ಸಾವು
ಕಣ್ರೆಪ್ಪೆಗಳನ್ನ
ತೆರೆದು ನೋಡಿದರೆ ಬೆಳಕನ್ನ
ನೋಡಲಾಗದೆ ಮುಚ್ಚಿಕೊಂಡವು
ಪ್ರಯಾಸದಿಂದ ತೆರೆದ ಕಣ್ಣನ್ನ
ಅವನನ್ನ ಬಿಗಿದು ಕಟ್ಟಲಾಗಿತ್ತು
ಊರಾಚೆಗಿನ ಬಟಾಬಯಲಿನ
ಮಧ್ಯೆ ಮರವೊಂದಕ್ಕೆ ನಿರ್ಜನ
ಪ್ರದೇಶದಲ್ಲಿ
ಸುತ್ತಲೂ ಬಿದ್ದಿದ್ದ ಹಿಡಿಗಾತ್ರದ
ಕಲ್ಲುಗಳು ಅವನ ಮೈಗೆ ತಾಕಿ
ಕೆಳಬಿದ್ದವಾಗಿದ್ದವು
ರಕ್ತ ಹೊರಬಂದು ಹೆಪ್ಪುಗಟ್ಟಿತ್ತು
ಗಾಯಗಳಿಂದ ತುಟಿಗಳೊಣಗಿತ್ತು
ಮುಖದಲ್ಲಿ ಜೀವವಿದೆಯಾ ಇನ್ನೂ
ಅನ್ನುವಂತ ನಿರ್ಜೀವವಾದ ಭಾವ
ಸುತ್ತಲೂ ನೋಡಿ ಒಮ್ಮೆ ಯಾರೂ
ಕಾಣದಾದಾಗ ನೆನಪು ಮಾಡಿಕೊಳ್ಳಲು
ಶುರುಮಾಡಿದ ತನ್ನೀ ಪರಿಸ್ಥಿತಿಗೆ!! ಕಾರಣ!
ಇನ್ನೂ …….ಅದೆ..!
ಐ….ಕ..!!
–ಕಮಲೇಶ ಗೌಡ
ಚುಟುಕಗಳು
ಶಿಲ್ಪಗಳ ಕಗ್ಗಲ್ಲಲ್ಲಿ
ಕೆತ್ತಲೇನೊ ಶಿಲ್ಪಿ
ನಿಪುಣ
ಆದರೆ ಕಲ್ಲಲ್ಲಿರಬೇಕು
ಕಲಾಕುಸುಮವಾಗುವ
ಗುಣ
****
ಕೆಲ ತಪ್ಪನ್ನ
ನೋಡಿ ಕಲಿಬೇಕು
ಕೆಲ ತಪ್ಪನ್ನ
ಮಾಡೇ ನೋಡಬೇಕು
ಮಾಡಿ ತಿಳಿವ
ತಪ್ಪೇ ಈ ಮದುವೆ
****
ಹರಿವ ಅರಿವೆಯ
ನೀ ಹರಿ
ಹರಿಯ ಅರಿವ
ನೀ ಅರಿ
****
ಓಟದ ಸ್ಪರ್ಧೇಯಲ್ಲಿ
ಓಡಿ ಹೋದರೆ
ಗೆಲುವು, ಪದಕ
ಅದೇ ಜೀವನ ಸಾಕೆಂದು
ಓಡಿ ಹೋದರೆ
ಸಾವು, ನರಕ
****
ಕಳೆದುಕೊಳ್ಳದಿರು
ಸಹಾಯ ಮಾಡುವ
ಅವಕಾಶ
ಬಂದಿರಬಹುದು
ಕೈಲಾಸದಿಂದ
ಆ ಈಶ
****
ದೇವರೇ ನನಗಿಲ್ಲ
ಈ ದೇಹಮೋಹ
ಆದರೆ ಬರದಿರಲಿ
ಮಧುಮೇಹ
****
ಸಂಭಂದಿಗಳಲ್ಲ ನಮಗೆ
ನಿಜ ಭಂದು
ಮಾಡುವರಾರು ಕಷ್ಟದಲ್ಲಿ
ಸಹಾಯ ಬಂದು
****
ಸಿಗದು ಸಾವಿಲ್ಲದ
ಮನೆಯ ಸಾಸಿವೆ
ಜನನದಂದ
ಜೊತೆಗಿರುವುದೇ ಸಾವೆ
****
ಜೀವನ ನೀರಿನ
ಮೇಲಿನ ಗುಳ್ಳೆ
ಮೇಲಿಂದ ಸಾವಿನ
ಮಳೆ
****
ಕಟ್ಟಲಾಗದು
ಜೀವದ
ಬೆಲೆ
ಹುಡುಕಲಾಗದು
ಸಾವಿನ
ನೆಲೆ
****
-ಈಸೋಪ
'ಕಾತರತೆ'
ಮಾತುಗಳಿನ್ನೂ ಶೃತಿ ಸರಿಪಡಿಸಿಕೊಳ್ಳುವ ನಾಟಕದಲ್ಲಿ ತಲ್ಲೀನವಾಗಿದೆ
ಸೂತ್ರದಾರ ಬಂದು ಹೋದದ್ದು
ಅಸ್ಪಷ್ಟವೋ,ಅಸತ್ಯವೋ
ಎನ್ನುವುದೂ ಚರ್ಚೆಯ ಪರಿಮಿತಿಯಾಚೆ ನಿಂತು
ನಮ್ಮನ್ನೇ ನಾವು ಕೇಳುವಂತೆ ಮಾಡಿದೆ
ಕಾರಣಗಳಿಲ್ಲದೆ ಜೊತೆನಡೆದ ನಾವು
ಈಗ ಒಂದಿಷ್ಟು ಕಾರಣಗಳನು ಹೊತ್ತು
ಮೊದಲು ಗಂಟುಬಿಚ್ಚುವವರಾರೆಂದು
ನಿರೀಕ್ಷಿಸುತ್ತ ಕುಳಿತ್ತಿದ್ದೇವೆ
ಚಂದ್ರ ವಾತವರಣವಿಲ್ಲದ
ಉಪಗ್ರಹವಾಗಿ ಕೃತಕತೆಯನ್ನಷ್ಟೆ ಸಾರುವ
ಮಣ್ಣಿನಮುದ್ದೆಯಾಗಿ ಗೋಚರಿಸುತ್ತಿದ್ದಾನೆ
ಬಿಸಿ ನಿಟ್ಟುಸಿರು ಗಾಳಿಯ ತಣ್ಣನೆಯ ನಡುಕವನ್ನು
ದೂರಮಾಡಿ ತಾನು ಮಾತ್ರ
ನಡಗುತ್ತಲೇ ಇದೆ
ಮಾತುಗಳ ಮೇಲಾಟದಲಿ
ಬಚ್ಚಿಟ್ಟುಕೊಂಡಿದ್ದ ಮೌನವೀಗ
ಮತ್ತೊಮ್ಮೆ ಅಪ್ಯಾಯಮಾನ
ಮೌನದ ಬೆನ್ನೇರಿ ಹೊರಡಬಹುದಾದ ಆ ಮಾತಿಗಾಗಿ
ಇಬ್ಬರೂ ಕಾಯುತ್ತಿದ್ದೇವೆ…..
-ರಮೇಶ್ ನೆಲ್ಲಿಸರ