ನಾ ಕಟ್ಟುವದಿಲ್ಲ
ನಾ ಕಟ್ಟುವದಿಲ್ಲ…..
ತಾಜ್ ಮಹಲ
ನಿನ್ನ ಜಾತ್ರೆಯಲ್ಲಿ
ತೂಗುವ ತೊಟ್ಟಿಲು
ಹರಿದಾಡುವ ಬೊ೦ಬೆ
ಸದ್ದು, ಸಿಳ್ಳೆಗಳೆಲ್ಲಾ ನಾನಾಗಿದ್ದರೂ..
ಬದುಕ ಕಚ್ಚೆ ಸಿಗದ ತಿರುಕ
ನಾ ಕಟ್ಟುವದಿಲ್ಲ….. ಚಾರ್ ಮಿನಾರ್
ಮನಕೆ ಕ೦ಬದ ಕೊರತೆ
ಕೆಸರು ಹಾದಿ ಕಲ್ಲು ಮುಳ್ಳು
ಬೆಚ್ಚಿ ಬಿದ್ದಾಗಲೊಮ್ಮೆ
ಪ್ರೇರಣೆಯ ಹಣತೆ ನೀನು
ದಾರಿಹೋಕ ನಾನು
ನಾ ಕಟ್ಟುವದಿಲ್ಲ ಕವಿತೆ
ಕೊಸರಾಡುವ ಕಲ್ಪನೆ
ಹೆಸರಿಗೂ ಸಿಗದ ನಗು
ಉಸಿರಾಟಕ್ಕು ಬಿಗಿದ ನೋವು
ಕಟ್ಟಿದ್ದೇನೆ…… ಅಲ್ಲೊ೦ದು ಗೂಡ
ನಿನ್ನ ಹೆಸರಿಗೊ೦ದು ನಗು
ಕೊಸರಿಗೊ೦ದು ನೋವು
ಬೆಳದಿ೦ಗಳೂಟ ಚ೦ದ ಚ೦ದ್ರಮ
ಉಸಿರು ಹಾರುವ ತನಕ
ಈ ನೆನಪು ಅನುಪಮ
-ಶಿವಕುಮಾರ ಸಿ.
ಪ್ರಳಯ
ಇದೇ ತಾನೆ ಪರಿಚಯವಾಗಿದ್ದೀಯ ನೀನು.
ಮೆಸೇಜುಗುಗಳಷ್ಟೇ ಇನ್ನೂ ಪಿಸುಗುಟ್ಟುತ್ತಿವೆ.
ಇನ್ನೂ ಘಟಿಸಬೇಕಾದುದೆಷ್ಟೋ ಇದೆ .
ಅದಕ್ಕೂ ಮುನ್ನ ಪ್ರಳಯ ಹೇಗಾಗಿಬಿಡುತ್ತದೆ?
ಇನ್ನೆರಡು ವರ್ಷ ಮುಖ ನೋಡದೇ ಪ್ರೀತಿಸ್ತೀಯಾ?
ಅನ್ನುವ ನನ್ನ ಹುಚ್ಚುತನವನ್ನ ನೀನು ಒಪ್ಪಿಯಾಗಿದೆ.
ದೇವಗಿರಿ ಮಂಜುನಾಥನ ಮುಂದೆ
ನಮ್ಮ ಭೇಟಿಯಿನ್ನೂ ಬಾಕಿಯಿದೆ.
ಕುತೂಹಲಗಳ ಬುತ್ತಿ ಬಿಚ್ಚಿಕೊಳ್ಳಬೇಕಿದೆ.
ಹಂಚಿಕೊಳ್ಳಬೇಕಿದೆ ಮಾತುಗಳ… ನೋಟಗಳ..ಕನಸುಗಳ
ಕಂಡ ಕನಸು ನನಸಾಗುವ ಮುನ್ನ.
ಪ್ರಳಯ ಹೇಗಾಗುತ್ತದೆ ಹೇಳು?
ಪ್ರೀತಿಯೆಂದರೆ ಸುಮ್ಮನೆ ಮಾತೇನು?
ಜಗಳವಾಗಬೇಕಿದೆ…. ಜಾತಿ, ಅಂತಸ್ತು..
ಬೇದ ಮರೆತು ನಾವು
ಭಾವದ ಮದುವೆಯಾಗಬೇಕಿದೆ
ಕರಿಘಟ್ಟದ ಮೇಲೆ…ನೆಡಬೇಕಿದೆ ಪ್ರೀತಿಯ ಧ್ವಜ.
ಆ ದಿಗ್ವಿಜಯಕ್ಕೂ ಮುನ್ನ..
ಪ್ರಳಯ ಹೇಗಾಗುತ್ತದೆ ಹೇಳು?
ನಮ್ಮಿಬ್ಬರ ಪ್ರೀತಿ, ಪ್ರೇಮ, ಪ್ರಣಯಕೆ
ನನ್ನ ಉಬ್ಬಿದ ಹೊಟ್ಟೆಯ ಸಾಕ್ಷಿ.
ನನ್ನ ಅಮ್ಮನೇ ಮೈಮೇಲೆ ಬಂದಂತೆ
ನಿನ್ನ ಆರೈಕೆ.
