ಬಡವ
ಸಿರಿಯು ಬರಿದಾದ
ಸಾಮ್ರಾಜ್ಯದಿ
ಗರಿಕೆದರಿದೆ ಬದುಕು ….
ಬೇಡಿಕೊಂಡಿದ್ದಲ್ಲ
ಅರಸೊತ್ತಿಗೆ
ವಂಶಪಾರಂಪರ್ಯವಾಗಿ
ಸಂದ ಬಳುವಳಿ
ಅವನ ಬದುಕಿಗೇ …..
ಮಾಡು ಗೋಡೆಗಳಿಲ್ಲದ
ಗೂಡೇ ಅವನರಮನೆಯು
ಕಡುಕೋಟಲೆಗಳ ಹಾರತುರಾಯಿ
ತಾತ್ಸಾರ ಕುಹಕಗಳ
ಬಹು ಪರಾಕು….
ಹುಟ್ಟಿಗೆ ಸಂಭ್ರಮವಿಲ್ಲ
ಸಾವಿಗೆ ಶೋಕವಿಲ್ಲ
ಎಲ್ಲವೂ ಆಕಸ್ಮಿಕವಿಲ್ಲಿ
ನಿಟ್ಟುಸಿರು, ಹಸಿವು
ಆಕ್ರಂದನಗಳ
ಜೋಗುಳದೊಂದಿಗೆ
ಬದುಕಿನ ಸೋಪಾನ …..
ಹಾಸಿಗೆಯಿದ್ದಷ್ಟೇ ಕಾಲು
ಚಾಚೆಂಬ ಪರಿಪಾಠ
ಪಟ್ಟು ಬಿಡದ ಹಠ
ಪ್ರಾಮಾಣಿಕತೆಯಾ ಶ್ರೀರಕ್ಷೆ ….
ಸಿರಿಯು ಬರಿದಾಡದೇನು
ಸ್ನೇಹ ಸಂಪತ್ತಿನ ಸಿರಿಗಡಲು
ನೆಮ್ಮದಿಯ ಮಡಿಲು
ಅವನ ಗೂಡು ……
-ಕಮಲ ಬೆಲಗೂರ್
ಸೂರ್ಯಸ್ತ – ಚಂದ್ರೋದಯ
ಸುಡುವ ಬಿಸಿಲಿನಿಂದ
ಪಡುವಣ ದಿಕ್ಕಿನತ್ತ
ಮೆಲ್ಲಗೆ ಜಾರಿದ
ಬೆಂಕಿ ಉಂಡೆಯ ಸೂರ್ಯ
ಇತ್ತ ಮೂಡಣ ದಿಕ್ಕಿನೊಳು
ಬೆಣ್ಣೆಯ ಮುದ್ದೆಯಂತಿರುವ
ಚಂದಿರನ ಆಗಮನ
ಜನವರಿ ಫೆಬ್ರುವರಿ ತಿಂಗಳಲ್ಲಿ
ಮುಸ್ಸಂಜೆ ದಿಗ್ದಿಗಂತದಲ್ಲಿ
ಬಾನಂಚಲಿ ಬಣ್ಣಿಸಲಾಗದ
ಒಂದೆಡೆ ಸೂರ್ಯಾಸ್ತ
ಇನ್ನೊಂದೆಡೆ ಚಂದ್ರೋದಯ
ಏಕ ಕಾಲದಲ್ಲಿ ಮಿಲನ
ನೋಡುವ ಕಂಗಳಿಗೆ ರಸದೌತಣ!
– ನರಸಿಂಹಮೂರ್ತಿ ಎಂ ಎಲ್
ಗುಬ್ಬಿಯಂಥ ಜೀವಾ
(ಮರಾಠಿ ಕವಿ ಬರೇದ “ದೂರ ದೇಶಿ ಗೇಲಾ ಬಾಬಾ" ದ ನನ್ನ ಕನ್ನಡ ಅವತರಣಿಕೆ)
ದೂರ ದೆಶಕ್ಕ ಹೊಗ್ಯಾನ ಅಪ್ಪಾ
ನೌಕರಿಗೆ ಹೊಗ್ಯಾಳ ಅವ್ವಾ
ಮನ್ಯಾಗ ಯಾರೂ ಇಲ್ಲಾ
ಕಣ್ಣೀರು ಕಪಾಳ ದಾಟಿ ತುಟಿಗೆ ಬಂದಾವ
ಮನ್ಯಾಗ ಯಾರೂ ಇಲ್ಲಾ
ಗುಬ್ಬಿಯಂಥ ಜೀವಾ
ಒದ್ದ್ಯಾಡಿ ಹಾರಾಡಿ ಸುಸ್ತಾದರೂ
"ಸಾಕು , ಮಲಕೋ ಪುಟ್ಟಾ"
ಅಂತ ಹೇಳೋರೂ ಯಾರೂ ಇಲ್ಲಾ
ಮನ್ಯಾಗ ಯಾರೂ ಇಲ್ಲಾ
ಎದಕೋ ಏನೋ ಯಾರಿಗೆ ಗೊತ್ತು
ಕೊಡತಾರ ಯಾಕ ಸಾಲಿಗಿ ಸುಟ್ಟಿ
ಮಾತಾಡ್ಲಿಕ್ಕೂ ಯಾರೂ ಇಲ್ಲಾ
ನನಗ ನಾನ ಹೇಳೀನಿ ಕಟ್ಟೀ
ಆಟಗಿ ಎಲ್ಲಾ ಹಚ್ಚಿಟ್ಟೀನಿ
ಆಡವರೂ ಯಾರೂ ಇಲ್ಲಾ
ಮನ್ಯಾಗ ಯಾರೂ ಇಲ್ಲಾ
ಹೊರಗಿನ ಜಗಾ ಕಿಡಿಕ್ಯಾಗಿಂದ
ಕಾಣಸ್ತದ ಭಾಳ ಛಂದ
ಬಾಗಲಾ ತಗದು ಹೊರಹೋಗಬೇಕಂದ್ರ
ನನ್ನ ಮುಶ್ಟ್ಯಾಗ ಯಾರದೂ ಬೆರಳಿಲ್ಲಾ
ಮನ್ಯಾಗ ಯಾರೂ ಇಲ್ಲಾ
ಕಣ್ಣೀರು ಕಪಾಳ ದಾಟಿ ತುಟಿಗೆ ಬಂದಾವ
ಮನ್ಯಾಗ ಯಾರೂ ಇಲ್ಲಾ
-ಮಾಧವ
‘ತಾತ್ಸಾರ ಕುಹಕಗಳ ಬಹುಪರಾಕು’
‘ಹುಟ್ಟಿಗೆ ಸಂಭ್ರಮವಿಲ್ಲ, ಸಾವಿಗೆ ಶೋಕವಿಲ್ಲ’
ವಿಭಿನ್ನವಾಗಿವೆ ಸಾಲುಗಳು . nice ಮನಮುಟ್ಟುವ ಕವಿತೆ .
‘ಕಪಾಳ ದಾಟಿ ತುಟಿಗೆ ಬಂದಾವ ಕಣ್ಣೀರು ‘
ಕವನ ತುಂಬಾ ಇಷ್ಟವಾಯಿತು .