ಮೂವರ ಕವಿತೆಗಳು: ಅಪಿ೯ತ ಮೇಗರವಳ್ಳಿ, ಪ್ರಭಾಕರ ತಾಮ್ರಗೌರಿ, ಗುರುನಾಥ ಬೋರಗಿ


 

ಶಿಕ್ಷೆ-ಬದುಕು

ಹಾಸಿಗೆಯ ಸುಕ್ಕಿನಲಿ ಸಿಕ್ಕಿ 

ಉಕ್ಕಿ ಹರಿಯದೆ ಹರಯ ಕಳಚಿ 

ಬಿಳಿ ಕೂದಲು ಇಣುಕಿ 

ಮುಖದಲ್ಲಿ ಸುಕ್ಕು ಮೂಡುವ ಮುನ್ನ 

ಕಿಂಚಿತ್ತಾದರೂ ವಂಚಿಸಬೇಕೆನಿಸಿತು

        

ವಂಚನೆಯ ಪ್ರಕರಣಕ್ಕೆ ಶಿಕ್ಷೆಯುಂಟು

ಪೋಲಿಸರಿದ್ದಾರೆ

ಜೈಲುವಾಸ ಗ್ಯಾರಂಟಿ

ಅವಮಾನ, ತಲೆತಗ್ಗಿಸಬೇಕು

ಯೋಚಿಸಲೇಬೇಡ ಸುಮ್ಮನಿದ್ದುಬಿಡು.

 

ಜೋರಾಗಿ ಗಹಗಹಿಸಿದೆ

ಶಿಕ್ಷೆ-ಪೋಲಿಸು-ಜೈಲು

ಮಾನ-ಅವಮಾನ ಮತ್ತು ತಲೆತಗ್ಗಿಸಬೇಕು.

ಯೋಚಿಸಲೇಬೇಡ, ಸುಮ್ಮನೆ ಇದ್ದುಬಿಡು.

 

ಗೆರೆಯೆಳೆಯುವುದೇ ಇರಬೇಕು ಜಗತ್ತಿನ

ಪುರಾತನ ಮದ್ಯ

ಬರಿ ಘಾಟಿಗೇ ಅಮಲು

ನಶೆಯಲ್ಲಿ ಗೀರಿದ್ದೆಲ್ಲಾ ಲಕ್ಷ್ಮಣರೇಖೆಗಳೇ 

ದಾಟಿದರೆ ಅಪಾಯ.

 

ಹಾಗೆಂದು ಸುಮ್ಮನಿರಲಾದೀತೆ?

ಸುಮ್ಮನಿದ್ದರೂ  ಬಂದು ಕಾಡುವ

ಕಂಗೆಡಿಸುವ, ಕೊಂದುಬಿಡುವ

ಕಾಮನೆಗಳೆ ಬನ್ನಿರಿ ಬೆತ್ತಲಾಗೋಣ

ಶಿಕ್ಷೆಯೇ ಬದುಕೆಂದಮೇಲೆ ತಪ್ಪುಮಾಡಿಯೇ

ಅನುಭವಿಸೋಣ.

-ಅಪಿ೯ತ ಮೇಗರವಳ್ಳಿ

 

 

 

ಉದಯಾಸ್ತ

ಸೂರ್ಯೋದಯದ ಕೆಂಬಣ್ಣ

ಸೂರ್ಯಾಸ್ತದ ಹೊಂಬಣ್ಣ

ನಡುವೆ ಕಾಣುವ ಅಂತರದಲ್ಲಿ

ಇಬ್ಬರೂ ಪಿಸು ಮಾತುಗಳಾಡಿ

ಭವಿಷ್ಯದ ರೂಪರೇಷೆಯ

ಹೊಸ ನಕ್ಷೆ ಮಾಡಿ

ದೇಹದೊಳಗೆ ಬರೆದು ಬಚ್ಚಿಟ್ಟಿದ್ದ

ಕಣ್ಣೀರ ಕೋಡಿ !

 

ಅಲೆ ಬಂದು ಉರುಳುರುಳಿ

ಬಚ್ಚಿಟ್ಟ ಹನಿಗಳನ್ನು

ಕೊಚ್ಚಿಕೊಂಡು ಹೋಗಿ

ಸಾಗರದ ತಳದಲ್ಲಿ ಹರಳಾದದ್ದು

ಕೆಲವು ಮುತ್ತು…..

ಕೆಲವು ಉಪ್ಪು……

ಕೆಲವು ಮಾಣಿಕ್ಯ…..!

ಮುಂಗಾರಿನ ಮಿಂಚು , ಸಿಡಿಲುಗಳ

ನೆನಪಂತೆ ನೋಟ

ಉಳಿದವು ಮತ್ತಷ್ಟು ಜರಡಿ

ಕೊನೆಗೆ ಉಳಿದದ್ದು ರಾಡಿ…!

