ಮೂವರ ಕವನಗಳು: ಶಶೀ ತರೀಕೆರೆ, ಜಾನ್ ಸುಂಟಿಕೊಪ್ಪ, ವಲ್ಲಿ ಕ್ವಾಡ್ರಸ್

ಮರುಳನ ಸಾಲುಗಳು

ನಿನ್ನ ನೆನಪಿಗಾಗಿ 
ಖಾಲಿ ಬೀದಿಯಲ್ಲೂ
ಕೈಬೀಸಿ ನಡೆಯೋದು 
ಅದೇಷ್ಟು ಹಿತವಾದ ಸಾವು 
ನಜ್ಜುಗುಜ್ಜಾದ ಈ ಬದುಕಿಗೆ..

ಬೆಳ್ಳಂಬೆಳಿಗ್ಗೆ ನಿನ್ನದೇ
ತಿಳಿಯಾದ ನಿಗೂಢ ಸ್ವಪ್ನವೊಂದು
ಥಟಕ್ಕನೆ
ಹಾಸಿಗೆಯಿಂದೇಳಿಸುವ ಪರಿ 
ಊಹಿಸು ಇನ್ನೆಷ್ಟು ದಿನ…

ಚಿಟಿಕೆ ಸದ್ದಿನಷ್ಟಾದರೂ
ನಗು ಉಳಿಸಿಕೊಳ್ಳದೆ 
ಮುಗ್ಗರಿಸಿರುವ 
ಊರುಕೇರಿಗಳ ಮೈಲಿಗಲ್ಲು
ಕಟ್ಟಿಕೊಟ್ಟಿತೇ ಇನ್ನೊಂದು ಊರು…

ಸುಮ್ಮನೆ ನಿನ್ನಂತೆ ಹ್ಮೂಂ 
ಗುಡುವ
ಹೂಬನ,ಮರಗಿಡ,
ರೈಲು,ಸ್ತಬ್ಧ ಗೋಡೆಯಲ್ಲಿನ
ನಿಪುಣ ಗಡಿಯಾರಗಳಿಗೆ 
ಹೇಳು ಇದು ಎಷ್ಟರ ಪ್ರಾಯ ..

-ಶಶೀ ತರೀಕೆರೆ

 

 

 

 


*** ಎಲ್ಲಾ ಸರಿಯಾಗಿದೆ***

ದೇವಾಲಯದ ನಂದಾದೀಪ
ಇನ್ನೂ ಉರಿಯುತ್ತಿದೆ;

ನಿರಪರಾಧಿ-ನಿರ್ಗತಿಕರ
ದೇಹ- ನೆತ್ತರು ಇಂಧನವಾಗಿ
ಭಗ್ಗೆಂದು ಹೊತ್ತಿ ಉರಿದು
ಕಂದಮ್ಮಗಳ ಸವಿಗನಸುಗಳು
ಯಜ್ನಕುಂಡವಾಗಿವೆ,
ಕರ್ರ್ರಗಿನ ಹೊಗೆ ಪಿಸುಗುಟ್ಟುತ್ತದೆ-
ಎಲ್ಲಾ ಸರಿಯಾಗಿದೆ;

ಯಾರಿಗೆ ಏನೂ ಅನ್ನಿಸುವುದಿಲ್ಲ,
ಕಪಟ ವಿಶ್ವಾಸದಲ್ಲಿ  ಬೆಂದುಬೆಂದು
ಅಂತಃಕರಣದೊಂದಿಗೆ
ಮಾನವೀಯತೆ ಆವಿಯಾಗಿ
ಲೀನವಾಗಿ ಮಾಯವಾದರೂ
ಎಲ್ಲಾ ಸರಿಯಾಗಿದೆ;

ಆರಾಧನೆಯ ಮುಖವಾಡದ
ಹಿಂದಡಗಿದ
ನೋವು-ಅವಮಾನಗಳೆಲ್ಲಾ
ಸಿಡಿದು ಚೂರುಚೂರಾಗಿ
ಬಂಡಾಯದ ಬೀಜಗಳಾದರೂ
ಸದ್ದಿಲ್ಲದೆ ಗುಡಿಸಿ ಗುಡ್ಡೆಹಾಕಿ
ಬೂದಿಯೂ ಕಾಣದಂತಾಗಿಸಿ
ಏದುಸಿರೊಂದು ಕೂಗಿಕೂಗಿ ಹೇಳುತ್ತದೆ
ಹೌದು..ಎಲ್ಲಾ ಸರಿಯಾಗಿದೆ;

ಜಪಸರದ ಮಣಿಗಳೆಲ್ಲಾ
ಎಣಿಸಿ ಎಣಿಸಿ ಸವೆದು
ಬಗಲಲ್ಲಿನ ಚಾಕುಚೂರಿಗಳೆಲ್ಲಾ ಹರಿತಗೊಂಡು
ನೆತ್ತರನ್ನು ನೆಕ್ಕಿನೆಕ್ಕಿ ಸೀಳಿದ ನಾಲಗೆ
ತಣ್ಣಗೆ ಸರಿದಾಡಿ ನಿಟ್ಟುಸಿರಾಗುತ್ತದೆ,
ಹೌದು,,,
ಮೇಲೊಬ್ಬನಿದ್ದಾನೆ,,,
ಎಲ್ಲಾ ಸರಿಯಾಗಿದೆ,,,

