ಕಾವ್ಯಧಾರೆ

ಮೂವರ ಕವನಗಳು: ಅಜ್ಜೀಮನೆ ಗಣೇಶ್, ನಗೆಮಲ್ಲಿಗೆ, ಕಮಿ (ಪುಟ್ಟಕ್ಕ)

ದಿಬ್ಬಣದ ಸೂತಕ

ಸೇರನೊದೆಯುವ ಹೊತ್ತಲ್ಲಿ
ಹೊಸ್ತಿಲಲ್ಲೇ ಸತ್ತು ಬಿದ್ದಿತ್ತು..
ಸುಡುವ ಮನೆ ಹುಡುಗನಿಗೆ
ಹೂಳುವ ವಂಶದ ಹೆಣ್ಣನು
ಬೆಸದಿದ್ದ ಪ್ರೇಮ..

ಸಂಭ್ರಮ ಸರಿದಲ್ಲೀಗ
ಸೂತಕ ಹೊಕ್ಕಿದೆ,
ಮೌನ ಮಿಕ್ಕಿದೆ,
ಅನುಕಂಪವೂ ಸಾಕಷ್ಟಿದೆ
ದುಃಖವೊಂದೇ ಕಾಣುತ್ತಿಲ್ಲ..

ಅಂಗಳದಿ ಸೌದೆ ಸುಟ್ಟು
ಚಪ್ಪರದ ಗಳಕಿತ್ತು ಚಟ್ಟಕ್ಕಿಟ್ಟು
ತೋರಣವ ತಳದಿ ತುಂಬಿಟ್ಟು
ಅಳುವವರ ಕರೆಸಿ
ಡಂಕನಕ ಹಾಡಿತು ಬ್ಯಾಂಡ್ಸೆಟ್ಟು..

ಹೂವಿನ ಖರ್ಚಿಲ್ಲ,
ಮೈಲಿಗೆಯ ಹಂಗಿಲ್ಲ
ಬರುವವರಿಲ್ಲ,ಬಂಧುಗಳ್ಯಾರಿಲ್ಲ
ಏನು ಬಂತು ಫಲ ಸಂಜಿಯೊಳಗೆಲ್ಲಾ,
ಮುಗಿವ ಲಕ್ಷಣವಿಲ್ಲ

ಹೊತ್ತು ಮೀರಿದೆ
ಹೊರಡಬೇಕಿದೆ ಮೆರವಣಿಗೆ
ಅರಸುತಿಹರಿನ್ನೂ
ಹೊರುವ ಹೆಗಲಿಗೆ.
ಮುಕ್ತಿ ಕೊಡಿಸುವರೇ
ಉಸಿರು ಚೆಲ್ಲಿದ ಪ್ರೀತಿಗೆ..?

ಸಂಸ್ಕಾರವಿಲ್ಲದ ಪ್ರೇಮ
ಸತ್ತಮೇಲೇಕೆಲ್ಲಾ ನೇಮ
ಸಜೀವ ಶವಗಳಲ್ಲಿ ಗರಿಗೆದರಿದೆ
ತಲೆಮಾರಿನ ಚರ್ಚೆ
ಒರತೆಯಿಂಗಿ ಕೊಳೆಯ ಹತ್ತಿದೆ
ನಿಸ್ಸಾರ ಒಲವಿನೆದೆ

ಹೂಳ್ತಾರೋ..?ಸುಡ್ತಾರೋ..?
ಉತ್ತರವ ಪ್ರಶ್ನಿಸಿದೆ
ಸುಡುವ ಮನೆ ಹುಡುಗನಿಗೆ
ಹೂಳುವ ವಂಶದ ಹೆಣ್ಣನು
ಬೆಸದಿದ್ದ ಪ್ರೇಮ…

-ಅಜ್ಜೀಮನೆ ಗಣೇಶ್

 

 

 

 


ಕೋಣೆಯ ಬಿಳಿ ಛಾವಣಿ
ಗಹಗಹಿಸಿ ನಗುತಿದೆ
ಬಣ್ಣ ಬಣ್ಣದ ಗೋಡೆಗಳು
ಕೇಕೆ ಹಾಕಿ ಅಣಕಿಸುತ್ತಿವೆ

ಪಕ್ಕದ ಛೇರು,ಟಿಪಾಯಿ,
ಬೀರು, ಕಿಟಕಿ ಎಲ್ಲವೂ ಸ್ಥಬ್ದವಾಗಿವೆ
ಚಲ್ಲಾ ಪಿಲ್ಲಿ ಆದ ಬಟ್ಟೆಗಳು 
ಪ್ಯಾನಿನ ಗಾಳಿಗೆ ಬಳಿಬಂದು ಮೈಸವರಿ
ಸಂತೈಸುತಿವೆ ಸಂತಾಪ ಸೂಚಿಸಿ

