ನಾನೊಬ್ಬ ಮನುಷ್ಯ
ಜಾತಿಯೆಂಬ ಅಡ್ಡಗೋಡೆ ಕಟ್ಟಿ
ನನ್ನೆದೆಯೊಳಗಿನ ಜೇನಗೂಡಿಗೆ
ಬೆಂಕಿ ಸೂಡಿದ ಬಿರುಸಿಗೆ
ಕನಸಿನ ಹಕ್ಕಿ ಸತ್ತೇ ಹೋಯಿತು
ನನ್ನದೆನ್ನುವ ಸ್ವಾರ್ಥಕೆ ರೆಕ್ಕೆ ಬಂದು
ಪುರ್ರೆಂದು ಹಾರಿತು.
ಆದರೂ ಕಾದೆ ತಡೆಯಲಾರದೆ ಸುಮಾರು ದಿನ.
ಮತ್ತೆ ಎದೆಯ ಗೂಡೊಳಗೆ
ಜೇನಗೂಡ ಕಟ್ಟುತ
ನೀನೆ ಬಿಟ್ಟೋಗಿದ್ದ ನೆನಪ ಕೈಲಿಡಿದು
ನೋಡುತ ಅದನ್ನೆ.
ಬಿರುಸ ಬೆಳದಿಂಗಳಿಗು ಹೇಳಿದೆ
ಮನಸು ಕತ್ತಲಾಗಿದೆ
ಕೆತ್ತಬೇಕು ಬೆಳದಿಂಗಳ ತುಣಿಕಿನಿಂದ
ಒಂದು ಹಣತೆ.
ಕೊಡುವುದಾದರೆ ಸಾಲ ಕೊಡು
ಬರುವ ಪ್ರೀತಿಯ ಕಣ್ಣಿಗೆ
ಕತ್ತಲಾಗುವುದು ಬೇಡ
ನನ್ನದೆಯ ಕನಸಿನ ಹಕ್ಕಿ ಕಾಣದಿರುವುದು ಬೇಡ.
ನೀನು ಬಂದು ಮೈದವಡುವುದಿದೆ
ಕಣ್ಣೀರಿನ ಲೆಕ್ಕ ಪಸೆ ರೂಪದಲಿ ಇದೆ
ತೂಗಲಾರದ ಭಾವಕ್ಕೆ ಕಣ್ಮೂಡಿದೆ
ನನಗೆ ಜಾತಿಯೆಂಬುದಿಲ್ಲ
ನಾನೊಬ್ಬ ಮನುಷ್ಯ.
ಬಿದಲೋಟಿ ರಂಗನಾಥ್
** ತಾಯಿ **
ತಾಯಿ..ತಾಯಿ..ತಾಯಿ..
ನನ್ನ ಭುವಿಗೆ ತಂದ
ಮಮತಾಮಯಿ ನೀನು.
ನನ್ನ ಕನಸುಗಳಿಗೆ ಚಿತ್ತಾರ
ಬಿಡಿಸಿದ ಕರುಣಾಮಯಿ ನೀನು.
ಬಾಲ್ಯದ ದಿನಗಳಲ್ಲಿ ತಪ್ಪನ್ನು
ತಿದ್ದು ತೀಡಿದ ಗುರುವು ನೀನು.
ಲಾಲಿಹಾಡುತ್ತಾ, ಚಂದಮಾಮನ
ತೋರಿಸುತ್ತಾ ಹಸಿವನ್ನು ನೀಗಿಸಿದ
ಅನ್ನಪೂರ್ಣೆ ನೀನು.
ತನ್ನ ನಿದ್ದೆಯ ಮರೆತು
ನನ್ನ ಆರೋಗ್ಯವ ಸುಧಾರಿಸಿದ
ಪ್ರೀತಿಯ ಅಮ್ಮ ನೀನು.
ನಿನ್ನ ಈ ಸವಿಯಾದ
ಅಕ್ಕರೆಗೆ ಸೋತೆ ನಾನು.
ಏಳು ಜನ್ಮ ಹುಟ್ಟಿಬಂದರೂ ನಿನ್ನ
ಈ ಋಣವ ತೀರಿಸಲು
ನನಗೆ ಸಾಧ್ಯವೇನು.
ನಿನ್ನ ಈ ಪ್ರೀತಿಗೆ ಸೋತೆ ನಾನು.
ಎಂದೆಂದಿಗೂ ಜೊತೆಯಾಗಿರು
ನನ್ನ ಪ್ರೀತಿಯ ಅಮ್ಮ ನೀನು.
– ಪ್ರವೀಣ ಕಾಗಾಲ.
ಒಲವಿನ ಹಾಯ್ಕುಗಳು
ಕಾಡಿದ ಕಣ್ಣುಗಳು ನಿಂದು
ಕದಡಿದ ಕನಸುಗಳು ನಂದು
ನನ್ನ ಧ್ಯಾನ ನೀನು
ನಿನ್ನ ಮೌನ ನಾನು
ಕನಸಲ್ಲಿ ಕಂಡೆ ಮೊದಲಿಗೆ
ಎದುರಲ್ಲಿ ನಿಂತೆ ಬಗಲಿಗೆ
ಭಾವನೆಗಳು ಕೊರಡಾಗಿದ್ದಲ್ಲಿ
ಸುರಿದೆ ಒಲವ ಸಿಂಚನ ಧಾರೆ
ನನ್ನೆದೆಯ ಮಧುರ ಆಲಾಪನೆ
ನನ್ನೊಳಗಿನ ಆಲೋಚನೆ
ಎಲ್ಲ ನೀ ತಂದ ಭಾವನೆಗಳೆ
ಹೃದಯಕ್ಕೆ ಬೇಕಿಲ್ಲ ಬೇರೆ ಪ್ರಲಾಪನೆ
ಜೀವವಿಲ್ಲದ ನನ್ನ ಕೈ ಬಳೆಗಳು
ಹಾಡುತಿವೆ ರಾಗದಲಿ
ಕುಣಿಯಲು ಬಾರದ ಕಾಲ್ಗೆಜ್ಜೆ
ನಿನ್ನ ಹೆಸರ ಕೇಳಿ ನೃತ್ಯವಾಡುತಿವೆ
ನೀ ಹತ್ತಿರವಿದ್ದರೆ ನಿಂದೆ ಝೇಂಕಾರ
ನೀ ದೂರ ಹೋದೊಡನೆ ಎಲ್ಲವೂ ನಿರ್ವಿಕಾರ
ನನ್ನೊಳಗಿನ ನನ್ನ ಕಳೆವ ನೀನು ಮಾಟಗಾರ
ನಿನಗಾಗಿ ತಂದಿರುವೆ ನೋಡು ಒಲವಿನ ಹಾರ
-ಅಭಿಸಾರಿಕೆ
ಚೆನ್ನಾಗಿವೆ ಮೂರು ಕವನಗಳು.