ಬತ್ತಿಹುದು ಕಾಲುವೆ- (ಕಂಬನಿ)
ಕಾಲುವೆಯ ಮೇಲೆ ಕುಳಿತು
ಕಲ್ಚಾಚಿ ಒಂದೊಂದೇ ಕಲ್ಲು ಎಸೆದು
ತಿಳಿ ನೀರಲ್ಲಿ ಸಣ್ಣ ಸಣ್ಣ ಅಲೆ ಎಬ್ಬಿಸಿ
ಕಂಡ ಕನಸುಗಳು ಸವಿ ಅಂದು
ಯಾವುದೊ ದೂರದೂರ
ಜನ ಸಾಗರವಿದು
ಕಲ್ಮಶವಿಲ್ಲದ ಪುಟ್ಟ ಪುಟ್ಟ ಕಂಗಳು
ತಿಳಿ ಮನದ ಸರೋವರ
ಶಾಂತ ಚಿತ್ತ, ಬರಿ ಕನಸುಗಳ
ನನಸಾಗಿಸೋ ಗುರಿ ಮಾತ್ರ
ಕಣ್ಣ ಅಳತೆಗೂ ಮೀರಿದ
ಬೇಲಿ ಇತ್ತು ಸುತ್ತ
ಕಣ್ಣ ತಪ್ಪಿಸಿ ಅದಾರು ಬಂದವರು
ತಿಳಿಗೊಳವ ಕಲಕಿ ಮೌನದ
ಮುಸುಕೊದ್ದು ಮಲಗಿದ್ದ
ಮನವ ರಾಡಿಗೊಳಿಸಿದರು
ನೀರಿಲ್ಲದೆ ಬತ್ತಿಹುದಂತೆ
ಕಾಲುವೆ ಇಂದು…. ಆದರೆ
ಹಳೆದಾದ ಕಟ್ಟೆ, ಸುತ್ತಲು
ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ
ಸಣ್ಣ ಸಣ್ಣ ಕಲ್ಲುಗಳ
ರಾಶಿ ಉಂಟಂತೆ
ಭೋರ್ಗರೆಯುತಿದೆ
ತಿಳಿ ಮನದ ಸರೋವರ
ಕೈ ಜಾರಿದ ಭಾವನೆಗಳ
ಮನಸು ಆಗಿದೆ ಬಲು ಭಾರ,
ಚದುರಿದೆ ಕನಸು ಸುತ್ತಲು
ಕಂಬನಿ ಇಲ್ಲದೆ ಹಿಂಗಿದೆ ಕಂಗಳ
-ಅನುಪಮ ಎಸ್ ಗೌಡ
ನಂದಿದ ಜ್ಯೋತಿ….
ಅದೆಷ್ಟೋ ವರುಷಗಳು ಕಾದು
ಬೆಳಕಾಗಲೆಂದು ಮನೆಗೆ
ಗಟ್ಟಿ ಮಾಡಿ ಮಣ್ಣಿನ ದೀಪವ
ಬಿಳಿ ಬತ್ತಿ ಇಟ್ಟು
ತಿಳಿ ಎಣ್ಣೆ ಸುರಿದು
ಹಾರೈಕೆಯ, ಆಸೆಯ ಕಡ್ಡಿ ಗೀರಿ
ಜಾಗವೂ ಬೆಳಕಿನ ಆಸರೆ
ಪಡೆಯಲೆಂದು ಕಳುಹಿಸಿದರು
ಬೇರೊಂದೂರಿಗೆ ..
ತಾ ಉರಿದು ಬೆಳಕ ನೀಡುತ್ತಿತ್ತು
ದೀಪ, ಪ್ರಜ್ವಲಿಸುತಿತ್ತು ಜ್ಯೋತಿ,
ಎಲ್ಲಿಂದಲೋ ಬಂದ
ಗಾಳಿಯ ಮುನ್ಸೂಚನೆ ಅದಕೆಲ್ಲಿತ್ತು ಪಾಪ!!!
ಗಾಳಿ ಬಿರುಗಾಳಿಯಾಗಿ, ಸುಂಟರ ಗಾಳಿಯಾಗಿ
ಬೀಸಿತೊಮ್ಮೊಲೆ.. ರಭಸಕ್ಕೆ
ಬತ್ತಿಯೊಂದಿಗೆ ದೀಪದಲಿದ್ದ ಎಣ್ಣೆಯೂ
ಚೆಲ್ಲಿ, ನುಚ್ಚು ನೂರಾಯಿತು ಬೆಳಕ ಹೊತ್ತ
ಮಣ್ಣಿನ ಕುಡಿಕೆ.
ಬೆಳಕು ಕತ್ತಲೆಯ ಮರೆ ಸೇರಿ ಕೊನೆಗೆ
ನಂದಿತಾ ದೀವಿಗೆ…
-ಶೀತಲ್ ವನ್ಸರಾಜ್
ಸಂಕೇತ
ಬಾಳ
ಬಾಂದಳದಿ
ಬೆಳಕಿಲ್ಲದೆ
ಮುತ್ತಲು ಕತ್ತಲು
ಗಮ್ಯ ಕಾಣದೇ
ತಡಕಾಡುತಿಹೆ
ಸುತ್ತಲೂ
ದೂರದ
ಓ ತಾರೆ
ಬೀರುತಿಹೆ
ಯಾವ
ಸಂಕೇತ
ಮಿಣುಕುತ್ತ
ಹಣಿಕುತ್ತ
ಬರಬಾರದೇ
ಚಂದ್ರಮನಾಗಿ
ನನ್ನತ್ತ
ಬೆಳದಿಂಗಳ
ಹರಿಸುತ್ತ
-ಬೆಳ್ಳಾಲ ಗೋಪಿನಾಥ ರಾವ್
sheetal pannaraj bareda kavanadalli last line devige or deevige, one doubt.
kavana chennagide.
ಎಲ್ಲಾ ಕವಿತೆಗಳು ಚೆನ್ನಾಗಿವೆ.. ಧನ್ಯವಾದಗಳು ರಚನಾಕಾರ/ಕಾರ್ತಿ ಯರಿಗೆಲ್ಲ .. ಹಾಗೆ ಪ೦ಜುವಿಗೂ ಕೂಡ.. ಬೆಳಕು ಪಸರಿಸಲಿ
ಅನುಪಮ ಅವರ ಕವಿತೆಯಲ್ಲಿ ಶುರುವಿನಲ್ಲಿನ ಗೊಂದಲಗಳಿಗೆ ಕೊನೆಕೊನೆಯಲ್ಲಿ ಉತ್ತರ ಸಿಗುತ್ತಾ ಗಟ್ಟಿಯಾಗುತ್ತದೆ. ಚೆನ್ನಾಗಿದೆ. ಬದುಕಿನ ಬಿರುಗಾಳಿಗೆ ಸಿಗುವ ದೀಪದ ಕವಿತೆಯೂ ಚೆನ್ನಾಗಿದೆ. ಕೊನೆಯ ಸಾಲು " ನಂದಿತಾ ದೀವಿಗೆ" ಇರಬೇಕಾ ?.ಇನ್ನು ಮಿತ್ರ ಗೋಪಿನಾಥ್ ಅವರು ಬಹಳ ಸುಂದರವಾಗಿ ಚುಕ್ಕಿಯನ್ನು ಚಂದ್ರಮನ್ನಾಗಿಸಿ ಮನಕ್ಕೆ ಮುದ ಕೊಡುತ್ತಾರೆ.