ಮೂಡಿದ ಬೆಳಕು…: ಭಾರ್ಗವಿ ಜೋಶಿ

ಎಲ್ಲ ಕಡೆ ಝಗಮಗಿಸುತ್ತಿದ್ದ ದೀಪಗಳ ಸಂಭ್ರಮ. ಸಾಲು ಸಾಲು ದೀಪಗಳು ಇಡೀ ಬೀದಿಯ ಸಂಭ್ರಮ ಸೂಚಿಸುತ್ತಿತ್ತು.. ಆ ಬೀದಿಯ ಕೊನೆಯ ಮನೆಯಲ್ಲಿ ಮಾತ್ರ ಮೌನ. ಬೆಳಕು ತುಸು ಕೊಂಚ ಕಡಿಮೆಯೇ ಇತ್ತು. ಬಡವ -ಬಲ್ಲಿದ ಯಾರಾದರೇನು ಜ್ಯೋತಿ ತಾನು ಬೆಳಗಲು ಬೇಧ ಮಾಡುವುದಿಲ್ಲ ಅನ್ನೋ ಮಾತು ನಿಜವೇ? ಎಣ್ಣೆಗೆ ಕಾಸು ಇಲ್ಲದ ಬಡವರ ಮನೆಯಲ್ಲಿ ಜ್ಯೋತಿ ಉರಿದಿತೇ? ಬೆಳಕು ಚಲ್ಲಿತೇ? ಹೀಗೆ ಕತ್ತಲು ಆವರಿಸಿದ ಆ ಮನೆ, ಮನೆಯೊಡತಿ ಜಾನಕಮ್ಮ, ಪತಿ ರಾಮಣ್ಣ ಅವರ ಒಬ್ಬನೇ ಮಗ ವಿಶ್ವಾಸ. ಸೊಸೆ ಚೊಚ್ಚಿಲ ಬಸರಿ, ಆರೈಕೆಗೆ ಬೇಕೆಂದು ಮಗ ಅಪ್ಪ – ಅಮ್ಮರನ್ನು ಹಳ್ಳಿಯಿಂದ ದೂರದ ಮುಂಬೈ ಗೆ ಕರೆಸಿಕೊಂಡಿದ್ದ. ಕೆಲವು ತಿಂಗಳ ಹಿಂದೆ ಹಳ್ಳಿಯಿಂದ ಗಂಟು ಮೂಟೆ ಕಟ್ಟಿಕೊಂಡು ಮಗನನ್ನು ನಂಬಿ ಸೊಸೆಯ ಆರೈಕೆಗೆ, ಮೊಮ್ಮಗುವಿನ ನಗುವ ನೋಡಲು ಕಾತುರದಿಂದ ಬಂದಿದ್ದ ದಂಪತಿಗಳಿಗೆ ಬಂದ ದಿನವೇ ಆಘಾತ ಕಾದಿತ್ತು.

ಮಗ ಮುಂಬೈ ನಗರದಲ್ಲಿ ಅಪಾರ್ಟ್ಮೆಂಟ್ ಅಲ್ಲಿ ದೊಡ್ಡ ಮನೆಯೊಂದನ್ನು ಖರೀದಿ ಮಾಡಿ ಪತ್ನಿ ಜೊತೆ ವಾಸವಾಗಿದ್ದಾನೆ ಎಂದು ಗೊತ್ತಿತ್ತು. ಆದ್ರೆ ಇಷ್ಟು ವರ್ಷದಲ್ಲಿ ಮಗನ ಮನೆಗೆ ಬಂದದ್ದು ಮೊದಲನೇ ಸರಿ.. ತಂದೆ ತಾಯಿ ಬರುತ್ತಿದ್ದಂತೆ ಅವರ ಸಾಮಾನು – ಸರಂಜಾಮುಗಳ ಸಮೇತ ಪುಟ್ಟದೊಂದು ಮನೆಗೆ ಕರೆದುಕೊಂಡು ಬಂದದ್ದನ್ನು ನೋಡಿ ಆಘಾತವಾಗಿತ್ತು…

ತಾಯಿ – ಏನಪ್ಪಾ ದೊಡ್ಡ ಮನೆ ತಗೊಂಡಿದ್ದೀನಿ ಅಂದಿದ್ದೆ, ಇದೇನು ಇಷ್ಟು ಚಿಕ್ಕ ಮನೆ ಇದೆ. ಅದು ಖಾಲಿ ದು. ಎಂದು ಮುಗ್ಧವಾಗಿ ಪ್ರಶ್ನಿಸಿದ್ದಳು ತಾಯಿ….

