ಮುಸ್ಸಂಜೆಯ ಮರುಕ
ಉಸಿರಲ್ಲಿನ ಹಸಿವು ನೀಗಿಸಲಾಗದು
ಜೀವ ಜೈತ್ರ ಯಾತ್ರೆ ಮುಗಿಯುವ ತನಕ.
ಆದರೆ,
ಇಂದು-ನಿನ್ನೆಗಳು ತೋರಿದ ಅಸಹನೆಗೆ ಅಂಜಿ,
ನಾಳೆಯೆನ್ನುವ ಕನಸು ಮುರಿದು ಬಿದ್ದಿದೆ.
ಇಟ್ಟ ದಿಟ್ಟ ಹೆಜ್ಜೆಗಳೇ ಸಮೀಕರಿಸುತ್ತಿವೆ
ರತ್ನಗಂಬಳಿಯ ರಹದಾರಿ, ನಾ ಬಲ್ಲದ ನಾಡಿಗೆ !
ಸೋತು ಸುಣ್ಣವಾದ ತನು-ಮನಗಳ
ವಿನಂತಿಗೆ ನೆರವಾಗುವವರು ಕಾಣುತ್ತಿಲ್ಲ.
ಇಳಿ ಹೊತ್ತು,ಇಳಿ ವಯಸ್ಸಿಗೆ ಲೇವಡಿ ಮಾಡುತ್ತಿದೆ,
ಅಟ್ಟಹಾಸದ ನಗು ಬೀರುತ್ತಿದೆ,
ನಾನಿಲ್ಲದ ತೇದಿಗೆ ಕಾತರಿಸುತ್ತಿರುವಂತಿದೆ.
ಸೂರ್ಯ ರಶ್ಮಿಗೆ ಮೈಯೊಡ್ಡುವ ನವಜಾತ
ಶಿಶುಗಳ ಕಂಡಾಗ ಒಂದೇ ಪ್ರಾರ್ಥನೆ…
ನಕ್ಕು ನಲಿದು ಉಲಿಯುವ ವೇಳೆ
ಕಾಡದಿರಲಿ ಮುಸ್ಸಂಜೆಯ ಮರುಕ.
ಕೊನೆಯಿಲ್ಲದ ಜೀವದಾಸೆಗೆ ತೆರೆ ಎಳೆಯಲು
ಕಾರಣ ಹುಡುಕುತ್ತಿರುವ ಪ್ರಾಣ ಪಕ್ಷಿ,
ಹಲವು ಶಂಕೆಗಳಿಗೆ ತೊತ್ತಾಗಿರುವ ನಾನು
ಇಹಲೋಕದ ವಿದಾಯಕ್ಕೆ ಅಣಿಯಾಗುತ್ತಿದ್ದೇನೆಯೆ..?
ಇಲ್ಲ, ಅಪರ ಭಾನುವಿನ ಜೊತೆ ಈಗಿಂದೀಗಲೇ
ಅಸ್ತಂಗತನಾಗಲು ನನ್ನ ವಿರೋಧವಿದೆ.
ದೇಹದಲ್ಲಿ ಇನ್ನೂ ಕಾವು ಅಡಗಿದೆ, ಹುದುಗಿದೆ.
ಅವನ ವಕ್ರದೃಷ್ಟಿಗೆ ಮಣಿಯಲಾರೆ, ಪ್ರತಿಭಟಿಸುತ್ತೇನೆ.
ಇದಾವ ಧರ್ಮ ಯುದ್ಧವಲ್ಲ, ಅತೀತ ಭಾವ ಸ್ಪಂದನವಷ್ಟೆ.
ಹೊತ್ತಲ್ಲದ ಹೊತ್ತಲ್ಲಿ, ಋಣಮುಕ್ತಗೊಂಡು
ಪವಡಿಸಲಾರೆ, ಬೆಂಕಿ ಕೆನ್ನಾಲೆಗಳ ನಡುವೆ.
ಗೋಧೂಳಿಯಿಂದಾಗಿ ಅವನಿಂದ ಮರೆಯಾಗಿದ್ದೇನೆ,
ಮರೆಯಾಗುತ್ತೇನೆ ನನ್ನಿಷ್ಟದಂತೆ.
