ಸುಮ್ ಸುಮನಾ ಅಂಕಣ

ಮೂಲಂಗಿ ಪಚಡಿ: ಸುಮನ್ ದೇಸಾಯಿ ಬರೆವ ನಗೆ ಅಂಕಣ

ಭಾಳ ದಿವಸದ್ದ ಮ್ಯಾಲೆ ನಾವು ಗೆಳತ್ಯಾರೆಲ್ಲಾ ಒಂದ ಕಡೆ ಸೇರಿದ್ವಿ. ದಿನಾ ಒಂದಕ್ಕು ಮನ್ಯಾಗ ಗಂಡಾ ಮಕ್ಕಳಿಗೆ ನಾಷ್ಟಾ,ಊಟಾ ಅಂಥೇಳಿ  ದಿನಾ ಮುಂಝಾನೆದ್ದ ಕೂಡಲೆ ಚಪಾತಿ ಹಿಟ್ಟಿನ್ ಮುದ್ದಿ ನೋಡಿ ನೋಡಿ ನಮಗೂ  ಸಾಕಾಗಿತ್ತು. ಇವರಿಗೆಲ್ಲಾ ಹೊಟ್ಟಿತುಂಬ ಮಾಡಿ ಹಾಕಿ ಮತ್ತ ಮ್ಯಾಲೆ ಇವರ ಕಡೆ ದಿನಾ ಮಾಡಿದ್ದ ಮಾಡತಿ ಅಂತ ಬೈಸ್ಕೊಳ್ಳೊದ ಬ್ಯಾರೆ . ಅದಕ್ಕ ಬ್ಯಾಸರಾಗಿ ನಾವೆಲ್ಲಾ ಫ್ರೇಂಡ್ಸ್ ಮಾತಾಡಕೊಂಡ ಎಲ್ಲೆರೆ ಹೊರಗ ಸೇರಿ ” ಗೇಟ್ ಟುಗೆದರ್ ” ಮಾಡೊದಂತ ಡಿಸೈಡ್ ಮಾಡಿದ್ವಿ. ಯಾರದರ ಮನ್ಯಾಗ ಪಾರ್ಟಿ ಮಾಡೊದ ಅಂದ್ರ ಮತ್ತ ಮಾಡೊದು, ಭಾಂಡಿ ತಿಕ್ಕೊ ತೋಳಿಯೋ ಜೊಂಜಾಟ ಶೂರು ಆಗತದ ಅಂತ ಹೊರಗ ಎಲ್ಲೆರೆ ಹೋಗೊದಂತ ಮಾತಾಡಕೊಂಡ ಚಾಟ್ ಸೆಂಟರ್ ನ್ಯಾಗ ಎಲ್ಲಾರು ಸೇರಿದ್ವಿ.

ಹಿಂಗ ಎಲ್ಲಾರು ಒಂದಕಡೆ ಕೂಡಿ ಭಾಳ ದಿನಾ ಆಗಿತ್ತು.ಹಿಂಗ ಆರಾಮಾಗಿ ಮಾತಾಡ್ಕೊತ ಕೂತಾಗ ನಮ್ಮ ಗೆಳತಿ ರಿಂದಿ ಸುದ್ದಿ ಬಂತು. ಖರೆ ಹೇಳಬೇಕಂದ್ರ ಆಕಿ ಹೆಸರು ವೃಂದಾವನಿ. ಅದು ಎಲ್ಲಾರ ಬಾಯಾಗ ಸಿಕ್ಕು ಕಟಗರಿಸಿ ಕಟಗರಿಸಿ ‘ ರಿಂದಿ ‘ ಅಂತ ಆಗಿ ಕೂತಿತ್ತು. ಪಾಪ ಆಕಿದೊಂದ ಕರ್ಮನ ಅಪಾತಗೇಡಿ ಗಂಡನ್ನ ಕಟಗೊಂಡ ದಿನಾ ಮೂಲಂಗಿಪಚಡಿ ಮಾಡಿ ಹಾಕ್ಕೊತ ತನ್ನ ಅಜ್ಜಿನ್ನ ಬೈತಿರತಾಳ. ಯಾಕಂದ್ರ ಜುಲುಮಿ ಮಾಡಿ ಇಕಿ ಮದವಿ ಮಾಡಸಿದ್ದ ಈ ಅಜ್ಜಿನ. ರಿಂದಿಯ ಅಜ್ಜಿವು ಒಂದ ಐದು ರವಾಊಂಡಿ ಆಗಿರಬೇಕು ಅಂದ್ರ ಅಜ್ಜಿ ಸತ್ತು ಐದು ವರ್ಷ ಆಗ್ಯಾವ ಅಂತ ಅರ್ಥ.

ಈ ‘ ಮೂಲಂಗಿ ಪಚಡಿ’ ಹಿಂದ ಒಂದ ಸಣ್ಣ ಪೂರಾಣನ ಅದ. ರಿಂದಿ ಮದವಿ ವಯಸ್ಸಿಗೆ ಬಂದಾಗ ಸಹಜ ಮನ್ಯಾಗ ಆಕಿಗೆ ವರಾ ನೋಡಲಿಕತ್ತಿದ್ರು . ಅವರ ಮನ್ಯಾಗ ಈ ಅಜ್ಜಿದ ದರ್ಬಾರ ನಡಿತಿತ್ತು. ಅಜ್ಜಿ ತಮ್ಮ ಬಳಗದ್ದ ಕಡೆದ್ದ ಭಾರಿ ವಝನದಾರ್ ಮನಿತನದ್ದ ವರಾ ನೋಡಿದ್ಲು. ಆದ್ರ ವರಾ ಮಾತ್ರ ನಮ್ಮ ರಿಂದಿ ಮನಸಿಗೆ ಬಂದಿದ್ದಿಲ್ಲಾ. ಆಕಿ ಮನ್ಯಾಗ ಎಲ್ಲಾರಿಗು “ ನಂಗ ಹುಡುಗಾ  ಮನಸಿಗೆ ಬಂದಿಲ್ಲಾ, ಒಂದ ನಮೂನಿ ಮೈದಾಹಿಟ್ಟಿನ ಚಪಾತಿ ಹಂಗ ಲಪಾಲಪಾ ಅಂತ ಜೋತಾಡತಾನ ನಾ ಆಂವನ್ನ ಮಾಡಕೊಳ್ಳುದಿಲ್ಲಾ  “ ಅಂತ ಡೈರೆಕ್ಟಾಗಿ ಹೇಳಿಬಿಟ್ಲು. ಆದ್ರ ಅಜ್ಜಿ ಬಿಡಬೆಕಲ್ಲ “ ಏನ ಚಪಾತಿ ಭಕ್ರಿ ಅಂತ ಹೆಸರಿಡ್ತಿ, ನಿನರೆ ಏನು ಬೆಳ್ಳಗ ಸಕ್ರಿ ಹೋಳಿಗಿ ಆಗಿ ಅಂತ ತಿಳಕೊಂಡಿಯೇನ. ರಾಗಿ ಮುದ್ದಿ ಇದ್ಧಂಗ ಇದ್ದಿ. ಸುಮ್ನ ಬಾಯಿ ಮುಚಗೊಂಡ ಮದವಿ ಮಾಡ್ಕೊ ಇಲ್ಲಂದ್ರ ನಿನ್ನ ಹೆಸರಲೆ ಉರಲ ಹಾಕ್ಕೊತೇನ ನೋಡ ಅಂತ ಹೆದ್ರಿಸಿದ್ಲು. ಹಂಗೂ ಹಿಂಗು ಕೂಡೆ ರಿಂದಿನ್ನ ಪಾಂಡುಗ ಕೊಟ್ಟ ಮದವಿ ಮಾಡಿದ್ರು. ಹಂಗ ಪಾಂಡು ಏನ ಅಯೋಗ್ಯ ವರಾ ಏನಲ್ಲಾ ಆದ್ರ ಪ್ರಕೃತಿಲೇ ಒಂದ ಸ್ವಲ್ಪ ಸೂಕ್ಷ್ಮ ಇದ್ದಾ ಅಷ್ಟ. ಇಂವನ ಈ ಅವಸ್ಥಿ ಹಿಂದನು ಅವರ ಅಜ್ಜಿದನ ಕಾರಬಾರ ಇತ್ತು.

