ಬರೆಯುತ್ತೇನೆ ನಾನು
ಹೆತ್ತವರ ಕಂಬನಿಯ
ನೋವನು ಕುರಿತು
ಅತ್ಮಸಾಕ್ಷಿ ಇಲ್ಲದವರ ಮೇಲೆ
ಮಣ್ಣಿಗಾಗಿ ಬಡಿದಾಡುವ
ಬಂಧುಗಳ ಕುರಿತು
ಬರೆಯುತ್ತೇನೆ ನಾನು
ಸನ್ಯಾಸತ್ವ ಪಡೆದವರ ಮೇಲೆ
ವ್ಯಾಮೋಹ ಬಿದಡಿರುವುದನು ಕುರಿತು
ಅವರಲ್ಲಿರುವ ಕ್ರೋದ
ನಯವಂಚನೆಯ ಕುರಿತು
ಬರೆಯುತ್ತೇನೆ ನಾನು
ಆತ್ಮನಾನು ಪರಮಾತ್ಮತಂದೆ
ಅನ್ನುವವರ ಮೇಲೆ
ತನ್ನದಲ್ಲದನ್ನು ತನ್ನದೆಂದು
ವಾದಿಸುವವರ ಕುರಿತು
ಮಣ್ಣಾಗುವಾಗ ಬಿಡಿಗಾಸಿರದೆ
ಬರಿಗೈಯಲ್ಲಿ ಹೋಗುವ
ಪ್ರತಿಯೊಬ್ಬರ ಎಣಿಸಿ
-ನಗೆಮಲ್ಲಿಗೆ
ಅನುಪಮ ಎಸ್ ಗೌಡ
ನಿರೀಕ್ಷೆ
ಕೊಡವದಿರಿ ನನ್ನ ದುಪ್ಪಟವನ್ನು
ಅದರಲ್ಲಿ ರಾತ್ರಿ ಹೆಣೆದ ಕನಸುಗಳ ರಾಶಿಯಿದೆ
ಭಾವದ ಕಾವಿನಲ್ಲಿ ಕಂಗಳ ಗೂಡಿನೊಳಗೆ
ಕಣ್ತೆರೆಯುವ ಹಸಿ ಕನಸುಗಳು ಅವು
ಚೆಲ್ಲಿ ಛಿದ್ರವಾಗಿ ನಲುಗಿ ಹೋಗುತ್ತವೆ
ಕೊಲ್ಲದಿರಿ ಕೊಡವದಿರಿ ಜೋರಾಗಿ ಜೋಕೆ
ಜಾರಿ ಹೋಗಿ ಬರದಿರಬಹುದು
ಮತ್ತೆ ಬಿಟ್ಟುಹೋದ ಈ ಗೂಡಿನೊಳಗೆ
ಚೆಲ್ಲಿದ ಕನಸುಗಳನ್ನು ಒಟ್ಟು ಮಾಡಿ
ಮನದ ಮೂಲೆಯಲ್ಲಿ ರಾಶಿ ಹಾಕಿ
ರಾತ್ರಿಯ ತಂಪಿನಲ್ಲಿ ಕಾವು ಕೊಡುತ್ತೇನೆ
ಬೆಚ್ಚಗೆ ಇಡುತ್ತೇನೆ ಜೋಪಾನ ಮಾಡುತ್ತೇನೆ
ಮಧ್ಯರಾತ್ರಿಯ ಮಬ್ಬುಗತ್ತಲಿನ ಮಡಿಲಲ್ಲಿ
ಚುಕ್ಕೆಗಳ ಹೊಳಪನ್ನು ನಾಚಿಸುವಂತೆ
ಕಣ್ಬಿಡಬಹುದು ಓಮ್ಮೆ ನನ್ನ ಕನಸುಗಳು
ಎಂಬ ನಿರೀಕ್ಷೆಯಲ್ಲಿ
-ಆಶಾ ದೀಪ
ಅಂತಿಮ ಯಾತ್ರೆ
ನಿನ್ನ ಈ ಮೌನದ
ನಿಶ್ಚಲ ಪಯಣವೆಲ್ಲಿಗೋ?
