ಕಾವ್ಯಧಾರೆ

ಮೂರು ಕವಿತೆಗಳು: ಪ್ರಭಾಮಣಿ ನಾಗರಾಜ, ಸಹನಾ ಕಾಂತಬೈಲು, ಶ್ರೀದೇವಿ ಕೆರೆಮನೆ

ಹಬ್ಬದ ಕುರಿ

ಕಟ್ಟಲಾಗಿದೆ ಕುರಿಯ
ಪಡಸಾಲೆಯಲ್ಲಿ

ಇದ್ದಲ್ಲೇ ದೊರೆವ
ಸೊಪ್ಪುಸೆದೆ
ಬಗೆಬಗೆಯ ಆಹಾರ
ಏಕಿಷ್ಟು ಉಪಚಾರ?
ಕ್ಷಣಗಣನೆಯಾಗುತಿದೆ
ಎಂದರಿಯದ ಬಕರ
 
ಕಣ್ಣಲ್ಲೇ ಅಳೆವವರ
ಅಭಿಮಾನದ ನೋಟ
ಏನಿದು ಮನುಜರ 
ವಿಕೃತ ಆಟ?
ಅಪರಿಚಿತರ ಕಂಡು 
ಬೆದರುತಿದೆ ಮುಗ್ದ

‘ಹಬ್ಬಕ್ಕೆ ತಂದ 
ಹರಕೆಯ ಕುರಿ
ತೋರಣಕ್ಕೆ ತಂದ
ತಳಿರ ಮೇಯಿತ್ತಾ…’

ಎಂದೂ ಆರದ ಕಿಚ್ಚಿನ 
ನಮ್ಮೀ ಒಡಲೊಳಗಿನ 
ಬಡಬಾಗ್ನಿಯ ತಣಿಸಲು
ಇನ್ನೆಷ್ಟು ಜೀವಿಗಳ 
ಬಲಿಯೋ?

ಅತೃಪ್ತ-ತೃಪ್ತತೆಯ 
ಅವಿರತ ಓಟದಲಿ
ಜಿಹ್ವೆಯದೇ ದರ್ಬಾರು
ಬಾಹ್ಯ ಪ್ರೇರಿತ
ಕ್ರಿಯೆಗಳಲ್ಲಿಯೇ 
ತೊಡಗಿದ
ಬದುಕಿನ ಏರುಪೇರು

ಎಲ್ಲರ ಆಂತರ್ಯದಲಿ 
ಅಡಗಿರುವ
ಓ ಅವಿನಾಶಿಯೇ,
ಅರುಹುತಿಲ್ಲವೇಕೆ ನೀ
‘ತನ್ನಂತೆಯೇ ಎಲ್ಲ ಜೀವಿಗಳೂ…’
ಎಂಬ ಸತ್ಯವ?                                          

~ಪ್ರಭಾಮಣಿ ನಾಗರಾಜ, ಹಾಸನ

 

 

 

 

 

ಸಿ.ಎಂ. ಸಾಹೇಬ್ರಿಗೊಂದು ಮನವಿ

ಇಂದು ಮೊದಲ ಪೂಜೆ
ಆರತಿ, ಅಕ್ಷತೆ
ನೇಗಿಲಯೋಗಿಗೆ
ಸಭೆಯಲ್ಲಿ ಪ್ರಾರ್ಥನಾ ಗೀತೆ
ನೇಗಿಲು ಹೊತ್ತ ರೈತರಿಗೆ
                    
ಸಿ.ಎಂ. ಸಾಹೇಬರೇ
ನಾನು ರೈತ ಮಹಿಳೆ
ಕೇಳಿ ನನ್ನ ಮೊರೆ
ಈ ದೇಶದ ಬೆನ್ನೆಲುಬೆಂದು
ನಮ್ಮನ್ನು ಹಾಡಿ ಹೊಗಳುವುದು
ಬೇಡ
ದುಡಿದೂ ದುಡಿದೂ
ನಮ್ಮ ಬೆನ್ನು ಗೂನಾಗಿದೆ

ಮಣ್ಣು ಹೊತ್ತೂ ಹೊತ್ತೂ
ಕೆಂಪಾದ ನಮ್ಮ ಹರಕು ಸೀರೆ
ಎಷ್ಟು ಉಜ್ಜಿದರೂ
ಬಿಳುಪಾಗದ ಮಸಿ ಹಿಡಿದ
ಅಲ್ಯೂಮೀನಿಯಂ ಪಾತ್ರೆ
ವಿಧಾನಸೌಧದ ಎ.ಸಿ. ರೂಮಲ್ಲಿ
ಕುಳಿತ ನಿಮಗೆ ಕಾಣಲಿಕ್ಕಿಲ್ಲ