-ಸಂದೀಪ ಫಡ್ಕೆ, ಮುಂಡಾಜೆ
ಒಂಟಿ ನಕ್ಷತ್ರ
ಮೋಡದ ಮರೆಯಲ್ಲಿ ಇಣುಕುತಿದೆ
ಒಂಟಿ ನಕ್ಷತ್ರವೊಂದು
ತೋರುತಿದೆ ಬಾಗಿಲ ಸೆರೆಯಲಿ
ನಾಚಿನಿಂತ ಹೆಣ್ಣಿನಂತೆ
ಕಾಯುತಿರುವಂತಿದೆ ಇನ್ನೂ
ಬಾರದ ಗೆಳೆಯನಿಗೆ
ಹುಸಿಮುನಿಸ ತೋರಿದಂತಿದೆ
ನಗು ಚಲ್ಲುವಾ ಚಂದ್ರಮನಿಗೆ
ಮರೆಯಾಗಿ ಹೋಗಿಹಳು
ಮತ್ತೆ ತಲೆಯೆತ್ತ್ತಿನೋಡೋ ಹೊತ್ತಿಗೆ
ಕಾದು ಬೇಸರವಾಯ್ತೇನೋ ಪ್ರಿಯತಮನಿಗೆ
ಸುತ್ತಲೂ ಆವರಿಸುತಿದೆ
ಕಾರ್ಮೋಡ ಕಗ್ಗತ್ತಲಿನಂತೆ
ಒಂದೊಂದೇ ಹನಿ ಇಳಿಯತೊಡಗಿತು
ಇವಳ ಕಣ್ಣೀರಿನಂತೆ.
-ಮಮತಾ ಕೀಲಾರ್
“ಅಪ್ಪ”
ಇಂದೇಕೋ ಕುರುಚಲು ಗಡ್ಡ
ಚುಚ್ಚುತ್ತಿದೆ ಮುಳ್ಳಿನಂತೆ
ಕೈಸೋಕಿದಾಗ..!
ಯಾರೋ ಕೇಳಿದರು
ವಯಸ್ಸೆಷ್ಟು…?
ವಯಸ್ಸು ಕೇಳಬಾರದು..,
ಹಾಗೇನಿಲ್ಲ ನೀತಿ ನಿಯಮ
ಎಷ್ಟಾದರೂ ಗಂಡಲ್ಲವೆ..
ಇಪ್ಪತ್ತು ಎಂದರು ಅಪ್ಪಾ
ಇಪ್ಪತ್ತೊಂದು ನಾನೆಂದೆ..
ಅಪ್ಪ ನಸು ನಕ್ಕರು,
ನಾ ಮುಖ ಮುರಿದೆ..!
ಒಂದೊಂದೇ ಹೆಜ್ಜೆ ಸಾಗುತ್ತಿದೆ
ಅಪ್ಪ ಯಾಕೋ ಹಿಂದೆ ಹಿಂದೆ..!!
ಮತ್ತೆ ಮತ್ತೆ
ಕೈ ಸೋಕಿದರೂ
ಚುಚ್ಚುತ್ತಿದೆ ಗಡ್ಡ ಗಡುಸಾಗಿ..
ಅಪ್ಪ ನಗುತ್ತಲೇ ಇದ್ದರು
ಅಂಗಿಯ ಕಿಸೆಯಿಂದೆ ತೆಗೆದ
ಐದು ರೂಪಾಯಿ ಕೈಗಿಟ್ಟು
ನಗುತ್ತಲೇ ಇದ್ದರು..!
“ಪಂಚರ್ ತೆಗೆಸು
ನಿನ್ನ ಕೆಂಪು ಸೈಕಲ್ ಗೆ…”
ಆ ನಗುವಿನಲ್ಲಿ
ಕಳೆದು ಹೋಗುವ ಮುನ್ನ
ಅಪ್ಪನ ಕಣ್ಣಂಚಲಿ
ಮೂಡಿನಿಂತ ನೆರಿಗೆಗಳು
ಅಣುಕಿಸುತ್ತಿದ್ದವು..
ತಲೆಬಾಗಿ ಹೊರಟೆ
ಸೈಕಲ್ ಅಂಗಡಿಯತ್ತ….
-ಸಚಿನ್ ನಾಯ್ಕ
ಎಲ್ಲವೂ ಚೆನ್ನಾಗಿವೆ, ಮೊದಲನೆಯದಂತೂ ಸೂಪರ್ !
ಸುಪರ್….
Panju patrikege dhanyavadagalu, Nanna Appa kavite prakatisiruvudakkagi…