ಪ್ರಶ್ನೆಯ ಮೇಲೆ ಪ್ರಶ್ನೆ
ಬಂಧುವೋ ಬಳಗವೋ
ಯಾರೊಡೆ ಆನಂದವೋ
ಸಂಸಾರದ ಬೇಲಿಯೊಳಗೆ
ಮೇಯಿವ, ಬೇಯುವ
ಮನಸಿನೊಳು
ಎಲ್ಲವೂ ಶೂನ್ಯವು
ಮುಂದೆ ಏನೋ
ಹಿಂದೆ ಸವೆಸಿದ ಹಾದಿಯೋ
ಬೆಟ್ಟ ತಪ್ಪಲು
ಕಲ್ಲು ಚಪ್ಪಡಿ ಮೇಲೆ
ಗಟ್ಟಿ ಮೆಟ್ಟದ ಪಾದವು
ಬರೀ ಚಲಿಸುವ ಕಾಯವು
ಹಬ್ಬಿದ ಉರಿ ಧಗೆಗೆ
ಬಸವಳಿದು ಬೆಂಡಾದ
ಸ್ಥಿತಿಯೋ
ನದಿ ಮೂಲವ
ತಿಳಿಯ ಹೊರಟ
ಜೀವವೇ ಆವಿಯು
ಎಂತು ಕಟ್ಟಿತು ಮೋಡವು
ಹೋರಾಟದ ಬದುಕೋ?
ಹುಡುಕಾಟದ ನಡೆಯೋ?
ದಾರಿದ್ರ್ಯದ ನೋಟವೋ?
ಸ್ಥಿತಿಯಿರದ ಪರಿಸ್ಥಿತಿಯೋ?
ಏನೂ ತೋಚದ ವೇಳೆ
ಪ್ರಶ್ನೆಯ ಮೇಲೆ ಪ್ರಶ್ನೆಯು
-ಅಕ್ಷಯ ಕಾಂತಬೈಲು
ಕವನಗಳು ದೋಸೆಯ ಹಾಗೆ
ಕವನಗಳು ದೋಸೆಯ ಹಾಗೆ
ಕೆಲವೊಮ್ಮೆ ಹರಿದು ಹೋಗುತ್ತದೆ
ಸೀದು ಹೋಗುತ್ತದೆ
ಏಳುವುದೇ ಇಲ್ಲ
ಬಂಡಿಗೇ ಅಂಟಿಕೊಳ್ಳುತ್ತವೆ
ಎದ್ದವೆಂದರೆ, ಒಂದರ ಮೇಲೊಂದು
ಒಂದಕ್ಕಿಂತ ಒಂದು
ಗರಿಗರಿ, ಗರಿಗರಿ
ಕೆಂಪಾಗಿ ಘಮ್ಮೆನ್ನುತ್ತವೆ,
ತಿನ್ನುವವರಿಲ್ಲದೆ
ಮೆತ್ತಗಾಗುತ್ತದೆ
ಹಿಟ್ಟು ಹಾಗೇ ಇರಿಸಿದೆವೆಂದರೆ
ಹುಳಿ ಹೆಚ್ಚಾಗಿ ನಾರುತ್ತದೆ
ಒತ್ತಾಯದಿಂದ ತಿನ್ನಿಸಿದರೆ
ಬಿಟ್ಟೂ ಬಿಡದೆ ಕಾಡುವ
ಹುಳಿತೇಗು
ಕವನಗಳು ದೋಸೆಯ ಹಾಗೆ
ಹದವಿದ್ದರೆ ಸಾಲದು
ಕಾವೂ ಬೇಕು
ಎದ್ದೇಳಿಸಲು
ಸೊಟ್ಟಗವೂ ಬೇಕು
ಎಣ್ಣೆಯೂ ಬೇಕು
ದೋಸೆ, ಪಿಜ್ಜಾದಂತಲ್ಲ ನೋಡಿ
ಓವನ್‌ನಲ್ಲಿ ಕೂಡಿಹಾಕಿ
ಕಾವೇರಿಸಲು_
ಮುಚ್ಚಳದ ಅಡಿಗೆ
ಕ್ಷಣಮಾತ್ರದಲ್ಲಿ ಬೆಂದು
ಮುಕ್ತತೆಯಲ್ಲಿ
ಹರವಿಕೊಳ್ಳುವ
ದೋಸೆ,
ಕವನದ ಹಾಗೇ!
