ಮೂವರ ಕವಿತೆಗಳು ಕು.ಸ.ಮಧುಸೂದನರಂಗೇನಹಳ್ಳಿ, ಅನಿತಾ ಕೆ.ಗೌಡ, ರಾಜೇಶ್ವರಿ ಎಂ.ಸಿ.

ಅದೊಂದು ರಾಜ್ಯದಲ್ಲಿ!

ಅಷ್ಟೆತ್ತರದ ಅರಮನೆ
ಅಂಬರ ಮುಟ್ಟುವ ಕಳಸಗೋಪುರಗಳು
ಸುತ್ತೇಳು ಕೋಟೆ
ಗೋಡೆಗಳ ಮೇಲೆ ಫಿರಂಗಿಗಳ  ಹಿಂಡು
ಸುತ್ತ ಶಸ್ತ್ರಸಜ್ಜಿತ ಸೈನಿಕರ ದಂಡು
ಅಲ್ಲಲ್ಲಿ ವಿಶಾಲ ದೇವಳಗಳು
ಸಾಹಿತ್ಯ ಸಂಗೀತ
ಸಭಾಭವನಗಳು
ಮೀಟಿದರೆ ನಾದ ಹೊಮ್ಮಿಸುವ ತಂತಿವಾದ್ಯಗಳು!
ಕಲ್ಯಾಣಮಹೋತ್ಸವಕ್ಕಾಗಿ
ಕಟ್ಟಿಸಿದಷ್ಟಗಲದ ಛತ್ರಗಳು
ಕಸದ ತೊಟ್ಟಯ ಸುತ್ತ ಕಂತ್ರಿನಾಯಿಗಳು
ತಲೆ ಹಿಡಿಯಲು ಗಿರಾಕಿಯನುಡುಕಿ ಹೊರಟ ಛತ್ರಿಗಳು
ಬರೆದಿಟ್ಟ ಬೊಗಳೆ ಗ್ರಂಥಗಳು
ಆಳುವ ಅರಸರು
ಅವರ ಹೆಂಡಂದಿರು
ಹೆಂಡಂದಿರ ಮಿಂಡರು
ಮನೆಹಾಳು ವಂದಿಮಾಗದಿಗರಿಗಾಗಿ
ಕಟ್ಟಿಸಿದ ಮಹಲುಗಳು
ಅದರೊಳಗಿನವರ ತೆವಲುಗಳು
ಐದು ಸಾವಿರ ವರ್ಷಗಳ ಸಂಸ್ಕøತಿಯ ವಾರಸುದಾರರು
ಬೀದಿಗೊಬ್ಬರು
ನಡುನಡುವೆ ವರ್ಣಸಂಕರದ ನೆಪಕೆ
ಗರ್ಜಿಸುವ
ಹುಸಿ ಸಿಂಹ ಶಾರ್ದೂಲಗಳು
ಮಗ್ಗದ ಮನೆಯಲ್ಲೆ ಬೆತ್ತಲೆನಿಂತ
ಅಂಗನೆಯರು
ವಾರಾಂಗನೆಯರ ಮನೆಯಲ್ಲಿ
ಕಚ್ಚೆಹರುಕ ಪಂಡಿತೋತ್ತಮರು
ತಮಾಷೆ ನೋಡುತ್ತಿರುವ ಪರೋಪಜೀವಿಗಳು!

-ಕು.ಸ.ಮಧುಸೂದನರಂಗೇನಹಳ್ಳಿ

 

 

 

 


ಎರಡು ಸರಳ ಪದ್ಯಗಳು!

ಖಾಲಿ ಮನುಷ್ಯ!

ನಿನಗೆ ರೆಕ್ಕೆಗಳಿಲ್ಲ
ಹಕ್ಕಿ 
ನಕ್ಕಿತು!
ನಿನಗೆ ಹೂಗಳಿಲ್ಲ
ಗಿಡ
ನಕ್ಕಿತು!
ನಿನಗೆ ಗಂಧವಿಲ್ಲ
ಹೂವು
ನಕ್ಕಿತು!
ನಿನಗೆ ತಂಪಿಲ್ಲ
ಬೆಳದಿಂಗಳು
ನಕ್ಕಿತು!
ನಿನಗೇನೂ ಇಲ್ಲ
ಆದರೂ 
ಮೆರೆಯುವೆಯಲ್ಲ!
ಕೇಳಿದ ಮನುಷ್ಯ
ಹೃದಯ
ಬಿಕ್ಕಿತು!
======
ಮಾತಾಡುವುದಿಲ್ಲ

ಮಾತಾಡುವುದಿಲ್ಲ
ಹಗಲು
ಇರುಳಿನ ಬಗ್ಗೆ
ಇರುಳು
ಹಗಲಿನ ಬಗ್ಗೆ!
ಮಾತಾಡುವುದಿಲ್ಲ
ಸೂರ್ಯ
ಚಂದ್ರನ ಬಗ್ಗೆ!
ಮಾತಾಡುವುದಿಲ್ಲ
ಆಕಾಶ
ನೆಲದ ಬಗ್ಗೆ
ನೆಲ ಆಕಾಶದ ಬಗ್ಗೆ!
ವಮಾತಾಡುವುದಿಲ್ಲ
ನಾನು
ನಿನ್ನ ಬಗ್ಗೆ
ನೀನು ನನ್ನ ಬಗ್ಗೆ!
-ಅನಿತಾ ಕೆ.ಗೌಡ

 

 

 

 


ಮರಣ ಜಾಗೃತಿ :-
ಯಾರಿಹರೋ ಈ ಜಗದಲ್ಲಿ ನಿನಗಾಗಿ?

