ಶಕುಂತಲೆಯ ಪ್ರಾಯ
ಕನ್ನಡಿಯಲಿಕಣ್ಣಿರುಕಿಸುವುದ
ಬಿಟ್ಟಿದ್ದಾಳೆ ಮೇನಕೆ
ಶಕುಂತಲೆಯ ತನುವಿಡಿ
ಅವಳದೇ ಪರಿವಿಡಿ
ಬಿಂಕಮರೆತ ಹೂಕಂಪುಗಳೆಲ್ಲ
ಕಕ್ಕಾಬಿಕ್ಕಿ ಕೂತು
ಒನಪಿನ ತೊರೆಗಳೆಲ್ಲಾ
ಮೋರೆಕೆಳಗೆ ಮಾಡಿವೆ
ತಾರೆಗಳ ಮಿನುಗು ಬರಿಸೋಗು
ಕುಣಿಯದ ಮಂಕು ನವಿಲು
ನಡೆ ಮರೆತ ಆಲಸಿ ಹಂಸ
ಒಣಗಿದ ಗಿಣಿಯ ತುಟಿ
ಕುಂದಿದ ಬೆಳದಿಂಗಳು
ಜಡ ಹಿಡಿದ ಅಂದುಗೆ
ತೊನೆದಾಡದತೆನೆ ತುಳುಕದಕೊಳ
ಪ್ರಾಯ ಬಂದವಳ ಎದುರು
ಉಳಿದವು ಮುಪ್ಪು
ಅಳಿದವು ಉಪಮೆಗಳು
ಕೊರಗಿದವು ರೂಪಕಗಳು
ಧ್ವನಿಗಿನ್ನು ಬರಿ ದಣಿವು
ಅನಾಥ ಅಲಂಕಾರ
ಕಣ್ವರ ಕಣ್ಣೆದುರು
ವಸಂತ ಕಟು ಕದನ
ಕುಂಡದಿ ಬೆಳೆದ ಸಸಿ
ಹೂವೇ ಮೈಯಾಗಿ
ಕಂಪೇ ಉಸಿರಾಗಿ
ಇಳಿಸಿಕೊಂಡ ಬೇರು
ಕೊರಳ ಉರುಳಾಗಿ
ಅಂಗಳದ ರಂಗವಲ್ಲಿ
ಅಗ್ನಿಕುಂಡ ವಾಗಿ
ಇಕ್ಕಳದಲ್ಲಿ ಸಿಕ್ಕ ಪ್ರಾಣ
ಶಕುಂತಲೆಯ ಪ್ರಾಯ
ಕಣ್ವರಿಗೆ ಕಾಡುವ ಗಾಯ
ಆ ಹಕ್ಕಿ ರೆಕ್ಕೆ ಗರಿಗೆದರೆ
ಎದೆಯೊಳಗೆ ಕೆನೆವ ಕುದುರೆ
ಅವಳೆಂಬ ಹೊನಲು ಚಿಮ್ಮೆ
ದಿಗಿಲು ಕತ್ತರಿಸುವ ಕಡುಗ
ಮುಡಿಯಲಿ ಬೆಂಕಿ ಕಟ್ಟಿಕೊಂಡೋ
ಮಡಿಗೆ ಕೆಂಡ ಮೆತ್ತಿಕೊಂಡೋ
ನಡೆದ ನಡೆಯ ತುಂಬಾ
ಹರಯದ್ದೇ ಬಿಸಿಹೊಂಡ
ದುಷ್ಯಂತನೆದೆಯಲ್ಲಿ
ಸಮುದ್ರ ಹರಿದು
ಮುನಿ ದೂರ್ವಾಸನಲಿ
ಮುನಿಸು ಮೊಳೆತು
ಮೀನ ಕರುಳಲಿ
ಉಂಗುರ ಬೆರೆತು
ಕಟ್ಟಿದ ಗರ್ಭಕೆ
ಭರತನ ಮುಖ ಬರೆದ
ಪ್ರಾಯ ಬರಿ ಪ್ರಾಯವಲ್ಲ
ರೂಪಾಂತರಗೊಳ್ಳುವ ಲಯ.
-ವಾಸುದೇವ ನಾಡಿಗ್
ಕಾಡುವ ನೋವುಗಳಿಗೆ ಕೈ ಬರಹವನಿಡಲೇ?
