ಕಾವ್ಯಧಾರೆ

ಮೂವರ ಕವನಗಳು: ಮಲ್ಲಿಕಾರ್ಜುನ ಗೌಡ್ರು, ರಾಘವೇಂದ್ರ ಇ. ಆಶಾದೀಪ

೧) ಸಾಕ್ಷಿ:
ನಾನು ಕೊಟ್ಟ ಕಾಣಿಕೆಗಳಿಗೆ
ನಿನ್ನ ನೆನಪುಗಳೇ..
ನನಗೆ ಸಾಕ್ಷಿ.!

ನೀನು ಕೊಟ್ಟ ನೆನಪುಗಳಿಗೆ
ನನ್ನ ಕಣ್ಣೀರ ಹನಿಗಳೇ..
ನಿನಗೆ ಸಾಕ್ಷಿ..!!

೨) ಶ್ರೀಮಂತ:
ನಾನು ನೋವುಗಳ 
ಆಗರ್ಭ ಶ್ರೀಮಂತ

ನಾ ಬಚ್ಚಿಟ್ಟ ಆಸ್ತಿ..
ಯಾರೂ ಕೇಳದ,
ಯಾರೂ ಬೇಡದ,
ಯಾರೂ ಕದಿಯದ,

'ಕರಗದ ಕಣ್ಣೀರ ಹನಿಗಳು'

ನಾನು ನೋವುಗಳ
ಆಗರ್ಭ ಶ್ರೀಮಂತ
-ಮಲ್ಲಿಕಾರ್ಜುನ ಗೌಡ್ರು

 

 

 

 

 


ಕಾಯುವಿಕೆ ಜಗದ ನಿಯಮ

ಕಾಡಿಸದಿರು ಓ ಸಖೀ ನೀ
ನನ್ನಿಂದ ದೂರಾಗಿ
ನಿನ್ನ ಸಾಮೀಪ್ಯದ ಹೊರತು
ನಾ ವಿರಾಗಿ

ನಿನ್ನ ಪ್ರೇಮಾಮೃತದ ಸವಿಯ
ನಾ ಮರೆಯಲಾರೆ
ಎಷ್ಟು ಜನ್ಮವೆತ್ತಿ ಬರಲಿ
ನಿನ್ನನಗಲುವ ಮನ ಮಾಡಲಾರೆ                      
ಅರೆಕ್ಷಣವೂ ನಾ ಬದುಕೆನು
ನಿನ್ನೊಲವನು ಮರೆತು
ನೀರೊಳಗಿನ ಮೀನಾಗಿಹೆ
ನಿನ್ನೊಳಗೇ ಬೆರೆತು        

ಬಿರುಗಾಳಿಯೇ ಬರಲಿ ನನ್ನೆಡೆಗೆ
ಎದೆಗೊಡುವೆನು
ನಿನ್ನ ಕಣ್ಕೊಳದ ಮುತ್ತೊಂದು ಜಾರಿದರೂ
ಸತ್ತೇ ಹೋದೇನು              

ಬಾ ಬೇಗ ಗೆಳತಿ
ಹೃನ್ಮನವನು ತಣಿಸು
ಕಾದಿರುವ ನನ್ನೆದೆಗೆ
ಮುಂಗಾರು ಮಳೆ ಸುರಿಸು.

ಮಿಡಿತವೋ ತುಡಿತವೋ
ನಾನರಿಯೆ
ನಿನ್ನದೇ ಕನವರಿಕೆ
ನಿನಗಾಗಿ ಕಾಯುವಿಕೆ

ಕಾಯುವಿಕೆ ಜಗದ ನಿಯಮ
ಒಬ್ಬರು ಇನ್ನೊಬ್ಬರಿಗಾಗಿ
ಒಂದು ಇನ್ನೊಂದಕ್ಕಾಗಿ
ಹಾಗೆಯೇ ನಾನು ನಿನಗಾಗಿ.

-ರಾಘವೇಂದ್ರ ಇ.


 ದಾರಿ

 ಉರಿದಾದರೂ
 ಬದುಕುವ
 ಬಯಕೆಗೆ ನಿರ್ವಿಕಾರ
 ತಿರಸ್ಕಾರ
 
 ದೂರದೂರದವರೆಗೆ
 ಸಾಗುತ್ತಲೇ ಇದೆ
 ದಾರಿ
 ಕಾಲಿಲಿಟ್ಟಲೆಲ್ಲಾ.
 ಕುಸಿಯುತ್ತಿದೆ
 ನೆಲ
 
 ಸಂಭಾಳಿಸುವ ಕೈಗಳು
 ಚಾಚುವವರೆಗೂ
 ಬದುಕು ಸಾಗಬೇಕು
 ಮುಕ್ತಿ ಸಿಕ್ಕಹಾಗೆ,
 ದಾರಿ ನಿಲ್ಲಬೇಕು
 
 ದಿಙ್ಮೂಢ ಮನಸ್ಸಿನ
 ಕಣ್ಣಿಗೆ
 ಕಂಡದ್ದೆಲ್ಲ ಹಾದಿಯೇ 
 
 ಹೊಸ ಭೂಮಿ
 ಹೊಸ ಮೋಡ
 ಕನಸು ಕಟ್ಟುವ ಕಸುವಿನ
 ಬೆರಗಿಗೆ ಕಲ್ಲು
 ಕಲ್ಲಿನಲೂ ನವೋಲ್ಲಾಸದ ಚಿಗುರು
 
 ಆಹಾ ಎಷ್ಟು ಚೆಂದ
 ಮುಂಜಾವಿನ
 ಕನಸು  
 ಮುನಿಸು ಮುಗಿಸಿ
 ವಾಸ್ತವಕ್ಕಿಳಿದರೆ
 ಯಾವುದಿಲ್ಲಾ ಇಲ್ಲಿ
 ಸಲೀಸು.
 -ಆಶಾದೀಪಾ

 

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಮೂವರ ಕವನಗಳು: ಮಲ್ಲಿಕಾರ್ಜುನ ಗೌಡ್ರು, ರಾಘವೇಂದ್ರ ಇ. ಆಶಾದೀಪ

Leave a Reply

Your email address will not be published. Required fields are marked *