"ಇಂದು ನೆನ್ನೆಗೆ ನಾಳೆಯಾದವನು"
ಮಿಣುಕು ಹುಳುಗಳು
ಮಿನುಗಿ ಕರೆದಾವೊ
ಅಗೋ, ಆಗೊಂದು ಈಗೊಂದು
ಕತ್ತಲಿನೂರಿನೊಳು
ಗುಡಿಸಲ ಅಂಚಿನೆದೆಯಲಿ
ಇಣುಕಿ ಇಣುಕಿ ನೋಡಿವೆ
ಪಿಳಿಪಿಳಿ ಕಣ್ಣುಗಳು
ಅದೇನೋ ಹೊಳಪು,
ಅದೇನೋ ಹುರುಪು
ಈ ಕಾಡಿನೂರಿನಲಿ
ಹೀಗೊಂದು ನಡುರಾತ್ರಿಯ
ಮಿಂಚಿನ ಬೆಳಕು ಕರೆದಿಹುದು
ಬಡವನ ನೆತ್ತಿಯ
ಕಣ್ಮಣಿಗಳ ಸೆಳೆಸೆಳೆದು
ಅಂಧಕಾರವ ಮೆಟ್ಟಿ ನಿಂತಿದೆ
ಅದೋ, ಆ ಮಣ್ಣಿನ ಹಣತೆ
ಪಕ್ಕದೂರಿನ ಬೀದಿ ಬೀದಿಯ
ಕೊನೆಯ ತಿರುವುಗಳಲಿ
ಸಾಲುಗಟ್ಟಿ ನಿಂತಿಹವು ಕೈಗಳು ಕೈಚಾಚಿ
ಪಟ್ಟಣವೆಂಬೊ ಸಂತೆಯಲಿ
ಜಾತಿಯ ಹಣೆಪಟ್ಟಿಗಳು ಕಾಲೆಳೆದು ಮೆರೆದಿದೆ
ಮೌಢ್ಯತೆಯ ಕೆಸರಿನಲಿ ಹುದುಗಿಸಿ ಇಳಿಸಿ, ಇಲ್ಲವಾಗಿಸಿ..
ಕರೆದಿದೆ ಹಣತೆ, ತೇಲಿದೆ ಕಣ್ಣು
ಕತ್ತಲೊಳು ಕೈ ತಡವಿ
ಮುಟ್ಟಿದೆಲ್ಲವೂ ಕಿಚ್ಚು, ಸುಟ್ಟವೋ ಬೆರಳುಗಳು
ಕಪ್ಪು ಚರ್ಮದ ಜನರನು ಕತ್ತಲೆಯು ಹೀರಿ..
ಬೆಂಕಿಯನೇ ನುಂಗಿ,
ಬೆಂಕಿಯನೇ ಉಗುಳಿ
ಮೂಡಿ ಬಂದ ಸೂರ್ಯ
ಈ ಕತ್ತಲ ಕಾಡಿಗೆ ಹಗಲಾಗಿ
ಮಿಂಚು ಹುಳುಗಳು-ದಾರಿ ದೀಪಗಳನೂ ಮೀರಿ
ಎಲ್ಲರೆದೆಯಲಿ ಅರಿವ ಬೆಳಕ ತಂದ
ಹಾದಿ ಬೀದಿಗೂ ಎದುರುಗೊಂಡು
ಹುಡುಕಿ ಬಂದ ನೀಡ ಬಂದ
ಕಾಡು-ನಾಡೆಂಬ
ಭೇದವೆಣಿಸದೆ ಸುತ್ತಿ
ದಣಿದು ಮಣಿದು ಬಂದ
ಪಂಜುಗಳ ಹಿಡಿದು
ಎಲ್ಲಾ ಎಲ್ಲೆಯ ಮೀರಿ ಬಂದ
ನಟ್ಟ ನಡುರಾತ್ರಿಗಳ ಲೆಕ್ಕಿಸದೆ
ದೀಪಕೆ ದಾರಿಯಾಗಿ ಬಂದ
ಮೋಕ್ಷದೆಡೆಗೆ ಹೊರಟು ನಿಂತು
ಪ್ರೀತಿಯೆಡೆಗೆ ನುಗ್ಗಿದ
ಜನಮನಕೆ ಸೌಹಾರ್ದತೆಯೇ ಆಗಿ
