ಕಾವ್ಯಧಾರೆ

ಮೂರು ಕವಿತೆಗಳು: ಚೆನ್ನ ಬಸವರಾಜ್, ನವೀನ್ ಪವಾರ್, ವಾಮನ ಕುಲಕರ್ಣಿ

ಕೊಕ್ ಕೊಕ್ ಕೊಕ್ಕೋ….!!
ಲೇ… ಕುಮುದಾ, ಜಾಹ್ನವಿ, ವೈಷ್ಣವಿ ಎದ್ದೇಳ್ರೇ… ಬೆಳಗಾಯ್ತು ; ಕೋಳಿ ಮನೆಯೊಳಗೆಲ್ಲೋ.. ಬಂದು,
ಕೊಕ್ ಕೊಕ್ ಕೊಕ್ಕೋ…. ಎಂದು ಕೂಗಿದ ಸದ್ದು
ಹಾಳಾದ್ದು ಅದ್ಹೇಗೆ ಮನೆ ಹೊಕ್ಕಿತೋ… ಏನೋ? 
ಎಲ್ಲಾ ನನ್ನ ಪ್ರಾರಬ್ಧ ಕರ್ಮ ಇನ್ನೇನು ಕಾದಿದೆಯೋ 
ಇದ ಕೇಳಿಸಿಕೊಂಡು ಅಕ್ಕಪಕ್ಕದವರು ನಗದಿರರು
ನಮ್ಮ ಏನೆಂದು ತಿಳಿದಾರು, ಅನುಸೂಯಮ್ಮನ ಮೊಮ್ಮಕ್ಕಳು ಕೋಳಿ ತಿನ್ನುವರೆಂದು
ಊರೆಲ್ಲಾ ಹೇಳಿ ಕೊಂಡು ತಿರುಗಾಡಿದರೆ 
ಇನ್ನು ನಾ ತಲೆಯೆತ್ತಿ ಹೊರಗೆಲ್ಲೂ ಓಡಾಡುವಂತಿಲ್ಲ 
ಅಯ್ಯೋ …. ಅಜ್ಜೀ… ಸುಮ್ಮನೆ ಮಲಗ ಬಾರದೆ
ಕೋಳಿಯೂ ಇಲ್ಲ, ಕೂಗೊ ಹುಂಜವು ಇಲ್ಲ 
ಕಾಡು ಬಾ ಎನ್ನುತಿದೆ, ಊರು ಹೋಗು ಎನ್ನುತ್ತಿದೆ
ನಿನಗೆಲ್ಲೋ… ಅರಳು ಮರಳು ಭ್ರಾಂತಿಯಷ್ಟೆ 
ಅದೆಲ್ಲೋ… ಕೂಗಿದರೆ ನಿನಗೇನು ಕಷ್ಟ, ನಷ್ಟ
ಥೂ… ಬಾಯಿಬಡ್ಕಿ ನನಗೇ ಎದಿರು ವಾದಿಸುವುದೆ
ಅಜ್ಜಿಯಂದರೆ ಒಂಚೂರು ಭಯ, ಭಕ್ತಿ ಒಂದೂ ಇಲ್ಲ
ನಿನ್ನ ಅಕ್ಕಂದಿರ ನೋಡು ಏನು ವಿನಯ, ಏನು ಅಕ್ಕರೆ
ನೀನೂ… ಇರುವೆ ಆಜನ್ಮ ಶತ್ರು ಇರುವಂತೆ 
ನಿಮ್ಮಮ್ಮ ಸತ್ತು ನಿಮ್ಮನ್ನ ನನ್ನ ಕೈಯಲ್ಲಿಟ್ಟು 
ನಮ್ಮೆಲ್ಲರ ತಬ್ಬಲಿ ಮಾಡಿ ಹೋದಳು 
ಚಿಕ್ಕ ಬೊಂಬೆಗಳ ಇಷ್ಟು ದೊಡ್ಡ ಗೊಂಬೆಗಳ ಮಾಡಿ
ಸಾಕಿ, ಬೆಳಸಿ, ಜೋಪಾನ ಮಾಡಿದ್ದು ನನ್ನ ತಪ್ಪು 
ಅವಳಿಗೆ ಬರುವ ಸಾವು ನನಗೆ ಬರಬಾರದಿತ್ತೆ 
ಅಜ್ಜೀ…. ಎಕ್ಸಟ್ರೀಮ್ಲಿ ವೆರಿ ವೆರಿ ಸಾರಿ 
ನಾ ಏನೋ… ತಮಾಷೆಗೆ ಹೀಗೆಲ್ಲಾ ಮಾಡಿದರೆ 
ನೀ ಇಷ್ಟಕ್ಕೆಲ್ಲ ಕಣ್ಣೀರು ಹಾಕುವುದೆ 
ನೀನೇ… ನಮ್ಮ ಪಾಲಿನ ತಂದೆ, ತಾಯಿ
ಬಂಧುಬಳಗ ಎಲ್ಲ
ಕೂಗಿದ್ದು ಕೋಳಿಯಂತೂ ಅಲ್ಲವೇ… ಅಲ್ಲ
ನೋಡು ಕೂಗಿದ್ದು ಈ ಮೊಬೈಲ್ ಫೋನು !!

