ಸಮಾದಿಯ ಹೂವು
ಚಂದಿರನ ಕೀಟಲೆಗೆ
ಮೈಜುಮ್ಮೆಂದು
ಕತ್ತಲ ಹಟ್ಟಿಯಲ್ಲಿ
ಮೈನೆರೆದಿದ್ದೆ..
ಮುಂಜಾವಿನ ರವಿ ಮೂಡಿ
ಇಬ್ಬನಿಯ ನೀರೇರದು
ಹಗಲ ಕಡಲಲಿ
ತೇಲಿಬಿಡುವವರೆಗೂ
ಮೈಮರೆತೇ ಇದ್ದೆ…
ಯೌವ್ವನ ಹರಿವ ಹೊಳೆ
ಎದೆಯಲಿ ಒಲವ ಮಳೆ
ಕುಡಿಯರಳಿ ನಿಂತವಳಿಗೆ
ದಿನದ ಬೆಳಕು ಹಿತವಾದ ಹಗೆ..
ಹಾಡ್ತೀರಿ, ಆಡ್ಕೋತೀರಿ
ಸ್ವಂತಕ್ಕೆಂದು ಕಿತ್ತಿಡ್ಕೊತೀರಿ
ನಾಚಿಕೆಯಿಲ್ಲ.. ಥೂ.!
ನನ್ನ ಹಾದಿಗೆ ನಿಮ್ಮದೇನು ಅಣತಿ.?
ಯಾಕೀ..ಮೈಮುಟ್ಟೋ ಸಲುಗೆ,.?
ದುಂಬಿ, ಜೇನು, ಚಿಟ್ಟೆ ಮತ್ತು ನೀವು,
ಮೈಪರಚೋ ಕಂಬಳಿ ಹುಳಗಳೆ ಎಲ್ಲಾ…
ಬಲವಂತದ ಹಾದರಕೆ
ನಿಸರ್ಗ ಸೃಷ್ಟಿ ಅನ್ನೋದೂ, ನೆಪವಷ್ಟೆ
ನಾ ಅದರೊಳಗಿನ ಖಾಯಂ ನತದೃಷ್ಟೆ..
ಸಾಕು ತೊಲಗು,
ಬೇಕಿದ್ದರೇ ನೀನು ರಮಿಸಿ ಮಲಗು..
ನಾ ಹೊಸದಾಗಿ ಹುಟ್ಟಬೇಕು,
ಹುಟ್ಟಿನರ್ಥ ತಿಳಿಸಿ ಸಾಯಬೇಕು
ಅಗೋ ,
ಮುಸ್ಸಂಜೆಯ ಕೆಂಗಣ್ಣಲ್ಲಿದೆ ನೋಡು ಸಾವು
ಮತ್ತೆ ಸಿಗುವೆ,
ನಾ ಸಮಾಧಿ ಮೇಲೆ ಸಾಯೋ ಹೂವು..
-ಅಜ್ಜೀಮನೆ ಗಣೇಶ್
******ಹನಿಗವನಗಳು******
1.
ನಾನಿಂದು ನಿನಗೆಂದೇ ಬರೆದಿಟ್ಟ
ಹಾಡನು ಹಾಡಲು
ಯಾಕೋ ಮನಸಿಲ್ಲ
ಒಂದೊಳ್ಳೆ ತಾಳದ ಕೊರತೆ!!
ನೀ ಕಣ್ಣಲ್ಲಿ ನಿನ್ನಂದವ ತೆರೆದಿಟ್ಟು
ರೆಪ್ಪೆಯ ಬಡಿಯಲು
ದಣಿವಿನ ಅರಿವಿಲ್ಲ
ನಾ ನಿಂತಲ್ಲೆ ಹಾಡುತ ಮೈಮರೆತೆ!!
2.
ತಂಪು ಸಂಜೆಯಲ್ಲಿ ನನ್ನ ನೆನಪಾಗಿ
ನೀ ಕೂಗಿದ ಮಾತು ನನ್ನತ್ತ ಬೀಸಿದೆ
ಇಂಪಾದ ತಂಗಾಳಿಯಾಗಿ!!