ತಾನೇ ಉರಿದು ಬೆಳಕಾಗುಳಿದ
ಙ್ಞಾನನಿವನು, ಅರಿವಿನ ಜ್ಯೋತಿಯು
ಉದಯವುಂಟು ಇಲ್ಲ ಅಸ್ತಮವು
ತೇಜಸ್ಸಿನೊಳು ಸೂರ್ಯನಿಗೆ ಅಣ್ಣನು ,
ತಂಪಿಗೆ ಚಂದ್ರನ ತಮ್ಮನು
ವಿದ್ಯೆಗೆ ಪ್ರೀತಿಯು
ಕ್ರಾಂತಿಯ ತಿಳಿನೀರ ಹರಿವು
ರಾತ್ರಿಯ ಗೆದ್ದು ಹಗಲನು ದಕ್ಕಿಸಿಕೊಂಡವನು
ಇವನು ಪ್ರೇರಣೆಯು, ಅರಿವಿನ ಬುತ್ತಿಯು
ಬಡವನೆದೆಯ ಕಂದನ ಕಣ್ಣೀರಿಗೆ
ಕಾಂತಿ ತುಂಬಿದವನು
ಸುಟ್ಟ ಬೆರಳುಗಳ ಕಪ್ಪು ಜನರಿಗೆ
ಬೆಳದಿಂಗಳ ತನುವು ನೀಡಿದವನು
ದೀಪದ ಬುಡದ ಕತ್ತಲ ಕದ್ದು
ದೀವಿಗೆಯ ಷರಾ ತಿದ್ದಿದವನು
ಅಳಿದರೂ ಮುಗಿಯದ
ಹಾಡ ಕಟ್ಟಿ ಹೋದವನು
'ಇಂದು ನೆನ್ನೆಗೆ ನಾಳೆಯಾದವನು'..
ಬುದ್ಧನಿವನು..
ಮಾನವೀಯತೆಯ ಕ್ಷೀರ ತುಂಬಿಕೊಂಡು
ಜಗಕೆ ತಾಯಿಯಾದವನು…
ದಿವ್ಯ ಆಂಜನಪ್ಪ
ನೀ ಬೆತ್ತಲಾಗು …
ಬಿಡದಿರು ತನುಜ ಛಲ ಸಾಧಿಸುವವರೆಗು
ಬಿಡದಿರು ಮನುಜ ಗುರಿ
ಗೆಲ್ಲವವರೆಗು
ಕಳೆಯಬೇಡ ಪ್ರೀತಿ, ವಿಶ್ವಾಸ, ಸ್ನೇಹ
ಮತ್ತದರ ಸಂಗಾತಿ ನಂಬಿಕೆ
ಕಳೆದರೆ ಸಿಗುವುದಿಲ್ಲ ಅದರ ಕಳಕಳಿಕೆ
ಪ್ರತ್ಯಕ್ಷವಾದರು ಪ್ರಮಾಣಿಸದೆ ದೂರಬೇಡ
ಶಾಂತಿ ಮನುಜನಾಗು,
ತಾಳ್ಮೆಯಿಂದ ಸಾಗು,
ದುರ್ಗುಣಗಳಿಗೆ ಅಡ್ಡಯಾಗು
ಹಿಂದೆ ಹೋಗಲು ಯತ್ನಸಬೇಡ,
ಮುಂದೆ ಬಾ ಮನುಜ ಸೋಲಬೇಡ.
ಕವಿತೆಯ ಹುಟ್ಟಿಗು ಬೆತ್ತಲಾಗಬೇಕಯ್ಯ
ಕೆಸರಲ್ಲಿದ್ದರು ಪುಟ್ಟು ನೀ ತಾವರೆಯಂತೆ
ಆಸೆ-ಅಹಂಗಳಿಂದ ಬೆತ್ತಲಾಗು. ..
ಕತ್ತಲಿಂದ ಬೆತ್ತಲಾಗು
ಬೆತ್ತಲಾಗು ತನುಜ
ಬೆತ್ತಲಾಗು ….
ನೀ ಬೆತ್ತಲಾಗು ……
-ಪುನೀತ್
ಅಪ್ಪಾ !
ಅಪ್ಪಾ !