ಮಗ – ಇಲ್ಲ ಅಮ್ಮ ನಾವಿರೋದು ಇಲ್ಲೇ ಪಕ್ಕದ ಅಪಾರ್ಟ್ಮೆಂಟ್ ಅಲ್ಲಿ. ಅಲ್ಲಿ ನಿಮಗೆ ಸರಿ ಹೊಂದೋದಿಲ್ಲ, ಅದಕ್ಕೆ ನಿಮಗೋಸ್ಕರ ಬೇರೆ ಮನೆ ಮಾಡಿದ್ದೇನೆ, ನೀವು ಇಲ್ಲೇ ಇರಿ. ಬೆಳಿಗ್ಗೆ ಇಂದ ರಾತ್ರೀವರೆಗೂ ನಾನು ಮನೆಯಲ್ಲಿ ಇರೋದಿಲ್ಲ. ನಿನ್ ಸೊಸೆಗೆ ಏನಾದ್ರು ಅಗತ್ಯ ಇದ್ರೆ, ತೊಂದ್ರೆ ಆದ್ರೆ ಅವಳು ನಿಮಗೆ ಫೋನ್ ಮಾಡ್ತಾಳೆ ನೀವು ಹೋಗಿ ಅವಳನ್ನು ನೋಡಿಕೊಳ್ಳಿ ಅಂತ ನಿಷ್ಠುರವಾಗಿಯೇ ಹೇಳಿದ್ದ…

ಊರಲ್ಲಿ ಚೂರು ಜಮೀನು, ಎಷ್ಟೋ ಇಷ್ಟೋ ಕಾಳು -ಕಡಿ ಬರ್ತಿತ್ತು, ರಾಮಣ್ಣ ನಾಲ್ಕು ಮನೆ ಪೂಜೆ ಮಾಡಿ, ಜಾನಕಮ್ಮ ಅಗತ್ಯ ಇದ್ದವರಿಗೆ ಅಡುಗೆ ಮಾಡಿಕೊಟ್ಟು ಹೇಗೋ ಜೀವನ ಸಾಗಿಸುತ್ತಿದ್ದರು. ಕಷ್ಟ ಪಟ್ಟು ಹೇಗೋ ಇದ್ದ ಒಬ್ಬ ಮಗನನ್ನು ಸಾಕಿ ಉತ್ತಮ ವಿದ್ಯಾಭ್ಯಾಸ ಕೊಟ್ಟಿದ್ದರು. ಮಗ ಒಳ್ಳೆ ಕೆಲಸಕ್ಕೆ ಸೇರಿ ತನ್ನ ಜೊತೆ ಕೆಲಸ ಮಾಡುತ್ತಿದ್ದ ಹುಡುಗಿಯನ್ನು ಪ್ರೀತಿಸಿ ರಿಜಿಸ್ಟರ್ ಮದುವೆ ಮಾಡಿಕೊಂಡು ಆಮೇಲೆ ಅಪ್ಪ ಅಮ್ಮನ ಹತ್ತಿರ ಆಶೀರ್ವಾದ ತಗೋಳ್ಳೋಕೆ ಹೋಗಿದ್ದ…
ಅದೆಷ್ಟು ನೊಂದಿತ್ತು ಹೆತ್ತ ಕರುಳು. ಆದ್ರೂ ಮಗನ ಖುಷಿ ಮುಂದೆ ತಮ್ಮ ನೋವು ಮರೆತಿದ್ದರು…

ವರುಷಗಳ ನಂತರ ಮಗ ಕರೆದಕೂಡಲೇ ಹಿಂದೆ ಮುಂದೆ ಯೋಚಿಸದೆ ಬಂದಿದ್ದ ತಂದೆ -ತಾಯಿಗೆ ಮತ್ತೆ ಅವಮಾನವಾಗಿತ್ತು. ಬಂದದ್ದು ಆಗಿದೆ… ಮೊಮ್ಮಗುವಿನ ನಗು ನೋಡಲು ಮತ್ತೊಮ್ಮೆ ಎಲ್ಲವನ್ನು ಸಹಿಸಿದ್ದರು ಆ ವೃದ್ಧ ದಂಪತಿಗಳು….