 

ಗುಲ್ ಮೊಹರ್ ಸುತ್ತ ಸುಳಿದು

ಕುಡಿನೋಟ ಬೀರಿ

ಕಚಗುಳಿಯಿಟ್ಟ ತುಟಿಯಲಿ

ಅರಳಿದ್ದ ಪಿಸಿದನಿ

ಆ ಪುಟ್ಟ ಕಣ್ಣ 

ಮುಂಗುರುಳ ಬಣ್ಣ ಮೆಲುಗಾಳಿಗೆ

ಕೆನ್ನೆ ಸ್ಪರ್ಶಿಸಿದ ಪುಳಕ

ಎಲ್ಲ ಕಳೆದು ಹೋದ

ಪ್ರಾಯದ ಮಾತುಗಳು

 

ಈಗಲೂ ಆ ಕುಳಿರ್ಗಾಳಿ ,

ಜಡಿಮಳೆ , ಸೂರ್ಯೋದಯ ,

ಸೂರ್ಯಾಸ್ತ , ಕಾಮನ ಬಿಲ್ಲಿನ ಕಣ್ಣ ಮುಚ್ಚಾಲೆ……

ಸೂತ್ರದ ಗೊಂಬೆಗಳಿಗೆಲ್ಲಾ

ಏನೋ ಇಲ್ಲದ ಚಡಪಡಿಕೆ….!!

ಪ್ರಭಾಕರ ತಾಮ್ರಗೌರಿ

 

 
 
 
 
 
 
 
 
 
 
 
ಹೆಜ್ಜೆ
********
ಕಸುವು
ತುಂಬಿಕೊಂಡು
ಊರಿದ ಚೊಚ್ಚಲ ಹೆಜ್ಜೆಗೆ,
ದೂರದ ಗಮ್ಯ
ತಲುಪಿಯೇ ತೀರುವ
ಉತ್ಕಟ ವಾಂಛೆ.
ಸಾಗುವ ದಾರಿಯಲ್ಲಿ :
ನೆತ್ತಿ ತಾಕುವಷ್ಟು
ಚಾಚಿಕೊಂಡ
ರಸ್ತೆಬದಿಯ ಮುಳ್ಳುಕಂಟಿ.
ನುಣುಪು ಅಂಗಾಲಿಗೆ
ಕಚಕ್ಕನೆ ಚುಚ್ಚಿ
ನೆತ್ತರ ನೆಕ್ಕುವ ಚೂಪುಗಲ್ಲು
ಮತ್ತು
ಹಿಂಗಾಲಿಗೆ ಕೊಕ್ಕೆ ಹಾಕಿ
ಜಗ್ಗಿ ಎಡವಿಸುವ
ಚೂರಿಯುಗುರ ಕೈಗಳು.
ಆದರೂ… 
ಒಂದು ಸಮಾಧಾನ :
ಆಗೊಮ್ಮೆ ಈಗೊಮ್ಮೆ
ಸುತ್ತ ಸುಳಿದು ಕತ್ತಲೆ ಸೀಳುವ
ಮಿಂಚುಹುಳದ 
ಮಿಣುಕು ದೀಪ.
ಇನ್ನು ನಡೆಯಲಾರೆ ಸಾಕು 
ಎನಿಸಿದಾಗ,ಬೆನ್ನ ಹಿಂದೆ.. 
ಬೆನ್ನ ನೇವರಿಸಿ ಬಲ ತುಂಬುವ 
ಅಮ್ಮನಂಥ ಕೈಗಳು .
ಅಷ್ಟು ಸಾಕಿತ್ತು;
ಹೆಜ್ಜೆ ಸಾಗಿತು ದೂರ ದೂರ.
ಒಂದು ಹತ್ತಾಗಿ
ನೂರು ಸಾವಿರಗಳಾಗಿ
ವಿರಮಿಸಿತು ಕೊನೆಯ ಹೆಜ್ಜೆ,
ತಲುಪಿದ್ದು ಎತ್ತರದ ಬೆಟ್ಟ.
ತಿರುಗಿ ನೋಡಿದರೆ:
ಚುಚ್ಚಿ ಕಾಡಿದ 
ಮುಳ್ಳುಗಿಡಗಳ ಜಾಗದಲೀಗ 
ಹಾಲು ಬೆಳಕಿನ ವಿದ್ಯುತ್ ದೀಪಗಳು. 
ಅಕ್ಷರ ತೀಡುವ
ಸ್ಲೇಟಿನಂತೆ ತೋರುವ, 
ಡಾಂಬರೀಕರಣಗೊಂಡ ಜಲ್ಲಿದಾರಿ.
ವಾಪಸಾಗುವುದು ತುಂಬ ಸರಳ. 
ಬೆಟ್ಟ ಇಳಿದು ಹುಟ್ಟಿದೂರಿಗೆ 
ಹೊರಟು ನಿಂತ ಹೆಜ್ಜೆಗೆ ,
ಅಂದು ಕಾಲು ಜಗ್ಗಿದ ಕೈಗಳಲಿ 
ಇಂದು,ಕೆಂಪು ಬಣ್ಣದ 
ಕಾರ್ಪೇಟು ಕಂಡಿತು 
   *** ೦ ***
  –ಗುರುನಾಥ ಬೋರಗಿ 
 
