ಈ ಪ್ರಶ್ನೆಗೆ ಉತ್ತರ ನೀಡುವುದು ತುಸು ಶ್ರಮದಾಯಕ ಎನ್ನಿಸುವ ನಿಜ. ಮೂಢನಂಬಿಕೆ ಎನ್ನುವುದು ಮನುಷ್ಯನ ಹುಟ್ಟಿನೊಂದಿಗೆ ಬೆಳೆದು ಬಂದಿದೆ. ಇದು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ತನ್ನ ಸ್ವರೂಪವನ್ನು ಬದಲಿಸುತ್ತಾ ಸಾಗುತ್ತಿದೆ. ಒಂದು ಕಾಲದ ನಂಬಿಕೆಗಳು ಇನ್ನೊಂದು ಕಾಲಕ್ಕೆ ಸುಳ್ಳೆಂಬುದು ಈ ವೈಜ್ಞಾನಿಕ ಯುಗದ ಜಗತ್ತು ಸಾಬೀತುಪಡಿಸಿದೆ. ಇಂದಿನ ಯುಗದಲ್ಲಿಯೂ ಸಹ ಹಿಂದಿನ ಕಾಲದ ಕೆಲವು ನಂಬಿಕೆಗಳನ್ನು ಅನುಸರಿಸುವುದನ್ನು ಮೂಢನಂಬಿಕೆ ಎನ್ನಬಹುದು.
ಮೂಢನಂಬಿಕೆಗಳು ಸಾಮಾಜಿಕವಾಗಿ ಬೆಳೆದುಬಂದ ಅನಿಷ್ಟ ಪಿಡುಗುಗಳು. ದೇವರ ಮೇಲೆ ನಂಬಿಕೆ ಇಟ್ಟುಕೊಳ್ಳಿ, ಅವನ ಮುಂದೆ ಎಲ್ಲರೂ ಸಮಾನರು, ಎಲ್ಲರೂ ಒಂದೇ, ಎಲ್ಲರೂ ಅವನ ಮಕ್ಕಳೆ ಆಗಿದ್ದಾರೆ. ದೇವರು ಯಾವತ್ತು ವಿಶಾಲವಾದಂತ ಹೃದಯವುಳ್ಳನು. ಅವನು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾನೆ. ಆದರೆ ದೇವರ ಹೆಸರಿನಲ್ಲಿ ನಡೆಯುವ ಆಚರಣೆಗಳು, ವಾಮಾಚಾರ, ಮೂಢನಂಬಿಕೆ, ಕಂದಾಚಾರ, ನರಬಲಿ, ಪ್ರಾಣಿಬಲಿ, ಹಿಂಸೆ, ಶೋಷಣೆ, ಹೋಮಗಳು ಹಾಗೂ ಗೊಡ್ಡು ಸಂಪ್ರದಾಯವನ್ನು ನಂಬಬಾರದು. ಹೀಗೆ ಅನುಸರಿಸುವುದರಿಂದಲೇ ಈ ಸಮಸ್ಯೆಯೂ ಇಂದು ಹೆಮ್ಮಾರವಾಗಿ ಬೆಳೆಯಲು ಕಾರಣವಾಗಿದೆ.
ಹಲವಾರು ಮಹಾನ್ ಗುರುಗಳು, ಸನ್ಯಾಸಿಗಳು, ಧರ್ಮಗುರುಗಳು, ರಾಜಕೀಯ ಧುರಣಿಯರು ಸಹ ಇದೇ ವಾದವನ್ನು ಪುಷ್ಠಿಕರಿಸಿದ್ದಾರೆ. ಮಾನವನು ತನ್ನ ಹಿತ್ತಾಶಕ್ತಿಗಳಿಗಾಗಿ ಧರ್ಮ, ಆಚಾರ-ವಿಚಾರ, ನಂಬಿಕೆ, ಸಂಪ್ರದಾಯಗಳನ್ನು ಸೃಷ್ಠಿಸಿಕೊಂಡಿದ್ದಾನೆ. ಇದು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಸಾಗಿದೆ. ಒಂದು ಕಾಲಕ್ಕೆ ನಂಬಿಕೆಯಾಗಿರುವುದು ಮತ್ತೊಂದು ಕಾಲ ಮೂಢನಂಬಿಕೆ ಎನ್ನಿಸಿರುವು ಸಹಜ. ಈ ವಿಧೇಯಕವು ಕೇಲವ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಾಗಿದೇ, ಎಲ್ಲ ಧರ್ಮಗಳಿಗೂ, ಎಲ್ಲ ಜನರಿಗೂ ಏಕಪ್ರಕಾರವಾಗಿ ಇರಬೇಕೆಂಬುದು ಬುದ್ಧಿ ಜೀವಿಗಳ ಅಭಿಮತ.
ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು
ಕೇಳದೆ ಸುಖದ ತರುವ ಹೇಳದೆ ದು:ಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ. . . .
ಚಿ. ಉದಯ್‍ಶಂಕರ್ ರವರ ಈ ಹಾಡು ಇಂತಹ ಸಮಯಕ್ಕೆ ಸಮಂಜಸವಾಗಿದೆ ಎನ್ನಬಹುದು.
ಸರ್ಕಾರದ ಮೂಢನಂಬಿಕೆ ನಿಷೇಧ ವಿಧೇಯಕವನ್ನು ಜಾರಿಗೆ ತರುತ್ತಿರುವುದು ಸಂತೋಷದ ವಿಷಯ. ಆದರೆ ಇದು ಕೇವಲ ಒಂದು ಜನಾಂಗವನ್ನು ಒಲೈಸಲು ಅಥವಾ ರಾಜಕೀಯ ಹೆಚ್ಚು ಸಡಿಲವೂ ಆಗದೇ, ಜನರ ಭಾವನೆಗೆ ಸಂಕಷ್ಟವನ್ನು ಉಂಟು ಮಾಡದಿರುವ ಕಾಯ್ದೆಯಾಗಲಿ. ಈ ಬಗ್ಗೆ ಸಾಕಷ್ಟು ಸಾರ್ವಜನಿಕ ಚರ್ಚೆಗೆ ಅವಕಾಶ ಕೊಟ್ಟು ಇದರ ಸಾಧಕ-ಬಾಧಕಗಳನ್ನು ವಿಮರ್ಶಿಸಿ ಹಂತಹಂತವಾಗಿ ಕಾನೂನು ಜಾರಿಗೆಗೊಳಿಸಲಿ ಎಂಬುದು ನನ್ನ ಆಶಯ.
ಕೇವಲ ಕಾನೂನು ರಚನೆಯಿಂದಾಗಿ ಇಂತಹ ನಂಬಿಕೆಗಳನ್ನು ಅಳಿಸಿಹಾಕಲು ಸಾಧ್ಯವಿಲ್ಲ. ಕಾರಣ ಈ ಹಿಂದೆ ಇಂತಹ ಅನೇಕ ಕಾಯ್ದೆಗಳು ಜಾರಿಗೊಳಿಸುವ ಪ್ರಯತ್ನ ನಡೆದಿದ್ದರೂ ಸಹ ಯಶಸ್ಸುಕಾಣಲಿಲ್ಲ. ಈ ವಿಚಾರದ ಬಗ್ಗೆ ಕಳಕಳಿಯಿರುವ ಧರ್ಮ ಪ್ರಚಾರಕರು, ಸಮಾಜಸೇವಕರು, ಮಠಾಧೀಶರು, ಸಾಹಿತಿಗಳು, ಹಿರಿಯ ಬುದ್ದಿಜೀವಿಗಳೇ ಅಲ್ಲದೆ ವಿಚಾರ ಗೋಷ್ಠಿಗಳು, ಕಿರುಚಿತ್ರಗಳು, ನಾಟಕ-ಹಾಡುಗಳು ಮತ್ತು ಸಮೂಹ ಮಾಧ್ಯಮಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಮೊದಲು ತಮ್ಮ ತಮ್ಮ ಮನೆಗಳಲ್ಲಿ ಇಂತಹ ಆಚರಣೆಗಳ ಬಗ್ಗೆ ಪೋಷಕರು, ಹಿರಿಯರು ಮಕ್ಕಳಿಗೆ ಅರಿವು ಮೂಡಿಸಬೇಕು. ನಂತರ ಶಾಲೆಗಳಲ್ಲಿ ಶಿಕ್ಷಕರು ಈ ವಿಷಯದ ಬಗ್ಗೆ ತಿಳುವಳಿಕೆ ನೀಡಬೇಕು. ಅನಕ್ಷರಸ್ಥರಿಗೆ ಚಲನಚಿತ್ರಗಳು, ಸಮೂಹ ಮಾಧ್ಯಮಗಳ ಮೂಲಕ ಅವರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿದಾಗ ಮಾತ್ರ ಇಂತಹ ಅನಿಷ್ಟ ಪದ್ದತಿಗಳು ಕಣ್ಮರೆಯಾಗುತ್ತದೆ ಎನ್ನುವುದನ್ನು ನಾವೆಲ್ಲರೂ ಮನಗಾಣಬೇಕು.
*****