ದಿನ ಬೆಳಿಗ್ಗೆ ಎದ್ದು ಮಗನ ಮನೆಯಲ್ಲಿ ಎಲ್ಲ ಕೆಲಸ ಮಾಡಿ, ತಿಂಡಿ, ಅಡುಗೆ ಮಾಡಿ ಇಟ್ಟು ತಮ್ಮ ಮನೆಗೆ ಬಂದು ತಾವು ಬೇರೆ ಅಡುಗೆ – ತಿಂಡಿ ಮಾಡಿಕೊಳ್ಳುವ ವಾಡಿಕೆ ಆಗಿತ್ತು. ಬೇಕಿದ್ದ ಸಾಮಾನುಗಳನ್ನು ಮಗ ತಂದು ಹಾಕುತ್ತಿದ್ದ.. ಆದ್ರೆ ಮಗನ ಮನೆಯಲ್ಲಿ ಮಾಡಿದ ಅಡುಗೆ ಎಲ್ಲರು ಒಟ್ಟಿಗೆ ಊಟ ಮಾಡೋಣ ಅನ್ನೋ ಪ್ರೀತಿ -ಸೌಜನ್ಯ ಸೊಸೆಯಲ್ಲಿ ಎಳ್ಳಷ್ಟೂ ಇರಲಿಲ್ಲ….

ಅಕ್ಷರಶಃ ಕೆಲಸದವರಂತೆ ದುಡಿಸಿಕೊಳ್ಳುತ್ತಿದ್ದ ಸೊಸೆ, ಎಲ್ಲವು ಕಂಡರೂ ಕಾಣದಹಾಗೆ ಇರುತ್ತಿದ್ದ ಮಗ. ಅಸಹಾಯಕ ಪತಿ ನಡುವೆ ಜಾನಕಮ್ಮ ಎಲ್ಲ ನೋವನ್ನು ನುಂಗಿ ಮೃತ್ಯುಂಜಯನಿಗಿಂತಲೂ ಒಂದು ತೂಕ ಹೆಚ್ಚೇ ಅನಿಸುತ್ತಿದ್ದಳು..

ಹೀಗೆ ದಿನಗಳು ಕಳೆದಿದ್ದವು… ಸೊಸೆಗೆ ಡೆಲಿವರಿ ದಿನ ಹತ್ತಿರ ಬಂದಿತ್ತು. ದೀಪಾವಳಿ ಹಿಂದಿನ ದಿನ ಮಗನ ಮನೆಯಲ್ಲಿ ಹಬ್ಬದ ತಯಾರಿ ಮಾಡಿ ಕೊಟ್ಟು, ತಮ್ಮ ಮನೆಯನ್ನು ಶುಭ್ರಗೊಳಿಸಿ ದೀಪ ಹಚ್ಚಿ ಇಟ್ಟು ನೀರು ತುಂಬಿಸಿ ಪೂಜೆ ಮಾಡಿ ಅಡುಗೆ ಮಾಡಿ ಊಟ ಮಾಡಬೇಕು ಅನ್ನೋವಾಗ ಸೊಸೆ ಗೆ ಹೆರಿಗೆ ನೋವು ಶುರುವಾಗಿದೆ ಅಂತ ಫೋನ್ ಬಂತು. ಊಟ ಬಿಟ್ಟು ಓಡಿ ಹೋದರು ಆ ದಂಪತಿಗಳು.. ಮಗ – ಸೊಸೆ, ಜಾನಕಮ್ಮ, ರಾಮಣ್ಣ ಎಲ್ಲರು ಸೇರಿ ಆಸ್ಪತ್ರೆಗೆ ಧಾವಿಸಿದರು..

ಸೊಸೆಯನ್ನು ಆಪರೇಷನ್ ಕೊಠಡಿಯೊಳಗೆ ತೆಗೆದುಕೊಂಡು ಹೋದರು..

ಆಚೆ ಕಾಯುತ್ತಿದ್ದ ವಿಶ್ವಾಸ ಕಣ್ಣಲ್ಲಿ ಆತಂಕ -ಭಯ.. ಪ್ರೀತಿಸಿ ಮದುವೆಯಾಗಿ ಹತ್ತು ವರ್ಷದ ನಂತರ ಪತ್ನಿ ಅನು ಬಸರಿ ಆಗಿದ್ದಳು. ಅದೆಷ್ಟೋ ಡಾಕ್ಟರ್ ಗೆ ತೋರಿಸಿ, ಇನ್ನು ಮಕ್ಕಳು ಆಗೋದೇ ಇಲ್ವೇನೋ ಅಂತ ಅಸೆ ಬಿಟ್ಟವರಿಗೆ ಅನು ಪ್ರೆಗ್ನೆಂಟ್ ಆಗಿದ್ದು ಮರಭೂಮಿಯಲ್ಲಿ ನೀರು ದೊರೆತಹಾಗೆ ಆಗಿತ್ತು. ಪೂರ್ತಿ ಬೆಡ್ ರೆಸ್ಟ್ ಅಲ್ಲಿ ಇರಬೇಕು ಅಂತ ಹೇಳಿದ್ದಕ್ಕೆ ಅವಳ ಆರೈಕೆಗೆ ತಂದೆ ತಾಯಿಯನ್ನು ಕರೆಸಿದ್ದ. ಅತ್ತೆ -ಸೊಸೆ ಗೆ ಹೊಂದಾಣಿಕೆ ಆಗೋದಿಲ್ಲ ಅಂತ ಗೊತ್ತಿದ್ದೂ ತಂದೆ ತಾಯಿಗೆ ಬೇರೆ ಮನೆ ಮಾಡಿಕೊಟ್ಟಿದ್ದ. ಈಗ ಎಲ್ಲ ಸುಸೂತ್ರವಾಗಿ ನಡೆದು ತಾಯಿ -ಮಗು ಗೆ ಏನು ಅಪಾಯ ಆಗದೆ ಇದ್ರೆ ಸಾಕು ಅಂತ ಪ್ರಾರ್ಥಿಸುತ್ತಿದ್ದ.

ಜಾನಕಮ್ಮ ಅಂತೂ ಅದೆಷ್ಟೋ ನೋವು, ಅವಮಾನ ಎಲ್ಲ ಮರೆತು ಸೊಸೆ -ಮೊಮ್ಮಗು ಗಾಗಿ ಅದೆಷ್ಟೋ ದೇವರಲ್ಲಿ ಹರಕೆ ಹೊತ್ತಿದ್ದರು..

ಸ್ವಲ್ಪ ಹೊತ್ತಿನಲ್ಲಿ ಆಪರೇಷನ್ ಥೀಯೇಟರ್ ಇಂದ ಆಚೆ ಬಂದ ವೈದ್ಯರು ಗಂಡು ಮಗು ಹುಟ್ಟಿದೆ. ಆದರೆ ಮಗು ಶ್ವಾಸಕೋಶದ ಇನ್ಫೆಕ್ಷನ್ ಆಗಿ ಬದುಕೋದು ಅನುಮಾನ. ವೆಂಟಿಲೇಟರ್ ಅಲ್ಲಿ ಇಡಲಾಗುವುದು, ಕೈಲಾದಷ್ಟು ಪ್ರಯತ್ನ ಪಡುತ್ತೇವೆ. ಪ್ರೆಗ್ನೆನ್ಸಿ ಅಲ್ಲಿ ತುಂಬಾ ಜಾಗೃತೆ ಇಂದ ಇರೋಕೆ ಹೇಳಿದ್ವಿ. ಆದ್ರೂ ಏನೋ ಹೆಚ್ಚು ಕಮ್ಮಿ ಆಗಿದೆ. ನೋಡೋಣ ದೇವರ ಮೇಲೆ ಭಾರ ಹಾಕಿ ಅಂತ ಹೇಳಿದ್ದರು..

ಅದನ್ನ ಕೇಳುತ್ತಲೇ ವಿಶ್ವಾಸ ಕಾಲಡಿಯ ಭೂಮಿಯೇ ಕುಸಿದಹಾಗೆ ಆಗಿತ್ತು. ಅಸಹಾಯಕತೆ ಕೋಪವಾಗಿ ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಅಂತ ಸಿಟ್ಟಿನ ರೂಪ ಪಡೆದಿತ್ತು. ಅದಕ್ಕೆ ಬಲಿಪಶು ಆಗಿದ್ದು ತಾಯಿ -ತಂದೆ.. ನಾವು ಬಸರಿ ಹೆಣ್ಣನ್ನು ಸರಿಯಾಗಿ ನೋಡಿಕೊಂಡಿದ್ರೆ ನನ್ನ ಮಗುಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಅಂತ ಕೆಟ್ಟದಾಗಿ ಮಾತನಾಡಿ ಹೆತ್ತ ತಂದೆ ತಾಯಿ ಅನ್ನೋದನ್ನು ನೋಡದೆ ಬೈದು ಬಿಟ್ಟಿದ್ದ… ಒಂದು ಕ್ಷಣ ಇಲ್ಲಿ ನಿಲ್ಲಬೇಡಿ. ನಿಮ್ಮ ಊರಿಗೆ ವಾಪಾಸ್ ಹೋಗಿ ಬಿಡಿ, ಎಂದು ನಿಷ್ಠುರವಾಗಿ ಹೇಳಿಬಿಟ್ಟ…