ಒಬ್ಬನ ಮೊಮ್ಮಗಾ ಅಂತ ಭಾಳ ಅಚ್ಛಾ ಮಾಡಿ ಮದಲ ಏಳರಾಗ ಹುಟ್ಟಿ ಮೈ ಕೈಲೆ ನಾಜೂಕ ಇದ್ದ ಪಾಂಡುನ್ನ ಅಪಾತಗೇಡಿನ್ನ ಮಾಡಿ ಕುಡಿಸಿ ಬಿಟ್ಟಿದ್ಲು. ನಿಂಗ ಮಾಡಲಿಕ್ಕೆ ನೀಗುದಿಲ್ಲಾ ಅಂತ ಯಾವ ಕೆಲಸಾನು ಹಚ್ಚಲಾರದ ಪೊಲಿಸಿ ಪೊಲಿಸಿ ಮಖಿನನ್ನ ಮಾಡಿಕೂಡಿಸಿದ್ಲು. ಪಾಂಡುನ್ನ ತಿನ್ನೊದು ಉಣ್ಣೊದು ಸುದ್ಧಾ ಅಜ್ಜಿ ಹೇಳಿದಂಗ ಆಗಬೇಕಾಗಿತ್ತು. ಹಿಂಗಾಗಿ ಆಂವಾ ತಿನ್ನೊ ಉಣ್ಣೊದ್ರಾಗ ಸ್ವಲ್ಪ ಹೆಚ್ಚು ಕಡಿಮಿ ಆದ್ರು ಆಂವನ ಪ್ರಕೃತಿ ಜೋಕಾಲಿ ಆಡತಿತ್ತು. ಸ್ವಲ್ಪ ಖಾರಾ ತಿಂದ್ರನು ಹಿತ್ತಲಿಗೆ ಕೈಕಾಲಿಗೆ ಏಡತಾಕತಿದ್ದಾ. ಹೀರಿಕಾಯಿ ಸೌತಿಕಾಯಿ ತಿಂದ್ರ ತಂಪ ಆಗಿ ಹೊಟ್ಟಿ ಗುರುಗುರು ಅಂತಿತ್ತು. ಚಹಾ ಕಡದರ ಪಿತ್ತಾ, ಕಾಫಿ ಕುಡದರ ಕಾವು ಇನ್ನ ಘಟ್ಯನ್ನ ಹಾಲು ಕುಡದರ ಪಚನ ಆಗತಿದ್ದಿಲ್ಲಾ. ಅದರ ಮ್ಯಾಲೆ  “ ಮದಲ ಅಳಾಂವನ ಹೆಂಡ್ತಿ, ಮೂರುಸಂಜಿಲೇ ಸತ್ತಿದ್ಲಂತ” ಅನ್ನೊ ಹಂಗ ಮೂಲವ್ಯಾಧಿ ಆಂವನ ಗರ್ಲಫ್ರೇಂಡ್ ಹಂಗ ಆಂವಗ ಜೋಡಾಗಿತ್ತು ಹಿಂಗಾಗಿ ಬ್ರಷ್ಣ ಇದ್ದದ್ದು ಕಾವಂದು ಏನು ತಿನ್ನೊಹಂಗಿದ್ದಿಲ್ಲಾ. ಅಂದ್ರ ಬದನಿಕಾಯಿ,ಬಟಾಟಿ,ಕುಂಬಳಕಾಯಿ,ಚವಳಿಕಾಯಿ,ಗೆಣಸು,ಬಳ್ಳೊಳ್ಳಿ ಇವನ್ನೆಲ್ಲಾ ತಿನ್ನೊಹಂಗಿಲ್ಲಾ.