ಅಗದೀ ಒಳ್ಳೆಯವರಂತೆ
ಡೌಲುಮಾಡುವ ಜನರೊಳಗೆ ಚಿತೆಯೇರಿದಾಗ
ಎಲ್ಲವನ್ನೂ ನೋಡುತ್ತ ಹೆಂಗಸರಂತೆ ನಿಂತಿದ್ದೆ.
ಗಂಡಸ್ತನವೇ ಉರಿದೇಳುವಂತೆ
ಅವಳು ಕಿಸಕ್ಕನೆ ನಕ್ಕಳಪ್ಪಾ.
ಬಹುಜನರ ಯವ್ವನದುದ್ವೇಗದಲಿ
ಮೈ ಉಕ್ಕಿ ಹಾಲುಳ್ಳಿಸುವ ತವಕ;
ತೊಡೆ ಬದಲಿಸಲು ಕಾದು ಕುಳಿತಿರುವ
ಗೆಣೆಯ-ಗೆಣತಿಯರ
ಹಗಲೂ ಹೌಹಾರಿಸುವ ನಡತೆ;
ಅಪ್ಪಾ!
ನೀನಿಲ್ಲದ ಜಗತ್ತಿನ
ಕಾಲಿಟ್ಟು ತುಳಿಯುವ ಗುಮಾನಿಯ ಭಯ
ದಿಗಿಲುಗೊಳಿಸಿದೆ
ಅಪ್ಪಾ !
ಜಗವೇ ಗಂಡ-ಅತ್ತೆ-ಮಾವಂದಿರಿರುವ
ಸೂಳೆಯ ಮನೆ
ಅವ್ವನಿಗೆ ಈ ಲೌಡೀ ಸಮಾಜ
ನನ್ನನ್ನೇ ಹತ್ತಿಕ್ಕುವ ಗುಮಾನಿ ಹುಟ್ಟಿ
ನೀನಿಲ್ಲದ ಒಂಟಿ ಬದುಕ್ಕಲ್ಲೂ
ನನ್ನ ಅನಾಥ ಬದುಕಿನ
ಕ್ರೂರ ಕಲ್ಪನೆಯಲ್ಲೇ ಕುದ್ದು
ನರಳುತ್ತಿರುವಳಪ್ಪಾ !
ನೀನಂತೂ ಹತ್ತಿಕ್ಕಲು ನಿಂತ
ಲೌಡಿ ಮಕ್ಕಳೆದುರು ಸನಾತನ ಋಷಿಯಂತೆ
ನಕ್ಕು ಅರ್ಥವಾಗದೇ ಉಳಿದಿದ್ದಿ.
ಕೌದಿ ಹೊದ್ದು ಮುಕಳಿ ಅರಳಿಸಿ
ಹೂಸು ಬಿಡುವ ಜಗತ್ತು
ಇನ್ನೂ ಮೈ ಮುರಿದು ಆಕಳಿಸುತ್ತಿದೆ
ಅಪ್ಪಾ!
ಮುಕ್ಕರಿಸಿ ಬಿದ್ದಾಗ
ಬಾಜು ನಿಂತು ಮುಕ್ಕಳಿಸಿ ಉಗುಳುವ ಜನ;
ಲಡ್ಡು ಹಾದಿರುವ ಕಣ್ಣುಗಳಿಗೆ
ಕಂಡೂ ಕಾಣದಂತಿರುವ
ಅಂಗಾಲು ನೆಕ್ಕುವರ ಬದುಕು;
ಹೊಲೆಯಾ ಎಂದರೆ ಓ ಎನ್ನುವವ;
ಸದಾ ದುಡಿದು
ಬಳಲಿ
ಹಿಕ್ಕಿಯಾರಿಸದೆ ಉಂಡು ಮಲಗುವ ಜನ;
ಮತ್ತೇ ಹಾಳು ಮುಖದಲ್ಲೇ
ಕೂಳು ತಿನ್ನುವ ಜನ;
ಅವಳಿಲ್ಲದ ಬದುಕಿನಲಿ
ನನ್ನ ಬದುಕಿಸುವ ಹಠಕ್ಕಾಗಿ
ಇನ್ನೂ ದುಡಿಯುತ್ತಿರುವ ಅವ್ವನ
ದಡ್ಡು ಬಿದ್ದಿರುವ ಮೈ
ಧರಣಿಯುದ್ದಕ್ಕೂ ಒಟ್ಟೊಟ್ಟಿಗೆ ಬೇರು ಚಾಚಿವೆ.