ಮೊಮ್ಮಗುವಿನ ನಗುವಿಗಾಗಿ ಕಾದಿದ್ದ ಆ ವೃದ್ಧ ದಂಪತಿಗಳು ಮಗನ ಮಾತು ಕೇಳಿ ಪೂರ್ತಿಯಾಗಿ ಕುಸಿದಿದ್ದರು… ಒಂದು ಕ್ಷಣವೂ ಅಲ್ಲಿ ನಿಲ್ಲಲಾಗದೆ ಆಟೋ ಹಿಡಿದು ಮನೆಗೆ ಬಂದು ಬಿಟ್ಟರು. ಆದರೂ ಆ ನೋವಲ್ಲು ಆ ಮನಸುಗಳು ಸೊಸೆ ಮತ್ತು ಮೊಮ್ಮಗುವಿನ ಕ್ಷೇಮವನ್ನೇ ಬಯಸುತ್ತಿದ್ದವು..

ಈ ಕಡೆ ಆಸ್ಪತ್ರೆಯಲ್ಲಿ ಸ್ವಲ್ಪ ಹೊತ್ತಿಗೆ ಪ್ರಜ್ಞೆ ಬಂದ ಅನು ತನ್ನ ಮಗುವಾಗಾಗಿ ಚಡಪಡಿಸ ಹತ್ತಿದಳು. ಸತ್ಯ ತಿಳಿದು ಅವಳು ಆಘಾತ ಮಾಡಿಕೊಂಡರೆ ಬಾಳಂತಿ ಜೀವಕ್ಕೆ ಅಪಾಯ ಅಂತ ಡಾಕ್ಟರ್ ಹೇಳಿದ್ದರು. ಪರಿಸ್ಥಿತಿ ನಿಭಾಯಿಸಲಾಗದೆ ವಿಶ್ವಾಸ ಗೊಂದಲದಲ್ಲಿ ಇದ್ದ. ಆದರೂ ಹೇಗೋ ಧೈರ್ಯ ಮಾಡಿ ತಮ್ಮಮಗು ವೆಂಟಿಲೇಟರ್ ಅಲ್ಲಿ ಸಾವು -ಬದುಕಿನ ಮಧ್ಯ ಹೋರಾಡುತ್ತಿದೆ ಅನ್ನೋದನ್ನ ಹೇಳಿಯೇ ಬಿಟ್ಟ.

ಅದೆಷ್ಟೋ ಅಲೆಗಳು ಒಮ್ಮೆಲೇ ಅಪ್ಪಳಿಸಿದಂತೆ, ವೇಗದ ಸಿಡಿಲು ಎದೆಗೆ ನೇರವಾಗಿ ಬಡಿದಂತೆ ಆಘಾತಗೊಂಡಳು. ಹೆತ್ತ ಕರುಳು ಮಗುವನ್ನು ಕಳೆದುಕೊಳ್ಳುವ ಭಯ ಬೇರೆ ಯಾವ ನೋವಿಗೆ ಹೋಲಿಸಲು ಸಾಧ್ಯ? ತನ್ನ ಮಗುವಿಗೆ ಏನಾದರು ಹೆಚ್ಚು ಕಮ್ಮಿ ಆದರೆ ತಾನು ಬದುಕೋದಿಲ್ಲ ಅಂತ ನಿರ್ಧರಿಸಿದಳು…

ಕ್ಷಣ -ಕ್ಷಣ ಕರಾಳ ಆತಂಕ ದಲ್ಲೇ ಕಳೆಯುತ್ತಿತ್ತು. ಒಂದು ದಿನ ದಾಟಿತು. ಅವತ್ತು ನರಕ ಚತುರ್ದಶಿ, ಮಗು ಆರೋಗ್ಯದಲ್ಲಿ ಯಾವ ಚೇತರಿಕೆ ಕಾಣಲಿಲ್ಲ..

