ಕಾವ್ಯಧಾರೆ

ಮೂವರ ಕವನಗಳು: ಜ್ಯೋತಿ ಹೆಗಡೆ, ಬಿದಲೋಟಿ ರಂಗನಾಥ್, ಜಯಶ್ರೀ ದೇಶಪಾಂಡೆ


 ಗೆಳತಿ..
ನೀ ಜೊತೆಯಿದ್ದಾಗ
ನಾನಾಗಿದ್ದೆ ಕೇವಲ ಪ್ರೇಮಿ.

ನೀ ದೂರಾಗಿ ನೆನಪುಗಳನೆಲ್ಲ
ಬಿಟ್ಟು ಹೋದ ಮೇಲೆ
ನಾನಾಗಿರುವೆ ಪ್ರೀತಿಯ ಆರಾಧಕ!
ಅದೆಷ್ಟೋ ರಾತ್ರಿ ಗರ್ಭವ ಸೀಳಿ
ಬರುವ ಮಳೆಯಲಿ
ನೆನೆ ನೆನೆದು..
ಮಿಂಚು ಹುಳುಗಳ ಬೆಳಕನೇ
ಸಾಲಾಗಿ ಪೋಣಿಸಿ ಬರೆದಿರುವೆ!!

ರಾತ್ರಿ ಚಿಮಣಿಯ ಮಂದ ಬೆಳಕಲಿ
ರಾಡಿಯೆಬ್ಬಿಸಿದ ಮಳೆ ನೀರಲಿ ನಿನ್ನ ಪ್ರತಿಬಿಂಬವ ಹುಡುಕಿರುವೆ..
ಎಲ್ಲ ವ್ಯರ್ಥ,,
ನೀನಿಲ್ಲದ ಪ್ರತಿಬಿಂಬ ನಿನ್ನದೇ ನೆನಪಾಗಿ ಕಾಡಿದೆ..
​ಎದೆಯಲೆಲ್ಲ ನೆನಪ ನೀರೊಂದೇ ಉಳಿದಿದೆ
ಸಾಲು ಕವನವಾಗಿ ನಿನಗಾಗಿ ಕನವರಿಸಿ ಮಲಗಿರುವ
ಹಾಳೆಗಳನೆಲ್ಲ ಮಡಿಸಿ..
ದೋಣಿಯನಾಗಿಸಿ
ನನ್ನೆಲ್ಲ ಕವನದ ಸಾಲುಗಳ ಸರಕುಗಳನಾಗಿಸಿ
ತೇಲಿ ಬಿಡುವೆ ನಿನ್ನೆಡೆಗೆ…..

ನಾನೊಮ್ಮೆ ಶಾಂತನಾಗಿಬಿಡುವೆ
ಎಲ್ಲ ನಿನ್ನೆಡೆಗೆ ತೇಲಿ ಬಿಟ್ಟು..
ಎದೆಯ ನೀರನೆಲ್ಲ ಬಸಿದು
ಬದುಕಿಬಿಡುವೆ..
ಪ್ರಾಣವಾಯುವಿಗೊಂದಿಷ್ಟು ಜಾಗ ಕೊಟ್ಟು!!!!

​ಜ್ಯೋತಿ ಹೆಗಡೆ, ಶಿರಸಿ

 

 

 

 


ಧರೆಗಿಳಿದ ಚಂದ್ರನಗು

ಅಂತರಂಗದ ಕೂಸು
ಎಷ್ಟೋ ದಿನದ ನಿರೀಕ್ಷೆಯ ಫಲ
ಬರುವ ಘಳಿಗೆ ಹೆಜ್ಜೆ ಹೆಜ್ಜೆಗೂ ತಳಮಳ ಹೆಚ್ಚಿ
ಗೆಜ್ಜೆ ಕಟ್ಟಿದ ಹೃದಯದ ಘಂಟೆ.

ಅನುರಾಧಾ ನಕ್ಷೆತ್ರವು ಬಂದು
ಹೊಳೆಯೊ ಮಗುವಿಗೆ ಆಶೀರ್ವದಿಸಿ
ಬದುಕು ಬೆಳಗು ಎಂದ ಕ್ಷಣ
ಮಗುವಿನ ಮೊಗದಲಿ ಚಂದ್ರ ನಗು

ಆಕಾಶದಿಂದ ಮಲ್ಲಿಗೆ ಹೂಗಳು
ಸರಬರನೆ ಸುರಿದು,ಕರ ಜೋಡಿಸಿ ಕುಂತವು
ಮಗುವಿನ ಚಂದ್ರ ನಗುವಿಗೆ ಸೋತು.
ಆ ಕ್ಷಣ ನಾನೂ ಮಗುವಾಗಿ
ಕಣ್ಣುಗಳ ಕುಲಕಿದ್ದೆ.