 

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
ವೆಂಕಟೇಶ (ಸಪ್ತಗಿರಿವಾಸಿ )ಮಡಿವಾಳ ಬೆಂಗಳೂರು
ವೆಂಕಟೇಶ (ಸಪ್ತಗಿರಿವಾಸಿ )ಮಡಿವಾಳ ಬೆಂಗಳೂರು
11 years ago

 
 

ಎಲ್ಲ ಕವಿತೆಗಳೂ ಸೂಪರ್ 
 

ಶಿಕ್ಷೆಯೇ ಬದುಕೆಂದಮೇಲೆ ತಪ್ಪುಮಾಡಿಯೇ
ಅನುಭವಿಸೋಣ."
 
;()೦)
 
"ಅಲೆ ಬಂದು ಉರುಳುರುಳಿ
ಬಚ್ಚಿಟ್ಟ ಹನಿಗಳನ್ನು
ಕೊಚ್ಚಿಕೊಂಡು ಹೋಗಿ
ಸಾಗರದ ತಳದಲ್ಲಿ ಹರಳಾದದ್ದು
ಕೆಲವು ಮುತ್ತು…..
ಕೆಲವು ಉಪ್ಪು……
ಕೆಲವು ಮಾಣಿಕ್ಯ…..!
ಮುಂಗಾರಿನ ಮಿಂಚು , ಸಿಡಿಲುಗಳ
ನೆನಪಂತೆ ನೋಟ
ಉಳಿದವು ಮತ್ತಷ್ಟು ಜರಡಿ
ಕೊನೆಗೆ ಉಳಿದದ್ದು ರಾಡಿ…!"
@ಪ್ರಭಾಕರ ತಾಮ್ರಗೌರಿ 
>>>ಈ ಕವಿತೆಯ ಸಾಲುಗಳು ನನ್ನ ಒಂದು ಬರಹದ ಸಾಲುಗಳನ್ನು ನೆನಪಿಸಿದ್ದು ಕಾಕತಾಳೀಯವೇ?
ಇಲ್ಲಿದೆ  ನೋಡಿ ನಾ ಬರೆದ ಬರಹ 
http://bit.ly/15DKc7A

 
ಶುಭವಾಗಲಿ 
 
\।/ 
 

ಸ್ವರ್ಣಾ
ಸ್ವರ್ಣಾ
11 years ago

ಕಾಮನೆಗಳೆ ಬನ್ನಿರಿ ಬೆತ್ತಲಾಗೋಣ
ಶಿಕ್ಷೆಯೇ ಬದುಕೆಂದಮೇಲೆ ತಪ್ಪುಮಾಡಿಯೇ
ಅನುಭವಿಸೋಣ"
ನಾಟಿದ ಸಾಲುಗಳು
ಎಲ್ಲ ಕವಿತೆಗಳೂ ಚೆನ್ನಾಗಿವೆ

Roopa Satish
11 years ago

Excellent……
ಒ೦ದಕ್ಕಿ೦ತ ಒ೦ದು ಅದ್ಭುತ ರಚನೆ……
ಮನಮುಟ್ಟುವ ಸಾಲುಗಳು………. 
ಚಿ೦ತನೆಗೆ ದೂಡುವ ವಿಷಯ ವಸ್ತು……..
ಅಭಿನ೦ದನೆಗಳು!

sharada.m
sharada.m
11 years ago

ಶಿಕ್ಷೆಯೇ ಬದುಕೆಂದಮೇಲೆ ತಪ್ಪುಮಾಡಿಯೇ
 
ಅನುಭವಿಸೋಣ.
ಚೆಂದದ ಸಾಲುಗಳು..-ಅಪಿ೯ತ ಮೇಗರವಳ್ಳಿ..
 
ಉದಯಾಸ್ತ  ಸೊಗಸಾದ ಕವನ  -ಪ್ರಭಾಕರ ತಾಮ್ರಗೌರಿ..
 
ಹೆಜ್ಜೆ ಈಗಿನ ಬದಲಾವಣೆ ಸೂಚಿಸುವ ಚೆಂದದ ಕವನ ..-ಗುರುನಾಥ ಬೋರಗಿ ..

GAVISWAMY
11 years ago

ಮೂರೂ ಕವನಗಳು ಚೆನ್ನಾಗಿವೆ ..
 

5
0
Would love your thoughts, please comment.x
()
x