ವಾಸ್ತವ
ಬುದ್ಧ ಜನಿಸಿದಾ ನಾಡಿನಲ್ಲಿ
ಬೃಂದಾವನವ ಕಟ್ಟದೆ
ಬಾಂಬನ್ನು ಸುಟ್ಟರಲ್ಲ!
ಬಸವ ಜನಿಸಿದಾ ಭುವಿಯಲ್ಲಿ
ಭಕುತಿಯಿಂದ ಬಾಳದೇ
ಬರ್ಭರ ಹಿಂಸೆಯಾಗುತ್ತಿದೆಯಲ್ಲ!
ಗಾಂಧಿ ಜನಿಸಿದ ದೇಶದಲ್ಲಿ
ಗಂಧದ ಪರಿಮಳವ ಸೂಸದೇ
ಗನ್ನನ್ನು ಹಿಡಿದೆವಲ್ಲ!
ಬುದ್ಧ, ಬಸವ, ಗಾಂಧಿ ಈಗ ಇದ್ದಿದ್ದರೆ???
ಬುದ್ಧ ಕಲ್ಲಾಗುತ್ತಿದ್ದ!
ಗಾಂಧಿ ಮೌನವಾಗುತ್ತಿದ್ದ!
ಬಸವ ಮತ್ತೊಮ್ಮೆ ಐಕ್ಯವಾಗುತ್ತಿದ್ದ!
****
ಈ ಜಗತ್ತಿನೊಳಗೆ
ಪ್ರತಿಯೊಬ್ಬರಿಗೂ
ಒಂದೂಂದು ದಾರ!
ನನ್ನದೊಂದು ದಾರ
ನಿನ್ನದೊಂದು ದಾರ!
ಅವರದೊಂದು ದಾರ
ಆಗಬೇಕಿದೆ ನಾವು
ಇದರಿಂದ ಉದ್ಧಾರ!
ಬೇಡವೇ ಬೇಡವಂತೆ
ನನಗೆ ನಿನ್ನ ಮಮಕಾರ
ಯಾಕೆಂದರೇ
ನನ್ನದು ಜನಿವಾರ
ನಿನ್ನದು ಶಿವದಾರ!
ಯಾರು ಕಟ್ಟಿದರೇನೂ
ಈ ದಾರಗಳ ಮಹಾಪೂರ!
ಆ ದೇವರೊಬ್ಬನೇ
ಸೃಷ್ಟಿಯ ಕಲಾಕಾರ!
– ಸಂತೋಷಕುಮಾರ ಸೋನಾರ
*****
ಅಮೃತ ಬಿಂದು
ಜೀವನದಲಿ ಕತ್ತಲು
ಬೆಳಕಿನಾಟದಲಿ ದಿನ ದಿನ
ರೋಸಿಹೋಗಿದ್ದ ನನಗೆ
ಬೆಳಕಿನಾಶಯ ನೀಡಿದ
ಸೂರ್ಯ ಕಿರಣ ಒಮ್ಮೆಲೇ
ಬೆಳಕಿಗೆ ದಿಗ್ಬ್ರಮೆಗೊಳ್ಳದಂತೆ
ತುಣುಕು ತುಣುಕಾಗಿ ಬಿತ್ತರಿಸುವ
ಬೆಳಕಿನ ಚಿತ್ತಾರ ಜೀವನದಾಶಯವ
ಜೀವಂತಗೊಳಿಸಿದ ಅಮೃತಬಿಂದು
ನಾ ಕಂಡೆ ಇಂದು
-ನಗರ ಸುಧಾಕರ ಶೆಟ್ಟಿ
ರೆಬೆಲ್ ಸ್ಟಾರ್ ಎಂದರೆ ಸಾಮಾನ್ಯನಲ್ಲ!
ರೆಬೆಲ್ ಸ್ಟಾರ್ ಎಂದರೆ ಸಾಮಾನ್ಯನಲ್ಲ
ಎಂಟು ಜನರ ಬಲವುಳ್ಳ ಆಳು
ಎದೆಯಲ್ಲಿ ಕೆಚ್ಚು, ಕಣ್ಣಲ್ಲಿ ಕಿಚ್ಚು
ತಗಾದೆ ತೆಗೆದವ ಬದುಕುಳಿದರೆ ಹೆಚ್ಚು!