ಪಾಂಡುಗ ವರ್ಷದಾಗ ಎರಡ ಸಲಾ ಮೂಲವ್ಯಾಧಿ ಬರತಿತ್ತು, ಬಂದ್ರ ಆರು ಆರು ತಿಂಗಳ ಇರತಿತ್ತು. ಹಿಂಗಾಗಿ ಬರೆ ಸಪ್ಪನ್ನ ಅನ್ನಾ ಸಾರು ಉಂಡು ಜೋಭದ್ರಗೇಡಿ ಆಗಿದ್ದಾ. ಯಾಕಂದ್ರ ಚಪಾತಿ ತಿಂದ್ರ ಕಾವ ಆಗತದ. ಭಕ್ರಿ ತಿಂದ್ರ ಹೊಟ್ಟಿಗೆ ತಡೆಯಂಗಿಲ್ಲಾ. ಇಂಥಾದ್ರಾಗ ಪಾಂಡುನ್ನ ಮೂಲವ್ಯಾಧಿನ್ನ ಶಾಂತ ಇಡೊ ಶಕ್ತಿ ‘ ಮುಲಂಗಿಗೆ ‘ ಮಾತ್ರ ಇತ್ತು. ಪಾಂಡುನ್ನ ದೇಹಕ್ಕ ಅರ್ಧಾ ವಾರಸದಾರ ಮೂಲವ್ಯಾಧಿ ಆದ್ರ ಇನ್ನರ್ಧಾ ‘ಮೂಲಂಗಿ’. ಎಲ್ಲಾರು ಪಾಂಡುಗ ‘ಪೈಲ್ಸ ಪಾಂಡು’ ಅಂತ ಮತ್ತ ‘ ಪಚಡಿ ಪಾಂಡು ‘ ಅಂತ ಆಂವನ ಹಿಂದ ಕಾಡಸತಿದ್ರು. ಹಿಂಗಾಗಿ ‘ಮೂಲಂಗಿ ಪಚಡಿ’ ಪಾಂಡುನ ಜೀವನದ ಅವಿಭಾಜ್ಯ ಅಂಗ ಆಗೇದ. ರಿಂದಿ ಮದುವ್ಯಾದ ಹೊಸದಾಗೆ ಖಾರ ಖಾರ ಖಡಕ ಮಸಾಲಿ ಹಾಕಿ ರುಚಿ ರುಚಿ ಅಡಗಿ ಮಾಡಿಹಾಕಿದ್ದನ್ನ ಒಲ್ಲೆ ಅನ್ನಲಾರದ ‘ ಭಿಡೆಕ್ಕ ಬಸರಾಗಿ, ಹಡಿಲಾರದ ಸತ್ತರಂತ’ ಅನ್ನೊವರ ಹಂಗ ತಿಂದು ನೆಟ್ಟಗ ಕುಡಲಿಕ್ಕೆ ಬರಲಾರದ ಒಪ್ಪಾರೆ ಕೂತು ಒದ್ಯಾಡಲಿಕತ್ತಿಂದ ಖರೆ ಹಕಿಕತ್ತ ಏನದ ಅಂತ ರಿಂದಿಗೆ ಗೊತ್ತಾತು. ಆದರ ಏನ ಮಾಡೊದು ಪಾರಾಗೊ ಎಲ್ಲಾ ಲೈಫ್ ಲೈನ್ ಬಂದ ಆಗಿದ್ವು.

