ಕಾವ್ಯದ ಕೂಗು
ಅದೆಲ್ಲಿದೆ……
ದುತ್ತನೆ ಸಮುದ್ರದ ತೀರದಲ್ಲಿ
ಯಮಯಾತನೆಯ ಹೊತ್ತು , ಮಣಬಾರದ ಹೆಜ್ಜೆಯಿಟ್ಟು
ಮಹಲಿನಲ್ಲಿ ಹಲ್ಲುಕಿರಿದು
ಕಿಕ್ಕಿರಿದು ಸೇರಿದ್ದ ಸಂದಣಿಯಲ್ಲಿ
ಗುನುಗುನುಗುತ್ತಿತ್ತು.
ಆರ್ಭಟದ ಅಳಲಿನಲಿ,
ಪಂಚಾಯ್ತಿ, ಗುಡಿಸಲು, ಗುಡಿ ಗುಂಡಾರಗಳಲ್ಲಿ,
ಇಲ್ಲಿ ಕಚ್ಚೆ ಕಟ್ಟುವ,
ಅಲ್ಲಿ ಸ್ಕರ್ಟ ಹಾಕಿರುವ, ಭೂವಿಸಖಿ, ಗಗನಸಖಿಯರಲ್ಲಿ,
ಹುಬ್ಬು, ಹುನ್ನಾರಗಳಲ್ಲಿ,
ತೇರು ಹರಿವ ಮಾದಕ ನೋಟಗಳಲ್ಲಿ,
ಕುಣಿಕುಣಿದಾಡುತ್ತಿತ್ತು.
ಒಮ್ಮೆ ತಿರುಗಿ ನೋಡಬೇಕಿತ್ತು
ತೆರಪಿರದೇ ಕಣ್ಣಲ್ಲೇ ಕುಣಿಯುತ್ತಿದ್ದ
ಹಗಲುಗನಸುಗಳ ಸೈಡಿಗಿಟ್ಟು
ಹಳೇ ಬಸ್ಟಾಂಡಿನ ಚಿಲ್ಲರೆ ಮುದುಕಿಯ
ಕಷ್ಟ ಕೇಳಬಹುದಿತ್ತು
ನಾನೇ ನೋಡಬಹುದಿತ್ತು
ಪಾಯ, ಪರಕಾಯ, ಪರಾಮರ್ಶೆ, ಪಾಪಿ
ಪಾಮರನ ಪಾತ್ರಗಳ
ಸದ್ಯ ಬಿಡುಗಡೆಯ
ಬೆಸೆದುಕೊಂಡು ಮುಸುನಕ್ಕಿದ್ದೇನೆ
ಅಗ್ನಿ, ಹೋಮ ಹವನಗಳು ತಪ್ಪಸ್ಸಿನ ಸ್ವಾಮಿ ಕೂತಂತೆ
ದುರಾದೃಷ್ಠ ನನಗೆ ತಿಳಿದಿಲ್ಲ ನಾನೊಂದು ಹೇಣ್ಣೋ, ಗಂಡೋ…….!
ನಾ ಕೂಗಿದಂತೆಲ್ಲಾ
ಬರಸೆಳೆದು ಕುಣಿಯುತ್ತಿದ್ದ ನೀರು
ಕೂರುತ್ತಿದ್ದ ದೊಡ್ಡ ಬಂಡೆಯನ್ನು ಸವೆಸಿ
ಸಣ್ಣ ಕಲ್ಲಾಗಿಸಿದರೂ ಕೂತೆ ಇದ್ದೆನೆ
ಇನೊಬ್ಬನಿದ್ದ ಕವಿ
ಅವನೊಡನೆ ಕೂರಲೇ, ಎದ್ದು ಹೊರಡಲೇ……..?
-ಶಿವಕುಮಾರ ಸಿ.
@ನಿನ್ನ ಪ್ರೀತಿಸುವ ಮುನ್ನ@
ನಿನ್ನ ಪ್ರೀತಿಸುವ ಮುನ್ನ
ಬೇಂದ್ರೆಯವರ ಸಖಿಗೀತೆ
ಕುವೆಂಪು ಅವರ ಯಮನ ಸೋಲು
ಮಾಸ್ತಿ ಅಜ್ಜ ಹೇಳಿದ ಕಥೆ ಕೇಳಿದ್ದೇನೆ.
ಕಾರಂತರ ಮೂಕಜ್ಜಿಯೊಂದಿಗೆ ಮಾತಾಡಿದ್ದೇನೆ.