ಅಪ್ಪಾ !
ಹಸಿದ ಹೊಟ್ಟೆಯ ತುತ್ತಿನ ಕೂಳಿಗೂ
ಹೊತ್ತಿದ ಅನ್ನ ಹುಡುಕುವವರದ್ದೂ
ನಿನ್ನಂತೆಯೇ ಹೇಯ ಬದುಕಪ್ಪಾ..
ಅಪ್ಪಾ !
ನಿನ್ನನ್ನೇ ಹರಿದು ತಿಂದ
ಜನರನ್ನು ಕಣ್ಣಾರೇ ಕಂಡು
ಬದುಕಲ್ಲಿ ಭಗವದ್ಗೀತೆ ಹಾಡಿ
ನಿನ್ನ ಮತ್ತೇ ಬದುಕಿಸಿದ್ದಾಗಲೇ ಅಪ್ಪಾ
ಸುಡುಗಾಡಿನೆದುರು ಅನಾಥನಂತೆ ಹೊರಟಾಗ
ಮೇಲೆದ್ದು ತಬ್ಬಿ ಬಿಕ್ಕಳಿಸಿದಂತಾಗುತ್ತದಪ್ಪಾ
ಅಪ್ಪಾ !
ನಿನ್ನಂತೆ ನನ್ನದೂ ಮುಸುಮುಸು ಅಳುವ ಹೆಂಗರುಳೇ.
ಕರುಳು ಉಮ್ಮಳಿಸಿ ಬರುತ್ತದೆ
ಬಿಕ್ಕಳಿಸಬೇಡಪ್ಪಾ !.
ಎ !
ತುಗಲಿ ಗಿಡದ ತೊಗಲಿನಪ್ಪಾ !
ಬದುಕಿನ ಸಕ್ಕುಗಟ್ಟಿದ ತೂತುಗಳಿಗೆ
ಕಲ್ಲು ತಗಡಿನ ನೂಲು ಹೆಣದಿದ್ದಿ
ನಶೆಯೆರಿದೀ ಲೌಡಿ ಸಮಾಜಕ್ಕೆದೆಗೊಟ್ಟು ನಿಲ್ಲಲು-
ಕೊಳೆತ ಕಣ್ಣಿನ ಜನರು
ಅಂಗಾತ ಮಲಗಿದೆದೆ ಮೇಲೆ
ಅಂಗಾಲಿಟ್ಟು ನಡೆದಾಗ
ನಕ್ಕು ನೆಲೆಯೂರಿ ಬದುಕಿ
ಕಿತ್ತು ತಿನ್ನುವ ಹಸಿವಲ್ಲೇ
ಬದುಕಿನ ಪಾಠ ಕಲಿಸಿ
ಕಿರುಬೆರಳಿನ ಮೇಲೆ
ಇಡೀ ದೇಹ ನಿಲ್ಲಿಸುವ ಹುಮ್ಮಸ್ಸು
ತುಂಬಿದ್ದಿ.
ಬಿಡಿಗಾಸಿನಲಿ ಬದುಕು ನಡೆಸಿದ
ಬಿಡಿಗಾಸಿನಪ್ಪಾ!
ನಿನ್ನದು ಉಗುಳು ನುಂಗಿದ ಬದುಕು
ಅಪ್ಪಾ !
ನೆನಪುಗಳು ಕನಸಿನ ದೂರದ ಹಾದಿಗೆ
ಚಿಮಣಿ ಬೆಳಕಾದರೆ ಸಾಕು
ಹೊರಳಿ ಹರದಾರಿ ನಡೆವೆ
ಇಷ್ಟು ಸಾಕಪ್ಪಾ !
ಕರಿನೆರಳಿನ ಮೇಲೆ ಹೊಡೆಮರಳಿ
ಎಡಗಾಲಿಟ್ಟು ಮೇಲೆದ್ದು ನಿಲ್ಲಲಿಕ್ಕೆ.
ಮತ್ತೆ
ನಿನ್ನಂತೆಯೇ ತಳವೂರಿ ಬದುಕಲಿಕ್ಕೆ..
-ದುರ್ಯೋಧನ (ರವೀಂದ್ರ ಕತ್ತಿ)