ಸ್ಪರ್ಷಕ್ಕೂ ನಿಲುಕದ
ಬಾಂದಳದ ಗೂಡಿಗೋ?
ಕೂಗಿದರೂ ಕೇಳಿಸದ
ಏಕಾಂತತೆಯ ಕಣಿವೆಗೋ?
ಕಣ್ಣಿಗೂ ಕಾಣಿಸದ
ಕಾಂತಿಯ ಒಡಲಿಗೋ?
ತಿರುಗಿ ಬರಲಾಗದ
ಕಾಲಾವಧಿಯ ತುದಿಗೋ?
ನಿನ್ನ ಈ ಮೌನದ
ನಿಶ್ಚಲ ಪಯಣವೆಲ್ಲಿಗೋ?
-ಪವಿತ್ರ ಸತೀಶ್ ಕುಮಾರ್
ಮೂರು ಕವಿತೆಗಳು ಚೆನ್ನಾಗಿ ಮೂಡಿ ಬಂದಿವೆ..
ಬರೆಯುತ್ತೇನೆ ನಾನು, ನೀರೀಕ್ಷೆ , ಅಂತಿಮಯಾತ್ರೆ ಮೂರು ಕವಿತೆ ಗಳು ಚೆನ್ನಾಗಿ ಮೂಡಿವೆ.
ತನ್ನದಲ್ಲದನ್ನು ತನ್ನದೆಂದು
ವಾದಿಸುವವರ ಕುರಿತು
ಮಣ್ಣಾಗುವಾಗ ಬಿಡಿಗಾಸಿರದೆ
ಬರಿಗೈಯಲ್ಲಿ ಹೋಗುವ
ಪ್ರತಿಯೊಬ್ಬರ ಎಣಿಸಿ (ಬರೆಯುತ್ತೇನೆ ನಾನು)
ಕೊಡವದಿರಿ ನನ್ನ ದುಪ್ಪಟವನ್ನು
ಅದರಲ್ಲಿ ರಾತ್ರಿ ಹೆಣೆದ ಕನಸುಗಳ ರಾಶಿಯಿದೆ (ನೀರೀಕ್ಷೆ)
ನಿನ್ನ ಈ ಮೌನದ
ನಿಶ್ಚಲ ಪಯಣವೆಲ್ಲಿಗೋ? ( ಅಂತಿಮಯಾತ್ರೆ )
ಸಾಲುಗಳು ……… ಇಷ್ಟವಾದುವು
-ಅಶೋಕ್ ಕುಮಾರ್ ವಳದೂರು
ಮೂರು ಕವಿತೆಗಳು ಚೆನ್ನಾಗಿ ಮೂಡಿ ಬಂದಿವೆ..
Tumba kushiyaytu…
ಅನುಪಮ ಎಸ್.ಗೌಡ ಅವರ ಬರೆಯುತ್ತೇನೆ ನಾನು’ ಕವಿತೆ ತುಂಬಾ ಚೆನ್ನಾಗಿದೆ. ಜಡಗಟ್ಟಿದ ಸಮಾಜ ಮತ್ತು ವಾಸ್ತವದ ಚಿತ್ರಣ ನಿಮ್ಮ ಕವಿತೆಯಲ್ಲಿದೆ. ಆಶಾದೀಪ ಅವರ ನಿರೀಕ್ಷೆ ಕವಿತೆ ಕನಸಿನ ಕುರಿತು ಉತ್ತಮವಾಗಿ ವಿಶ್ಲೇಷಿಸಿದ್ದಾರೆ. ಪವಿತ್ರ ಸತೀಶ ಅವರ ‘ಅಂತಿಮ ಯಾತ್ರೆ ಕವಿತೆ’ ಮೌನದಲ್ಲಿ ಸಾಗುವ ಶವದ ಯಾತ್ರೆಯ ಕುರಿತು ಭಾವನಾತ್ಮಕವಾಗಿ ಮೂಡಿ ಬಂದಿದೆ.
-ವೀರಣ್ಣ ಮಂಠಾಳಕರ್