ಕಾವ್ಯಧಾರೆ

ಮೂವರ ಕವನಗಳು: ಸಿಪಿಲೆ ನಂದಿನಿ, ಎಸ್.ಜಿ. ಸೀತಾರಾಮ್, ಶ್ರೀಶೈಲ ಮಗದುಮ್ಮ

ನಿರಾಶ್ರಿತರ ಸ್ವಾತಂತ್ರ್ಯ
ಗೂಡ ಕಳೆದ
ಜೀವಗಳ ಕಸಿವಿಸಿ
ಯಾವುದೋ ಬರಗಾಲ
ದೈತ್ಯ ಮಾರುತ
ಹೊಡೆತಕೆ
ಸಿಲುಕಿ ನಲುಗಿತೊ

ಭೂಕಂಪನ ಆರ್ತನ
ಅನಾಥವಾದವೋ
ಕಳಚಿ ಬಿದ್ದ ಕಾಲ
ಮರೆತ ವರ್ತಮಾನ
ಮೈದಾನದಲಿ ಬದುಕ ಕಟ್ಟಿತೊ. 

ಎಷ್ಟೋ ಸೂರ್ಯೋದಯ
ಉದಯಿಸಿದರೂ
ಬೆಳಕುಮಾತ್ರ ಬೆಳಗದೆ
ಸುಡುತ್ತಿತ್ತು.

ಆದರೂ ಇಲ್ಲಿ ಯಾರ 
ಹಂಗು ಇಲ್ಲ
ಬಂಧನ ಬೇಲಿ
ಇಕ್ಕೆಲಲಿ ತಂಪು ತಂಗಾಳಿ
ಸಾಲುಮರಗಳು
ಇಲ್ಲಿ ಕತ್ತಲಾದರೆ
ಅದೇ ಕಾಡುವ 
ನೆಲದ ಮಣ್ಣಿನ ಋಣ

ಆಕಾಶ ಹೊದಿಕೆ
ಮಲಗಿದರೆ ಜೋಪಡಿ
ಎದುರಾದ ಚಂದ್ರ 
ಬೆಳಕು ಪಸರಿಸುವುದು
ತಂಪು ಹಾಗೆಯೆ. 

-ಸಿಪಿಲೆ ನಂದಿನಿ

 

 

 

 


ವರಮಹಾಲಕ್ಷ್ಮೀ ವಿಚಿತ್ರ ಸ್ತೋತ್ರಂ
ವರದಾಯಿನಿಗೆ ಮರಿಮಾನವನೊಬ್ಬನ ಕಿರುಮೊರೆ

-1-
 “ವರ” ಬೇಡಲು ನಾ ವಧುವಲ್ಲ 
ವರಮಾನವೇ ಮಾನ ಎನುವ “ವರಮಾನ-ವ” ನಾನಲ್ಲ
ವರದಾನವ ಕೊಟ್ಟಷ್ಟೂ ಕೇಳುವ “ವರದಾನ-ವ” ನಾನಲ್ಲ
ವರಹ ತೆರಬೇಕಿರುವ ವರಾರ್ಥಿ ಮಾವ ನಾನಲ್ಲ
ವರದಕ್ಷಿಣೆ ಭಕ್ಷಿಸುವ “ವರ ಮಹಾ-ಆಶಯ” ನಾನಲ್ಲ
ವರಕವಿ ಆಗಬೇಕಿಲ್ಲ ನಾನು ವರಕಪಿಯಾಗಿ ಕಡಲ ಜಿಗಿಯಬೇಕಿಲ ್ಲ
ವಿವರಗಳ ಒದರಿ ವರದಿವರಿಷ್ಠನಾಗಬೇಕಿಲ್ಲ  
ವರದೆ ವರದೇವತೆ ಕೇಳಲೇನನು ನಾ ನಿನ್ನನು?||
ಲಕ್ಷಾಧ್ಯಕ್ಷರೆಡೆಗೆ ಎನಗೆ ಲವಲೇಶ ಲಕ್ಷ್ಯವಿಲ್ಲ
“ಲಕ್” “ಲಕ್ಸ್” “ಲುಕ್ಸ್” ಎಂದು ಲವಲವಿಸುವ ಲಕ್ಷಣವೇ ಎನಗಿಲ್ಲ
ಲಕ್ಕಿ ಲಚ್ಚಿ ಮಾಲಕುಮಿ ಬೇಡಲೇನನು “ಏನಕ್ಕೂ ಬೇಡದ” ನಾ ನಿನ್ನನು?|| 