-ಚೆನ್ನ ಬಸವರಾಜ್

ಅದು ನಾ ಕಟ್ಟಿದ ನನ್ನದೆ
ಕನಸಿನ ಮನೆ
ಅದಕ್ಯಾವ ಹುಸುಕಿಲ್ಲ
ನನ್ನದೆ ಮುಸುಕಿನ ಮನೆ
ಅದಕ್ಯಾವ ಇಟ್ಟಿಗೆಗಳಿಲ್ಲ
ನನ್ನದೆ ಗಟ್ಟಿ ಭಾವದ ಮನೆ
ಅದಕ್ಯಾವ ಮಾಳಿಗೆ ಇಲ್ಲ
ನನ್ನದೆ ಮೋಹದ ಮನೆ
ಅದಕ್ಯಾವ ಅಡಿಪಾಯವಿಲ್ಲ
ನನ್ನದೆ ಕಾಯದ ಮನೆ
ಅದಕ್ಯಾವ ಗ್ರಾನೈಟು ಕಲ್ಲುಗಳ
ನೆಲಹಾಸೂ.. ಇಲ್ಲ
ನನ್ನದೆ ಮನಸ ಹಾಸು ಮನೆ
ಅದಕ್ಯಾವ ಬಣ್ಣದ ಗೋಡೆಗಳಿಲ್ಲ
ನನ್ನದೆ ಬಣ್ಣವಿಲ್ಲದ ಮನೆ
ಅದಕ್ಯಾವ ವಿಶಿಷ್ಟ ವಿನ್ಯಾಸಗಳಿಲ್ಲ
ನನ್ನದೆ ವಾಸದ ಮನೆ
ಅದು ನಾ ಕಟ್ಟಿದ ನನ್ನದೆ
ಕನಸಿನ ಮನೆ.
-ರವಿ ಹೃದಯ (ನವೀನ್ ಪವಾರ್)


ಅದ್ಕೇ ನನ್ಮೇಲ್ ತುಂಬಾ ಪ್ರೀತಿ ನಿನಗಲ್ಲೇನಪ್ಪಾ?

ಬೊಂಬೇನೆಲ್ಲಾ ಚೆಲ್ಲಾಡ್ತೀಯಾ
ತುಂಬಾ ಗದ್ಲಾ ನೀ ಹಾಕ್ತೀಯಾ
ಆದ್ರೂ ನನ್ಮೇಲ್ ತುಂಬಾ ಪ್ರೀತಿ ನಿನಗಲ್ಲೇನಪ್ಪಾ?
ನಿದ್ದೆ ಮಾಡೋಕ್ ನಾ ಮಲಗಿದ್ರೆ 
ಎಬ್ಬಿಸ್ ಬಿಡ್ತೀಯಾ ನೀ ಮೊದ್ಲೇ
ಆದ್ರೂ ನನ್ಮೇಲ್ ತುಂಬಾ ಪ್ರೀತಿ ನಿನಗಲ್ಲೇನಪ್ಪಾ?
ಚಾಕ್ಲೆಟ್ ತಿನ್ಬಾರ್ದಂದ್ರೂ ನಾನು
ಸಾಕಷ್ಟ್ ಬಾಯಿಗ್ ತುಂಬ್ತೀ ನೀನು
ಆದ್ರೂ ನನ್ಮೇಲ್ ತುಂಬಾ ಪ್ರೀತಿ ನಿನಗಲ್ಲೇನಪ್ಪಾ?
ನಿನ್ನೇನಾದ್ರೂ ಬಯ್ ಬೇಕಂದ್ರೆ
ಸಣ್ಣವ ನೀನು ಅದುವೇ ತೊಂದ್ರೆ
ಅದ್ಕೇ ನನ್ಮೇಲ್ ತುಂಬಾ ಪ್ರೀತಿ ನಿನಗಲ್ಲೇನಪ್ಪಾ?

