ಹೇಗೆ ಹೇಳಲಿ ಗೆಳತಿ
ನಾನೀರವುದೇ ಹೀಗೆ
ಕತ್ತಲಲ್ಲಿ ಮಿರಮಿರನೇ ಮಿನುಗುವ ಮಿಂಚುಳ್ಳಿ ಹಾಗೆ
ಬೆಳಕಿನಲ್ಲಿ ನನಗಿಲ್ಲ
ಒಂದಿಷ್ಟು ಬೆಲೆ.
ಹೇಗೆ ಹೇಳಲಿ ಗೆಳತಿ
ನಾನೀರವುದೇ ಹೀಗೆ
ಗಂಗೆಯಲಿ ತೇಲಾಡುವ
ಮೀನಿನ ಹಾಗೆ
ಮೋಸದಿಂದ ಎಸೆದ ಗಾಳ
ನನಗೆ ಸಾವು ತಂದರೂ
ನಾನಂತು
ಅವರಿಗೆ 'ಅನ್ನದೇವಿ' ಯಾಗುತ್ತೇನೆ.
ಹೇಗೆ ಹೇಳಲಿ ಗೆಳತಿ
ನಾನೀರವುದೇ ಹೀಗೆ
ಬಾನೆತ್ತರಕೆ ಬೆಳೆದು ನಿಂತ
ತೆಂಗಿನ ಮರದ ಹಾಗೆ
ನೂರೆಂಟು ರೋಗಿಗಳಿಗೆ
ಎಳೆನೀರ ಔಷಧಿ ಕೊಟ್ಟರೂ
ನನ್ನ ಬುಡಕ್ಕೆ ನೀರು ಬಿಡುವವರಿಲ್ಲ
ಗೊಬ್ಬರದ ವಾಸನೆ ಎಂದೆದಿಗೂ
ನನ್ನ ಮೂಗಿಗೆ ಸೋಕಿಲ್ಲಾ.
ಹೇಗೆ ಬಾಳಲಿ ಗಳತಿ
ಈ ಕೊಳಚೆಯೊಳಗೆ
ಸೊಳ್ಳೆ ಕ್ರಿಮಿ ಕೀಟಗಳ
ಜಂಜಾಟದೊಳಗೆ.
ಹೇಗೆ
ಹೇಳಲಿ
ಗೆಳತಿ
ನಾನೀರವುದೇ
ಹೀಗೆ…..
-ತಿರುಪತಿ ಭಂಗಿ
ಗಜಲ್
ಮೂಗು ಮುತ್ತಿಕ್ಕುವ ಗಾಳಿ ನಿನ್ನ ಮೈಗಂಧವನೆ ಮತ್ತೆ ಮತ್ತೆ ತರುತಿದೆ ಸಾಕಿ
ಜಡೆಯಲಿ ನೀ ಮುಡಿವ ಚಿಕ್ಕಮಲ್ಲೆ ಕಂಪು ಬೀರಿ ನಶೆ ಏರಿಸುತಿದೆ ಸಾಕಿ
ತುಟಿ ಒತ್ತಿದ ಗಳಿಗೆಯಿಂದ ನನ್ನೆದೆ ಬಟ್ಟಲು ಕುಣಿಯುತಿದೆ ಒಂದೇ ಸಮನೆ
ಮಧು ಸುರಿವ ದಿನವನು ಬಿಟ್ಟು ಬಿಡದೇ ಮನಸು ಎಣಿಸುತಿದೆ ಸಾಕಿ
ಸೆರಗೊಳಗೆ ಅಂದವ ಬಚ್ಚಿಟ್ಟಿದ್ದು ಸಾಕಿನ್ನು ಬಾ ತೆರೆ ಸರಿಸಿ ಬಿಡು
ಕಾತರಿಸುವ ದುಂಬಿ ಒಂಟಿ ಕಾಲಲಿ ನಿಂತು ಪರಾಗ ಸ್ಪರ್ಶವ ಕೇಳುತಿದೆ ಸಾಕಿ
ಆಷಾಡದ ನೆಪ ಬೇಡ ಮುಂದೆ ಶ್ರಾವಣ ಎಂದು ಮುಂದೂಡುವೆ ನೀನು