ಒಲವಿನ ಇನಿಯನ ನೆನಪುಗಳಿಗೆ
ಕಣ್ಣೀರ ಕೈ ತುತ್ತ ಉಣ ಬಡಿಸಲೇ?
ಗುಳಿ ಕೆನ್ನೆಗಳಿಗೆ ಅವನಿತ್ತ ಸಿಹಿ ಮುತ್ತೆಲ್ಲ
ಮೆಲ್ಲಗೆ ಹನಿಯಾಗಿ ಹರಿಯುವಾಗ
ನನ್ನದೇ ಕೈಯಿಂದ ಒರೆಸಿಕೊಳ್ಳಲೇ?
ಅವನಿತ್ತು ಹೋದ ಸಾಂತ್ವನದ ಮಾತುಗಳಿಗೆಲ್ಲ
ಮುಕ್ತಾಯದ ಸಹಿ ಹಾಕಲೇ?
ಅವನಾಡಿ ಹೋದ ಪ್ರೀತಿಯ ಮಾತುಗಳೆಲ್ಲ
ಕತ್ತಲಲಿ ಮರೆಯಾಗಿ ಕಗ್ಗತ್ತಲಾದಾಗ
ನಾ ಕತ್ತಲಲಿ ಸೇರಿ ಹೂತು ಹೋಗಲೇ?
ಬೆಳದಿಂಗಳ ಮರೆಯಲಿ ಅಡಗಿ ಇನ್ನೆಂದೂ ಅವನಿಗೆಟುಕದ ಬೆಳದಿಂಗಳ ಬಾಲೆಯಾಗಲೇ?
ಜ್ಯೋತಿ ಹೆಗಡೆ, ಶಿರಸಿ
ಕನಸಿನ ಸಾಲುಗಳು:
ಫಳ್ಳನೆ ಹೊಳೆದ ನಿನ್ನ
ಮೂಗುತಿಯ ಮಿಂಚಿಗೆ
ಕ್ಷಣಕಾಲ ಸೂರ್ಯನೇ
ತಬ್ಬಿಬ್ಬಾಗಿ ಬೆಚ್ಚಿ ಮರೆಯಾದ
ಅತ್ತಿಂದಿತ್ತ ಸುಳಿದಾಡಿ ನಿನ್ನ
ಹಣೆಗೆ ಸಿಹಿ ಮುತ್ತನೀವ
ನಿನ್ನ ಕಪ್ಪು ಮುಂಗುರುಳಿಗೆ ಹೆದರಿ
ಕ್ಷಣಕಾಲ ವಾಯು ನಿರ್ವಾತನಾದ
ಆಗಾಗ ನಿನ್ನ ಮುಖದ ಅಂಚಲ್ಲಿ
ಮೂಡುವ ಮುತ್ತಿನ ಬೆವರ ಹನಿಗಳಿಗೆ
ಕ್ಷಣಕಾಲ ನಾಚಿದ ವರುಣ
ಭುವಿಗೆ ಮುತ್ತಿಕ್ಕುವುದನ್ನೆ ಮರೆತ
ದೇವಾದಿ ದೇವತೆಗಳೇ ನಿನ್ನ
ಮುಂದೆ ಮೊಣಕಾಲುರಿರುವಾಗ
ಇನ್ನು ಈ ಬಡಪಾಯಿ ಪ್ರೇಮಿಯ ಗತಿ
****
ಕಾಣದ ಕಡಲಿಗಿಂತ
ಕೈಗೆಟುಕದ ಮುಗಿಲಿಗಿಂತ
ಎಣಿಸಲಾಗದ ನಕ್ಷತ್ರಕ್ಕಿಂತ
ಅಳೆಯಲಾಗದ ಧರಣಿಗಿಂತ
ಬರಿಸಲಾಗದ ಬವಣೆಗಿಂತ
ನೀ ಧರಿಸಿದ ಮುತ್ತಿನೋಲೆಗೆ
ಮುತ್ತನಿಟ್ಟು ನಿನ್ನ ಬಣ್ಣಿಸುವ
ಕವಿಯಾಗುವುದೇ ಚಂದ
-ಗಿರಿಯ
ಚೆನ್ನಾಗಿವೆ ಮೂರು ಕವನಗಳು.