ಕಾವ್ಯಧಾರೆ

ಮೂರು ಕವಿತೆಗಳು: ಶಿದ್ರಾಮ ತಳವಾರ್, ವೆಂಕಟೇಶ ನಾಯಕ್, ಲೋಕೇಶಗೌಡ ಜೋಳದರಾಶಿ

ನಾನೊಂದು ಖಾಲಿ ಸೀಸೆ
ನಾನೊಂದು ಖಾಲಿ ಸೀಸೆ
ಈಗ ನಾ 'ನೊಂದೆ',
ಮತ್ತು ತರುವ ಮದಿರೆ ತುಂಬಿಹೆ
ನನ್ನೊಳು ಪೂರ್ತಿ,
ಬರೀ ಮೈಗಷ್ಟೇ ಮತ್ತು; ಮತ್ತೇನಿಲ್ಲ
ದಾಹದಿ ಮದಿರೆಯ ದಾಸರು ಕೊಂಡು
ಹೀರಿದರೆಲ್ಲ ನನ್ನೊಳ ಮತ್ತು ;
ಮತ್ತೇನೂ ಅಷ್ಟೇ ಮತ್ತೇನಿಲ್ಲ,

ದಾಹದಿ ಹೀರಿ ಮೋಹದಿ ಇವರು
ಮುತ್ತಿಕ್ಕಿ ಮತ್ತೆಲ್ಲ ಹೀರಿ ಮತ್ತೂ
ಮುತ್ತಿಕ್ಕಿ; ಕೊನೆಗೊಮ್ಮೆ ಬಿಸಾಕಿದರೆನ್ನ
ಬೀದಿಯಲಿ ಅಷ್ಟೇ ನನ್ನೊಳು ಮತ್ತೇನಿಲ್ಲ,

ತೂರಾಡುತಲಿ ಕೂಗಾಡುತಲಿ ಬೈಯುತಲಿ
ನನ್ನನೂ; ಬೈಸಿಕೊಳುತಲಿ ತಮ್ಮನೂ
ಕಕ್ಕುತಿಹರು ಮನದೊಳಗಣ ಕಿಚ್ಚನು
ಇಷ್ಟೇ ನನ್ನೊಳು ಮತ್ತೇನಿಲ್ಲಾ,

ಅದೆಷ್ಟೋ ಮತ್ತನು ಮತ್ತೇ ಮತ್ತೇ
ನಾ ತುಂಬಿಕೊಂಡಿಹೆ ನೀ ದೇಹದೊಳು;
ತುಂಬಿದಾಗ ನನ್ನೊಳು ಮತ್ತು
ನಾನೇ ಕುಡುಕರ ಸೊತ್ತು; ಹೀರಿ ದಾಹ
ತೀರಿದಾಗ ನಾನೇ ಇವರಿಗೆ ಆಪತ್ತು,

ತಪ್ಪು ನನ್ನದಲ್ಲದಿದ್ದರೂ ನಾನಿಳಿದ
ಕಾಯಕವೇ ಅಂಥದು; ಮೈ ಮಾರಿಕೊಳುವ
ಸೂಳೆಗೂ ಮತ್ತು ತುಂಬಿದ ಮೈ
ಮಾರಿಕೊಳುವ ನನಗೂ ಅಂತರವಿಷ್ಟೇ ;
ಆ ಕಣ್ಣಿಗೂ ಈ ಹುಬ್ಬಿಗೂ ಇರುವಷ್ಟೇ,

ಶಿದ್ರಾಮ ತಳವಾರ್

 

 

 

 

 

 

ಸ್ಪರ್ಶ ಬಂಧನ

ನನ್ನ ಕೈಯೊಳು ನಿನ್ನ ಕೈ
ಛಾಪು ಮೂಡಿಸಿದ ನಿನ್ನ ಅಂಗೈ
ರೇಖೆ ರೇಖೆ ಸಂಧಿಸಿದೆ
ಆ ಸ್ಪರ್ಶದಲ್ಲಿ ಮೌನ ಒಡಮೂಡಿದೆ

ಮುಷ್ಟಿ ಬಲದೆದುರಲಿ 
ನಿಷ್ಪಾಪಿ ಬೆರಳುಗಳು ಸೋತಿವೆ
ನಡುಕ ಮರೆಮಾಚಿ
ಬಿಸಿ ಸ್ಪರ್ಶದೊಳಗೂ
ತಂಪು ಮೂಡಿದೆ

ಅಂಗೈಗಳೆರಡರ ಬಾಹು ಬಂಧನ
ಮನದೊಳಗೆ ಇಂಬು ನೀಡಿದೆ
ಏನೋ ಕಂಪನ
ಕಂಡಾಗ ಅಂಗೈ
ಮುಷ್ಟಿಬಿಗಿಯಲಿ ಬಂಧಿಸಿದ
ನಿನ್ನ ನೆನಪು ಅನುದಿನ…

-ವೆಂಕಟೇಶ ನಾಯಕ್

 

 

 

 

 

ಕಣ್ಣು-ಕಾಡಿಗೆ

ಕಣ್ಣ ಮೇಲಿನ ಕಾಡಿಗೆ,
ಕಂಡು ಕಾಣದ ಕಾಡಿಗೆ

ಕಣ್ಣ ಒಳಗಿನ ಭಾವಚಿತ್ರಕೇ,
ಭಾವನೆಯ ಬಣ್ಣ ನೀ ಚೆಲ್ಲಿದೆ

ಮನದಾಳದ ಪಿಸುಮಾತಿಗೆ,
ನೂರೆಂಟು ಅರ್ಥವ ನೀ ಕಲ್ಪಿಸಿದೆ

ಕಣ್ಣ ಮೇಲಿನ ಕಾಡಿಗೆ,
ಕಂಡು ಕಾಣದ ಕಾಡಿಗೆ

ಕಣ್ಣು ರೆಪ್ಪೆಯ ನಾಜುಕು ನಡೆಗೆ,
ಮನಸೋತು ನೀ ಹಿಂಬಾಲಿಸಿದೆ

ನೀ ಸಿಗದೆ ಮರುಗಿದ ಕಣ್ಣಿರಿಗೆ,
ಕರಗಿ ನೀ ನನ್ನ ಸೇರಿದೆ

ಕಣ್ಣ ಮೇಲಿನ ಕಾಡಿಗೆ,
ಕಂಡು ಕಾಣದ ಕಾಡಿಗೆ

ಲೋಕೇಶಗೌಡ ಜೋಳದರಾಶಿ

 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಮೂರು ಕವಿತೆಗಳು: ಶಿದ್ರಾಮ ತಳವಾರ್, ವೆಂಕಟೇಶ ನಾಯಕ್, ಲೋಕೇಶಗೌಡ ಜೋಳದರಾಶಿ

Leave a Reply

Your email address will not be published. Required fields are marked *