ನನ್ನವಳಿಗೆ ಮೊಬೈಲ್ ಸಂದೇಶದ ಕವನಗಳು.
ನನ್ನ ಭಾವನೆಯ ಮುಟ್ಟಿಸಿ ಪ್ರೇಮದ ಸಾಲುಗಳು…!
1. ಬೆಳದಿಂಗಳ ರಾತ್ರಿಯಲಿ,
ಹೊಳೆವ ಬಾನಂಗಳದ ಎರೆಡು ನಕ್ಷೇತ್ರಗಳು ಆಗೋಣವೇ..?
ಧರೆ ನಮ್ಮ ಸುತ್ತ,
ಗ್ರಹ ಮಂಡಲ ನಮ್ಮ ಸುತ್ತ,
ನೋಡುತ ಪ್ರೀತಿಯ ಮಾಡೋಣ,
ಪಥ ಬದಲಿಸದಂತೆ ಜೊತೆ ಸಾಗೋಣ..!
.
2. ಎದೆಯೊಳಗಿನ ನೋವು,
ಹೃದಯದೊಳಗಿನ ಮಾತು,
ನನ್ನ ಎದೆಗೆ ತಲೆ ಇಟ್ಟಾಗಲೇ ಮರೆತೆ.
ನಗು ಈಗ ಮೊಗದೊಳಗೆ,
ಪ್ರೀತಿಯ ಹೊಳೆ, ನಿನ್ನ ಈ ದಿನಗಳ ಒಳಗೆ,
ಇಷ್ಟು ಸಾಕಲ್ಲವೇ ನಾ ಬಂದ ಮೇಲೆ ನಿನ್ನ ಜೊತೆರೆ…?
.
3. ಕತ್ತಲ ರಾತ್ರಿಯಲಿ,
ನನ್ನೊಲವಿನಲಿ ನೀ ರತಿ,
ಚುಂಬನ,
ಮಧು ಮಂಚದಲಿ ಆಲಿಂಗನ,
ಪ್ರೀತಿಯ ರಸಮಯದ ಆ ಕ್ಷಣ,
ಸದಾ ನೀ ಜೊತೆಗಿದ್ದರೇ ಇರುವುದೇ ಚಿನ್ನ…!
.
4. ಸುಂದರಿ,
ನನ್ನ ಮನಗೆದ್ದ ಚೋರಿ,
ಮಿಲನದೊಳಗೆ ನೀ ಚಂದ್ರ ಚಕೋರಿ.
ಪ್ರೀತಿಯಲಿ ತಾಯ ಹೃದಯ ತೋರಿ,
ಸ್ನೇಹ, ಪ್ರೀತಿಯ ಬೆಸುಗೆ ಬೆಸೆದ ಓ ಪೋರಿ,
ನಿನಗೆ ನನ್ನ ಸಲಾಂ ರೀ…!
.
5. ಐ ಲವ್ ಯು ನನ್ನ ಮುನಿಸಿನ ಕನ್ಯಾ ಮನಿ,
ಬಿರುಸಿನ ಬಿಗು ಮಾತಿನ ಚಿಂತಾಮಣಿ,
ಕೋಪದೊಳಗೆ ಪ್ರೀತಿಯ ಪರ್ವತ ವೀಯುವ ನಾರಿ ಮಣಿ,
ಬೇಗ ಸಿಟ್ಟು ಕರಗಿ,
ಐ ಲವ್ ಯು ಅಂತ ಮೆಸೇಜ್ ಮಾಡೇ ನನ್ನ ಮುದ್ದಿನ ಆರಗಿಣಿ.
.
6. ಹೇ ನನ್ನ ಹುಡುಗಿ,
ನನ್ನ ಮನಗೆದ್ದ ಬೆಡಗಿ,
ಕಿರು ನಗೆಯಲಿ ಕೊಲ್ಲುವ ತುಡುಗಿ,
ಏನೇ ಆದರೂ ನೀ ನನಗೆ ಆ ದೇವರು ಕೊಟ್ಟ ಕೋಮಲಾಂಗಿ.
.
7. ಮನೆ ಬೆಳಗ ಬಂದೆ,
ಮನಸಿನಾಳದಲಿ ನಿಂದೆ,
ಕಷ್ಟ-ಸುಖದ ಸಮಬಾಳು ಇನ್ ಮುಂದೆ,
ಪ್ರೀತಿ-ಪ್ರೇಮಕ ಕೊರತೆ ಬಾರದು ಎಂದೆ,
ಮಮತೆ ಮಾತೆಯ ಹೃದಯ ನೀತೋರಲು,
ಸ್ನೇಹ-ತ್ಯಾಗದ ಮಂತ್ರ ಜೊತೆಗೂಡಿ ನೆಡೆಯಲು,
ಸ್ವರ್ಗ ಸುಖದ ಬಾಳು ನಮ್ಮಿಬ್ಬರ ಮಡಿಲು…!
.
8. ಪ್ರೀತಿಯ ಧಾರೆ ಎರೆವೆ,
ಪ್ರೇಮದ ಹೊಳೆಯಲಿ ತೇಲಿಸುವೆ,
ಮಧುರ ಮಿಲನಕಾಗಿ ನಾ ಏಳೇಳು ಜನ್ಮ ಕಾಯುವೆ,
ಮೂರು ಗಂಟಿನ ನಮ್ಮಿಬ್ಬರ ಬಾಳುವೆ,
ಬೇಗ ಬರಲಿ ವಲವಿನ ಕರೆಯೋಲೆಯ ಜೊತೆಗೆ…!
.
