ಸಮಾನತೆಗಾಗಿ
ರಾಮಕೃಷ್ಣ ಗರ್ಭದ ಕಲ್ಲಾದ
ಬುದ್ದ ಬಸವಳಿದು ಬಿದ್ದ
ಅಲ್ಲಮ ಮೆಲ್ಲನೆದ್ದು ಹೋದ
ಮೋಹನದಾಸನಾಶಿಸುತ್ತ ಅಸುನೀಗಿದ
ವಿವೇಕ ಬಾಬಾ ನಿಟ್ಟುಸಿರಿಟ್ಟು ನಡೆದ
ಮಳೆ ಸುರಿಯಿತು ಮರುಭೂಮಿಯ ಮೇಲೆ
ಕೊಳೆ ಬೆಳೆಯಿತು ಮನುಜರರಿವಿನೊಳಗೆ
ಬರಬೇಕಾದವರೆಲ್ಲಾ ಬಂದು ಹೋದರು
ಕೊಡಬೇಕಾದದ್ದೆಲ್ಲಾ ಕೊಟ್ಟು ಕಂಗೆಟ್ಟರು
ಎಲ್ಲರನ್ನಟ್ಟಿ ಇನ್ನೂ ನಿಂತಿಹರು ದಾರಿಗೆಟ್ಟವರು.
ನ ಹನ್ಯತೆ ಅಸಮಾನತೆ
ಕೊಲ್ಲಬಂದವರೆಲ್ಲಾ ಕಾಲವಾದರೂ
ಕಾಲೂರಿಕೊಂಡ ಕೊಳೆತದ ನಾತ
ನೈನಂ ಛಿಂದಂತಿ ಶಸ್ತ್ರಾಣಿ ಈ ಜಾತಿಯತೆ
ಬದಲಾಗಬೇಕಾದದ್ದು ಬೆಂಕಿ ಗಾಳಿ ಮಳೆಯಲ್ಲ
ಮನೆ ಮನೆಗಳಲ್ಲಿ ಮುದುಡಿದ ಮನಗಳು
ತೆರೆ ತೆರೆದ ಕಿಂಡಿಗಳಿಂದ ಹೊರ ಹೊರಡಲಿ
ಕುಲ ಕುಲವೆನ್ನುವ ಕಾರಿರುಳು
ಒಳ ಹರಡಲಿ ಕಾಂತಿಯ ಸುಡುನೆರಳು
ಸಹಜಾತಿ ಸುಖಕಿಂತ ಮಿಗಿಲು ಮಾನವೀಯತೆ
ಮೂರನೂರು ಉಂಡ ಹೊಟ್ಟೆಗಳ
ತಣಿಸುವದಕ್ಕಿಂತ ಮಿಗಿಲು
ಮೂರು ದಣಿದ ಮೈಗಳಿಗೆ
ಸಂತೈಸುವೆರೆಡು ಕೈಗಳು
ಸಾವಿರ ಪುಟಗಳ ಸಮೃದ್ಧ
ಸಮಾನತೆಯ ಸಾಹಿತ್ಯಕ್ಕಿಂತವಧಿಕ
ಒಬ್ಬ ಬಡವನ ಕಣಿವೆಯೊಡಲಲ್ಲಿ
ಬೆಳೆ ನಳಿನಳಿಸುವದು
ಬವಣೆಯ ಕಳೆ ಕೀಳುವದು
ಬನ್ನಿ ಜಗದೊಧ್ಧಾರಕರ ಅನಗತ್ಯವಾಗಿಸುವ.
-ಅನಿಲ ತಾಳಿಕೋಟಿ
ಚೂರು ಪ್ರೀತಿಯಿಂದ
ನನ್ನ ನಿನ್ನ ನಡುವೆ ಏನಿದೆ ತಿಳಿಯದಾಗಿದೆ
ಎಷ್ಟು ಅಗಿದರು ತೀರದ ಸ್ನೇಹ
ಬಿಟ್ಟುಕೊಡದ ಪ್ರೀತಿ,ಚೂರು ಮೋಹ
ಏನಿರಬಹುದು ಎಂದು ಕೂತರೆ ಸಿಗದ ಉತ್ತರ
ನೀನು ಪ್ರಶ್ನೆಯೂ ಅಲ್ಲ ಉತ್ತರವೂ ಅಲ್ಲ.
ಹಣೆ ಚಂದಿದ್ದರೆ ಸಾಕೇ?ಹಣೆಬರಹವ,
ಬ್ರಹ್ಮನ ಬರಹದಿ ನನ್ನ ನಿನ್ನ ಹೆಸರು ಜೊತೆಗಿರಬಹುದೇ?
ಇರಲೆಂದು,ಆ ಸುಂದರ ಕ್ಷಣಗಳಿಗೆ ಕಾಯುವೆ ಕೊನೆವರೆಗೆ
ಮರೆತು ಸ್ವರ್ಗದಿಂದ ಕಳುಹಿದಂತಿದೆ ನಿನ್ನನು ಈ ಭುವಿಗೆ
ದೃಷ್ಟಿ ತಾಕುವಂತಿದೆ ನಿನ್ನ ಆ ನಗು
ಕಣ್ಣ ಕಾಡಿಗೆಯಿಂದ ದೃಷ್ಟಿ ಬೊಟ್ಟೋಂದ ಇಡಲೆ ಕೆನ್ನೆಗೆ
ಸೃಷ್ಟಿಯ ಅದ್ಬುತವೇ ಸರಿ
ಸುಂದರ ಹೊಗಳಿಕೆಯ ಪದಗಳು
ನಿನಗೆಂದೇ ಸೃಷ್ಟಿಯಾಗಿರಬಹುದೇ?
