ಕಾವ್ಯಧಾರೆ

ಮೂವರ ಕವನಗಳು: ಬಿದಲೋಟಿ ರಂಗನಾಥ್, ರಾಜಹಂಸ, ಗ಼ಂಗಾಧರ ಬೆನ್ನೂರ

ಕಾಡೋ ಕುದುರೆಯ ಕನಸು

ದಯೆಗೆ ಅಂಕುಶವಿಟ್ಟ ಪ್ರೀತಿಯೇ
ಜಾತಿಯ ಬೆನ್ನ ಬಿದ್ದು ಯಾಕೋದೆ?
ಕಣ್ಣ ನೀರಲಿ ಸಾವಿರ ಕಣ್ಣುಗಳ ಹುಟ್ಟಿಸಿ.

ಬದುಕು ಜಿಂಕೆಯೋಟ
ಮರೆವು ಮಂಗನಾಟ
ಕುಲಕಿ ಕುಲಕಿ ಬೆರತ ಆ ನೋಟ
ರೆಂಬೆ ಕೊಂಬೆಯಾಗಿ ಚಾಚಿದೆ
ವರುಷ ವರುಷಗಳೇ ಸಂದರು.

ನೀನಿಟ್ಟ ಹೆಜ್ಜೆ ಮಾತಿನಲಿ
ಕಥೆಯಾಗಿದ್ದು ಅಲ್ಪ
ಕಾವ್ಯವಾಗಿ ಕಾಡಿದ್ದೇ ಗಹನ

ಕಾಡೋ ಕುದುರೆಯ ಕನಸು
ಜೂಜಾಟವಾಗಿದ್ದು ಸರಿಯೆ?
ಮೋರಿ ಮೇಲೆ ಕೂರಿಸಿ
ಮಾಡದ ತಪ್ಪಿಗೆ ಹಿಂಡುವ ನೆನಪ
ಬೆಂಬಲಿಸಿದ್ದು ಹಿತವೆ?

ಒಂಟಿ ಮರದ ಮೇಲೆ
ಕೂತ ಒಂಟಿ ಬದುಕಿನ ಹೂವು
ಮುಳ್ಳಾಗಿ ಚುಚ್ಚುತಿದೆ
ದುರುಗುಟ್ಟುತ್ತಿದೆ
ಮೂತಿ ಮುರಿಯಲು
ನಾನು ನಿಶಕ್ತ ಆದಿಮ.

-ಬಿದಲೋಟಿ ರಂಗನಾಥ್

 

 

 

 


ಕಾವೇರಿ ಮತ್ತು ವರದಕ್ಷಿಣೆ


ಕೊಡಗಿನ ಚೆಲುವೆ ಕಾವೇರಿಗೆ
ಕನ್ನಡ ನಾಡು ತವರು ಮನೆ
ತಮಿಳುನಾಡು ಗಂಡನ ಮನೆ

ತಮಿಳು ಎಂಬ ಯುವಕನೊಂದಿಗೆ ಲಗ್ನವಾಗಿ
ಪತಿರಾಯನ ಮನೆಗೆ ಹೋದ ಕಾವೇರಿ
ವರದಕ್ಷಿಣೆಯ ಕಿರುಕುಳಕ್ಕೆ ನೊಂದು ಬೆಂದು
ಎಡಬಿಡದೆ ಹರಿಸಿದಳು ಕಂಬನಿಯ ಝರಿ
ಥೇಟ್ ನನ್ನ ಅಕ್ಕನ ಹಾಗೆ

ಅತ್ತ ಗಂಡನ ಮನೆಯಲ್ಲೂ ಇರಲಾಗದೆ
ಇತ್ತ ತವರು ಮನೆಗೂ ಬರಲಾಗದೆ
ಯಾತನೆ ಸಹಿಸದೆ ಬಂಗಾಳಕೊಲ್ಲಿಗೆ ಧುಮುಕಿದಳು
ನನ್ನಕ್ಕನ ಹಾಗೆ ಕಾವೇರಿಯೂ ಸ್ವರ್ಗವಾಸಿಯಾದಳು

-ರಾಜಹಂಸ

 

 

 

 


ಬಿಂದಿಗೆಯ ಸಾಲು . . . . . . . . . . . . (ಬಿಜಾಪುರದ ನೀರಿನ ಬವಣೆಯ ಬಗ್ಗೆ )

