ಕಾವ್ಯಧಾರೆ

ಮೂವರ ಕವನಗಳು: ಕು.ಸ.ಮಧುಸೂದನ್‍ ರಂಗೇನಹಳ್ಳಿ, ಅನುರಾಧಾ ಪಿ ಎಸ್., ನಾಗೇಶ ಮೈಸೂರು

 

 

ವ್ಯತ್ಯಾಸ!

ನಾನು ಗೇಯುತ್ತ ಬಂದೆ
ನೀನು ತಿಂದು ತೇಗುತ್ತ ಬಂದೆ

ನಾನು ಗೋಡೆಗಳ ಕೆಡವುತ್ತ ಬಂದೆ
ನೀನು ಮತ್ತೆ ಅವುಗಳ ಕಟ್ಟುತ್ತ ಬಂದೆ

ನಾನು ಭೇದಗಳ ಇಲ್ಲವಾಗಿಸುತ್ತ ಬಂದೆ
ನೀನು ಹೊಸ ಭೇದಗಳ ಸೃಷ್ಠಿಸುತ್ತ ಬಂದೆ

ನಾನು ಸಹನೆಯ ಕಲಿಸುತ್ತ ಬಂದೆ
ನೀನು ಸಹಿಷ್ಣುತೆಯ ಭೋದಿಸುತ್ತ ಬಂದೆ!

***
ವಾಸ್ತವ

ಮಂದಿರಕ್ಕೆ ಹೋದೆ
ಮಸೀದಿಗೆ ಹೋದೆ
ಇಗರ್ಜಿಗೆ ಹೋದೆ
ದೇವರು ಸಿಗಲೇ ಇಲ್ಲ!

ಬೆಟ್ಟಗಳ ಹತ್ತಿದೆ
ಕಣಿವೆಗಳ ದಾಟಿದೆ
ನದಿಗಳ ಈಜಿದೆ
ನಿಸರ್ಗದಲೊಂದಾದೆ

ಆತ್ಮದೊಳಗೊಂದು ಬೆಳಕು ಹರಿಯಿತು
ಒಳಗಿರುವುದ ಬಿಟ್ಟು ಹೊರಗೇನ ಹುಡುಕುವೆ?
ಅಶರೀರವಾಣಿಯೊಂದು ಮೊರೆಯಿತು!
-ಕು.ಸ.ಮಧುಸೂದನ್‍ ರಂಗೇನಹಳ್ಳಿ

 

 

 

 


ಅಣ್ಣ ಅಣ್ಣ ಕತ್ತಲೆಂದರೆ ಬಹಳ ಹೆದರಿಕೆ ನೋಡಣ್ಣ
ಗವ್ವೆನ್ನುತ್ತೆ, ಸೊಯ್ಯೆನ್ನುತ್ತೆ ಬಿಡದೆ ಕಪ್ಪಗೆ ಕಾಡುತ್ತೆ
ಕತ್ತಲ ಕಂಡರೆ ಭಯವೇನಮ್ಮ ನನ್ನ ಮುದ್ದು ತಂಗ್ಯಮ್ಮ
ಸೂರ್ಯನ ಕಾಲಿಗೆ ಸರಪಳಿ ಹಾಕುವೆ, ಇನ್ನವ ಹೋಗುವುದಿಮ್ಮ.

ಅಣ್ಣ ಅಣ್ಣ ಮೇಷ್ಟ್ರು ಅಂದರೆ ಇಷ್ಟವೆ ಇಲ್ಲ ನೋಡಣ್ಣ
ಗದರಿಸುತಾರೆ ಹೆದರಿಸುತಾರೆ ಕೈಯ್ಯಲಿ ಬಾರುಕೋಲು ಬೇರೆ.
ಮೇಷ್ಟ್ರು ಅಂದರೆ ಮುನಿಸೇನಮ್ಮ ನನ್ನ ಮುದ್ದು ತಂಗ್ಯಮ್ಮ
ಶಾಲೆಯ ಮಹಿಳಾರಾಜ್ಯವ ಮಾಡುವೆ, ಬರೀ ಮಿಸ್ಸುಗಳೆ ನೋಡಮ್ಮ.

ಅಣ್ಣ ಅಣ್ಣ ಪಕ್ಕದ ಬೀದಿಯಲಿ ನಾಯಿಯ ಗದ್ದಲ ನೋಡಣ್ಣ
ಬೌವ್ವೆನ್ನುತ್ತೆ ಹಿಂಬಾಲಿಸುತ್ತೆ ಕಣ್ಣಲಿ ಗುಮ್ಮನ ಕಳೆಯಣ್ಣ
ನಾಯಿ ಕಂಡರೆ ನಡುಗುವೆಯೇನೆ ನನ್ನ ಮುದ್ದು ತಂಗ್ಯಮ್ಮ
ಸೊಕ್ಕಡಗಿಸಿ ಬಾಲ ಮುದುರುವ ಬೆಕ್ಕನೆ ಮಾಡುವೆ ತಾಳಮ್ಮಾ.