ಬನ್ನಿ, ನಿಮ್ಮ ಕುರ್ಚಿಯಿಂದ
ಕೆಳಗಿಳಿದು ಹೊಲಕ್ಕೆ ಬನ್ನಿ
ನೇಗಿಲು ತುಕ್ಕು ಹಿಡಿಯುತ್ತಿದೆ
ನೊಗಕೆ ಗೆದ್ದಲು ಹಿಡಿದಿದೆ
ಎತ್ತುಗಳು ಹಸಿವಿನಿಂದ
ಕಿರಿಚಾಡುತ್ತಿವೆ
ತುಂಡು ಭೂಮಿ ಒಣಗಿಹೋಗಿದೆ
    
ಅಕ್ಕಿ, ಬೇಳೆ, ಹಾಲು, ತರಕಾರಿಯ ಬೆಲೆ
ಮುಗಿಲು ಮುಟ್ಟಿದೆಯೆಂದು
ಐದಂಕಿ ಸಂಬಳ ಬರುವ
ಪೇಟೆಯ ಮಂದಿ
ಬಾಯಿ ಬಡಿಯುತ್ತಾರೆ
ಗೊತ್ತಿರಲಿ ನಿಮಗೆ
ಅವನ್ನೆಲ್ಲ ಬೆಳೆವ
ರೈತನಿಗೆ ಸಿಗುವುದು
ಪುಡಿಗಾಸು ಮಾತ್ರ
ಅವನ ಬೆನ್ನಿಗಂಟಿದ
ತುತ್ತಿನ ಚೀಲ
ತುಂಬುವುದೇ ಇಲ್ಲ

ನಮಗೆ ನೇಗಿಲಯೋಗಿಯೆಂಬ
ಪ್ರಶಸ್ತಿ ಬೇಡ
ಅನ್ನದಾತರೆಂಬ
ಪುರಸ್ಕಾರ ಬೇಡ
ನಾವು ಬೆಳೆವ ಬೆಳೆಗೆ
ಯೋಗ್ಯ ಬೆಲೆ ಕೊಡಿ
ಅಷ್ಟೇ ಸಾಕು; ನಮಗೆ ಅಷ್ಟೇ ಸಾಕು.                                
-ಸಹನಾ ಕಾಂತಬೈಲು

 

 

 

 

 

ಪುಟ್ಟ ಕುಂಡದ ಬದುಕು

ಪುಟ್ಟ ಪುಟ್ಟ ಕುಂಡದ ಒಳಗೆ ತರೆಹವಾರಿ ಗಿಡಗಳು
ಕಾಮನಬಿಲ್ಲು ಧರೆಗಿಳಿದಂತೆ
ಕೆಂಪು ಹಸಿರುಬಿಳಿ ಎಲೆಗಳ ನಡುವೆ
ಅಲ್ಲೊಂದು ಇಲ್ಲೊಂದು ಇಣುಕುವ ಹೂವು

'ಇಷ್ಟೆಲ್ಲ ಗಿಡಗಳಿವೆ
ಆದರೆ ದೇವರ ಪೂಜೆಗೆಂದು
ಒಂದು ಹೂವೂ ಸಿಗುವುದಿಲ್ಲ' 
ಅಮ್ಮ ಮೂಗು ಮುರಿದರೆ
ಅಪ್ಪನಿಗೋ ಮಗಳು ಮಾಡಿದ್ದೆಲ್ಲವೂ ಸರಿ

ನನ್ನಲ್ಲಿ ನೂರಿಪ್ಪತ್ತು ಕುಂಡಗಳಿವೆ
ನಾನು ಹೆಮ್ಮೆ ಪಡುವಾಗಲೆಲ್ಲ
'ಇವರ'ದ್ದು ಒಂದೇ ಒರಾತ
'ಇದನ್ನೆಲ್ಲ ತೆಗೆದು
ಹೂ ಬಿಡುವ ಗಿಡಗಳನ್ನು ಹಾಕೋಣ
ಹೂ ಬಿಡದ ಇವುಗಳಿಗೆ 
ಎಷ್ಟು ನೀರುಣಿಸಿದರೂ ವ್ಯರ್ಥ' 
ಆದರೆ ನನಗೆ ಈ ಬಣ್ಣದೆಲೆಯ
ಕ್ರೋಟಾನ್ ಗಿಡಗಳ ಬಗ್ಗೆ
ಹೇಳಿಕೊಳ್ಳಲಾಗದ ಮಮತೆ

ಹೂ ಬಿಡುವ ಗಿಡಗಳ ಕುರಿತು
ಇವರ ಮಮತೆ ಹೆಚ್ಚಿದಂತೆಲ್ಲ
ನಾನು ವಿರೋಧಿಸಲೂ ಆಗದೇ ಚಡಪಡಿಸುತ್ತಿದ್ದೇನೆ
ಇವನ್ನೆಲ್ಲ ಉಳಿಸಿಕೊಳ್ಳುವುದಾದರೂ ಹೇಗೆ?

