ಕಾವ್ಯಧಾರೆ

ಮೂರು ಕವಿತೆಗಳು: ಜೈಕುಮಾರ್ ಎಚ್.ಎಸ್., ಪ್ರಶಾಂತ್ ಭಟ್, ರಾಣಿ ಪಿ.ವಿ.

ತೇಪೆ ಚಡ್ಡಿ ಮತ್ತು ನಕ್ಷತ್ರ

ಶನಿವಾರದ ಬೆಳ್ಳಂಬೆಳಗ್ಗೆ ಒಪ್ಪತ್ತಿನ ಶಾಲೆಗೆ ಹೊಂಟಿದ್ದೆ

ಎದುರಿಗೆ ಸಿಕ್ಕ ಜಮೀನ್ದಾರನ ಸೊಕ್ಕಿನ ಹೈದ 'ನಿಂದು ಪೋಸ್ಟ್ ಆಗಿದೆ' ಎಂದ!

ನನಗ್ಯಾವ ಲೋಕದವರು ಪತ್ರ ಬರೆವರೆಂದು ನೋಡಿದರೆ

ಅವನ ಕಣ್ಣುಗಳು ನೆಟ್ಟಿದ್ದು ಒಡೆದುಹೋಗಿರುವ ನನ್ನ ಚಡ್ಡಿ ಮೇಲೆ!

ಹೋದ್ವಾರ ಅವ್ವ ತವರಿಂದ ತಮ್ಮನ ಚಡ್ಡಿ ತಂದು ಇಕ್ಕಿಸಿದ್ದಳು,

ಇದೇ ಹಲ್ಕಟ್ ಹೈದ, 'ದೊಗಳೆ ಚಡ್ಡಿ' ಎಂದು ಆಗಲೂ ಛೇಡಿಸಿದ್ದ.

ಅಪ್ಪ ಗದ್ದೆಗೆ ಪಲಾಯನಗೈವ ಮೊದಲೇ ಹಿಡಿಯಲೆಂಬಂತೆ ಓಡಿದೆ

ಮನೆ ಎದುರು ಏರು ಕಟ್ಟುತ್ತಿದ್ದ ಅಪ್ಪನಿಗೆ ಪೋಸ್ಟಾಗಿದ್ದ ಚಡ್ಡಿ ತೋರಿಸಿದೆ.

ಹೊಸ ಚಡ್ಡಿಗೆ ಅರ್ಜಿ ಗುಜರಾಯಿಸುತ್ತಿದ್ದಾನೆಂಬಂತೆ ನನ್ನನ್ನು ದಿಟ್ಟಿಸಿದ.

ಅವನದದೇ ಉತ್ತರ: 'ಕಬ್ಬಿನ ದುಡ್ಡು ಬರ್ಲಿ, ಈ ಸಲ ಎರಡು ಚಡ್ಡಿ ಹೊಲಿಸುವಾ'!

ಕಬ್ಬಿನ ನಾಟಿ ಹಾಕಿ ತಿಂಗಳಾಗಿಲ್ಲ, ಇನ್ನೊಂದು ವರ್ಷದತಂಕ ಕಬ್ಬಿನ ದುಡ್ಡು ಬರೋಲ್ಲ.

ನನ್ನ ಲೆಕ್ಕಾಚಾರ ಊಹಿಸಿದ ಅಸಹಾಯಕ ಅಪ್ಪನದು ಅದೇ ಹುಸಿನಗೆ!

ಸದ್ದು ಕೇಳಿದ ಅವ್ವ, ಶಾಲೆಗೆ ಚಕ್ಕರ್ ಹೊಡೆದು ಗದ್ದೆಗೆ ಪರಾರಿಯಾಗಲು

ಬಂದಿರಬೇಕೆಂದು ಬಾಗಿಲ ಸಂಧಿನಲ್ಲಿ ನಿಂತಿದ್ದಾಳೆ, ಸೂಜಿ ದಾರ ಹಿಡಿದು!

ಚಡ್ಡಿಗೆ ನಕ್ಷತ್ರದಂತೆ ಹೊಳೆವ ತೇಪೆ ಹಾಕುತ್ತಾಳೆ, ವಂಗೆ ಚಬ್ಬೆ ತೋರಿಸಿ ಶಾಲೆಗೆ ಕಳಿಸುತ್ತಾಳೆ.

ಹೆದರುತ್ತಾ ಶಾಲೆ ಮೆಟ್ಟಿಲೇರುತ್ತಿದ್ದಂತೆ, ಗರ್ಜನೆ: 'ನಿಲ್ಲೋ, ಯಾಕೋ ಲೇಟು?'

ಹೆಡ್ ಮಾಸ್ಟರ್ ರೂಲ್ದೊಣ್ಣೆ ಏಟಿಂದ ತಪ್ಪಿಸಿಕೊಳ್ಳಲು ಜೇಬಿಗೆ ಕೈಹಾಕಿ ತಡಕಾಡಿದೆ,

ಅಬ್ಬ! ಅವ್ವ ಪೆಪ್ಪರ್ ಮೆಂಟ್ ಗೆ ಎಂದು ಕೊಟ್ಟ ನಾಕಾಣಿ ಪಾವಲಿ ಸುಭದ್ರವಾಗಿದೆ!

'ಸಾರ್, ಸಾರ್ ಫೈನ್ ಕಟ್ತೀನಂತ' ದೈನ್ಯತೆಯಿಂದ ನಾಕಾಣಿ ತೋರಿಸಿದೆ,

'ವೆರಿ ಗುಡ್' ಎನ್ನುತ್ತಾ 'ಅದೇ ಕಾಸಿಂದ ಒಂದು ಕಟ್ ಗಣೇಶ್ ಬೀಡಿ ತಗಂಬಾ'! ಅನ್ನೋದೇ?

