ಏಕ ಶೀಲಾ ಬೆಟ್ಟ
ನೋಡುತ್ತಲೇ ಇದ್ದೇನೆ
ಬೆಳೆಯದೇ ಕೊರಗದೆ
ಕರಗದೆ ಜುಮ್ಮನ್ನದೇ ಕೂತಿದೆ
ಎದೆಯ ಭಾಗಕ್ಕೆ
ಅಂಗಾಲೂರಿ ಸಾಗಿದರೆಷ್ಟೋ ಜನ
ನಾನೂ ಕೂಡಿ.
ಸಾಯದೆ ಹಿಗ್ಗುತ್ತಿದೆ
ಸೊಗಸು ಬಿನ್ನಾಣ.
ನನ್ನಿಂದೆ
ಬಂದೋದವರ ಬಿಸಿಯುಸಿರ ಪಿಸುನುಡಿ
ಏದುಸಿರ ಬಿಚ್ಚು ಮೆದೆ
ಜೀವಂತ ಸದಾ…
ನರ ಹೊತ್ತ ಬೆಳ್ಳಕ್ಕಿಗಳ
ಕೋಮಲ ಪಾದಗಳ ಸ್ಪರ್ಶ ಸೋಕಿ
ನಿರಂತರ ಎಚ್ಚರ ರಸಿಕತೆಯಲಿ
ಒಳಗೊಳಗೆ ಖುಷಿಯ ಮೈದವಡುತ
ಕೂತಿದೆ ಸುಮ್ಮನೆ ಬಿಮ್ಮನೆ
ಯಾರು ಹತ್ತಿದರು
ಅಪ್ಪಿದರು
ಒದ್ದರು
ಬೇಸರವಿಲ್ಲ
ಜಗಜಟ್ಟಿ ಮಲ್ಲನಿಗೆ
ಬೆತ್ತಲ ಮನಸ ಈ ಆನೆಯು
ಏಕಶೀಲಾ ಬೆಟ್ಟ ಎಂಬ ಕಳಸ ಹೊತ್ತು
ಭೂಷಣ ನೀಡಿದೆ
ಈ ಊರಿಗೆ ಮತ್ತು ದೇಶಕೆ.
-ಬಿದಲೋಟಿ ರಂಗನಾಥ್.
ಮನಜನ ಘಾತುಕತನ
ಕಾಣದಾ ದೇವರ ನಂಬುವ ಮನುಜನೇ
ಕಾಣುವಾ ನಿಸರ್ಗವೆಂಬ ದೇವರ ಧ್ವಂಸಿಸುವೆ
ಕಾಣುವಾ ಹಸುವೆಂಬ ಕಾಮಧೇನುವ ಮೇಧಿಸುವೆ
ಯೋಚಿಸೊಮ್ಮೆ ನೀನೆಷ್ಟು ಕೃತಘ್ನತೆಯ ಹೊಂದಿರುವೆ
ಕಾಣದಾ ದೇವರ ನಂಬುವ ಮನುಜನೇ
ಕಾಣುವಾ ಮಕ್ಕಳೆಂಬ ದೇವರ ಅನಾಥರಾಗಿಸುವೆ
ಕಾಣುವಾ ಹೆಣ್ಣೆಂಬ ದೇವತೆಯ ಅತ್ಯಾಚಾರಗೈಯುವೆ
ಯೋಚಿಸೊಮ್ಮೆ ನೀನೆಷ್ಟು ರಾಕ್ಷಸತ್ವವ ಹೊಂದಿರುವೆ
ಕಾಣದಾ ದೇವರ ನಂಬುವ ಮನುಜನೇ
ಕಾಣುವಾ ದೀನರೆಂಬ ದೇವರ ಕಣ್ಣೀರಿಡಿಸುವೆ
ಕಾಣುವಾ ದೈವದತ್ತ ಆತ್ಮಸಾಕ್ಷಿಯನೇ ತೊರೆದಿರುವೆ
ಯೋಚಿಸೊಮ್ಮೆ ನೀನೆಷ್ಟು ನೀಚತನವ ಹೊಂದಿರುವೆ
-ರಾಘವ ಹರಿವಾಣಂ
ಒಂದು ಹಾಸಿಗೆಯ ಕಥೆ!