ನಿನ್ನ ಪ್ರೀತಿಸುವ ಮುನ್ನ
ಕಂಬಾರರ ಕಾಡಕುದುರೆಯನ್ನೇರಿ
ನಾಡ ತುಂಬಾ ಸವಾರಿ ಮಾಡಿದ್ದೇನೆ,
ಕಟ್ಟಿಮನಿಯವರ 'ಪಟ್ಟಣದ ಹುಡುಗಿ'ಯೊಂದಿಗೆ
ಎಷ್ಟೋ ಹೊತ್ತು ಕೂಡಿ ಕಳದಿದ್ದೇನೆ.
ನಿನ್ನ ಪ್ರೀತಿಸುವ ಮುನ್ನ
ನರಸಿಂಹಸ್ವಾಮಿಗಳ 'ಮೈಸೂರು ಮಲ್ಲಿಗೆಯ' ಕಂಪು ಸವಿದಿದ್ದೇನೆ,
ದುಂಡು ಮಲ್ಲಿಗೆ ಮಾಲೆ ನಿನಗೂ ಮಾಡಿ ಕಾಯ್ದಿಟ್ಟಿದ್ದೇನೆ.
ಕಾರ್ನಾಡರ ಯಯಾತಿ 'ಪರಿಚಯ ನನಗಿದೆ.
ನಿನ್ನ ಪ್ರೀತಿಸುವ ಮುನ್ನ
ತ್ರಿವೇಣಿಯವರ 'ತಾವರೆಕೊಳ'ದಲ್ಲಿ ಮನಸು ತೊಳದಿದ್ದೇನೆ,
ವೈದೇಹಿಯ ಅಡುಗೆಮನೆ ಹುಡುಗಿಯ ' ಪರಿಚಯ ನನಗಿದೆ.
ನಿನ್ನ ಪ್ರೀತಿಸುವ ಮುನ್ನ
ಅಡಿಗರ 'ಸುವರ್ಣ ಪುತ್ತಳಿ'
ನಿನಗಾಗಿ ಕಾಯ್ದಿರಿಸಿದ್ದೇನೆ.
ಲಂಕೇಶರ 'ಸಂಕ್ರಾಂತಿ'ಸವಿ ಸವಿಯುತ್ತ
ಗೋಕಾಕರ 'ಸಮುದ್ರ ಗೀತೆ'ಗಳನ್ನು
ಹಾಡಿಕೊಂಡಿದ್ದೇನೆ.
ನಿನ್ನ ಪ್ರೀತಿಸುವ ಮುನ್ನ
ಜಿ ಎಸ್ ಎಸ್ ರ 'ಕಾಡಿನ ಕತ್ತಲಲ್ಲಿ' ನಡೆಯುತ್ತ
ಕಣವಿಯವರು ತೋರಿದ
'ದೀಪದಾರಿ' ಹಿಡಿದು ಸಾಗಿದ್ದೇನೆ.
ಇಂದು ಈಗಲೂ…
-ತಿರುಪತಿ ಭಂಗಿ
"ಪ್ರಥಮ ಚುಂಬನ"
ನಿನ್ನ ಮೇಲೆ ನನ್ನ ಮನ ಸೆಳೆದು
ಸ್ನೇಹ ಸನಿಹವಾಗಿ ನಿಂತಿದೆ
ಸ್ನೇಹದ ಮೇಲೆ ಪ್ರೀತಿಯ ಪರದೆ ಎಳೆದು
ಮಾತು ಮೌನವಾಗಿ ಕುಂತಿದೆ
ಮಾತಿನ ಜೊತೆ ಸಲುಗೆ ಬೆಳೆದು
ನಾಚಿಗೆ ಸೋತು ಶರಣಾಗಿದೆ
ನಾಚಿಗೆಯ ಜೊತೆ ನಗುವು ಹೊಳೆದು
ಕಣ್ಣು ಕುಣಿದು ಪರವಶವಾಗಿದೆ
ಕಣ್ಣ ಮೇಲೆ ರೆಪ್ಪೆಯ ಕರೆ ಹೋತ್ತು
ತುಟಿಯು ಸಿಹಿಯ ಮರೆಮಾಡಿದೆ
ತುಟಿಯ ಮೇಲೆ ತೀರದ ಮುತ್ತು
ನನ್ನ ನಿನ್ನಲ್ಲಿ ಸೆರೆಮಾಡಿದೆ
-ಲೋಕೇಶಗೌಡ ಜೋಳದರಾಶಿ
*****