ಗೊಹರ್
ಮನದ ಹರಕೆಯು ಕನಸಾಗಿ ಕಾಡಿದೆ
ಕಣ್ಣಿನಾಳದಲಿ ಮಗನೆ
ನೀ ಬೆಳೆದು ಬಳಕುವ ಬಳ್ಳಿಯೊಡಲಲಿ ಹೂಗಳು
ನಗುತಲಿರಲಿ ಘಮ್ಮನೆ.
ಬೆಳೆದು ದೊಡ್ಡವನಾಗಿ ಹಾರದಿರು ನಕ್ಷತ್ರದ ಸುಳಿಗೆ
ಇಲ್ಲೆ ಕೂಡಿಬಾಳೊ ಇರುವ ಗುಡಿಯೆ ಸ್ವರ್ಗ
ನಮಗೆ.
ಸಾವಿರಾರು ವ್ಯೆಭೋಗದಾಭರಣಗಳು ಸಮುದ್ರ
ದೊಡಲಿನ ಸಿಂಗಾರಕೆ?
ಹೃದಯ ಸಮುದ್ರದಲ್ಲಿನ ಮುತ್ತನ್ನು (ಗೊಹರ್)
ಹೊತ್ತ ಎನಗೆ ಯಾವುದೇತರಹಂಗೆ?
ನಡೆ,ನಿನ್ನ ಅಂಬೆಗಾಲುಗಳಲಿ ಹೊನ್ನಕಿರಣಗಳು
ಸೂಸಲಿ
ನಾಳಿನಾಸೆಯ ಎಮ್ಮಮನಗಡಲಲಿ ಹರ್ಷದಲೆಗಳು ಏಳಲಿ.
-ನೂರುಲ್ಲಾ ತ್ಯಾಮಗೊಂಡ್ಲು
ಜಗತ್ತು ….
ಜಗತ್ತು ಸ್ಪೀಡಾಗಿದೆ
ವಿಜ್ಞಾನ ಜೀವಿಗಳ ತಲೆ
ಬೆಳಕಿಗಿಂತ ಫಾಸ್ಟಾಗಿ ಓಡುತ್ತಿದೆ
ಸೈನ್ಸಿನ ಸೃಷ್ಟಿ,
ಮನುಷ್ಯನನ್ನೇ ಮೀರಿದೆ..
ನಿಸರ್ಗ ಹಿಂದಿದೆ,
ತಂತ್ರಜ್ಞಾನ ಮುಂದಿದೆ
ಕಾಲವೂ ಸೋತಿದೆ
ಮೆದುಳಿನರಿವಿಗೆ
ರಾಕೇಟ್ಟಿನ ಚಲನೆಯಿದೆ…
ದಿಗಂತದಾಚೆ ತಲುಪಿದೆ,
ನಿರೀಕ್ಷೆಗಳನ್ನೆಲ್ಲಾ ದಾಟಿದೆ,
ಸಕಲವನ್ನೂ ಮೀಟಿದೆ,
ಕೀಲಿಮಣೆ ತುಳಿದ ಕಾಣದ ಕೈ…..
ಶೂನ್ಯದ ಜೀವಕಣದಲೂ
ಸ್ವಾರ್ಥವಿದೆ ..
ಅದೇಕ್ಕೇನೋ ಹಂಬಲವಿದೆ
ಬಿಡಿಸಿ, ಬಂಧಿಸಿದ
ಸರಪಣಿ ಶಕ್ತಿಯ
ಪಾರ್ಮುಲದಲ್ಲಿಡಲಾಗಿದೆ..
ಕೆದಕಿ ನೋಡಿ,
ಪ್ರಾಕ್ಟಿಕಲ್ ಸಂಶೋಧನೆಯಲಿ
ಬೆತ್ತಲು ಬಹಿರಂಗವಾಗಿದೆ..
ಹೃದಯ ಸಾಗಿಸಿ,
ಯಾರಿಗೋ ಅಂಟಿಸಿ,
ಹೊಸ ಜೀವ ಸೃಷ್ಟಿಸಿದೆ..
ಹೈಟೆಕ್ ಗೋಳದಲ್ಲಿ,
ಹುಟ್ಟುಸಾವಿನ ಗುಟ್ಟೇಂದೋ ರಟ್ಟಾಗಿದೆ..
ದೇವರನ್ನೆ ಹುಟ್ಟಿಸಲಾಗಿದೆ
ಶೃಂಗದ ತುದಿಗೆ ,
ಬ್ರಹ್ಮಾಂಡವೇ ನಿಲುಕುತ್ತಿದೆ..
ಜ್ಯೋತಿಷಿ ಭವಿಷ್ಯ ಹೇಳಿದ್ದಾನೆ
ಅಂಜನದಿ ಕಂಡ ,
ಸುಳ್ಳಿಗೆ ಸತ್ಯದುರುಳು ಸುತ್ತಿದ್ದಾನೆ..
ನೋಡಿ ಬೇಕಿದ್ದರೇ
ಮನೆಯೊಳಗಿನ ಕಾಫೀರ
ನಳಿಕೆಯ ತುದಿಯಲ್ಲಿ
ನಾಳೆಯನಿಂದೇ ಕೊಲುತ್ತಿದ್ದಾನೆ..
ಇಬ್ಬರಿಗೂ ಅಭಯ ಹಸ್ತ ತೋರಿ
ದೇವರೇಕೊ ಸುಮ್ಮನಿದ್ದಾನೆ..
ನಿಸರ್ಗಕ್ಕೆ ನೇಣು ಬಿಗಿದಿದೆ..
ಭೂಮಿ ನಡುಗಿ,
ಹಿಮ ಕರಗಿ
ಜ್ವಾಲೆಯೆದ್ದು
ಪ್ರಳಯವಾಗಿದೆ..
