ಬೇಡದ ಜೀವ
ಹಸಿದ ಕತ್ತಲು ಲೊಚಗುಟ್ಟುತ್ತದೆ
ಹೊಸೆದ ಬಿರುಸು ಬಂಧನಕ್ಕಾಗಿ,..
ಬಿಸಿಯುಸಿರು ಅಸ್ತವ್ಯಸ್ತವಾಗುತ್ತದೆ
ಕ್ರೌರ್ಯ ಕಂಡ ಗೋಡೆಗಳಿಗಾಗಿ…
ಏದುಸಿರು…ಅಸಹನೆ ಸಾಕ್ಷಿಯಾಗುತ್ತದೆ
ನಿಗೂಢ ಮೌನವಾಗಿ….
ಬಗಲಲಿ ಮಲಗಿದ
ಮೊದಲ ಕೂಸಿಗೂ
ಆಗಲೆ ಮೊಳಕೆಯೊಡೆದ
ಮುಗ್ಧ ಪಿಂಡಕ್ಕೂ
ಏನು ಅಂತರ,,!?
ಉತ್ತರವಿಷ್ಟೇ-
ಕೆಲವೊಮ್ಮೆ ತೊಟ್ಟಿಲು ತೂಗುತ್ತದೆ,
ಕೆಲವೊಮ್ಮೆ….
ತೊಟ್ಟಿ ತುಂಬುತ್ತದೆ.,…
ಮೊಳಕೆಯೊಡೆದ ಪಿಂಡ
ಕೆಂಪು ಕೆಂಪಾಗಿ ತೊಟ್ಟಿಕ್ಕುತ್ತದೆ…
ಕಾಣದ ಜೀವದ ಮೌನರೋಧನಕೆ
ಹೊಸದೊಂದು ನ್ಯಾಪ್ಕಿನ್
ಕೆಂಪಾಗುತ್ತದೆ….
–ಜಾನ್ ಸುಂಟಿಕೊಪ್ಪ.
ಕೊನೆ ಎಂದು ?????
ಎಲ್ಲೆಲ್ಲು ಕೂಗು
ಬೆಂಬಿಡದೆ ಕೇಳುತಿದೆ
ನೂರಾರು ಮನಸಲ್ಲಿ
ಮನೆಮಾಡಿ ನಿಂತು
ಕಾಣದೆ ಸೋರುಗುತಿದೆ
ಭುಮಾತೆಯ ಒಡಲು
ಕೇಳದೇನು ನಿಮಗೆ
ಅಂತರಾತ್ಮದ ದ್ವನಿಯು ????
ನೀಚ ಕಿಚಕರ ಕೃತ್ಯ
ಕೊಲ್ಲುತಿದೆ ಹಸುಳೆಯರ
ಎಲ್ಲೆಲ್ಲು ಹುಡುಕುತಿದೆ
ಆತ್ಮರಕ್ಷಣೆಯ ಅಳಲು
ಅಂಗಲಾಚಿ ಬೇಡುತಿದೆ
ರಕ್ಷಣೆಯ ಕೂಗು
ಎಲ್ಲಿ ಅಡಗಿ ಕುಳಿತಿದೆ
ಪ್ರಜಾಪ್ರಭುತ್ವದ ಸ್ವರವು ????
ಆಗಸಕೆ ಹಾರಿದೆ
ಸಂಸ್ಕೃತಿಯ ಪಥ
ನೆರಳಂತೆ ಹಿಂಬಾಲಿಸಿದೆ
ದುರ್ನಡೆತೆಯ ಅಟ್ಟಹಾಸ
ಕಣ್ಣಮುಚ್ಚಿ ಕುಳಿತಿದೆ
ನ್ಯಾಯದೇವತೆಯ ಕಣ್ಣು
ಮೌನದಿ ಅನುಭವಿಸುತಿದೆ
ಮನಕುಲದ ಮನವು
ಹೇಗೆ ಬದುಕುವದು ಜಗದಿ
ಕೊನೆ ಇಲ್ಲವೇನು ???????
-ಉಷಾಲತಾ
ಏಕಾಂಗಿ
ನನ್ನ ಜತೆಗಿದ್ದವರೆಲ್ಲ
ಯಾವಾಗಲೂ ಒಂದೆಜ್ಜೆ ಮುಂದೇನೆ
ನಾನೋ… ಜಾರುವ ಚಡ್ಡಿಯ
ಕಳೆದು ಹೋದ ಗುಂಡಿಯನ್ನು ಹುಡುಕುತ್ತಾ
ಹಿಂದೆ ಉಳಿಯುತ್ತಿದ್ದೆ- ಅಮ್ಮನ ಕೈಕೊಂಕಿಸಿ
ಚಿಪ್ಪು ರಾಶಿ ಹಾಕಲು ಹಿಂದೆ ಉಳಿದ ಪೋರನಂತೆ
ಅವರ ಬೆನ್ನು ಹಿಡಿಯಲು ಅಥವಾ
ಅವರ ಜತೆ ಹೆಜ್ಜೆ ಹಾಕಲು ನನ್ನಿಂದ ಆಗಲಿಲ್ಲ
ಎಂತಲೆ ನಿನ್ನೆವರೆಗೂ
ನನ್ನಮೇಲೆ ನನಗೇ ಕಡು ತಾತ್ಸಾರ…..
ಅವರ ಜತೆ ಹೋಗಿದ್ದರೆ
ನಿನ್ನೆ ತನಕ ನಾನೂ
ಉದ್ದುದ್ದ ಶ್ವೇತಾ ಕುರ್ತಾಗಳ ತೊಡುತ್ತಿದ್ದೆ
ಕುರಿಗಳು “ಬುದ್ದೀ…”ಅಂತ ಅಡ್ಡ ಬೀಳುತ್ತಿದ್ದವು
ನನಗೂ ‘ಕ್ಯೂ’ ನಿಲ್ಲುತ್ತಿತ್ತು
ಹುಚ್ಚು ಜನ ನನ್ನನ್ನೇ ಆಲಿಸಿ ಕೂಡುತ್ತಿತ್ತು
ಬೆರಳೆತ್ತಿದರೆ ನಗರ ಸುಡುತ್ತಿತ್ತು
ಕೆಮ್ಮಿದರೆ ಊರೇ ಮಗುಚಿ ಮಲಗುತ್ತಿತ್ತು
ಆದರೆ ಏನು ಹೇಳಲಿ,
ಅವರ ಜತೆ ಹೋಗಿದ್ದರೆ
ನಿನ್ನೆಯ ದೈನಿಕದಲ್ಲಿ ನೀವೇ ನೋಡಿದಿರಲ್ಲ;
ರಕ್ತದಲ್ಲಿ ಅದ್ದಿ ಹೋದ ನನ್ನ ದೇಹನೂ ರಸ್ತೆಯಲ್ಲೇ ಕೊಳೆಯುತ್ತಿತ್ತು!
ಪರ್ವಾಗಿಲ್ಲ,
ಯಾರು ಏನೇ ಅನ್ನಲಿ
ನಾನು ಇಂದಿಗೂ
ಏನಾದರೊಂದನು ಹುಡುಕುತ್ತಾ
ಹಿಂದೆಯೇ ಉಳಿಯುತ್ತೇನೆ.
– ಜೊ. ಸಿ. ಸಿದ್ದಕಟ್ಟೆ
All is well……………………..