ನನ್ನವಳು ಹೆತ್ತ 
ಮಡಿಲ ಮಗುವಿನ ಚಿರಾಟದಲಿ
ಅಣಕವಾಡಿದವರು ಕೊಚ್ಚಿ ಹೋದರು
ಮನದ ನೋವಿಗೆ ನಿದ್ದೆಗೆಟ್ಟು
ಕಣ್ಣೀರು ಸುರಿಸಿದ ರಾತ್ರಿಗಳು 
ಮೂರ್ಛೆ ಹೋದವು.

ನನ್ನದೇ ಕೆನ್ನೆಗುಳಿ
ನನ್ನವಳ ರೂಪ ತದ್ರೂಪ ಮಗುವಿನದು
ನೋಡಿದಳು ಮಗುವ ನಗುವ ಚಲ್ಲುತ,
ನನ್ನ ನೋಡುತ..,ನನಗೋ ಕಣಕಾಲಲಿ ಗೆಜ್ಜೆನಾದ
ಮುಂದಿನ ಬದುಕಿನ ಬೆಳಕ ನೆನದು.

ಬಿದಲೋಟಿ ರಂಗನಾಥ್

 

 

 

 


ಚಿರ೦ತನ.                                                                                                         

ದೂರದ ಲೋಕಕ್ಕೆ ಚಲಿಸುತಿವೆ ಇಲ್ಲಿ ಬೆಳಗುವ ದೀಪಗಳು,
ದಾರಿ ಹುಡುಕುವ ಯತ್ನದಲ್ಲಿ ಭೂಮಿಯ ಬೀಳ್ಕೊಟ್ಟು,
ಯುಗಯುಗಾ೦ತರಗಳಿ೦ದ…
ಕಣ್ಣು ಕ೦ಡಿಲ್ಲದ ಲೋಕಕ್ಕೆ.!.ಅತ್ತ ಚಲಿಸಿದ 
ಚೇತನಗಳು ನಡುನಭದಲ್ಲಿ ಮಾಯವಾಗುತಿರುವುದೆಲ್ಲಿ?
ತಿಳಿಯದ ಹೊಳೆಯದ ಈ ಸಮಯದಲ್ಲಿ ವ್ಯೋಮದಿ೦ದಿಳಿದ 
ದಿವ್ಯಧನು ಅತ್ತಣಿ೦ದಿತ್ತ  ಕರೆದೊಯ್ಯತಿದೆಯೇ ಕೈ ಚಾಚಿ ? 

"ಹೋಗಿ ಬ೦ದವರಿಲ್ಲ ..ವರದಿ ತ೦ದವರಿಲ್ಲ" -ಸತ್ಯ ನುಡಿದರವರು 
ಅ೦ತೆಯೇ ಹೋಗಿ ಬರಲು ದಾರಿ ಕ೦ಡವರಿಲ್ಲ…!
ದೀಪಗಳಿವು ಹೊರಟಾಗ ಸ್ಫುರಿಸಿ ಮನೋತೇಜ, ಸುತ್ತ ಮುತ್ತಿದ 
 ಅಡ್ಡಿಗಳ ಸರಿಸಿ,  ತೇಲಿ-ಚಲಿಸಿ ಬಾನ೦ಚಿಗೆ ಮುಟ್ಟಿ
ಮರೆಯಾದುದೆಲ್ಲಿ …ಎಲ್ಲಿ ..ಎಲ್ಲಿ?!
ಅ೦ತ್ಯದೊಳವುಗಳಿಗೆ  ನೆಲೆ ಇರುವುದಾದರೂ ಎಲ್ಲಿ? 
ತಿಳಿಯದೆಯೇ ಹೇಳುವುದು ಮಿಥ್ಯಕ್ಕೆ ಸಮ ತಾನೇ? 

