ಕಾಡುವ ನೆನಪಿನ ಹಿಂದೆ
ನೂರೊಂದು ಚಡಪಡಿಕೆ
ಒಂದೊಂದು ತಿರುವಲು ನಿನ್ನ
ನಗುವಿನ ಪಳೆಯುಳಿಕೆ
ಕಂಡೂ ಕಾಣದೆ ಕತ್ತಲಿನ
ಮೂಲೆಯಲಿ ಕಂಪಸೂಸಿದ ನಿನ್ನ
ಬೆಳದಿಂಗಳಂತ ನಸುನಗೆ
ಸುಮ್ಮನೆ ಪ್ರೇಮಿಸುತಿದ್ದ ನನ್ನ
ಕವಿಯನಾಗಿ ಮಾಡಿದ್ದು
ನೀನಾ? ನಿನ್ನ ನೆನಪಾ?
ಹೇಳು, ದಯವಿಟ್ಟು ಹೇಳು
ಕನಸಲಿ ಬಂದು
ಕನವರಿಸುವಂತೆ ಮಾಡಿದ್ದು
ನೀನಾ? ನಿನ್ನ ಮುಂಗುರಳಾ?
– ಗಿರಿ
ಮೂಲ ಮರೆತವನ ಹುಡುಕಾಟ
ಅಂಗಳದಿಂದ ಹತ್ತು ಹೆಜ್ಜೆ ಎತ್ತಿಟ್ಟರೆ
ನೆರಳು ಬಿಸಿಲು ಆಟವಾಡುವ ಮನೆ
ಉಸ್ಸೆಂದು ಹಗುರಾಗಿ ಕತ್ತೆತ್ತಿದರೆ
ತುದಿ ಮಾಡಿಗೆ ಜೋತು ಬಿದ್ದ
ಮಸಿ ಹಿಡಿದ ವಾಯರ್‍ಗಳು
ಬೆಸೆದ ಜೇಡ ನಿವಾಸ
ಅದರ ಕೆಳಗೆ ಸ್ವಚ್ಛಂದ ಬದುಕುವ
ಪ್ರೀತಿ ತುಂಬಿದ ಮಂದಿ
ಒಳಗೆ ಮಂತ್ರೋಚ್ಛಾರದ ರಿಂಗಣ
ಮನಸ್ಸು ಮಳೆಗೆ ತೆರೆದ ಪ್ರಾಂಗಣ
ಹಂಚಿಕೊಂಡ ಸಿಹಿ ಕಹಿ ಕ್ಷಣಗಳಿಗೆ
ಮಾತು ನಗುವಿನ ಮದರಂಗಿ
ಬೀಳ್ಕೊಡುಗೆಗೆ ಕಣ್ಣ ಹನಿಯ ಅಭಿಷೇಕ
ಮಳೆ ಹನಿಗೆ ಅಪ್ಪುವ ಪುಳಕ
ಬಯಲ ಅಂಗಳದಲ್ಲಿ ಪಾರಿಜಾತ
ಅರಳಿ ನಿಂತ ದಾಸವಾಳದ ಹಾಡು
ಅಂಗಳದಂಚಲ್ಲಿ ನಗುವ ತುಳಸಿ
ಬಾನ ಬಯಲಲ್ಲಿ ಚುಕ್ಕಿ ಚಂದ್ರಮ
ಹೆಜ್ಜೆ ಇಡುವ ಮೊದಲೇ ಜಾರೋ ಕಾಲು
ಬಿದ್ದರೆ ಮೋಡ ನಗುತ್ತದೆ, ನೆಲ ತೂಗುತ್ತದೆ?
ಮನೆಯಂದರೆ ಹೀಗೆ ಮನಸಿನ ಹಾಗೆ
ಮೂಲ ಮರೆತವನ ಹುಡುಕಾಟ
ಎಲ್ಲೆಲ್ಲೊ ಹರಿದಾಡಿ ಸುತ್ತುತ್ತಲಿದ್ದರೂ
ಕೊನೆಗೊಂದು ನೆಮ್ಮದಿಯ ಬಯಕೆ
ಜಗದೆದುರು ಏನೆಲ್ಲ ಹಾರಾಡಿದರೂ
ಕೊನೆಗೊಂದು ಅಂತರಂಗದ ಸಾಂತ್ವನ
ನೆಲ ಮುಗಿಲು ಬುಡ ತುದಿಯ ನಡುವೆ
ಏನೆಲ್ಲ ಕನಸು ಮನಸುಗಳ ವ್ಯವಸಾಯ
ಎಲ್ಲ ಕಾಲಕ್ಕೂ ಒಳಗೊಂದು ಸುರಿವ ಧಾರೆ
ಉರುಳೋ ಕಾಲ, ಸವೆಯೋ ಜೀವನ
-ರಘುನಂದನ ಹೆಗಡೆ, ಯಲ್ಲಾಪುರ
ಕಡಲ ಗರ್ಭ
ಕಡಲಗರ್ಭದಲಿ ಅಡಗಿದ ಅನಲ
ಸಿಡಿಯಲಾರದು – ಆಗಿದೆ ಅಬಲ
ಗುಪ್ತಗಾಮಿನಿಯ ಗುನುಗುವ ತಾನ
ಕೇಳದಂತೆ ತಡೆ ಹಿಡಿದಿದೆ ಜವನ
ಜನರ ಪಾಪವೋ, ದೈವ ಶಾಪವೋ
ಮನದ ಹೊಲವಿದು ಬರಡು ಬಿದ್ದಿದೆ
ಮೌಲ್ಯ ಕಳೆದಿದೆ, ಮೌಢ್ಯ ಬೆಳೆದಿದೆ!
ಮೂಕವಾಗಿದೆ, ಮನವು ನೊಂದಿದೆ!
ಪ್ರಗತಿ ಚಕ್ರದ ಚಲನೆ ನಿಂತಿದೆ.
ಕಾಲಗರ್ಭದಲಿ ಬೆರೆತು ಹೋಗಿದೆ
ಬೆವೆತು ಹೋಗಿದೆ, ಬದುಕು ಬಾಡಿದೆ!
ಜಾಣ ಕಿವುಡಿನ ಆಳುವ ಪ್ರಭುಗಳೋ
ಕಣ್ಣು ಕಂಡರು ಕುರುಡು ಜನಗಳು
ಮುತ್ತು ಹೊಡೆದರೂ ಇಲ್ಲಾ ಚಿಂತೆ!
ಮಾತು ತಪ್ಪುವುದೆ ಇವರ ಘನತೆ
ಸ್ವಾರ್ಥವೆಂಬುವ ಮಂಗನ ಹಿಡಿತ
ಬಿಡಿಸಿಕೊಳ್ಳದೆ
ಮುಕ್ತವಾಗದು-ಬವಣೆಯ ಬದುಕು
ಕುರ್ಚಿಯ ಆಟ, ಅಧಿಕಾರದ ಓಟ
ಬಡಪಾಯಿ ಜನಗಳ ಮೌನ ನೋಟ
ಮನದಲ್ಲೇ ಹೋರಾಟ
ಬಾಯಿ ಸತ್ತಿದೆ, ಬದುಕು ನಲುಗಿದೆ
ಬರದ ಹೊಡತಕೆ ಭೂಮಿ ಬಾಯಿ ಬಿಟ್ಟಂತೆ.
-ಪಾ.ಮು.ಸುಬ್ರಮಣ್ಯ ಬ.ಹಳ್ಳಿ.
* * *