ಅಂದು ಅಮಾವಾಸ್ಯೆ, ಬಾನಲ್ಲಿ ಚಂದಿರ ಇರಲಿಲ್ಲ ಆದರೂ ಊರಿನ ತುಂಬಾ ಝಗ ಮಗಿಸುತ್ತಿದ್ದ ದೀಪಗಳ ಬೆಳಕು ಕತ್ತಲೆಯ ಅಂದವನ್ನು ಹೆಚ್ಚಿಸಿತ್ತು. ಆದರೂ ಚಂದ್ರನ ಇಲ್ಲದಿರುವಿಕೆ ಅಂತೂ ಸತ್ಯವಲ್ಲವೇ.
ಜಾನಕಮ್ಮನ ಮನೆಯಲ್ಲಿ ಚಂದ್ರನಿಲ್ಲದ ಕತ್ತಲು ಮಾತ್ರ ಕವಿದಿತ್ತು. ದೀಪ ಬೆಳಗಿಸುವ ಮನಸ್ಸು ಇರಲಿಲ್ಲ. ಮೊಮ್ಮಗುವಿನ ಆರೋಗ್ಯಕ್ಕೆ ಪ್ರಾರ್ಥಿಸಲು ದೀಪ ಬೆಳಗಿಸುವ ಅಸೆ ಇದ್ದರು ನಡು ನೀರಲ್ಲಿ ಕೈ ಬಿಟ್ಟ ಮಗ ಎಣ್ಣೆ ಕೊಳ್ಳದ ಸ್ಥಿತಿಯಲ್ಲಿದ್ದರು ಆ ವೃದ್ಧ ದಂಪತಿಗಳು.

ಕಣ್ಣೀರ ಕೋಡಿಯಲ್ಲಿಯೇ ಸಮಯ ಕಳೆದು ಹೋಯಿತು..

ಅಂದು ದೀಪಾವಳಿ ಪಾಡ್ಯ. ಹೊಸ ಬೆಳಕನ್ನು ಹೊತ್ತು ಬರುವ ಹಬ್ಬ. ಕೊನೆಗೂ ಕಣ್ಣು ಬಿಟ್ಟ ದೇವರು ಮಗುವಿಗೆ ಉಸಿರಿನ ಭಿಕ್ಷೆ ನೀಡಿದ್ದ. ಮೂರು ದಿನಗಳ ಕಾಲ ಸಾವು ಬದುಕಿನ ಮಧ್ಯ ಹೋರಾಡಿದ ಮಗು ಕೊನೆಗೂ ಗೆದ್ದಿತ್ತು. ಮಗು ಪ್ರಾಣಾಪಾಯದಿಂದ ಪಾರಾಗಿ ತಾಯಿ ಮಡಿಲು ಸೇರಿತ್ತು. ತಂದೆ -ತಾಯಿಗೆ ಜಗತ್ತಿನಲ್ಲಿ ಮಕ್ಕಳಿಗಿಂತ ಹೆಚ್ಚಿನದು ಯಾವುದು ಇಲ್ಲ ಅನ್ನೋದು ಅವರಿಗೆ ಮನವರಿಕೆಯಾಗಿತ್ತು. ಆ ಕ್ಷಣ ಅನುಗೆ ಮೊದಲು ನೆನಪಾದದ್ದು ಅವಳ ಅತ್ತೆ. ತಾಯಿ ಇಲ್ಲದ ತನ್ನನ್ನು ತಾಯಿಗಿಂತ ಹೆಚ್ಚಾಗಿ ನೋಡಿಕೊಂಡ ಅತ್ತೆಯನ್ನು ಮನೆ ಕೆಲಸದವಳಂತೆ ನೋಡಿಕೊಂಡಿದ್ದ ತನ್ನ ಬಗ್ಗೆ ತೀವ್ರ ಅಸಹ್ಯ ಉಂಟಾಯಿತು. ಬಸರಿ ಹೆಣ್ಣು ಮಗಳು ಹೀಗಿರಬೇಕು, ಇದೆಲ್ಲ ತಿನ್ನಬೇಕು ಅಂತ ಅತ್ತೆ ಪ್ರೀತಿಯಿಂದ ಮಾಡಿ ಇಟ್ಟಿದ್ದನ್ನು ಬಿಟ್ಟು ಗಂಡನಿಗೂ ತಿಳಿಯದಂತೆ ಹೋಟೆಲ್ ಇಂದ ಆರ್ಡರ್ ಮಾಡಿ ಸಿಕ್ಕಿ ಸಿಕ್ಕಿದ್ದೆಲ್ಲಾ ತರಿಸಿಕೊಂಡು ತಿಂದದ್ದು ನೆನಪಾಯಿತು. ಅತ್ತೆ ಮಾತು ಕೇಳಿದ್ರೆ ತನ್ನ ಮಗುಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಅಂತ ನೆನೆದು ಕಣ್ಣೀರಾದಳು.