ರೆಬೆಲ್ ಸ್ಟಾರ್ ಎಂದರೆ ಸುಮ್ಮನಲ್ಲ
ಅದೆಂತಹ ಗರ್ವ, ದರ್ಪ ಗೊತ್ತೆ?
ಕನ್ವರ್ ಎಂದರೆ ಸಾಲದು,
ಕನ್ವರ್ ಲಾಲ್ ಬೋಲೋ ಕುತ್ತೆ!
ರೆಬೆಲ್ ಸ್ಟಾರ್ ಮಹಾ ಕೋಪಿಷ್ಟ
ಆದರೆ ಸ್ನೇಹಕ್ಕೆ ಜೀವ ಕೊಡುವ
ತ್ಯಾಗದ ಸಾಕಾರಮೂರ್ತಿ,
ಕೇಳಿ ನೋಡಿ ವರವ!
ರೆಬೆಲ್ ಸ್ಟಾರ್ ಎಂದರೆ ಬೆಂಕಿ
ವ್ಯವಸ್ಥೆಯ ಎದುರು ಸದಾ ಹೋರಾಟ
ಎದುರಾಳಿ ಸೋತು ಸುಣ್ಣ
ರೆಬೆಲ್ ಸ್ಟಾರ್ ನಿಗೆ ಗೆಲುವೊಂದು ಚಟ!
ರೆಬೆಲ್ ಸ್ಟಾರ್ ಗೀಗ ಎಪ್ಪತ್ತರ ಆಸುಪಾಸು
ಸಿಟ್ಟಿಗೇನೂ ಕೊರತೆಯಿಲ್ಲ
ಆದರಿದು ರೆಬೆಲ್ ಸ್ಟಾರ್ ನ ಪರ್ವವಲ್ಲ,
ಇನ್ನೇನಿದ್ದರೂ 'ಅಂದೊಂದಿತ್ತು ಕಾಲ!'
ರೆಬೆಲ್ ಸ್ಟಾರ್ ಗೀಗ ಗೆಳೆಯರಿಲ್ಲ
ಉಳಿದಿರುವುದು ಕೊಲ್ಲುವ ಏಕಾಂತ
ಯೌವನದಿಂದ ಕುಡಿತದ ಚಟ ಬೇರೆ,
ಹೊರ ಜಗತ್ತಿಗೆ ಮಾತ್ರ ಇವನೊಬ್ಬ ಸಂತ!
ರೆಬೆಲ್ ಸ್ಟಾರ್ ಎಂದರೆ ಜೀವಂತ ದಂತಕಥೆ
ಕಥೆಗಳಲ್ಲಷ್ಟೆ ಅವನ ಜೀವನ
ಕಥೆಗಳಿಲ್ಲದಿದ್ದರೆ ಅವನಿಲ್ಲ
ಆದರವನ ಕಥೆ ಹೇಳುವವರು ಯಾರೂ ಇಲ್ಲ!
ರೆಬೆಲ್ ಸ್ಟಾರ್ ನ ಕಥೆಗಿದು ಸಮಯವಲ್ಲ
ಹೊಸ ತಲೆಮಾರಿನಲ್ಲಿ ಹೊಸ ಸ್ಟಾರ್ ಗಳ ಸಾಲು
ಹಿಂದೊಮ್ಮೆ ಇವನಿಗೆ ದೊರೆತ ಚಪ್ಪಾಳೆ
ಇವತ್ತು ಬೇರೆ ಯಾರದೋ ಪಾಲು!
ರೆಬೆಲ್ ಸ್ಟಾರ್ ಎಂದರೆ ಸಾಮಾನ್ಯನಲ್ಲ
ಎಂಟು ಜನರ ಬಲವುಳ್ಳ ಆಳು
ಎಂಬ ಕಥೆಯ ಹಿಂದೊಮ್ಮೆ ನಂಬಿದರು
ಆ ಕಥೆ ಉಳಿದರೆ ರೆಬೆಲ್ ಸ್ಟಾರ್ ಉಳಿದಾನು!
-ಕಿರಣ್ ಕುಮಾರ್ ಕೆ. ಆರ್.