ಕಾವ್ಯಧಾರೆ

ಮೂವರ ಕವನಗಳು: ಸಿಪಿಲೆ ನಂದಿನಿ, ಸಾವಿತ್ರಿ ವಿ. ಹಟ್ಟಿ, ಅನುರಾಧ ಪಿ. ಸಾಮಗ

ಮಲೆಗಳಲಿ ಮರೆಯಾದದ್ದು

ಬೇಸಿಗೆ ಮಲೆಯ 
ಕುಳಿರ್ಗಾಳಿ
ಶ್ರೀಗಂಧ-ರಕ್ತಚಂದನ
ಸುವಾಸನೆ
ವನರಾಜಿಗಳಲಿ ಸುಯ್ಯಲು..

ಸೋನೆಗತ್ತಲೊಳಗೆ
ಹಸಿರುತಂಗಾಳಿ 
ಸಿರಿಗೆ
ಕಾನನಗಳು
ಶೃಂಗಾರ ಗೊಂಡಿರಲು..

ಎಳೆಬೆಳಕು
ಮಲೆಯ ಮುಕುಟವ
ತೆರೆಯಲು
ಕವಳದ ಸೊಬಗೊಳಗೆ..
ಹಕ್ಕಿ ಇಂಚರ ಅಖಂಡ 
ಐಕ್ಯತೆಯೊಳಗೆ ಮುಚ್ಚಲು..

ಮಿಂಚು ತುಂಬಿದ 
ಮಹಾಬಯಲು
ಅಗೋಚರ 
ಮರೆಯಾಕೃತಿಯ
ಕಾನನವೆಲ್ಲ ಸಂಚರಿಸಲು
ಹರ್ಷಕವಳವೆ ಸುರಿಯಲು

ಹಸಿರುಬೇಟೆಗೆ ಹೊಂಚು
ಹಾಕುತ್ತಿದ್ದ 
ಮುಸುಕಧಾರೆ ರೈಫಲ್‍ಗಳು
ಮಲೆಯಸಿರಿಯ ಶೃಂಗಗಳ
ಹೆದರಿಸಲು

ಹಸಿರೆಲೆಮೇಲೆ ಅತ್ಯಾಚಾರ
ಬೆಳಕ ಝರಿಒಡಲಲಿ
ಹಸಿರುರಕ್ತದ
ನೋವಿಗೊಂದು 
ದೊರಕದ ನ್ಯಾಯ

ಕಾಡು ಕೆಂಪು ನಕ್ಷತದೇವತೆ 
ನರಳಿ ಉರುಳಲು
ಜೇನು ಸುಡಲು
ಮಿಗ-ಜೇವಣಿಲತೆಗಳು
ಮಲೆಗಳಲಿ ಮೌನವಾಗಿ 
ಮರೆಯಾಗಲು..
-ಸಿಪಿಲೆ ನಂದಿನಿ

 

 

 

 


ಹುಟ್ಟಲಿ ಸದ್ಭಾವನೆಯ ಹೂಬಳ್ಳಿ

ನೀನು ಕೆಟ್ಟವನಾಗುವ ನೆಪದಲ್ಲಿ
ಮತ್ತೀಟು ಮನಸ್ಸಿಗೆ ಹತ್ತಿರವಾಗಿರುವಿ
ನಿನ್ನ ಸಹವಾಸವೇ ಬ್ಯಾಡಂತ 
ಹೃದಯದ ಬಾಗಿಲು ಮುಚ್ಚಿಕೊಂಡರೂ
ನಿನ್ನ ಮೌನವೇ ಮತ್ತೆ ಬಾಗಿಲು ತೋಳ್ಹಿಡಿದು ನಿಂತೈತಿ
ತೆರೆಯದಿರಲಿ ಹೆಂಗೆ ನೀನೇ ಹೇಳು!

ಮಾತಾಡಿ ಮಾತಾಡಿ ದೂರವಾದವರೆಷ್ಟೊ
ತಟಗೂ ಸೆಳೆಯಲಿಲ್ಲವರು ಮನವ!
ಮಾತಾಡಿಸಿದರೂ ಮೌನವಾಗಿರುವ 
ನೀನ್ಯಾಕೆ ಕಾಡುತಿರುವಿ ಹೃದಯ ಮನಸ್ಸಿಗೆ!
ಅಷ್ಟಕೂ ನೀನು ಮಾತ್ಯಾಕೆ ಕಳೆದಕೊಂಡೆ
ನಿನ್ನ ಮಾತುಗಳ ಮಾಣಿಕದ್ಹಾರ ಬೇಕು ನನಗೆ!