ಅಥವಾ
ನಿನ್ನ ನೋಡಿದ ಮೇಲೆ ಆ ಪದಗಳಿಗೆ
ಅರ್ಥ ಸೃಷ್ಟಿಯಾಯಿತೆ?
ಕೃಷ್ಣನಿಗೂ ಸಿಗಬಾರದಿತ್ತೆ ನೀನು
ಆಗ ಅವನೂ ಕೂಡ ಶ್ರೀ ರಾಮಚಂದ್ರನಂತೆ
ಗೋಪಿಕಸ್ತ್ರಿಯರನ್ನ ನೋಡುತ್ತಿರಲಿಲ್ಲವೇನೋ?
-ಸ್ವರೂಪ್ ಕೆ.
ಯುಗಬೇವು
ಮನೆ ಬದಿ ನಡುಗಿ
ಮರದ ಎಲೆಯು ಉದುರಿದರು
ಕಾಲ ಕವಲಿನ ಕೊಂಬೆಯಲಿ
ಮತ್ತೆ ಯುಗಾದಿಯ ಚಿಗುರು
ಹುದುಗಿದ ನೆನಪುಗಳಿಂದ
ನನಸಾಗದ ಕನಸಿನ
ಹಳೆಯ ತೊಗಟೆಯ ಸುಲಿದು
ಮನ ಜಿಡ್ಡೆಲ್ಲಾ ಕಳೆವ
ಋತುಮಾನ ವೇಳೆಯಲಿ
ಸುರಿಯುವ ವರುಷಕ್ಕೆ
ಕಲ್ಪನೆಯ ಭ್ರಮೆಯಲ್ಲಿ
ಆನಂದಿಸಿ ಆಲಂಗಿಸಿಕೊಂಡ
ನೆನಪು
ಸುಳಿಗಾಳಿ ಸುತ್ತಿ ರೆಂಬೆ
ಉಜ್ಜಿ ಹೋಗುವಾಗ
ತೊಟ್ಟು ಸಡಿಲಿಸಿ ಸಂಕಟಕ್ಕೆ
ಸಿಕ್ಕಂತ ಆಸರೆಯ ಬದುಕಿನಲ್ಲಿ
ಬರಗಾಲ ಬಂದರೂ
ಬದುಕುಳಿಯುವ ತವಕ
ಬೇಡ ಬೇಡ ಎಂದರು
ದಿಟ್ಟ ಮನೆಗಾಗಿ
ಧರೆಯಾಳಕ್ಕೆ ನುಗ್ಗುತ್ತಿರುವ
ಪಥವಿಲ್ಲದ ಆಸೆಯ ಬೇರುಗಳು
ಸಿಹಿನೀರನ್ನು ಹೀರಿ
ಸುಖಜೀವನದ ಹಾದಿಗಾಗಿ
ಮೈಯೆಲ್ಲ ಕಹಿಯಾದರು
ನಾನು ನಿರೋಗಿ ಎನ್ನಲಾರೆ
ಭೂ ತೆರೆದರೆ ಬುಡ ಪಾತಾಳ
ಅದರ ಯೋಚನೆಯೇ
ಭೀಕರ ನೋಡು
ಸಾಧನೆಯ ಹಾದಿಯಲ್ಲಿ
ಭರವಸೆಯ ಬದುಕೇ
ಜೀವನ
ತೋಳ ಕೊಂಬೆಗಳಲ್ಲಿ
ಬಿರಿವ ಪರಿಮಳದ ಪುಷ್ಪ
ಮನ ನೆನೆದು ಮರುಕಳಿಸಿತು
ಕಳೆದ ಯುಗದ ವೇಳೆ
ಅದುವೆ ಸಂಭ್ರಮದ ಯುಗಾದಿ
ನನ್ನ ಹೊಸ ಕನಸಿಗೆ
ಪತ್ರ ಹರಿತಿನ ಜನನ
ಮನೆಮನದ ಬುಡವೆಲ್ಲಾ
ತಂಪಾದ ಮೈದಾನ
ಸಂಭ್ರಮದ ಯುಗಾದಿಗೆ
ಈ ಹರುಷದ
ತೋರಣ..
-ಎಂ.ಎನ್. ನವೀನ್ ಕುಮಾರ್ ತಿಪಟೂರು
'ಕೃಷ್ಣನಿಗೂ ಸಿಗಬಾರದಿತ್ತೆ ನೀನು ಆಗ ಅವನೂ ಕೂಡ ಶ್ರೀ ರಾಮಚಂದ್ರನಂತೆ' ಚೆನ್ನಾಗಿದೆ ಸ್ವರೂಪ ಅವರೆ.
ನವೀನ ಕುಮಾರ ಅವರೆ -ನಿಮ್ಮ ನೋಟ ಬಹಳ ಇಷ್ಟವಾಯಿತು ''ಸಾಧನೆಯ ಹಾದಿಯಲ್ಲಿ ಭರವಸೆಯ ಬದುಕೇ ಜೀವನ' ದಿಟವಾದ ಮಾತುಗಳು.
good poems…