ಹೆತ್ತು ಕೆಲವೇ ಕ್ಷಣವಾದ ಮಗು ಮಡಿಲಲ್ಲಿ ಇಲ್ಲ, ತನ್ನಿಂದ ದೂರ ಆಗುತ್ತದೆ ಅನ್ನೋ ಕಲ್ಪನೆಯೇ ಅಷ್ಟು ಭಯಾನಕ ವಾಗಿತ್ತು. ಅಂಥದರಲ್ಲಿ ಅತ್ತೆ ತಮ್ಮ ಮಗನನ್ನು ಇಷ್ಟು ವರ್ಷ ಸಾಕಿ, ಸಲುಹಿ ಈಗ ಮಗನಿಂದ ತಿರಸ್ಕಾರವಾದರೆ ಆ ತಾಯಿ ಕರುಳು ಹೇಗೆ ಆದರೂ ಸಹಿಸಿಕೊಂಡಿತು ಎಂದು ನೊಂದಳು.

ಎಲ್ಲವನ್ನು ವಿಶ್ವಾಸ ಮುಂದೆ ಹೇಳಿ ಅತ್ತಳು…
ವಿಶ್ವಾಸ್ ಗು ತನ್ನ ತಪ್ಪಿನ ಅರಿವಾಗಿತ್ತು. ಕ್ಷಮೆ ಕೇಳುವ ಕೊನೆ ಅವಕಾಶ ವನ್ನು ಅವನು ಕಳೆದುಕೊಂಡಿದ್ದ. ಆದರೆ ಇಷ್ಟೆಲ್ಲಾ ಸಹಿಸಿಕೊಂಡು ಕ್ಷಮಿಸಿದ ತಂದೆ ತಾಯಿ ಇನ್ನೊಮ್ಮೆ ಕ್ಷಮಿಸದೇ ಇರಲಾರರು ಅಂತ ಒಂದು ಕ್ಷಣ ತಡಮಾಡದೆ ತಂದೆ ತಾಯಿ ಬಳಿ ಧಾವಿಸಿದ…

ಅಷ್ಟರಲ್ಲೇ ಆ ವೃದ್ಧ ದಂಪತಿಗಳು ಮರಳಿ ತಮ್ಮ ಊರಿಗೆ ಹೋಗಲು ಇದ್ದ ತಮ್ಮ ಕೆಲವು ವಸ್ತುಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಯಾರದೋ ಸಹಾಯದಿಂದ ಒಂದು ಗಾಡಿ ಕರೆಸಿಕೊಂಡಿದ್ದರು. ಊರಿಗೆ ಹೋಗಿ ಯಾರ ಹತ್ತಿರವಾದರು ಸಾಲ ಮಾಡಿ ಗಾಡಿ ದುಡ್ಡು ಕೊಡುವುದಾಗಿ ಯೋಚಿಸಿದ್ದರು.

ಬಾಗಿಲಲ್ಲಿ ಮಗನನ್ನು ಕಂಡ ತಾಯಿ ಮತ್ತೆ ತನ್ನೆಲ್ಲ ನೋವು ಮರೆತು ಮಗ, ಮೊಮ್ಮಗು ಹೇಗಿದೆ? ಸೊಸೆ ಹೇಗಿದ್ದಾಳೆ? ಎಂದು ವಿಚಾರಿಸಿದ ಕೂಡಲೇ ವಿಶ್ವಾಸ ಕುಸಿದು ತಾಯಿಯ ಕಾಲಿಗೆ ಬಿದ್ದನು…. ಏನು ಮಾತನಾಡದೆ ಬರಿ ಕಣ್ಣೀರು ಸುರಿಸಿದನು..

“ಮಗ ನೀನು ಅಳೋದನ್ನ ನೋಡೋಕೆ ಆಗಲ್ಲಪ್ಪ ನಾವು ಊರಿಗೆ ಹೋಗ್ತಾ ಇದ್ದಿವಿ, ಇನ್ನೊಮ್ಮೆ ನಮ್ಮಿಂದ ನಿನಗೆ ಯಾವ ನೋವು ಆಗೋದಿಲ್ಲ” ಅಂದಾಗ ಅವನು ಅಲ್ಲಿಯೇ ಸತ್ತು ಹೋದಂತೆ ಆಗಿತ್ತು.

