ಮಸಣದ ಹೂವು:
1.ವಿಕೃತ ಕಾಮಿಗಳ
ಕಾಮದಾಹಕೆ ಬಲಿಯಾದ
ಹುಡುಗಿಯ ಗೋರಿಯ ಮೇಲಿನ
ಹೂವಲ್ಲೂ ಅದೇ ಮುಗ್ಧ ನಗು…
ಆದರೆ ಇಲ್ಯಾರೂ ಹೊಸಕುವವರಿಲ್ಲ.
2.ಇಂದು
ಮಸಣದಲ್ಲೂ
ನೀರವ ಮೌನ
ಆಕೆ ಬಂದಿದ್ದಾಳೆ
ಕಾಮುಕರ
ಕಾಮಕ್ರೀಡೆಗೆ
ಪ್ರಾಣತೆತ್ತು.
3.ಹೆಣ್ಣೊಡಲ ಮಾತು…
ಯಾರ ಭಯವಿಲ್ಲ ನನಗೆ
ಹುಟ್ಟಿಬಂದರೆ
ಮಸಣದ ಹೂವಾಗಿ.
4.ಹೆಣ್ಣು ಸುರಕ್ಷಿತ
ಒಂದು ತಾಯಿಯ
ಗರ್ಭದಲ್ಲಿ,
ಇನ್ನೊಂದು
ಮಸಣದ
ಗೋರಿಗಳಲ್ಲಿ.
5.ಮಸಣದಲ್ಲಿ
ನನ್ನವಳ
ಗೋರಿಯ ಮೇಲೆ
ಅರಳಿದ್ದ ಹೂವೂ
ನನ್ನ ನೋಡಿ ನಕ್ಕಿತ್ತು
ಅವಳು ನಕ್ಕಂತೆ.
6.ಎಷ್ಟಿದ್ದರೂ ಏನಿದ್ದರೂ
ಸುಖನಿದ್ರೆ ಮಾತ್ರ
ಮಸಣದ ಗೋರಿಗಳಲ್ಲಿ.
7.ಇದ್ದದ್ದು ಬಿಟ್ಟು
ಇರದಿರುವುದರ ಕಡೆ
ಬೇಡ ತುಡಿತ,
ಇಂದಲ್ಲ ನಾಳೆ
ಮಸಣದ ಗೋರಿಗಳಲಿ
ನೀನಾಗುವೆ ಬಂಧಿತ.
8.ಬಡವ ಶ್ರೀಮಂತನೆಂಬ
ಕೀಳಿಲ್ಲ,
ಗಂಡು ಹೆಣ್ಣೆಂಬ
ಭೇದವಿಲ್ಲ,
ಸತ್ತ ಹೆಣಗಳಿಗೆಲ್ಲ
ಒಂದೇ ಜಾತಿ…
ಕೊಳೆತು
ನಾರುವ ಜಾತಿ.
9.ತೊಟ್ಟಿಲೊಳಗೆ
ಜನಿಸಿದ
ಆಸೆಗಳಿಗೆ,
ಮಸಣದ
ಗೋರಿಗಳಲ್ಲಿ
ಸಮಾಧಿ.
10.ಸತ್ತ ನನ್ನೆಲ್ಲ
ಕವಿತೆಗಳ ಮರುಹುಟ್ಟು
ಮಸಣದ ಹೂವು.
ತಂಪು ನೀಡದ ಮಳೆ
ಮಳೆ ಜೊರಾಗಿದೆ
ನನ್ನೂರಿನ ಕಡಲಿನ
ಭೋರ್ಗರೆತ ಕೂಡ
ಮಳೆ ಜೋರಾಗಿದೆ
ನದಿಗಳಿಗೆ ನೆಗಸ ಬಂದಿದೆ
ಪ್ರವಾಹವಾಗಿ ಹರಿಯುತ್ತಿದೆ.
ಮಳೆ ಜೋರಾಗಿದೆ
ದುಮ್ಮಿಕ್ಕುವ ಜಲಪಾತ
ಮೈದುಂಬಿ ದುಮ್ಮಿಕ್ಕಿದೆ
ಮಳೆ ಜೋರಾಗಿದೆ
ಊರು ಕೇರಿ ಗದ್ದೆ
ಎಲ್ಲಡೆಯೂ ನೀರು ನಿಂತಿದೆ
ಮಳೆ ಜೋರಾಗಿದ್ದರೂ
ಈತ ಬರಲೇ ಇಲ್ಲ
ನಾನು ತಂಪಾಗಲೇ ಇಲ್ಲ
……………..ಸಿರಿ
ಮತ್ತೊಮ್ಮೆ ಅವತರಿಸು ಸತ್ಯಾವತಾರ
ಎಲ್ಲೆಲ್ಲಿ ನೋಡಿದರೂ ಕಾಣುತಿದೆ ಅತ್ಯಾಚಾರ
ಮಿತಿಮೀರಿದೆ ಅನ್ಯಾಯ ಅಧರ್ಮಗಳ ಕಂದಾಚಾರ
ಅನ್ಯಾಯಕ್ಕೊಳಗಾಗಿ ಮರುಗಿದೆ ಅಚಾರ ವಿಚಾರ
ಮತ್ತೊಮ್ಮೆ ಅವತರಿಸು ಸತ್ಯಾವತಾರ
ಎಲ್ಲೆಲ್ಲೂ ಆಸುರೀ ಶಕ್ತಿಗಳ ವಿಜೃಂಭಣೆ
ಭೂಮಂಡಲದ ಯಾವ ಜೀವಿಗೂ ಇಲ್ಲ ರಕ್ಷಣೆ
ಮರೆಯಾಗಿದೆ ನೀತಿ ನಿಯಮಗಳ ಶಿಷ್ಟಾಚಾರ
ಮತ್ತೊಮ್ಮೆ ಅವತರಿಸು ಸತ್ಯಾವತಾರ
ಸ್ವಾರ್ಥದ ಪರಮಾವಧಿ ತಲುಪಿರುವನು ಮಾನವ
ಧರೆಯನು ಹಾಳುಗೆಡವಿ ಆಗುತಿರುವನು ದಾನವ
ಸರ್ವವ್ಯಾಪಿಯಾಗಿದೆ ಮನುಷ್ಯನ ವಿಕಾರ
ಮತ್ತೊಮ್ಮೆ ಅವತರಿಸು ಸತ್ಯಾವತಾರ
ನೋವಿನಿಂದ ಕಣ್ಣೀರು ಸುರಿಸುತಿಹಳು ತಾಯಿ ಭಾರತಿ
ವಿದೇಶೀ ವ್ಯಾಮೋಹಕೆ ಬಲಿಯಾಗುತಿದೆ ಸಂಸ್ಕೃತಿ
ಶಾಂತಿ ನೆಲೆಸಿ ಜಗವು ಕ್ಷೇಮವಾಗಿರಲಿ ನಿರಂತರ
ಮತ್ತೊಮ್ಮೆ ಅವತರಿಸು ಸತ್ಯಾವತಾರ
-ಲಕ್ಷ್ಮೀಶ ಜೆ.ಹೆಗಡೆ
One thought on “ಮೂವರ ಕವನಗಳು: ಗಣೇಶ್ ಖರೆ, ಶ್ರೀದೇವಿ ಕೆರೆಮನೆ, ಲಕ್ಷ್ಮೀಶ ಜೆ.ಹೆಗಡೆ”