ಮೂವರ ಕವಿತೆಗಳು: ನವೀನ್ ಮಧುಗಿರಿ, ನಗೆಮಲ್ಲಿಗೆ, ಕು.ಸ.ಮಧುಸೂದನ್

ಕೊಳದ ದಡ
ಬೇಟೆ ಸಲುವಾಗಿ
ಧ್ಯಾನಸ್ಥ ಕೊಕ್ಕರೆ
ಬುದ್ಧನಲ್ಲ
~•~

ತಂಗಾಳಿಯ ಹಾದಿ
ಚಲಿಸಿದೆ ಪರಿಮಳ
ಹಾರಿತು ಚಿಟ್ಟೆ
ಉದುರಿದವು ಹಣ್ಣೆಲೆಯ
~•~

ಪಶ್ಚಿಮ ಶಿಖರದ ಮೇಲೆ
ನೇಸರನ
ಜಾರುಬಂಡಿ
ಮುಂಜಾಗ್ರತೆಗೆ
ಮಡಿಲು ತೆರೆದಳು ಇಳೆ
~•~

ಆಷಾಡದ ಗಾಳಿ
ತರಗೆಲೆಗೆ
ಕಲಿಸಿದೆ ಓಟ
~•~

ಜೇಡದ ಮನೆ
ಮುರಿಯಲು ಹೋಗಿ
ನೊಣ
ಬಲೆಯೊಳಗೆ ಬಲಿ
~•~

ಮಲಗಿರುವ
ಸೂರ್ಯನಿಗೆ
ಮುಂಜಾನೆ ಸುಪ್ರಭಾತ
ಕೊಕ್ ಕೊಕ್ ಕೋ
~•~

ಬೆತ್ತಲೆ ಚಂದಿರ
ಬೆತ್ತಲೆ ಮರ
ಕತ್ತಲ ಉಡುಗೆ
ಬೆಳಕು ಉಡುಗೆ
~•~

ಹಾರಿ ಹೋಯಿತು
ಚಿಟ್ಟೆ
ಅಲೆಯುತಿದೆ
ತಂಗಾಳಿ
ಬಾಗಿಲಿಲ್ಲದ ಬಯಲು
~•~

ಕಪ್ಪು ಮೋಡಗಳ
ಅನುಕರಿಸಿ
ಕೊಳಕೆ
ಜಿಗಿಯಿತು ಕಪ್ಪೆ
~•~

ಬೆಳಕಿನ ಪೊರಕೆ
ಹಿಡಿದ ನೇಸರ
ಕತ್ತಲೆಯ
ಕಸ ಗುಡಿಸಿದ
~•~

ಅಲೆಮಾರಿ ಚಂದಿರನ
ಹಿಡಿದು ಬಂಧಿಸಿದೆ
ಕುಣಿವ ಕಡಲು
~•~

ತೆಂಗಿನ ಗರಿ
ಮಾತು ಕಲಿತಿದೆ
ಬೀಸಿ ಬೀಸಿ ತಂಗಾಳಿ
~•~

~ ನವೀನ್ ಮಧುಗಿರಿ 

ಮನಸ್ಸು-ನೆನೆದು

ಅಂದು ಬಲತ್ಕಾರಕ್ಕೆ
ಒಳಗಾದ ಮನಸ್ಸು 
ಹಡೆದ ನೆನಪುಗಳು 
ಇಂದು ಬೆಳೆದು ನಿಂತಿವೆ
ಅನಾಥವಾಗಿ…
ಅದರಲ್ಲಿ ಕೆಲವು ಕುರೂಪಿ
ಆದರೆ, ಮತ್ತೆ ಕೆಲವು
ನಿರ್ಧಯಿಗಳು….

ಕಣ್ಣಸಡಿಲಿಕೆಯಲ್ಲಿ 
ಬಿಟ್ಟ ಬಾಣಗಳು
ನೇರವಾಗಿ ಎದೆಗೆ ನಾಟಿ
ಅಸಹಾಯಕತೆಯ ಕಂಡು
ಗಹಗಹಿಸಿ ನಗುತಿವೆ
ನೆನಪುಗಳ ಹೊತ್ತು ಹೆತ್ತ
ವಣೆ ನಿನ್ನದೇ ಏಂದು…..