ಬೆಳಕಿನ ಮುನ್ನದ ಕತ್ತಲಲ್ಲಿ ಉದ್ದನೆಯ ಸಾಲಲ್ಲಿ 
ಬಿಂದಿಗೆ, ಬಿಂದಿಗೆಯ ಅಣ್ಣ, ತಮ್ಮ 
ಜೊತೆಗೆ ಕೂಸುಳ್ಳ ಹೆಂಗಸು
ನಿತ್ಯವೂ ಕಾಣುವ ವೇದನೆಯ ಸೊಗಸು. 
ಮೇಲೇರಿದ ಕುದಿಯುವ ಬಿಸಿಲಲ್ಲಿ 
ಮಾಸುತ್ತಿದೆ ಬಿಂದಿಗೆಯ ಬಣ್ಣ, ಸೊರಗಿ ಕರಗುತ್ತಿದೆ 
ನಿರಂತರ ನಡೆದಿದೆ 
ಗುಟುಕಿಸುವ ನೀರಿನ ಹುಡುಕಾಟ, ಕಾದಾಟ.
ನೆತ್ತಿಯ ಸೂರ್ಯನ ಅರಿವಿಲ್ಲ, ಹಸಿವಿನ ಹಂಗಿಲ್ಲ 
ತೊಟ್ಟು ನೀರು ಸಿಕ್ಕರೆ ಸಾಕು, ಎಲ್ಲರನು ಸಲಹ ಬೇಕು 
ಉಟ್ಟ ಸೀರೆಯು ಕೂಡ ಹಸಿಯಾಯ್ತು ಬೆವರಿನಲಿ 
ಅರಿವಿಲ್ಲ ಅವಳಿಗೆ ಕೂಸಿನ ಅಳಿವಿನಲಿ 
ಬಿಸಿಲಿನ ಬೆಳಕು ಸಿರಿವಂತರ ಥಳಕು 
ಕಣ್ಣಿಗೆ ಕತ್ತಲೆಯಾಗಿ ಕನಸು ಬೆತ್ತಲೆಯಾಗಿ 
ತ್ರಾಣವಿಲ್ಲದ ದೇಹಕ್ಕೆ ಭೂಮಿಯೇ ಬಿರಿದಂತೆ 
ಬಿರಿದ ಭೂಮಿ ತನ್ನೊಡಲೊಳಗೆ ಕರೆದಂತೆ ಭಾಸ 
ಇದೆಂತಹ ನೀರಿನ ಹರಸಾಹಸ 
ಯಾತಕ್ಕಾಗಿ ಬದುಕು ಶ್ರಮ ನಿರರ್ಥಕ ಉಸಿರಿನ ಜೊತೆಗೆ 
ಹಲವು ಕತ್ತಲೆಯ ಕನಸು ಒಣಗಿದ ಭಾರದ ತಲೆಯೊಳಗೆ 
ಎಲ್ಲಿಹುದು ನೀರು, ಹೇಗಿಹುದು ನೀರು 
ಇತಿಹಾಸ ಸಾರುತ್ತಿದೆ ಪಂಚನದಿಗಳ ಬೀಡು 
ಊರು ಕೇರಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ 
ಕಾಣುತ್ತಿವೆ ತೊಟ್ಟು ನೀರಿಲ್ಲದ ಗೂಡು 
ಸೂರ್ಯೋದಯದ ಜೊತೆಗೆ ಶುರುವಾದ 
ಬಿಂದಿಗೆಯ ಸಾಲು ಹೆಚ್ಚುತ್ತಲೇ ಇದೆ 
ನೋಡುತ್ತ, ನೀರಿಗಾಗಿ ಕಾಯುತ್ತ 
ದೇಹ ದಣಿಸುತ್ತ ನಿಂತ ಹೆಂಗಸಿನ 
ತಲೆ ಸುತ್ತುತ್ತಲೇ ಇದೆ , ನೀರಿನ ಸುಳಿವಿಲ್ಲ 
ಬಿಂದಿಗೆಯ ಸಾಲು ಕ್ಷೀಣಿಸುವ ಸದ್ದಿಲ್ಲ. .. . . . 
-ಗ಼ಂಗಾಧರ ಬೆನ್ನೂರ(ರಟ್ಟಿಹಳ್ಳಿ) . ಪುಣೆ 

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಮೂವರ ಕವನಗಳು: ಬಿದಲೋಟಿ ರಂಗನಾಥ್, ರಾಜಹಂಸ, ಗ಼ಂಗಾಧರ ಬೆನ್ನೂರ

  1. ಮೂರೂ ಕವನಗಳು ಇಷ್ಟವಾದವು. ಬಿಂದಿಗೆ ಸಾಲು…

Leave a Reply

Your email address will not be published.