-2-
“ವರವ ಕೊಡೇ ಕೊಡೇ” ಎಂದು ನಿನಗೆ ಕೊಡೆಪಿಡಿದು ವರಾತಿಸುವ ವರಸೆಗಾರರ 
ಜ್ವರವ ಒಡನೆ ಬಿಡಿಸು ಎಂದು ನಾ ನಿನ್ನ ಕೋರುವೆನು||
ವರಬೇಡಿಕೆ ಪ್ರವರಗಳ ಪಟಪಟನೆ ಪಠಿಸುವ “ವರ-ಪುತ್ರಪುತ್ರಿ”ಯರ 
ಸ್ವರವ ಮೊದಲು ಸರಿಪಡಿಸು ಎಂದು ನಾ ನಿನ್ನಲಿ ಅರಿಕೆ ಮಾಡುವೆನು||
“ವರಿ-ಮೆಂಟಲ್ ವರಿ” ತೆರದಲಿ ಪುರಪುರಗಳ ಉರಿಸುತಿಹ
“ಜನ-ವರಿ” ಮಾರಿಯ ಸವರಿ “ವರಿ-ಜನರ” ಪರಿಪಾಲಿಸು ಎಂದು 
ಪರಿಪರಿಯಲಿ ನಾ “ಹೊರಲಕ್ಷ್ಮೀರಮಣ” ನಿನ್ನಲಿ ಕರಮುಗಿದು ಮೊರೆವೆನು|| 

~0~

*ವರಹ: ವರಾಹದ ಮುದ್ರೆಯುಳ್ಳ ಚಿನ್ನದ ನಾಣ್ಯ. ವರಹಜ್ವರ: ಹೊನ್ನಿನ ಮೋಹ. ವರಾಹಜ್ವರಕ್ಕೆ (ಸ್ವೈನ್ ಫೀವರ್) ಮದ್ದು ಸಿಗಬಹುದು, ವರಹಜ್ವರಕ್ಕೆ ಕೊನೆಯುಂಟೇ?

* ಶುಕ್ಕರ್‍ವಾರ್ ಶುಕ್ಕರ್‍ವಾರ “ವಾರ್‍ಮಹಾಲಕ್ಷ್ಮಿ” ಪೂಜೆ ಮಾಡುತ್ತಾ ಹೋದಲ್ಲಿ ಯುದ್ಧಭೀತಿಯು ಇಲ್ಲವಾಗುವುದು ಎಂದು “ವಾರ್‍ಗಿತ್ತಿ ವ್ರತಕಥಾಮಾಹಾತ್ಮ್ಯಂ” ಬೋಧಿಸುತ್ತದೆ. 

-ಎಸ್.ಜಿ. ಸೀತಾರಾಮ್, ಮೈಸೂರು.

 

 

 

 


 

ಹೆಣ್ಣಿನ ವಿರಹ ಗಂಡಿಗೆ ಅರ್ಥವಾದಷ್ಟು

ಅವಳ ದನಿಯಲ್ಲಿ 
ಆಸೆಯ ವೀಣೆಯ 
ಝೇಂಕಾರವಿತ್ತು, 
ಕಿವಿಗೆ ಬಿದ್ದರೂ ಆತ 
ಹೊದ್ದು ಮಲಗಿದ. 

***

ಅವಳ ಕಣ್ಣುಗಳಲ್ಲಿ 
ಕಾಮನ ಹುಣ್ಣಿಮೆಯ 
ಪ್ರಕರ ಬೆಳದಿಂಗಳು 
ಅವನಿಗ್ಯಾಕೊ 
ಅಮವಾಸ್ಯೆ ಅಂದ್ರೆ ಇಷ್ಟ
 
***

ಆಕೆಗೆ ಮಕ್ಕಳಾಗದೆ 
ದಶಕಗಳೇ ಕಳೆದವು 
ಎಲ್ಲರ ಕಣ್ಣುಗಳು 
ಆಕೆಯ ಗರ್ಭದ ಮೇಲೆ 
ಮುದಡದ ಹಾಸಿಗೆ ಗಮನಿಸಿಯೇ ಇಲ್ಲ.
 
*** 

ಆಕೆ 
ಮೈನೆರೆದಿದ್ದಾಳೆ
ಆತನ ಹುಣಸೆ ಹುಳಿ 
ಮುಪ್ಪಾಗುತ್ತಿದೆ 

***

ಆಕೆಯ 
ತುಟಿಗೆ ಅಂಟಿದ್ದ ಹಾಲಿನ ಕೆನೆಗೆ 
ದಿನವೂ ಇರುವೆ ಮೆತ್ತುತ್ತಿದ್ದವು, 
ಅವರಿಗೆ ಇನ್ನೂ ಮಕ್ಕಳಾಗಿಲ್ಲ. 

– ಶ್ರೀಶೈಲ ಮಗದುಮ್ಮ

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *