ದ್ವಿಪದಿಗಳು
ಕುಡಿದ ಅಮಲಿನಲ್ಲಿಲ್ಲ ಸಖಿ
ನೀನಿಲ್ಲ ಎಂಬುದೊಂದು ನೋವೆನಿಸಿಲ್ಲ ನನಗೆ
ಹೆಜ್ಜೆ ಇಟ್ಟಲ್ಲೆಲ್ಲಾ ಮುರಿದ ಹಪ್ಪಳ
ಸದ್ದು ಪುಡಿಯಾದ ಕನಸುಗಳು ಜೀವ ಬಿಟ್ಟವು
ನನಗೂ ಎಚ್ಚರ ಇದೆ ನೆನಪಿರಲಿ
ಕುಡಿದರೇನು ಮರೆವಲ್ಲ ಹಳೇ ಮೆಲುಕು!
ನಡೆ ನಡೆದಂತೆ ದಾರಿ ಹಿಂದೆ ಅಷ್ಟೆ;
ಹಿಂದಿನದು ಬಿಟ್ಟಿಲ್ಲ ಜೊತೆಗೆ ಅಚ್ಚರಿ
ಕನಸ ಚರಂಡಿ ದಾಟಲು ದರ್ದಿದೆ
ಸಭ್ಯರೆಲ್ಲಾ ನನ್ನ ಅವಸ್ಥೆಯೆಡೆ ಕಣ್ ನೆಟ್ಟಿದ್ದಾರೆ!
ಹಗಲಿನಲಿ ಹಾಡಾಗಿ ಕಾಡೋ ನೀನು
ಕತ್ತಲಾವರಿಸೆ ಜಾಮು ಮೇಲೆ ಜಾಮೆ!
ಕೂತು ಮಾತಾಡದೆ ಎಷ್ಟೋ ವರುಷಗಳು
ಅಮರವಲ್ಲದ ಜನ್ಮಕ್ಕೆ ಲೆಕ್ಕವೇಕೆ ಸಖಿ?
ಬಾಟಲಿಯಿಂದ ಬಟ್ಟಲಿಗಿಳಿದ ಸುರೆ
ಹೊಟ್ಟೆಗಿಳಿವ ಮುನ್ನ ಕಣ್ಣೀರಾಗಿ ನೀನು
ಕಣ್ಣೀರಾದ ನೀನು ಕಿತ್ತ ಚಪ್ಪಲಿಯಂತೆ
ನೆನಪಾಗಿ ಎಳೆಯುತ್ತ ಮತ್ತೆ ಮತ್ತೆ ಕಾಡುವೆ!
ಈ ಜಾಮೇನು ನನ್ನ ಕೊಲ್ಲಬಲ್ಲದು
ಸತ್ತವರನು ಅದಾರು ಸಾಯಿಸುತಾರೆ ಜಾನಂ?
ಜಾಣ ಹತ್ಯಾರು ನಿನ್ನ ಕಣ್ಣು ನಾನು
’ಫೈಜ್’ ಆಗಿ ಉಳಿದಿಲ್ಲ ಖಾಲಿ ಖಾಲಿ ಅಷ್ಟೆ!
-ಸಂತೇಬೆನ್ನೂರು ಫೈಜ್ನಟ್ರಾಜ್, ಸಂತೇಬೆನ್ನೂರು.
ಈ ದೇಹ ಪಾಳು ಬಿದ್ದೀತು ,,.
ನನ್ನ ಬಯಕೆಗಳ ಮೂಲ
ಈ ನೆತ್ತರಾದರೆ
ಒಮ್ಮೆ ಎಲ್ಲವ
ಬತ್ತಿಸುವುದು ಲೇಸು
ಇಲ್ಲವಾದರೆ –
ಮೈ ನೀಲಿಗಟ್ಟೀತು ,,,
ನನ್ನ ಬಯಕೆಗಳ ಮೂಲ
ಈ ಉಸಿರಾದರೆ
ಒಮ್ಮೆ ಸತ್ತುಬಿಡುವುದು ಲೇಸು
ಇಲ್ಲವಾದರೆ –
ಉಸಿರಿಗೆ ಉಸಿರು ಸೇರಿ
ಊರು ಕೆಟ್ಟೀತು ,,,
ನನ್ನ ಬಯಕೆಗಳ ಮೂಲ
ಈ ಆತ್ಮವಾದರೆ ,,,
ಅಯ್ಯೋ .,.,
ಒಮ್ಮೆಲೇ
ಆತ್ಮ ಸ಼ಂಹಾರ
ಮಾಡುವುದು ಲೇಸು..
ಇಲ್ಲವಾದರೆ –
ಆ ನರಕ ಕೆಟ್ಟೀತು ,,.,
– ಜಾನ್ ಸುಂಟಿಕೊಪ್ಪ.
ಸಾಧಿಸು ಮನವೇ
ಬೆಳಗುವ ದೀಪವು ಆರಿದರೇನು
ಕವಿದ ಕತ್ತಲು ಶಾಶ್ವತವೇನು..
ಅರಳುವ ಪುಷ್ಪವು ಬಾಡಿದರೇನು
ಬಳ್ಳಿ ಮೊಗ್ಗನು ಅರಳಿಸದೇನು..
ನಿನ್ನೆಯ ಸೋಲಿಗೆ ಮರಗುವುದೇಕೆ
ಸಾಧಿಸು ಮನವೇ ನಾಳೆಯೂ
ನಿನ್ನದೇ..
ಕಡೆದ ಕಲ್ಲು ನೋವನ್ನುಂಡು
ಪೂಜಿಸೋ ಶಿಲ್ಪ ತಾನಾಗುವುದು
ಉಳುವ ನೇಗಿಲ ಸಹಿಸಿಕೊಂಡು
ಭೂವಿಯೂ ಫಲವನು ತಾ
ನೀಡುವುದು
ಸಾವಿರ ನೋವು ಸುಖ ನೀಡುವುದು
ಕುಗ್ಗದೆ ಸಾಗು ನನ್ನ ಮನವೇ
ಮುಂದೆ ಜಯವು ನಿನ್ನದೇ…
ಕೈ ರೇಖೆ ನಂಬಿ ಕೈ ಕಟ್ಟಬೇಡ
ವಿಧಿಬರಹವೆಂದು ನೀ ಜರಿಯಬೇಡ
ನಿನ್ನಯ ಬಾಳಿಗೆ ನೀನೇ ಅಂಬಿಗ..
ಸಾಧಿಸೋ ಛಲ ಮನದಲಿಲ್ಲದೇ
ಸಾವಿರ ಗುಡಿಯ ನೀ ಸುತ್ತಬೇಡ
ನಿನ್ನ ಬದುಕಿಗೆ ನೀನೇ ನಂಬಿಗ..
ಕಡಿದ ಮರವು ಕುಗ್ಗದೇನೆ
ಮತ್ತೆ ಚಿಗುರ ಕುಡಿಯೊಡೆಯುವುದು
ಸಾವಿರ ತಿರುವಿನ ಹಾದಿ ಸವೆದು
ನದಿ ಸಾಗರ ತಾ ಸೇರುವದು
ನಿನ್ನಯ ಬದುಕಿನ ಯಾನಕೆ
ಮುಂದೆ ನೆಲೆಯಿದೆ ನೀ ಸಾಧಿಸು
ಸಾಧಿಸು ಓ ನನ್ನ ಮನವೇ …
ಎಸ್. ಕಲಾಲ್