ಮೃಜ್ಜನಿತ ದೇಹಗಳು ಮತ್ತೆ ಹೋಗುವುದೆಲ್ಲಿ 
ಅ೦ಕ ಮುಗಿಸಿದ ಗಳಿಗೆ ಪರದೆ ಜಾರುವುದಿಲ್ಲಿ…ಕರೆಯೊ೦ದು 
ಕರೆದೊಯ್ದು ನಿಲಿಸುವುದು ಬಾನ೦ಚಿನಲ್ಲಿ…
ಕ೦ಡಿಲ್ಲ ನಾವದನು ಊಹೆ ನಮ್ಮದು ಮಾತ್ರ,…
ಹೋಗುವುದು  ಅನಿವಾರ್ಯ…ಹೋದ ದಾರಿಯ 
ಪರಿಚಯ ಕೊಡುವವರು ಬಳಿಯಿಲ್ಲ  ಅಲ್ಲಿ!!

ಎತ್ತೆತ್ತಲೋ ತಿರುಗಿ ಮತ್ತಲ್ಲಿಗೇ ಬರುವ ಜೀವಚಕ್ರದ ಶೋಧ …!
ಅನ್ವೇಷಣೆಗಳೆಲ್ಲಿ -ಶೂನ್ಯಸದೃಶ ಕ್ಷಣವು..
ಆದರೂ ನಿರ೦ತರ. ..ಮರಳಿ ಮಣ್ಣಿಗೆ …ಮರಳಿ ಭೂಮಿಗೆ!!

ಜಯಶ್ರೀ ದೇಶಪಾಂಡೆ 

 

 

 

 


*****

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಮೂವರ ಕವನಗಳು: ಜ್ಯೋತಿ ಹೆಗಡೆ, ಬಿದಲೋಟಿ ರಂಗನಾಥ್, ಜಯಶ್ರೀ ದೇಶಪಾಂಡೆ

  1. ಜ್ಯೋತಿ ಹೆಗಡೆಯವರ ‘ಗೆಳತಿ ‘ದೂರ ಆದಾಗ ಕಾಡುವ ಪ್ರೀತಿಯ ವ್ಯಾಕುಲತೆ,ಬಿದಲೋಟಿ ರಂಗನಾಥರ ‘ಧರೆಗಿಳಿದ ಚಂದ್ರನಗು’ಬಹುದಿನಗಳಿಂದ ಕವಿದ ಕತ್ತಲನ್ನು ಕರಗಿಸಿದ ಬೆಳದಿಂಗಳು ನಗುವಾಗಿ ಅನುಭವಿಸಿದ್ದು ಮತ್ತು ಆತ್ಮಕೆ ಸಹ್ಯವಾದ ತೃಪ್ತಭಾವ ಕವಿಯ ಅಂತರಾಳದಿಂದ ಹೊಮ್ಮಿದಂತಹುದಾಗಿವೆ ಮತ್ತು ಜಯಶ್ರೀ ದೇಶಪಾಂಡೆರವರ ‘ಚಿರಂತನ ‘ಬದುಕು ಕ್ರಿಯಶೀಲವಾದುದು, ಇಲ್ಲಿ ಬೆಳಗುವ ಬೆಳಗುತ್ತಿರುವ ದೀಪಗಳು ಮತ್ತೆಲ್ಲಿಗೊ ಹೋಗುವುದಾದರೂ ಎಲ್ಲಿಗೆ? ಆ ಅನೂಹ್ಯ ಜಗತ್ತಿನರಿವಿಲ್ಲ ನಮಗೆ. ಇದ್ದರದು ಬರಿ ಭ್ರಮೆ, ಊಹೆ ಮಾತ್ರವೇ ನಿಜ.ಮತ್ತೆ ಮತ್ತೆ ಆ ದೀಪಗಳು ಈ ಭೂಮಿಗೆ ಇಳಿಯಲೇಬೇಕು ಎನ್ನುವಂತಹ ಭಾವನೆ ಕವನದ ಸಾಲ್ಗಳಲಿ ಜೀವ ತುಂಬಿವೆ.ಮೂರು ಅರ್ಥಗರ್ಭಿತವಾಗಿವೆ.

  2. dharegilhida chandranagu kavana tanna sahajavaada abhivyaktiyinda gamana sekeheyuttade..svanubhava yaavatuu barahavannu praamanika mattu sundaragolsisuttade emba maatige ee kavana udaaharanhe.

Leave a Reply

Your email address will not be published. Required fields are marked *