ಮೇಲೆ ಮೂಲೆಯಲ್ಲಿಟ್ಟ
ಕೂಡೆ, ಮಳೆಗಾಲ ಬಂದರೂ 
ಮೈತೊಳೆಯದೆ ಇರಿಸಿಹೆ ಎಂದು
ಹಿಡಿ ಶಾಪ ಹಾಕುತಿದೆ

ಮುಖವಾಡ ತೊಟ್ಟ ಆ ಕ್ರೂರಿ 
ಮನುಷ್ಯನ ನಿಜರೂಪ ಕಂಡು
ಬಿಕ್ಕಳಿಸಲಾಗದೆ ಬಿಗಿ ಹಿಡಿದ
ತುಟಿಗಳ ನೋಡಿ ಕನ್ನಡಿ ಚೀರುತಿದೆ

ಅರೆ ಎಲ್ಲವು ನನ್ನ ಕೋಣೆಯ  
ವಸ್ತುಗಳೆ!!! ಬಗೆಬಗೆಯ  ಭಾವಗಳ
ಬಿತ್ತರಿಸುತಿವೆ, ಇವಾವು ನಿರ್ಜೀವಿಗಳಲ್ಲ
ಈಗ ತಾನೆ ಮಾತಾಡಲು ಶುರು ಮಾಡಿದ  
ಮೂಖ ಪ್ರೇಕ್ಷಕರೇನೂ

ಇಲ್ಲಿವರೆಗೆ ಸುಮ್ಮನೆ ಕುಳಿತು 
ನನ್ನೆಲ್ಲಾ ಭಾವನೆಗಳ ತೂಕಡಿಕೆಗೆ 
ಸೋಬಾನೆ ಹಾಡಿದ ವಸ್ತುಗಳೆ ಇವೆಲ್ಲಾ
ಇಂದು ಬಡಿದೆಬ್ಬಿಸಿ ಬಿಂಕಿಸುತಿವೆ

-ನಗೆಮಲ್ಲಿಗೆ
(ಅನುಪಮ ಎಸ್)

 

 

 

 


ಅಲ್ವೋ ಹುಡುಗ ನಿನಗೆ 
ನನ್ನ ಹೃದಯ ಕೊಟ್ಟೆನೆಂದು ಹೇಳಿದವರಾರು? 
ಪ್ರತಿ ಸಂಜೆ 
ಆವರಿಸಿಬಿಡುತ್ತೀಯಲ್ಲ
ಅರಳಿದ ದುಂಡು ಮಲ್ಲಿಗೆಯ ಘಮದಂತೆ

ನಿನ್ನ ಜೊತೆ ನಡೆದು ಬರುತ್ತೇನೆ 
ನಿಜ 
ಆದರೆ 
ಕೈ ಹಿಡಿಯಲು ಹೇಳಿದವರಾರು

ಕಾಫಿ ಕುಡಿಯೋಣವೆಂದೆ ಸರಿ
ನೀನೆಂತ ಜಿಪುಣ

ಒಂದೇ ಕಪ್ಪಿನಲೀ
ಇಬ್ಬರೂ ಕುಡಿಯೊಣವೆಂದವರಾರು

ಇನ್ನು ಮುಂದೆ ಏನೂ ಅಂದುಕೊಳ್ಳುವುದಿಲ್ಲ

ನೀನೊಬ್ಬ ಒರಟು ಬಂಡೆ
ತೋಳಮೇಲೆ ತಲೆಯಿರಿಸಿ
ಗುನುಗುತ್ತೀಯ ಲಾಲಿ
ಹೃದಯದ ತಾಳ  ಜೊತೆಗೆ 

#ಕಮಿ (ಪುಟ್ಟಕ್ಕ)

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಮೂವರ ಕವನಗಳು: ಅಜ್ಜೀಮನೆ ಗಣೇಶ್, ನಗೆಮಲ್ಲಿಗೆ, ಕಮಿ (ಪುಟ್ಟಕ್ಕ)

  1. ಅಜ್ಜಿಮನೆಗಣೇಶ್,ಅನುಪಮ ಮತ್ತು ಪುಟ್ಟಕರವರಕವಿತೆಗಳು ಚೆನ್ನಾಗಿವೆ.ಪ್ರೆಮದ ಬೆಸುಗೆ,ಕೋಣೆಯ ವಸ್ತುಗಳಜೊತೆ ಬೆಸದ ಭಾವದ ಬಂಧತೆ,ಪ್ರೀತಿಯ ಹೃದಯವನು ಜೋಕಾಲಿಹಾಡಿಸುವ ಪ್ರೇಮದ ಭಾವ ಚೆನ್ನಾಗಿದೆ.

Leave a Reply

Your email address will not be published. Required fields are marked *