ಭಾವನೆಗಳೆಂದರೆ ಉರಿದು ಬೀಳುವೆಯಲ್ಲಾ
ಭಾವನೆಗಳಿರದುದೊಂದು ಬದುಕೇನು ಹೇಳು!!
ಭಾವನೆಗಳಿಗೆ ಪದ, ಮಾತು-ಗೀತೆಯ 
ರೂಪ ಕೊಡಬಲ್ಲ ಜನ್ಮವಿದೊಂದೇ ಮನುಷ್ಯನದು!!
ಯಾಕೆ ಕಲ್ಲಾಗಿರುವಿ ಮಾತಾಗು, ಪದವಾಗು, ಕಾವ್ಯವಾಗು
ನಿನ್ನೆದೆಯಲಿ ಹುಟ್ಟಲಿ ಸದ್ಭಾವನೆಯ ಹೂಬಳ್ಳಿಯೊಂದು!!

-ಸಾವಿತ್ರಿ ವಿ. ಹಟ್ಟಿ, 

 

 

 

 


ಅಳಿವ ಮಾತಲೀಗ ಅಳಿವ ಭಯವಲ್ಲ 
ಕ್ಷಮಿಸಿಬಿಡು ಅಳಿವೇ.. 
ಅವನ ಮರೆವ ಹೊಗುವ ಭಯ ಬಿಟ್ಟೊಂದಿಲ್ಲ.

ನಾನಿರದ ಹೊತ್ತು    
ಸುಳಿವ ಗಾಳಿ, ಉಲಿವ ಹಕ್ಕಿ 
ಮೊರೆವ ಶರಧಿ, ಹೊಳೆವ ಚುಕ್ಕಿ 
ಹುಣ್ಣಿಮೆಯಲೊಮ್ಮೊಮ್ಮೆ 
ಕಾಳಕತ್ತಲೆಯಲೊಮ್ಮೊಮ್ಮೆ 
ಕಣ್ರೆಪ್ಪೆ ಮೇಲಿನ ಭಾವಯಾನದುದ್ದಕೂ
ನೆನಪಿಸಿದರೂ ನನ್ನ   
ಮತ್ತವೇ ಮರೆಸಲೂಬಹುದು!

ವಸಂತ-ವರ್ಷ-ಶಿಶಿರವೂ ಬರಲಿವೆ
ಆಕಾಶಮಲ್ಲಿಗೆ, ನೆಲಮಲ್ಲಿಗೆ
ಸೂರ್ಯಕಾಂತಿ, ಸಂಜೆಮಲ್ಲಿಯೂ
ಅರಳಲಿವೆ ಹೀಗೇ .
ಮಳೆ, ಗಾಳಿ, ಚಳಿಯೊಮ್ಮೊಮ್ಮೆ
ಮೊಗ್ಗೊಮ್ಮೆ ಅರಳೊಮ್ಮೆ 
ನೆನಪಿಸಿದರೂ ನನ್ನ
ಮತ್ತವೇ ಮರೆಸಲೂ ಬಹುದು!

ಬೆಳಗು ಬೈಗು
ನೋವು ನಗು
ನಿದ್ದೆ ಎಚ್ಚರಗಳಲಿ
ಕನಸಂತೆ ಒಮ್ಮೊಮ್ಮೆ
ನೆನಪಂತೆ ಒಮ್ಮೊಮ್ಮೆ
ಎದುರುಗೊಂಡರೂ ಅವನ
ಮರುಕ್ಷಣವೇ ಅವ ಮರೆಯಲೂಬಹುದು!

ಉರಿದೂ ಉಳಿದ ಮೀರಾ
ಜ್ಯೋತಿಯಾಗಿಯೇ ಜ್ಯೋತಿಯಲಿ ಲೀನ!
ಉರಿಯುತಿರುವೆ; ಉಳಿದೇನೇ?
ಮೀರಾಳಲ್ಲ; ನಾ ಮೋಹಮಗ್ನ.

ಅಳಿವ ಭಯವೀಗ ಕಾಡುತಿಲ್ಲ ಎಂದಿನಂತೆ
ಅವನ ಮೋಹಿಸಿದ ಗಳಿಗೆ 
ನನ್ನ ಪುನರ್ಜನ್ಮವೋ ಎಂಬಂತೆ!
-ಅನುರಾಧ ಪಿ. ಸಾಮಗ

 

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಮೂವರ ಕವನಗಳು: ಸಿಪಿಲೆ ನಂದಿನಿ, ಸಾವಿತ್ರಿ ವಿ. ಹಟ್ಟಿ, ಅನುರಾಧ ಪಿ. ಸಾಮಗ

Leave a Reply

Your email address will not be published. Required fields are marked *