ಆದದ್ದೆಲ್ಲಾ ಒಳ್ಳೆಯದೇ
ಆಗಬೇಕಾಗಿರುವುದೂ ಒಳ್ಳೆಯದೇ
ನಿಜನಿಜ,,,
ಎಲ್ಲಾ ಸರಿಯಾಗಿದೆ,,,

ಅನುವಾದ: ಜಾನ್ ಸುಂಟಿಕೊಪ್ಪ
ಕೊಂಕಣಿ ಮೂಲ:ದಿನೇಶ್ ಕೊರಿಯ

 

 

 

 


ಎದ್ದಿಕೊಳ್ಳಿ ನಾಯ್‌‍ಗಳಾ

ರಸ್ತೆಬದಿಯಾಗೆ ಮಲ್‌ಗೀದ ನಾಯ್‌ಗಳಾ
ಮನುಜರು ಜೀವಿಸುವ ಈ
ವಟಾರದ ಗಟಾರಿನಲ್ಲಿ
ಹರಿದು ಹೋಗುವ ಮುಗ್ದ
ಹಸುಳೆಯ ರೋದನೆಯದು
ನಿಮಗಾಗಿ ’ಜೋಗುಳ’ ಅಲ್ಲ
ಆದ್ರಿಂದ ಎದ್ದಿಕೊಳ್ಳಿ ನಾಯಿಗಳಾ

ಈ ಫುಟ್‌ಪಾತ್ ನಿಮ್ಮ್ ಅಪ್ಪಂದಲ್ಲ
’ಹಫ್ತಾ’ ಕೊಡೋಕೆ ನಿಮ್ಗಾಗುತ್ತಾ?
ಕತ್ಲಾಗಯ್ತೆಂಬ ಭ್ರಮೆ ಬ್ಯಾಡ
ದಾರಿದೀಪದ ಕೆಳ್ಗಿರುವ ಕ್ಯಾಮರಾದಲ್ಲಿ ಕಾಣ್ಸುತ್ತೆ
ವಿರೋಧ ಪಾರ್ಟಿಯಾವ್ರು ಬಂದಾರು
ನಿಮ್ಮನ್ನು ಕೊಂಡೋಗಿ ಸರ್ಕಾರವನ್ನೇ ಉರುಳಿಸಿದಾರು
ಆದ್ರಿಂದ ಎದ್ದಿಕೊಳ್ಳಿ ನಾಯಿಗಳಾ

ಪಟ್ಟೆ ಇದ್ರೆ ಮರ್ಯಾದೆಯಾದ್ರು ಸಿಕ್ತಿತ್ತು
ರಸ್ತೇಲಿ ಮಲ್ಗೋಕೆ ನೀವೇನು ಮನುಶರಾ?
ನೆತ್ತರ ಕಲೆಯಿನ್ನೂ ಮಾಜದ
ಮಾಂಸದ ವಾಸನೆಯಿನ್ನೂ ಹೋಗದ
ಈ ರಸ್ತೆಗೆ ’ಸಂತರ’ ಹೆಸರಿದೆ
ನಿಮ್ಮಿಂದ ಈಗ ’ಅಪವಿತ್ರ’ ಯಾಕೋ?
ಆದ್ರಿಂದ ಎದ್ದಿಕೊಳ್ಳಿ ನಾಯಿಗಳಾ

ಮನುಶ-ಪ್ರಾಣಿ ಸಂರಕ್ಶಕರು ಬಂದಾರು
ಕೊಡಿ ದೂರು ನಿಮ್ ತಲೆ ಚಚ್ಚಿ
ನಿಮ್ ಜೀವಾನೇ ಕೊಟ್ಬಿಡಿ
ನೀವ್ ನಾಯ್‌ಗಳು ನಾಯಿಯಾಗೇ ಇರ್ತೀರಾ
ಇನ್ನಾದ್ರು ಸ್ವಲ್ಪ ತಿಳ್ಕೊಳ್ರೊ
ರಸ್ತೆಬದಿಯಲ್ಲಿ ಮಲ್ಗಿದ ನಾಯಿಗಳಾ
ಇನ್ನಾದ್ರು ಎದ್ದಿಕೊಳ್ಳಿ 

ಮೆರವಣಿಗೆ ಶುರುವಾಯ್ತಂತೆ
ಯಾರೋ ಮಂತ್ರಿಗಳ ಗಾಡಿಗಳು ಓಡ್ಬೋದು
ಕುಡುಕ ನಟರು ನಿಮ್ಮೇಲೆ ಗಾಡಿ ಓಡಿಸ್ಬೋದು
ನಂತ್ರ ಮೀಡಿಯಾ ಕೂಡ ನಿಮ್ಮೇಲೆ ಹಾರ್ಬೋದು
ಯಾರಾದ್ರು ಕಿಡ್ನಿ ಕಣ್ಣು ಹೃದಯ ತೆಗೀಬೋದು
ಊರಿಗೆ ಮಂಗ, ಇಲಿ, ಹಂದಿ ಜ್ವರಾಂತೆ
ಈಗ ’ನಾಯಿ ಜ್ವರ’ ಎಂದು ಹೇಳೊ ಮುಂಚೆ
ಎದ್ದಿಕೊಳ್ಳಿ ನಾಯಿಗಳಾ

ಅನುವಾದ: ವಲ್ಲಿ ಕ್ವಾಡ್ರಸ್ 

-ಕೊಂಕಣಿ ಮೂಲ: ವಲ್ಲಿ ಕ್ವಾಡ್ರಸ್ 

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x