ಅಣ್ಣ ಅಣ್ಣ ಹೂವಿನ ಉಯ್ಯಾಲೆ ಜೀಕುವ ಆಸೆ ನೋಡಣ್ಣ
ಕೆಂಪು ಹಳದಿ ಕೇಸರಿ ಬಣ್ಣದ ಕಂಪಲಿ ಮೈಮರೆವಾಸೆ ಕಣಣ್ಣ
ಮೇಲೆ ಮೋಡದ ಮೆತ್ತೆ, ಗಾಳಿಯ ಚಾಮರವನೂ ತರುವೆ ತಂಗ್ಯಮ್ಮ 
ಸುರಗಿ ಸುರಸಂಪಿಗೆ ಹೂರಾಶಿ ಸುರಿದಿದೆ ಆಗಲೆ ಮನೆ ಮುಂದೆ ನೋಡಮ್ಮ

ಅಣ್ಣ ಅಣ್ಣ ಬೊಗಸೆಯ ತುಂಬ ನಕ್ಷತ್ರ ತುಂಬುವೆಯೇನಣ್ಣ
ಮಿಣಮಿಣ ಮಿನುಗನು ಮೈಮನಕೆಲ್ಲ ಅಂಟಿಸಿಕೊಳಬೇಕು ನೋಡಣ್ಣ
ನನ್ನಯ ತಾರೆ ಅಂಗೈ ತೋರೇ ಇಲ್ಲವೆಂದೇನೇನೇ ತಂಗ್ಯಮ್ಮ?
ಆಕಾಶಕೇಣಿಯ ಹಾಕಿಬಿಟ್ಟಿರುವೆ ಕಿತ್ತು ಬಿತ್ತುವೆ ಬೆಳಕ ಬಿತ್ತವ ನಿನ್ನ ಮುದ್ದು ಕೈಲಮ್ಮಾ.. 

ಅಣ್ಣ ಅಣ್ಣ ನಿನ್ನ ಬಿಟ್ಟೆಲ್ಲು ಹೋಗಲಾರೆನು ಕೇಳಣ್ಣ
ಮದುವೆ ಸಂಸಾರ ನಿನಗಿಂತಲೂ ತೂಕ ತೂಗೀತೇನು ಹೇಳಣ್ಣ?
ದೂರದ ಮಾತಿಗೆ ಬೇಸರವೇನೆ ನನ್ನ ಮುದ್ದು ತಂಗ್ಯಮ್ಮ
ಅಳಿಯನೂರಿಗೆ ಮನೆಮಠ ಒಯ್ದು ಬಳುವಳಿಯೇ ನಾನಾಗಿ ಬರುವೆ ಸರಿಯೇನಮ್ಮ? 

-ಅನುರಾಧಾ ಪಿ ಎಸ್.

 

 

 

 


ನಂಟಲಿ..

ಯಾಕೊ ಮಾತು
ಅರ್ಥ ಕಳೆದುಕೊಂಡಿತ್ತು
ನಡುವೆ
ಯಾರಿಗೊ ಇತ್ತ ಸಾಲದಂತೆ
ಬರಿ ಬಡ್ಡಿಯಲೆ ಹೆಣಗಿತ್ತು
ಅಸಲೆಲ್ಲೊ ಹೋಗಿ ಕೂತಂತೆ..

ಮಾತಿಲ್ಲದ ಹೊತ್ತಲಿ
ಮೌನ ತಾನೆ ವಕ್ತಾರ ?
ಯಾಕೊ
ಮೌನವೆ ಮೌನದ ಸೆರಗ್ಹಿಡಿದು
ಮೌನದಿ ಕೂತು ಕೊರಗಿತ್ತು
ಮಾತನ್ನೆ ಮರೆತಂತೆ..

ಸದ್ದು ಮಾತಾದೀತೇನು ?
ಬರಿ ಶಬ್ದದಾಡಂಬರ
ಆದರೂ
ಸದ್ದಿರಬೇಕು ಪ್ರಸ್ತುತ ಗೊತ್ತಾ
ಸಂವಹನಕೊಂದು ಕುಂಟು ನೆಪ
ಜತೆಗಿರಲೊಂದು ವೇದಿಕೆ..

ನೋಡು ಸದ್ದು ಗದ್ದಲವೆಲ್ಲ ಹೇಗೆ
ಬೆಂಕಿಗೆ ಬಿದ್ದು ಪುಟವಿಟ್ಟ ಚಿನ್ನ
ಪಕ್ವತೆಯದು
ಹೆಕ್ಕುತಿದೆ ತುಣುಕು ತುಣುಕಾಗಿ
ಅವಧಿ ಠೇವಣಿ ಖಾತೆಗೆ ಜಮೆಗಿಟ್ಟು
ಕಾಯಲಿ ಸಹನೆ ಅವಧಿಯವರೆಗೆ..

– ನಾಗೇಶ ಮೈಸೂರು

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಮೂವರ ಕವನಗಳು: ಕು.ಸ.ಮಧುಸೂದನ್‍ ರಂಗೇನಹಳ್ಳಿ, ಅನುರಾಧಾ ಪಿ ಎಸ್., ನಾಗೇಶ ಮೈಸೂರು

  1. ವ್ಯತ್ಯಾಸ ಕವನದ ಕೊನೆಯ ಸಾಲಿನ ಸಹಿಷ್ಣುತೆ ಪದದ ಬದಲಿಗೆ ಅಸಹಿಷ್ಣು ಪದ ಬರಬೇಕಿದೆ.ಸರಿಪಡಿಸಿಕೊಳ್ಳಿ.ಉಳಿದಂತೆ ಮೂರು ಕವನಗಳು ಚೆನ್ನಾಗಿವೆ.

Leave a Reply

Your email address will not be published. Required fields are marked *