ಆಚೆ ತಟದಲ್ಲಿ 
ಮರಣ ನಿಂತು ಕಾಯ್ವಾಗ,
ನಿನ್ನ ಕರೆದೊಯ್ಯಲು
ಮರಣ ನೌಕೆ ಬಂದಿರುವಾಗ
ನಿನ್ನ ತಡೆದು ನಿಲ್ಲಿಸಿ 
ನಿನಗಾಗಿ ಸಾಯ್ವರಾರಿಹರೋ?

ಯಾರಿಹರೋ ಈ ಜಗದಲ್ಲಿ ನಿನಗಾಗಿ?

ಓ… ಸತ್ತನಲ್ಲಾ ಎಂದು ಉದ್ಘಾರ ತೆಗೆವವರು
ಸತ್ತುದೇ ಪಾಡೆಂದುಕೊಂಡವರು
ನಿನ್ನ ಸಾವಿಗಾಗಿ ಪರಿತಪಿಸುವವರು,
ನೀ ಹುಟ್ಟಿದರೂ ಸತ್ತರೂ ಏಕ ಭಾವ ತಳೆವವರು
ಮತ್ತೆ ಹುಟ್ಟಿಬರಲೆಂದು ಹರಸುವವರು
ಯಾರು..ಯಾರಿರುವರೋ ನಿನ್ನಿಕ್ಕೆಲಗಳಲ್ಲಿ 
ಮರಣ ನಿನ್ನ ಬರಸೆಳೆದೊಯ್ವಾಗ?

ನಿನಗಾಗಿ ಯಾರೇ ಸತ್ತರೂ ನೀನುಳಿವುದಿಲ್ಲ.
ನಿನ್ನ ಮರಣ ನಿನ್ನದು,
ನಿನಗಾಗಿ ಕಾಯ್ದಿರಿಸಿರುವ ಜಾಗವದು,
ಮತ್ತಾರಿಂದಲೂ ತುಂಬಲಾಗದು.
ನಿನ್ನ ಮರಣಕೆ ನೀನೇ ತುತ್ತು.
ನೀನದರ ಸ್ವತ್ತು.

ಯಾರಿಹರೋ ನಿನಗಾಗಿ..?
ಯಾರುಟ್ಟಿಹರೋ ಈ ಜಗದಲ್ಲಿ ಮತ್ತೊಬ್ಬರಿಗಾಗಿ..?

ಯಾವ ಸಂಸಾರ ಸುಖ ಬೋಗ ನಿನಗಿರಲಿ,
ಕಡು ಬಡವ ನೀನಾಗಿರಲಿ,
ಮಸಣದಲೇ ಮನೆಮಾಡಿಕೊಂಡು ನೀನಿರಲಿ,
ನಿನ್ನ ಕರೆಬರುವವರೆಗೂ
ನೀನಿರಲೇಬೇಕು.
ನಿನ್ನ ಸರದಿ ಬಂದಾಗ ನೀನೋಗಲೇ ಬೇಕು.

ಹಾಗಾಗಿ ಯಾರಿಹರೋ… 
ಈ ಜಗದಲ್ಲಿ ನಿನಗಾಗಿ..?

ಕಾಡಿ ಬೇಡಿ ನೀ ಬದುಕಲೇಬೇಕೆಂದುಕೊಳಬೇಡ.
ಬದುಕಿಯೂ ಸತ್ತಂತೆ ಬಾಳಬೇಡ.
ಸಾವು ಅವಸರಿಸುತಿರುವಾಗ…
ಬಿಟ್ಟ ಕೆಲಸ ಬಿಟ್ಟಂತೆ 
ನೀ ಹೋಗಲಿಕ್ಕಿದೆ.
ನೀ ಅವರಿವರ ಯಾಮಾರಿಸುತ ಬದುಕುತ್ತಿದ್ದೆಯಲ್ಲ.
ಅಂತೆಯೇ ನಿನ್ನ ಯಾಮಾರಿಸಿ ಕರೆದೊಯ್ಯುವ ದಿನ
ಬರುವುದನು ನೀ ಮರೆಯಬೇಡ.

ಯರಿರುವರೊ..? ಮಸಣದಿ ಚಿತೆಯಮೇಲೊಂಟಿ
ನೀ ಮಲಗಿರುವಾಗ?

-ರಾಜೇಶ್ವರಿ ಎಂ.ಸಿ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ವಿನೋದ್ ಕುಮಾರ್ ಬೆಂಗಳೂರು

ಒಳ್ಳೆಯ ಕವನಗಳು… ಕಾವ್ಯರಸಧಾರೆ ಹೀಗೆಯೆ ಮುಂದುವರಿಯಲಿ. 

1
0
Would love your thoughts, please comment.x
()
x