ಹಾಸಿದ ಬಿಸ್ತಾರ ಖಾನಕ್ಕೂ ಮಂಕು ಕವಿದು ನಮ್ಮಿಬ್ಬರ ಮಿಲನ ಬೇಡುತಿದೆ ಸಾಕಿ
ಬಯಕೆಯ ಬುತ್ತಿಗಂಟು ಕರಗುವ ಮುನ್ನ ನನ್ನೆದುರು ಬಂದು ಬಿಡು
ಎಲ್ಲ ಇಲ್ಲಗಳ ನಡುವೆಯೂ ಪ್ರೀತಿಯ ಬದುಕು ನಿನಗಾಗಿ ಕಾಯುತಿದೆ ಸಾಕಿ
-ಪ್ರಕಾಶ ಬಿ. ಜಾಲಹಳ್ಳಿ
ಉದ್ಗಾರವೆಂಬ ಮಿತಿಯೇ ಇರದಿರಲು
ಹೇಗೆಂದು ಬರೆಯಲಿ ಹೊಗಳಿಕೆಯ ಮಾತುಗಳ,
ಮುಗ್ದತೆಯಲಿ ಬರೆಯುತಿಹೆ ಪದ್ಯವೊಂದನ್ನು
ನೆನಪಿಗೋ, ನಗುವಿಗೊ, ನೆಪವಾಗಿರಲೆಂದು….
ಶಬ್ದಗಳು ತಾವು ಅವಿತು ಕುಳಿತಿರಲು,
ಭಾಷೆಯ ಜ್ಞಾನಕ್ಕೆ ಮುಸುಕು ಕವಿದಿರಲು..
ಭಾವನೆಯ ಭಾಷೆಯಲಿ ಪದಗಳನು ಹುಡುಕಿ,
ಮಮತೆಯ ಅಳತೆಯನು ಹೇಳಹೊರಟಿರುವೆ
ಪ್ರೀತಿಯ ವ್ಯಕ್ತಿತ್ವ ಲಿಖಿತವಾಗಿರಲೆಂದು….
ಪ್ರೀತಿಗೂ, ಜ್ಞಾನಕು ಆಸರೆ ಒಂದಂತೆ,
ಈ ಪರಿಯ ಸಂಭಂದ ಎಲ್ಲೂ ಇರದಂತೆ,
ತಿಳಿದಿರುವ ಸಾಲುಗಳ ಮತ್ತೆ ಬರೆದಿರುವೆ…
ಹೊಸತೇನೂ ತಿಳಿಯದೆ ಮಂಕಾಗಿ ಹೋಗಿರಲು,
ಧನ್ಯತೆಯ ಭಾವನೆಗೆ ಸಾಕ್ಷಿಯಾಗಿರಲೆಂದು….
ಮನಸಿಟ್ಟು ಬರೆದರೆ ಪುಸ್ತಕವೂ ಸಾಲದು,
ಮನಸಾರೆ ಬಯಸುವ ಲಕ್ಷ ಹಾರೈಕೆಗೆ,
ಹೇಗೆಂದು ಮುಟ್ಟಲಿ ಉಡುಗರೆಯ ಅಪೇಕ್ಷಣೆ
ಹೋಲಿಕೆಯು ಸಿಗದಿರಲು ಪಡೆದ ಆರೈಕೆಗೆ….
ಮುಗ್ದತೆಯೋ, ಪ್ರೀತಿಯೋ, ಧನ್ಯತೆಯ ಭಾವವೋ,
ಸಂತೃಪ್ತಿಯೆಂಬ ಸ್ವಾರ್ಥ ಸಾಧನೆಯೋ..
ನೆಪವೇನೆಯಿರಲಿ ಹಾರೈಕೆ ಒಂದೇ
ಹುಟ್ಟಿದ ದಿನಕ್ಕೊಂದು ಕೃತಜ್ಞತೆ ಇರಲೆಂದು
-ಸಂದೇಶ್ ಎನ್.
nice..gazal..mattu kavanagaLu..
gazal chennagive