ಕಂಡವರಿಲ್ಲ ಕಂಬನಿಯ
ಹಸಿವ, ತೀರಿಸುವವರಿಲ್ಲ
ಹಂಬಲಿಯ ಋಣವ
ಅರ್ಧ ಬಿಂದಿಗೆ ನೀರು
ತುಂಬಿ ತುಳುಕುತಿವೆ
ಕೆನ್ನೆ ದಿಣೆಗಳ ಮೇಲೆ….

ಕಾಲುದಾರಿ ಕಡಿದಾಗಿದೆ
ತುಂಬಾ ಇಳಿಜಾರಿದೆ 
ಅಲ್ಲಲ್ಲಿ, ಸೋಲುವವಳು
ನಾನಲ್ಲ ಛಲಗಾರ್ತಿ ನಾ
ನನ್ನದಲ್ಲದ ತಪ್ಪಿಗೆ,
ಚನ್ನಕೇಶವನ ಆಣೆ
ಸೋತು ಗೆಲ್ಲುವವಳು ನಾನೆ..,

-ನಗೆಮಲ್ಲಿಗೆ

ಸೃಷ್ಠಿ
ಕನ್ನಡಿ ಪ್ರತಿಬಿಂಬಿಸುತ್ತದೆ
ಸೃಷ್ಠಿಸುವುದಿಲ್ಲ ಹೊಸದೇನನ್ನೂ
ಹಾಗೆಯೇ
ಉಳಿಸಿಕೊಳ್ಳುವುದಿಲ್ಲ ತನ್ನೊಳಗೇನನ್ನೂ!
ಹೆಣ್ಣು ಹಾಗಲ್ಲ
ಸೃಷ್ಠಿಸುತ್ತಲೇ ಇರುತ್ತಾಳೆ
ಅನವರತವೂ
ಹೊಸತೇನನ್ನಾದರು
ಜೊತೆಗೇನೆ
ಕಾಪಾಡುತ್ತಾಳೆ ಹಳತನ್ನೂ
ಜತನದಿಂದ
ಹಳಸಿಹೋಗದಂತೆ!

*****

ಅವಳಿ-ಜವಳಿ
ಸುಳ್ಳು ಸತ್ಯಗಳ ನಡುವೆ
ನಿನ್ನೆಯ ಸುಳ್ಳು
ಇವತ್ತಿನ ಸತ್ಯವಾಗಬಹದು
ಇವತ್ತಿನ ಸತ್ಯ
ನಾಳೆಗೆ ಸುಳ್ಳಾಗಬಹುದು
ಮುಂದೊಂದು ದಿನ
ಸುಳ್ಳು ಸತ್ಯಗಳೆರಡೂ ತೆಕ್ಕೆಯಾಕಿಕೊಂಡು
ನಗಬಹುದು!
ಪುರಾಣ-ಚರಿತ್ರೆಗಳು
ಅವಳಿಗಳಂತೆ ತೆವಳುತ್ತಿರುವ
ಈ ನೆಲದಲ್ಲಿ
ಏನು ಬೇಕಾದರು
ಆಗಬಹುದು
ಆಗದೇಯೂ ಇರಬಹುದು!

****

ಕವಿ-ಕವಿತೆ
ಕವಿತೆ
ಮಾತಾಡಬೇಕು
ಕವಿ
ಮೌನವಾಗಿರಬೇಕು
ಇದು ವಿಮರ್ಶಕರ ಆಜ್ಞೆ!
ಕವಿತೆ ಮಾತಾಡಬೇಕು
ಜೊತೆಗೆ
ಕವಿಯೂ
                                      ಇದು ಓದುಗರ                                     
ವಿನಮ್ರ ಬೇಡಿಕೆ!
ಕು.ಸ.ಮಧುಸೂದನ್

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x