-ಸಿಂಧು ಹೆಗ್ಡೆ
1.
ಬಿಡುಗಡೆ
..
ಹುಡುಗಿ ಹಳ್ಳಿಯವಳು
ಈಗಷ್ಟೇ ಚಿಗುರಿದ ಹೂ
ಅವಳೆ ದಾರಿದೀಪ
ನಮ್ಮ ಒಂದುಗೂಡಿಸಿ ಅಂದಿದ್ದವನು
ಎರಡು ದಿಕ್ಕುಗಳನ್ನು
ಸೆರೆಹಿಡಿದು
ಒಂದೆ ಕೊಠಡಿಯಲ್ಲಿ
ಕೂಡಿಹಾಕಿದ
ಹಾಗಿದೆ
ಡೈವರ್ಸ್ ಕೊಡಿಸಿ ಅಂದನು
ಬಿಟ್ಟು ಹೋಗಿ ವರ್ಷಗಳೆ ಆದವು
ಹೊಗೆಸೊಪ್ಪಿನ ಬೇರುಗಳನ್ನು ಉತ್ತು ತೆಗೆದು
ಅವರೆ ಬೆಳೆಸಿದ್ದೇನೆ
ಈಗ ಸೋನೆಯು ಸುರಿಯುತ್ತಿದೆ
ಕಾಯಿ
ಸತ್ವ ತುಂಬಿಕೊಂಡಿವೆ
ಬದುಕು ಹೇಗಾದರು ನಡೆಸಿತು
ಕಾಯುವ ಭ್ರಮೆ ಯಿಂದ ಬಿಡಿಸಿ ಎಂದಳು
ಡಿಕ್ರಿ ಹಾಗಿದೆ
ತೀರ್ಪು ಬರಬೇಕಿದೆ
ಕಾಯಬೇಕು
ಇನ್ನೂ
ಎರಡು ದಿಕ್ಕುಗಳು
ಬಿಡುಗಡೆಯವರೆಗೂ
……
2.
ಸೊಪ್ಪು ಮಾರುವವಳು
……………..
ಸೊಪ್ಪು ಮಾರುವವಳು
ಕೈ ಬೀಸಿ ಕರೆದಳು
ಸಂಜೆಗೆ ಚಿನ್ನದ
ಎಳೆಗಳ ಹಾಗೆ
ಹಸಿರು
ತಾಜ
ಈಗಷ್ಟೇ ಮಣ್ಣಿನಿಂದ ಕಳಚಿದ
ಗಡಸು
ತೆಗೆದುಕೊಳ್ಳುವ ಮನಸು
ಮಾಡುವಂತೆ ನಕ್ಕಳು
ನೀವು ಕೊಟ್ಟಷ್ಟು
ನಾನು ತೆಗೆದುಕೊಳ್ಳುವುದು
ಬೆಳೆದದ್ದೆಲ್ಲಾ ನನ್ನದಲ್ಲಾ
ನೋಡಿ
ವ್ಯಾಪಾರ
ಒಂದಷ್ಟು ಸೇರಿಸಿ ಕೊಡಿರಿ
ಬದುಕಬೇಕು ಕೊನೆಗೊ
ಸೊಪ್ಪನ್ನು ಮುತುವರ್ಜಿಯಿಂದ
ಮಕ್ಕಳಹಾಗೇಯೆ ಸಲುಹಬೇಕು
ಗೊತ್ತಾ ಸ್ವಾಮಿ ಕಷ್ಟ
ಅಂದಳು
ಅವಳು ಕೇಳಿದ ಹಣ ಕೊಟ್ಟು
ಸೊಪ್ಪು ತಂದಾಗಿದೆ
ಇನ್ನು
ಬೇಯಿಸುವಾಗ
ಗಮಲ ಎಲ್ಲೂ ಹೊರ ಹೋಗದ ಹಾಗೆ
ಕಾಯಬೇಕು.
…..
-ಸ್ಪೂರ್ತಿ ಗಿರೀಶ್