ಮೊನ್ನೆ, ನನ್ನ ಮೂರು ವರ್ಷದ ಮಗ
ತನ್ನ ಆರು ವರ್ಷದ ಅಣ್ಣನೊಂದಿಗೆ ಸೇರಿ
ಈ ಗಿಡಗಳಿಗೆಲ್ಲ ನೀರು ಹಾಕುವ
ಜವಾಬ್ಧಾರಿ ಹೊತ್ತು ಕೊಂಡಾಗ
ಎದೆಯ ಮೂಲೆಯಲ್ಲೊಂದು
ಹೇಳಲಾಗದ ಸಮಾಧಾನ
'ಇನ್ನು ಚಿಂತಿಸುವ ಅಗತ್ಯವಿಲ್ಲ
ಬದುಕಿ ಕೊಂಡಾವು ನನ್ನ ಗಿಡಗಳು
 —ಶ್ರೀದೇವಿ ಕೆರೆಮನೆ

ಕನ್ನಡದ ಬರಹಗಳನ್ನು ಹಂಚಿ ಹರಡಿ

10 thoughts on “ಮೂರು ಕವಿತೆಗಳು: ಪ್ರಭಾಮಣಿ ನಾಗರಾಜ, ಸಹನಾ ಕಾಂತಬೈಲು, ಶ್ರೀದೇವಿ ಕೆರೆಮನೆ

  1. ಕವಿತೆಗಳು ಚೆನ್ನಾಗಿವೆ … ಹಬ್ಬದ ಕುರಿ ಕಣ್ಣು ಮಂಜಾಗಿಸಿತು . ಸಹನಾ ಅವರ ಕವಿತೆಯ ಆಶಯ ಚೆನ್ನಾಗಿದೆ . ಶ್ರೀದೇವಿ ಅವರು ಈ ವಿಶ್ಯದ ಕುರಿತು ಲೇಖನ ಬರೀಬಹುದಿತ್ತೇನೊ ಅನಿಸಿತು . ಗದ್ಯವನ್ನು ಪದ್ಯ ರೂಪದಲ್ಲಿ ಬರೆದ ಹಾಗೆ ಇದೆ . ಶ್ರೀದೇವಿಯವರ ಬಹಳಶ್ಟು ಕವಿತೆ ಓದಿರುವೆ ,ಅವರ ಕವಿತೆಗಳ ಅಭಿಮಾನಿ ನಾನು…. ಆದರೆ ಯಾಕೋ ಈ ಕವಿತೆ ಅಶ್ಟು ಇಶ್ಟವಾಗಲಿಲ್ಲ . sorry ..

    1. ಶಾ೦ತಿಯವರೆ, ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

  2. ಮೂರೂ ಕವಿತೆಗಳೂ ತುಂಬಾ ಚೆನ್ನಾಗಿವೆ.ಎಲ್ಲರ  ಬರವಣಿಗೆ ಸಂವೃದ್ಧಿಯಾಗಲಿ.

    1. ಡಾ. ಸರ್, ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು.

  3. ಎಲ್ಲ ಮೂರೂ ಕವನಗಳು ಸಹ ಅಮೋಘವಾಗಿದೆ.

    ಪ್ರಭಾಮಣಿಯವರ ಕವನವನ್ನೇ ತೆಗೆದುಕೊಂಡಾಗ,
    ಬಕರಾ ಎನ್ನುವ ಪ್ರತಿಮೆ ಸಾರ್ವತ್ರಕ ವಿಶಾಲ ದೃಷ್ಟಿಯಿಂದ ಗಮನಿಸಬೇಕು.
    ಕಡೆವ ಕಟುಕಕೆ ಮಿದು ಹೃದಯವೇ ಮಿಕದ ಕಡೆಗೆ!

  4. ಬದರಿ ಸರ್, ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು. `ಕಡೆವ ಕಟುಕಕೆ ಮಿದು ಹೃದಯವೇ ಮಿಕದ ಕಡೆಗೆ!' ಈ ಸಾಲು

    ಹೃದಯಹಿ೦ಡುವ೦ತಿದೆ. ಕಟು ಸತ್ಯವೂ ಆಗಿದೆ.
    .

    1. ಸ೦ಗೀತಾರವರೆ, ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

  5. ಮೂರೂ ಕವನಗಳಲ್ಲಿಯ ವ್ಯಂಗ್ಯ ಮನ ತಟ್ಟುವಂತಿದೆ. ಅಭಿನಂದನೆಗಳು.

    1. ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಸರ್.

Leave a Reply

Your email address will not be published. Required fields are marked *