ಆಗಲೇನು ಬಿಡಿ, ಎಲ್ಲದಕ್ಕೂ
ರಿಮೋಟಿನ ಕಂಟ್ರೋಲು ಇದೆ
ಉನ್ಮತ್ತ ನಶೆಗೆ ಜೀವನವೇ
ತಲೆಕೆಳಗಾಗಿದೆ..
ಇರಲಿ ಬಿಡಿ.. ಏನೋ ಕಿಕ್ಕಿದೆ..
ನನಗೂ ಸಾಕಾಗಿದೆ.
ವ್ಯರ್ಥ ಜೀವನ…
ಹೊಸದೊಂದನು ಹುಡುಕುತಿರುವೆ
ಸ್ವಲ್ಪ ಸ್ವಾರ್ಥ, ಚೂರು ಹಗೆ
ಮತ್ತು ಮತ್ತೇರದ ಸುಳ್ಳನು ಬೆರಸಿ
ಸತ್ಯದ ಸೈನೆಡ್ಡಿಗೆ ಅದ್ದಿ,
ಅಸೂಯೆ ಆಮ್ಲದಿಂದ
ಹೊರಬಂದ ಹೊಟ್ಟೆಯುರಿಗೆ
ಮಿಶ್ರಣ ಮಾಡಿದ ಸೂತ್ರದಲ್ಲಿ
ಮಂಕು ಕವಿಯುವ ಔಷಧಿ
ತಯಾರಿಸುತ್ತಿರುವೆ….
ನೀರಲ್ಲಿ ಕರಡುವೆ,,
ವೃಣಗಳಲ್ಲಿ ಬೆರೆಸುವೆ
ಸೊಳ್ಳೆಗಳಲ್ಲಿ ಹರಡುವೆ,
ಗಾಳಿಗೆ ತೂರಿ ಪಸರಿಸುವೆ,
ಎಬೋಲೋಗಿಂತಲೂ ಕ್ಷೀಪ್ರವಾಗಿ
ಉಸಿರೊಳಗೆ ತೂರಿ,
ಅಣುವಿನೊಳಗೆ ಜೀವಕಣದಿ
ಕೊಳೆಸಿ ,
ನಿಮ್ಮೆಲ್ಲರ ಬುದ್ದಿ ಕಳೆಯುವೆ
ಯಾರಿಗೆ ಯಾಕೆ ಬದುಕುತ್ತೇವೆ
ತಿಳಿಯಬಾರದು, ಸೃಷ್ಟಿಸಿದೆಲ್ಲವನೂ
ಸುಟ್ಟು ಹಾಕುಬೇಕು,
ಮತ್ತೆ ಶೋಧಕ್ಕೆಂದೂ ಇಳಿಯ ಬಾರದು
ಪರಿಶುದ್ಧವಾಗಿಸುವೆ…
ಹುಚ್ಚಾಸ್ಪತ್ರೆಯ ಪ್ರಪಂಚವನ್ನು
ಹ್ಹ ಹ್ಹ ಹ್ಹ .. ನಾನು ಸಾಧಿಸುವೆ
ಯೋಚಿಸದಿರಿ..ನಾಶಕ್ಕಿಂತ ವಿನಾಶ ದೊಡ್ಡದು
ಸರ್ವನಾಶದ ಉದ್ದೇಶ ನನ್ನದು….
-ಅಜ್ಜೀಮನೆ ಗಣೇಶ್
ಕೊನರುವ ತಾವಿನಲಿ
ಕೊನರುವ ತಾವಿನಲಿ
ಕನಸುಗಳು ಬಾಯ್ತೆರೆದಿರುತ್ತವೆ
ಯಾವ ಹಾದಿಯಲ್ಲಿನ ಬದುಕು ನೇರಪ
ಎಂಬುದು ತಲಾಸು ಮಾಡುತ.
ಚಿಗುರುವಾಗ,
ಕಾಯಿಲೆ ಕಸಾಲೆಯಲಿ ಕೊರಗಿ
ಮತ್ತೆ ಮೊಗದಲಿ ವಸಂತ ಮೂಡಿ
ಮುಗುಳು ನಗೆಯಲಿ ತೇಲಾಡುವ ಸೊಬಗು.
ಕಾಲನ ಕಾಲುಗಳು
ನಡೆಸುವ ದಾರಿಯಲಿ ಸಾಗಿ
ಮೂಡಿದ ಕನಸುಗಳು,ಮೊಗದೊಬ್ಬರಿಗೆ
ನೆರಳಾಗಿ ಬಲ ತುಂಬುವ ಹಿರಿಮೆ.
ಕನಸುಗಳು ಕೈಚಾಚಿ ತಬ್ಬಿ
ಮುದ್ದು ಮಾಡಿ ಜೊತೆಯಲ್ಲಿ
ಕರೆದೊಯ್ಯದೆ.ಗಂಡನಾಗಿ ಸಂತಾನ ಕರುಣಿಸದರೆ,
ಕೊನರುವ ಕಾರ್ಯ ಮುಂದುವರಿದು
ನೆರಳ ಹಾಸಬಹುದು.
ಮುಂದೆ ಇದ್ದಿದ್ದೆ,
ಬಂಗಾರದ ಬದುಕು
ಶೃಂಗಾರದ ಮನಸು
-ಬಿದಲೋಟಿ ರಂಗನಾಥ್
****
ಕವನ ಪ್ರಕಟಿಸಿದ ಪಂಜು ಸಂಪಾದಕರಿಗೆ ಕೃತಜ್ಞತೆಗಳು.
kavanagalhu chennaagive…hosa danigalha agatya idhe..