ಕೊನೆಗೆ ಕಣ್ಣೀರು ಒರೆಸಿಕೊಂಡು ತಂದೆ -ತಾಯಿಯ ಕಾಲಿಗೆ ನಮಸ್ಕರಿಸಿ ಹೆಂಡತಿ ಮಗು ಕ್ಷೇಮವಾಗಿರುವ ವಿಷಯ ತಿಳಿಸಿ, ತನ್ನ ತಪ್ಪನ್ನೆಲ್ಲ ಒಪ್ಪಿಕೊಂಡನು. ಸೊಸೆಯು ಅತ್ತೆ ಮಾವರನ್ನು ನೋಡಲು ಹಂಬಲಿಸುತ್ತಿರುವುದನ್ನು ತಿಳಿಸಿದನು. ಬಾಗಿಲಲ್ಲಿ ಸಾಮಾನು ಹೊತ್ತು ನಿಂತಿದ್ದ ಗಾಡಿಯನ್ನು ನೇರವಾಗಿ ತನ್ನ ಅಪಾರ್ಟ್ಮೆಂಟ್ ಗೆ ಕಳಿಸಿದನು. ಆ ಚಿಕ್ಕ ಮನೆಯನ್ನು ಖಾಲಿ ಮಾಡಿ ಎಲ್ಲರು ಒಟ್ಟಿಗೆ ಇರಲು ನಿರ್ಧರಿಸಿದನು..

ಇಷ್ಟೆಲ್ಲಾ ಆದಮೇಲೆಯೂ ತಾವು ಇಲ್ಲಿ ಇರಲು ಒಪ್ಪದ ತಂದೆ ತಾಯಿ ಮತ್ತೆ ಮಗ ಸೊಸೆಯ ಮೇಲಿನ ವಾತ್ಸಲ್ಯ, ಮೊಮ್ಮಗುವಿನ ಮೇಲಿನ ಮಮಕಾರ ಕಟ್ಟಿ ಹಾಕಿತು.. ಹಬ್ಬಗಳ ಸಾಲಿನ ಕೊನೆಯದಿನ ಕಡೆಪಂಚಮಿ ಆಸ್ಪತ್ರೆ ಇಂದ ಮನೆಗೆ ಬಂದ ಸೊಸೆ -ಮೊಮ್ಮಗುವನ್ನು ಅಕ್ಕರೆಯಿಂದ ಸ್ವಾಗತಿಸಿದರು.. ಕತ್ತಲೆ ಕವಿದಿದ್ದ ಮನಸುಗಳಿಗೆ ಆ ಮಗುವಿನ ಆಗಮನ ಹೊಸ ಬೆಳಕು ನೀಡಿತ್ತು.. ಅಜ್ಜ -ಅಜ್ಜಿ ಅಕ್ಕರೆ, ತಂದೆ -ತಾಯಿಯ ಮಮತೆಯಲ್ಲಿ ಮಗು ಬೆಳೆಯುತಿತ್ತು. ಅಂದಿನಿಂದ ಆ ಚಂದದ ಕೂಡು ಕುಟುಂಬ ಅನೇಕರಿಗೆ ಮಾದರಿ ಆಗಿತ್ತು…..

ಕತ್ತಲೆ ಕಳೆಯಲು ಬೇಕು…
ಬೆಳಕು ಮೂಡಲೇ ಬೇಕು…
ನೋವು ಸರಿದು. ನಲಿವು ಕಾಣಲೇಬೇಕು..
ಸಮಯದ ಕೈಗೊಂಬೆಗಳು ನಾವು
ಒಳ್ಳೆ ಸಮಯ ಬರುವವರೆಗೂ
ತಾಳ್ಮೆಯಿಂದ ಕಾಯಬೇಕು…..

ಭಾರ್ಗವಿ ಜೋಶಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Prasanna Gowda
Prasanna Gowda
3 years ago

ಕಣ್ಣಂಚಿನಲ್ಲಿ ಸಣ್ಣ ಹನಿ ಜಿನುಗಿದ್ದು ಸುಳ್ಳಲ್ಲ.
ಅಯಸ್ಕಾಂತೀಯ ಬರಹಕ್ಕೆ ಧನ್ಯೋಸ್ಮಿ ❤🙏

1
0
Would love your thoughts, please comment.x
()
x