ಹಾಸಿಗೆ ಹೊಲಿಯುವವನು
ಹಾಸಿಗೆಯ ಮೇಲೆಂದೂ ಮಲಗಿಯೇ ಇರುವುದಿಲ್ಲ!
ಅನ್ನೋದು ನಮಗೆ ಗೊತ್ತಾಗೋದೇ ಇಲ್ಲ
ಹೊಸ ಹಾಸಿಗೆ ಹೊಲಿಸಿಕೊಂಡ ನಮ್ಮ ತಲೆಯೊಳಗೆ
ಗಿರಕಿ ಹೊಡೆಯೋದು
ಹೊಸದಾಗಿ ಮಾಡಿಸಿದ
ಸಾಗುವಾನಿ ಮಂಚದ ಅಳತೆಗೆ ಹಾಸಿಗೆ ಹೊಂದುತ್ತದೆಯೇ
ಹೊಲಿದವನು ಹತ್ತಿಯ ಗಂಟು ಮಾಡಿಟ್ಟಿಲ್ಲ ತಾನೇ
ಅದರ ಮೇಲ್ಯಾವ ಬಣ್ಣದ ಹೊದಿಕೆ ಹಾಕುವುದು?
ಹೊಸ ಹಾಸಿಗೆಯಲಿ ಹಳೆ ಹೆಂಡತಿ!
ಮೈಥುನದ ಸಮಯಕದರ ಮೇಲೆ ಹೂವು ಹಾಕುವುದೊ ಬೇಡವೊ
ಇವಳು ಊರಿಗೆ ಹೋದಾಗ
ಕರೆಸಿಕೊಳ್ಳುವ ಇವಳು ಬಂದಾಗ
ಹೊಸ ಹಾಸಿಗೆಯ ಉಪಯೋಗಿಸಬಹುದೆ?
ಹೀಗೆಲ್ಲ ಯೋಚಿಸುವ ನಮಗೆ ರಾತ್ರಿಯಿಡಿ ನಿದ್ದೆ ಬರುವುದಿಲ್ಲ
ಹಾಸಿಗೆ ಹೊಲಿಯುವವನಿಗೆ ಈ ದು:ಖವಿರುವುದಿಲ್ಲ.
ಅವನು ತನಗೆಂದು ಎಂದೂ ಹಾಸಿಗೆಯ
ಹೊಲಿದುಕೊಂಡಿರುವುದಿಲ್ಲ
ಮಲಗುತ್ತಾನೆ ಚಾಪೆಯ ಮೇಲೆ!
ಅವಳಿ-ಜವಳಿ
ಸುಳ್ಳು ಸತ್ಯಗಳ ನಡುವೆ
ನಿನ್ನೆಯ ಸುಳ್ಳು
ಇವತ್ತಿನ ಸತ್ಯವಾಗಬಹುದು
ಇವತ್ತಿನ ಸತ್ಯ
ನಾಳೆಗೆ ಸುಳ್ಳಾಗಬಹುದು
ಮುಂದೊಂದು ದಿನ
ಸುಳ್ಳು ಸತ್ಯಗಳೆರಡೂ ತೆಕ್ಕೆ ಹಾಕಿಕೊಂಡು
ನಗಬಹುದು!
ಪುರಾಣ ಚರಿತ್ರೆಗಳು
ಅವಳಿಗಳಂತೆ ತೆವಳುತ್ತಿರುವ
ಈ ನೆಲದಲ್ಲಿ
ಏನು ಬೇಕಾದರು
ಆಗಬಹುದು
ಆಗದೆಯೂ ಇರಬಹುದು!
-ಕು.ಸ.ಮಧುಸೂದನ್ ನಾಯರ್
*****
ಮೂವರ ಕವಿತೆಗಳು ಅರ್ಥಪೂರ್ಣವಾಗಿವೆ.
ಮೂರೂ ಪದ್ಯಗಳು ಚೆನ್ನಾಗಿವೆ.