ಡಾಕ್ಟರು ನನಗೆ ಚುಚ್ಚುವ ಸಣ್ಣ ಸೂಜಿಗೆ
ನೀನು ಕಣ್ಣೀರಾಗುವ ದಿನವಿನ್ನೂ
ಬರಬೇಕಿರುವಾಗ
ಪ್ರಳಯ ಹೇಗಾಗುತ್ತದೆ ಹೇಳು?
ನಮ್ಮ ಮಾತಿನ ನಡುವೆ ಈಗ
ಮಕ್ಕಳಿಗೂ ಜಾಗ.
ನಿನ್ನ ಅವಾರ್ಡುಗಳಿಗೆ ನಾನು ಚಪ್ಪಾಳೆ.
ನನ್ನಮ್ಮನ ಸಾವಿಗೆ ನಿನ್ನ ಸಾಂತ್ವನ.
ಮಗಳ ಮದುವೆಯ ದಿನ
ಒಳಗೇ ತೇವವಾದ
ನಿನ್ನ ಕಣ್ಣುಗಳನ್ನು ನಾನು ಮಾತ್ರವೇ ಗುರುತಿಸಿ.
ನಿನ್ನ ಕೈ ಹಿಡಿದು, ರೆಪ್ಪೆ ಬಡಿಯಬೇಕಾದ
ಆ ಗಳಿಗೆ ಬಾರದೇ
ಪ್ರಳಯ ಹೇಗಾಗುತ್ತದೆ ಹೇಳು?
ನೀನು ಮೊಮ್ಮಕ್ಕಳಿಗೆ ಕಥೆ ಹೇಳುವ ರೀತಿ ನಂಗಿಷ್ಟ.
ಪಾರ್ಕಿನಲಿ ವಾಕಿಂಗ್ ಬರುವವರಿಗೆಲ್ಲ
ನಾವಿಬ್ಬರೂ ಈಗಲೂ ಪರಸ್ಪರ ಐ ಲವ್ ಯೂ
ಹೇಳಿಕೊಳ್ಳುತ್ತೇವೆಂಬ ಗುಮಾನಿ.
ಮುಗಿಯಿತಾ ಬದುಕು?
ಮೊಮ್ಮಗನಿಗೆ ಹುಡುಗಿಯ ಮೆಸೇಜು ಬಂದಿದೆ.
ಅವರ ಭೇಟಿಯೂ
ದೇವಗಿರಿ ಮಂಜುನಾಥನ ಮುಂದೆಯೇ ಅಂತೆ.
ಪ್ರಳಯವಾಗುವುದಿಲ್ಲ ಬಿಡು.
-ಕುಸುಮ ಆಯರಹಳ್ಳಿ
ಬಾ ಬೇಗ
ನನ್ನ ಮನದ ಅರಮನೆಗೆ
ಕನ್ನ ಹಾಕಿ ಬಂದವಳೇ
ಅರಮನೆಯ ಆಭರಣ
ಪ್ರೀತಿಯನು ಕದ್ದವಳೇ
ಎನ್ನ ಉಸಿರಿಗೆ ಉಸಿರೆರೆದು
ಕನಸುಗಳ ಕೊಂದವಳೇ
ಎಲ್ಲಿರುವೆ ನೀನೀಗ
ನನ್ನವಳೇ ಬಾ ಬೇಗ
ಕತ್ತಲೆಯ ಹೊತ್ತನಲಿ
ಎತ್ತಲೋ ಹೋದೆ ನೀನು
ಸುತ್ತೆಲ್ಲ ಹುಡುಕುತಲಿ
ಸೋತಿಹೆನು ನಲ್ಲೆ ನಾನು
ಎತ್ತಲೆತ್ತ ಹುಡುಕಲಿ ಇನ್ನು
ಹೇಳೆ ನನ್ನ ಗೆಳತಿ ನೀನು
ಎಲ್ಲಿರುವೆ ನೀನೀಗ
ನನ್ನವಳೇ ಬಾ ಬೇಗ
ಕಲ್ಪನೆಯ ಲೋಕದಲ್ಲಿ
ತಲ್ಪವನ್ನು ಕಟ್ಟಿದವಳೇ
ಮದನಿಕೆಯ ಮಾಲೆಯಾಗಿ
ಮನದೊಳಗೆ ನಿಂದವಳೇ
ಕಾದಿಹೆನು ನಾನಿಂದು
ನೀ ಈಗ ಬರುವಿಯೆಂದು
ಎಲ್ಲಿರುವೆ ನೀನೀಗ
ನನ್ನವಳೇ ಬಾ ಬೇಗ
-ಇಂದುತನಯ (ನೇಮಿನಾಥ ತಪಕೀರೆ).
chennagive kavithegalu…..
ಮೂರು ಕವಿತೆಗಳು ishta ಆದವು. ವಿಶೇshaವಾಗಿ kevala brame yalli, dongi jyothishigala bhavishyadalli ಘಟಿಸಬಹುದಾದ ಪ್ರಳಯದ ಕವಿತೆಗೆ ಸಂಭಾshaನೆಗಳನ್ನು ಸೇರಿಸಿರುವ ರೀತಿ ಚೆನ್ನಾಗಿದೆ.
Thank you kavigaLe