“ ಪೈಲ್ಸ ಹೈ, ಪರ ಮೇರಾ ಹೈ “ ಅಂತ ಪಾಂಡುನ್ನ ಆಂವನ ಪೈಲ್ಸ ಸಮೇತ ಸ್ವೀಕಾರ ಮಾಡಿದ್ಲು. ರಿಂದಿಗೆ ಅತ್ತಿ ಇದ್ದಿಲ್ಲಾ ಪಾಂಡುಗಿದ್ದ ಪೈಲ್ಸ್ ನ ಅತ್ತಿ ಅಂತ ತಿಳಕೊಂಡ ಸೇವಾ ಮಾಡತಿದ್ಲು. ದಿನಕ್ಕೊಂದ ಹತ್ತ ಸಲಾ ಅದನ್ನ ಬೈದರು ,ದಿನಾ ತಪ್ಪದ” ಮೂಲಂಗಿ ಪಚಡಿ” ಮತ್ತ “ ಬಾಳೆಹಣ್ಣಿನ ಶಿಕರಣಿ “ ಮಾತ್ರ ಮಾಡಿ ಹಾಕತಾಳ.  ಪಾಂಡು ಮಗ್ಗಲ ಹಾದು ಹೋದ್ರು ಸುದ್ಧಾ ಮೂಲಂಗಿ ವಾಸನಿನ ಬರತದ ಅಷ್ಟು ಮೂಲಂಗಿ ಅಂಶ ಆಂವನ ದೇಹದ ಕಣ ಕಣದಾಗ ಸೇರಿ ಹೋಗೇದ. ರಿಂದಿ ಒಂದೊಂದ ಸಲಾ ಅನ್ಕೊತಿರತಾಳ ಏನಂದ್ರ “ ಈ ಪುರುಂಧರದಾಸರು “ ಒಲ್ಲೆನಾ ವೈದಿಕ ಗಂಡನ್ನ ಅಂತ ಹಾಡು ಕಟ್ಟೊ ಬದಲಿ “ ಒಲ್ಲೆನಾ ಪೈಲ್ಸ ಗಂಡನ್ನ, ಮೂಲಂಗಿ ಹೆರೆದು ನನ್ನ ರಟ್ಟೆಲ್ಲಾ ನೊಂದಾವು,ಎಷ್ಟಂತ ಹೇಳಲಿ ಕಷ್ಟದ ಒಗೆತನ, ಒಲ್ಲೆ ನಾ ಪೈಲ್ಸ ಗಂಡನ್ನ “ ಅಂತ ಹಾಡ ಕಟ್ಟಬೇಕಿತ್ತು ಅಂತ ಅಂತಿರತಾಳ. ಪಾಪ ಪಾಂಡುನ ಜೀವನದ ಆರಾಮ ಇರಬೇಕಂದ್ರ ಅದು ರಿಂದಿ ಕೈಯಾಗನ ಅದ. ಆಂವಾ ತಗ್ಗಿ ಬಗ್ಗಿ ನಡಕೊಂಡಾ ಬರೊಬ್ಬರಿ. ಇಲ್ಲಂದ್ರ ಆಂವನ ಕೂಡೊದು, ನಡೆಯೊದು ಒಟ್ಟಿನಮ್ಯಾಲೆ ಜೀವನನ ಒಪ್ಪಾರೆ ಆಗಿಹೋಗತದ.ಅಂದ್ರ ರಿಂದಿ ಮೂಲಂಗಿ ಪಚಡಿ ಮಾಡೊದ ಬಂದ್ ಮಾಡಿಬಿಡತಾಳ.

ಹಿಂಗ ಇದು ’ ಇತಿಶ್ರೀ ಬ್ರಹ್ಮಾಂಡ ಪೂರಾಣೆ, ಬ್ರಹ್ಮನಾರದ ಸಂವಾದೆ,ಮೂಲಂಗಿ ಪಚಡಿ ಕಥಾ ಕಾಂಡಃ ” . ಇದನ್ನ ಮನಸಿಟ್ಟು ಓದಿದವರಿಗೆ, ಕೇದವರಿಗೆ ಆ ಭಗವಂತ ಪೈಲ್ಸಬರಲಾರಧಂಗ ರಕ್ಷಿಸಿ ಕಾಪಾಡ್ತಾನ…………..

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಮೂಲಂಗಿ ಪಚಡಿ: ಸುಮನ್ ದೇಸಾಯಿ ಬರೆವ ನಗೆ ಅಂಕಣ

  1. Sumakka mast ada Mulangi pachadi…….." ಮೂಲಂಗಿ ಹೆರೆದು ನನ್ನ ರಟ್ಟೆಲ್ಲಾ ನೊಂದಾವು,ಎಷ್ಟಂತ ಹೇಳಲಿ ಕಷ್ಟದ ಒಗೆತನ,"  Naguna tadakollikke aagvaltu……

  2. ayyo paapa kanri !!!! matt nim party jor agierbek,,,,!! bhal dina admele lagan team seri mast maja madirbeku!!! hahahahaha
    chand aged suman lekhana !! nagbeko alabeko gottaglilla !!!! 
    apatgedi ganda !! hahahaha pakka dwd bhasha !!!

Leave a Reply

Your email address will not be published. Required fields are marked *