ತೊಡಿಸಿದ್ದಾಗ ನಾ ಹೊಸ ಬಟ್ಟೆ
ಹೊರಗಡೆ ಮಣ್ಣಲ್ಲಾಡೇ ಬಿಟ್ಟೆ
ಆದ್ರೂ ನನ್ಮೇಲ್ ತುಂಬಾ ಪ್ರೀತಿ ನಿನಗಲ್ಲೇನಪ್ಪಾ?
ಮಾಡ್ತಿದ್ರೆ ಯಾರ್ಗಾದ್ರೂ ಫೋನು
ಮೈಗೇ ಅಂಟ್ಕೊಂಡಿರ್ತೀ ನೀನು
ಆದ್ರೂ ನನ್ಮೇಲ್ ತುಂಬಾ ಪ್ರೀತಿ ನಿನಗಲ್ಲೇನಪ್ಪಾ?
ಜಡೆ ಎಳೆದಕ್ಕನ್ ಪೀಡಸ್ತೀಯಾ
ಬಿಡದೇ ಅವ್ಳನ್ ಕಾಡಸ್ತೀಯಾ
ಆದ್ರೂ ನನ್ಮೇಲ್ ತುಂಬಾ ಪ್ರೀತಿ ನಿನಗಲ್ಲೇನಪ್ಪಾ?
ನಿನ್ನೇನಾದ್ರೂ ಬಯ್ ಬೇಕಂದ್ರೆ
ಸಣ್ಣವ ನೀನು ಅದುವೇ ತೊಂದ್ರೆ
ಅದ್ಕೇ ನನ್ಮೇಲ್ ತುಂಬಾ ಪ್ರೀತಿ ನಿನಗಲ್ಲೇನಪ್ಪಾ?

ಮನೆಯೆಲ್ಲಾ ನಿನ್ ಕೈಯಲ್ ಸ್ಲೇಟು
ಗೋಡೇ ಮೇಲೆ ಗೀಟೋ ಗೀಟು
ಆದ್ರೂ ನನ್ಮೇಲ್ ತುಂಬಾ ಪ್ರೀತಿ ನಿನಗಲ್ಲೇನಪ್ಪಾ?
ಆಡ್ಕೊಂಡಿದ್ರೆ ಆಟಾ ಟಾಮಿ
ಬಾಲಾ ಎಳದೆಳದ್ ರೇಗ್ಗಸ್ತೀ ನೀ
ಆದ್ರೂ ನನ್ಮೇಲ್ ತುಂಬಾ ಪ್ರೀತಿ ನಿನಗಲ್ಲೇನಪ್ಪಾ?
ಹುಚ್ಚುಚ್ಚಾರ ಏನೋ ಕೇಳ್ತೀ
ಹೇಳೋ ಮೊದ್ದೇ ಇದ್ಕೇನ್ ಹೆಳ್ತೀ?
ಆದ್ರೂ ನನ್ಮೇಲ್ ತುಂಬಾ ಪ್ರೀತಿ ನಿನಗಲ್ಲೇನಪ್ಪಾ?
ನಿನ್ನೇನಾದ್ರೂ ಬಯ್ ಬೇಕಂದ್ರೆ
ಸಣ್ಣವ ನೀನು ಅದುವೇ ತೊಂದ್ರೆ
ಅದ್ಕೇ ನನ್ಮೇಲ್ ತುಂಬಾ ಪ್ರೀತಿ ನಿನಗಲ್ಲೇನಪ್ಪಾ?

-ವಾಮನ ಕುಲಕರ್ಣಿ

ಆಧಾರ: Jim Reeves ಅವರು Steve Moore ಅವರೊಂದಿಗೆ ಹಾಡಿದ But you love me daddy ಹಾಡು

(Jim Reeves \"But You Love Me Daddy\" with Steve Moore & Dorothy Dillard)

*****

 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಮೂರು ಕವಿತೆಗಳು: ಚೆನ್ನ ಬಸವರಾಜ್, ನವೀನ್ ಪವಾರ್, ವಾಮನ ಕುಲಕರ್ಣಿ

  1. ಕಥೆ ಹೇಳುವುದು, ಅದಕ್ಕೊಂದು ಹಾಸ್ಯದ ಕೊನೆ ತರುವುದುರ ಮೂಲಕ ಚೆನ್ನ ಬಸವರಾಜ್ ರವರು ಫೇಸ್ ಬುಕ್ಕಿನಲ್ಲಿ ಗಮನ ಸೆಳೆದಿದ್ದಾರೆ. ಅವರ ಈ ಕವನವೂ ಮನ ಸೂರೆ ಗೊಳ್ಳುತ್ತದೆ.

Leave a Reply

Your email address will not be published. Required fields are marked *