ನನ್ನ ಗಾಡಿ ಒಂದೇ ಉಸುರಿಗೆ ಓಡಿ ನಿಲ್ಲುವುದು ಕುಯ್ಯಂನ ಅಂಗಡಿ ಮುಂದೆ.

ಅಲ್ಲಿ ಕಂಡದ್ದು ಬರೇ ಶುಂಠಿ ಪೆಪ್ಪರ್ ಮೆಂಟ್, ಗ್ವಾಮಾಳೆ, ಚಿಕ್ಕಿಗಳು!

ಗ್ವಾಮಾಳೆ ಕೈ ಬೆರಳಿಗೆ ಸಿಕ್ಕಿಸಿಕೊಂಡ ನನ್ನನ್ನು ಗಾಡಿ ಎಳೆದೊಯ್ಯುತ್ತದೆ 

ಅಪ್ಪ, ಏರು ಹೊಂಟ ತಿಟ್ಟಿನ ಹೊಲದ ಹಾದಿಯ ಕಡೆಗೆ!

-ಜೈಕುಮಾರ್ ಎಚ್.ಎಸ್.

 

 

 

 

 

 

ಅವಸ್ಥೆ

ನಮ್ಮ ಪಾಡಿಗೆ ನಾವು

ಅದೇ ವೃತ್ತದ ಪರಿಧಿಯಲ್ಲಿ;

ಬೆಳಗ್ಗೆ ಅಲರಾಮ್ ಸದ್ದು,

ದೋಸೆಯ ಚುಯ್;

ಮಕ್ಕಳ ಶಾಲೆಯ ವ್ಯಾನು,

ಹೊತ್ತೇರಿದಂತೆ

ಮಧ್ಯಾಹ್ನದ ಅಡಿಗೆಯ ಚಿಂತೆ,

ಊಟವಾದ ಮೇಲೆ ಕೋಳಿ ನಿದ್ದೆ;

ಸಂಜೆಯ ಚಾ,

ರಾತ್ರಿಯ ಸೀರಿಯಲ್ಲು,

ಎಣಿಸಿ ತಪ್ಪಿದ ಸೆಕ್ಸು,

ಆಮೇಲಿನ ಮಂಪರು

ಎಲ್ಲ ದಿನ ಹೀಗೇ ಅಲ್ಲ:

ಯಾವುದೋ ಹಾಡು

ಎದ್ದಾಗಿಂದ ಕಾಡಿ,

ನೆನಪು ಸುರುಳಿಯಾಗಿ ಅಂಗಾತ ಬಿದ್ದು,

ಪಲ್ಲವಿಯೇ ಸಾಲಾಗಿ

ದಾರಿ ತಪ್ಪಿದ ದೈನೇಸಿ;

ಇದೆಲ್ಲದರ ಅರ್ಥವೇನು?

ಕೊಂಚ ಚಿಂತೆ

ಉತ್ತರ ಹೊಳೆಯುವ ಮೊದಲೇ

ಮತ್ತೆ ಓಟ,

ತಂಪಾದ ಕ್ಷಣಗಳ ಆಯುಸ್ಸು

ತುಂಬಾ ಕಮ್ಮಿ!

-ಪ್ರಶಾಂತ್ ಭಟ್

 

 

 

 

 

 

ಮಳೆಯಲಿ

ಗಗನದ ಮೋಡಗಳ ಕರಗಿಸಿ

ತುಂತುರು ಹನಿಗಳ ಜೊತೆಗಿಸ್ಟು

ಕಂಬನಿಯ ಸಹವಾಸ ಮಾಡಿಸಿದೆ..!

ಹಳೆಯ ನೆನಪೆಂಬ ಆ ಧೂಳ

ನಾ ಕಣ್ಣೀರಲೆ ತೊಳೆದು

ವರ್ಶ ಧಾರೆಯಲಿ ಮನವ ಶುಭ್ರಗೊಳಿಸಲೆತ್ನಿಸಿದೆ..!

ಮಳೆ ಮುಗಿದರೂ, ಅಶ್ರುವು

ಹೊಸದಾಗಿ ಹೊಮ್ಮಲು, ಬಿಕ್ಕಿ-ಬಿಕ್ಕಿ ಬರುವ

ದನಿಯನು,ಗುಡುಗಿನೊಂದಿಗೆ ಅಡಗಿಸಿದೆ..!

ನಾನಳಲು ವಿವರಿಸದ ಕಾರಣಗಳಿಗೆ

ಲೋಕದುತ್ತರಕೆ, ಅಡಗಿಸಿ ಎಲ್ಲವ

ಮಿಂಚಿನೊಡನೆ ಸಿಹಿ ನಗುವ ಮಿನುಗಿಸಿದೆ..!

ಮಳೆಕಳೆದು ಭುವಿಯು ತಂಪಿನಲಿ 

ಆನಂದಿಸುತಿರಲು, ನಾನದರ ಸಂಭ್ರಮದಲಿಲ್ಲ,

ಮತ್ತೂ ಒತ್ತರಿಸಿ ಬರುವ ಕಂಬನಿಯ

ಹನಿಗಳಲಿ ಕಾಡುವ ಅದೇ ನೆನಪೆಲ್ಲಾ…! 

ರಾಣಿ.ಪಿ.ವಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಮೂರು ಕವಿತೆಗಳು: ಜೈಕುಮಾರ್ ಎಚ್.ಎಸ್., ಪ್ರಶಾಂತ್ ಭಟ್, ರಾಣಿ ಪಿ.ವಿ.

Leave a Reply

Your email address will not be published. Required fields are marked *