಿ ಕಳೆದ ನೆಮ್ಮದಿಯ ಹಪಾಹಪಿಯಲ್ಲಿ
ಮರೆಯಬೇಕಾದ ನೆನಪುಗಳಲ್ಲಿ -ನಾನು ತಲ್ಲೀನೆ ..!!
ನಾನು ತಲ್ಲೀನೆ
ಅವಳ ಸೆರಗ ತುದಿಯಲ್ಲಿ ಅಡಗಿಕೊಳ್ಳುವಲ್ಲಿ
ನಾನುಗಳ ಇಲ್ಲವಾಗಿಸಿ ಅವನಾಗುವಲ್ಲಿ
ಕಿರುಬೆರಳ ತುದಿಯಲ್ಲಿ ಹೆಸರ ಗೀಚುವಲ್ಲಿ
ನೀನುಗಳಲ್ಲಿ ನನ್ನನಿರಿಸುವಲ್ಲಿ
ನನ್ನೊಳು ನಾನು ಬದುಕುವಲ್ಲಿ -ನಾನು ತಲ್ಲೀನೆ
ಸುಷ್ಮಾ ಮೂಡುಬಿದರೆ
ಕನ್ನಡದ ಬರಹಗಳನ್ನು ಹಂಚಿ ಹರಡಿ
ಕಾವ್ಯಧಾರೆಯ ಪ್ರವಾಹದಲ್ಲಿ ನನಗಾಸರೆ ಸಿಗದೆ ಕೊಚ್ಚಿ ಹೋದೆನು ! ಮೂರು ಕವನಗಳು ಆತ್ಮೀಯ ಕಲ್ಪನೆಗಳಲ್ಲಿ ಚೆನ್ನಾಗಿ ಮೂಡಿಬಂದಿವೆ…ಎಲ್ಲಾ ಕವಿಮಿತ್ರರಿಗೆ ಶುಭಾಶಯಗಳು !
Olleya Kavanagalu…
Muvar kavitegalu channagive…………
ಸಹಕರಿಸದೇ ಹೋದರೂ
ಕೊನೆಪಕ್ಷ ಕದಡುವ ಕೆಲಸಕ್ಕೆ ಮಾತ್ರ
ಕೈ ಹಾಕಬೇಡಿ…..
ಸಾಲುಗಳು ಅದ್ಭುತ ಪ್ರಭಾವಶಾಲಿ ಸಾಲುಗಳು
prabhakar..
ಶಾರದಾ ಅವರೆ ತುಂಬಾ ಧನ್ಯವಾದಗಳು
ಹಸಿದವರ ಕನಸು ಕದ್ದವರು
* ನಾಗರಾಜ್ ಹರಪನಹಳ್ಳಿ . ಕಾರವಾರ
ಕವನ ಇಷ್ಟವಾಯ್ತು
ಎಲ್ಲಾ ಸಾಲುಗಳು ಮನಮಿಡಿಯುತ್ತವೆ
ತಲ್ಲೀನೆ
good sushma..