9. ಮುತ್ತಿನ ಮಳೆಗರೆವೆ,
ಮೌನದ ಸಿರಿ ದೇವಿ ಅಪ್ಪಿ ಮುದ್ದಿಸುವೆ,
ನನ್ ಎದೆಯ ಗೂಡಲ್ಲಿ ಬಚ್ಚಿಟ್ಟು ಪೂಜಿಸುವೆ,
ನೀನೇ ಹೇಳು ಆಗ,
ನಂದಾ ದೀಪದ ಬಾಳುವೆ ನಮ್ಮಿಬ್ಬರದಲ್ಲವೇ…?
.
10. ಮನಸಾರೆ ಮೆಚ್ಚಿ,
ಪ್ರೀತಿಯ ಹೂ ಬಾಣ ಚುಚ್ಚಿ,
ಆಸೆಯ ಅಂಭರದೊಳಗೆ ನಮ್ಮಿಬ್ಬರ ಪಯಣ.
ಎಂದೂ ಮುಗಿಯದೆ ಸಾಗಲಿ ನಮ್ಮ ಈ ಪ್ರೀತಿಯ ಯಾನ…!
–ವಸಂತ ಬಿ ಈಶ್ವರಗೆರೆ
ಬರೆಯುವ ಕೈ
ಕಣ್ಣು ಮನಸ್ಸು ಒಟ್ಟೊಟ್ಟಿಗೆ
ಓದಲು ನಿಲ್ಲಲಿ
ಎದುರಿನ ಮನಸ್ಸು ಕಣ್ಣುಗಳಲಿ
ಕಂಡೀತೇನೋ ಬವಣೆ
ದಕ್ಕೀತೇನೋ ಬದುಕು..
ಹಾಗೆ ದಕ್ಕಿಬಿಟ್ಟರೂ
ಕಳ್ಳ ಮರೆವು ಇಟ್ಟು
ಒದೆವ ಕ್ರೂರತೆ ಇರಲಿ ದೂರ
ಕಂಡಿಲ್ಲವೆಂಬ ಮಾತ್ರಕೆ
ಅಸ್ತಿತ್ವವೇ ಇಲ್ಲವೆಂದೇನಿಲ್ಲ..
ಬದುಕು ಹಲವು ನೋವು
ಕಣ್ಣು ತುಂಬಿ ದಾರಿ ಮಬ್ಬು
ಹಗಲು ಈ ಇರುಳು
ಯಾರೂ ಓದದ ಮನವ ಹೊತ್ತು
ಅರಸಿ ನಿಲ್ಲುವ ನೀರಾಗದೆ
ಹೊರಟುಬಿಡಲಿ ಕೊಳಗಳಿಂದ
ಪಡೆದು ಮುಕ್ತಿ ಅಪವಾದಗಳಿಂದ..
ನುಡಿದಂತೆ ನಡೆಯದೇ
ಉಳಿದು ಕೊರಗಲಾರದ ತುರ್ತು
ಬದಲಿಸಿ ಮನವ ಕಣ್ಣೊರೆಸಿ
ತುಂಬಿಕೊಳ್ಳಲಿ ಬದುಕು
ಹೊಸ ಕಾವ್ಯವನೇ
ಬರೆದು ಬರೆಯದೇ ಇದ್ದರೂ
ಬರೆವ ಕೈಯೊಂದು ಕೊರಗದಿರಲಿ
ನಡೆಯದ ರೀತಿಗೆ ಲೋಕ ನಿಂದನೆಗೆ..
-ದಿವ್ಯ ಆಂಜನಪ್ಪ
_____
ತೀರದ ಹತ್ತಿರ ಬಂಡೆಯ ಮೇಲೆ,
ಕುಳಿತು ನೋಡಲು ಸೂರ್ಯಾಸ್ತ,
ತಂಪು ಗಾಳಿಗೆ ಮಂದ ಬೆಳಕಿನ,
ಸುಂದರ ದೃಶ್ಯದ ವೇಳೆ,
ಮನಸಲಿ ಮೂಡಿತು ಸೂರ್ಯೋದಯ||
ಸೂರ್ಯನು ನಾಳೆ ಹುಟ್ಟಿ ಬರುವೆ ಎನ್ನುತ್ತಿದ್ದರೆ,
ನಾಳೆ ನಾನು ಮತ್ತೊಮ್ಮೆ ಬರುವ
ಕಾತರ ಕಾಡಿತು ಮನದಲ್ಲಿ,
ನದಿಯ ತೀರ ತಂಪಿನಿಂದ ಕೆಂಪಾಗಿ
ಕಣ್ಣಿಗೆ ಮನಸಿಗೆ ಮುದ ನೀಡಿತ್ತು||
ಜೀವನದ ಸಂಧ್ಯಾ ಕಾಲವು,
ನದಿಯ ತೀರದ ಸೂರ್ಯಾಸ್ತದಂತಿದ್ದರೆ
ಮಂದ ಬೆಳಕಿನಲೂ ತಂಪು ಕಾಣುವ
ಅನುಭವ ದಕ್ಕೀತು,
ಆ ಅನುಭವವೂ ನೆಮ್ಮದಿಯ ನೀಡೀತು||
ಕತ್ತಲಾಗುವ ಮುಂಚೆ ನದಿಯ ತೀರದಲ್ಲಿ
ನಡೆದು, ಮಂದ ಹಾಸ ಬೀರುತ್ತಾ,
ಮತ್ತೊಮ್ಮೆ ಸೂರ್ಯಾಸ್ತದೆಡೆಗೆ ಕಣ್ಣಾಯಿಸಿದಾಗ,
ಸೂರ್ಯನು ಕಾಣದೆ ನೀರಾಸೆಯಾಗಿ,
ನಾಳಿನ ಬರುವಿಕೆಗೆ ಕಾತರಿಸಿತು ಮನವು||
-ಆಶಿತ್