ಆ ಗಾಳಿ ಜೊತೆಗೂಡಿ ನಿನ್ನ ಸಲುವಾಗಿ
ನಾ ಹಾರಿ ಹಾರಿ ನಿನ್ನತ್ತ ಬರುತಿರುವೆ
ಪ್ರೀತಿ ಹೊತ್ತ ಧೂಳಾಗಿ!!
3.
ಸಂಜೆ ಮಳೆಗೆ
ಮಿಂದ ಇಳೆಯ
ನೋಡು ಹೇಗಿದೆ; ನಾಚಿ ನೀರಾಗಿದೆ!!
ಕರಣದೊಳಗೆ
ಚಂದ ಹಳೆಯ
ಹಾಡು ಕೇಳಿದೆ; ಇಂಪು ಇಂಪಾಗಿದೆ!!
4.
ಧೂಳು ಹಿಡಿದಿದೆ
ಅಳಿಸಲೂ ಆಗದೆ
ಉಳಿಸಲೂ ಆಗದೆ
ನಾನು ನೀನು ಕೂಡಿ ಬರೆದ
ಪ್ರೇಮ ಬರಹವೊಂದು!!
ಪಾಳು ಬಿದ್ದಿದೆ
ಹೋಗಿ ಕೆಡವಲೂ ಆಗದೆ
ಹಾಗೇ ಬಿಡಲೂ ಆಗದೆ
ನೀನು ನಾನು ಹಾಡಿ ಕುಣಿದ
ತಾಜಮಹಲು ಇಂದು!!
5.
ಹಾಗೇ ಇಂದು ಆಕಾಶ ದಿಟ್ಟಿಸಿ
ಚಲಿಸುವ ಮೋಡ ನೋಡಿ
ಎಸೆದೆ ನೋಡು ಸವಾಲೊಂದನು!!
ಹೇಗಾದರೊಂದು ಅವಕಾಶ ಗಿಟ್ಟಿಸಿ
ಚೆಲುವೆಯ ಜೊತೆಗೂಡಿ
ತಪ್ಪದೇ ನಿನ್ನ ನೋಡ ಬರುವೆನೆಂದೆನು!!
– ಯದುನಂದನ್ ಗೌಡ ಎ.ಟಿ
೧)
ನಿದ್ರೆಯ ಮುದ್ರೆ..
ನನ್ನ
ಆರಾಮದ
ನಿದ್ರಗೆ
ಅವಳ
ಕನಸುಗಳ
ಸವಿಮುದ್ರೆ:-O
೨)
ಬರವಣಿಗೆ..
ಅವಳ ಅಂದ ಚಂದವ
ಹೊತ್ತು ಸಾಗುವ ಒಂದು
ಮೆರವಣಿಗೆ..:-O
೩)
ಬಾಲ್ಯವಿವಾಹ.
ಜಗವನರಿಯದ ಎರಡು
ಪುಟ್ಟ ಜೀವಗಳಿಗೆ
ಸಮಾಜದ ಹಿರಿಯರಿಂದ
ವಿವಾಹ ಬಂಧನ/
ಒಬ್ಬರನೊಬ್ಬರ ಮುಖ
ನೋಡುತ ಹೇಳಿಕೊಂಡವು
ತಮಗೆ ತಾವೇ ಸಾಂತ್ವನ//
೪)
ಬರೆದಿದ್ದು ಪುಸ್ತಕದೊಳಗೆ
ಓದಿದ್ದು ತಲೆಯೊಳಗೆ
ಬರೆಯೋದಕ್ಕಿಂತ ಓದು
ಲೇಸು/
ಬರೆದು ಓದುವುದು ಅಧಿಕ ಲೇಸು//
೫)
ಹಾಳುಸಂತೆ.
ಈ ಪ್ರಪಂಚವೆಂಬುದು ಜಾಣ
ಮತ್ತು ಕೋಣರ ಹಾಳುಸಂತೆ/
ಇಲ್ಲಿ ಎಲ್ಲಾ ಸಮಯದಲ್ಲಿ
ಯಾರು ಜಾಣರಲ್ಲ
ಯಾರು ಕೋಣರಲ್ಲವಂತೆ//
–ಮಂಜುನಾಥ ಹನಮಂತಪ್ಪ ವರಗಾ